ಜನನ ದೋಷಗಳು:ಕಾರಣ ಹತ್ತಾರು...

7

ಜನನ ದೋಷಗಳು:ಕಾರಣ ಹತ್ತಾರು...

Published:
Updated:
Prajavani

ಭಾರತದಲ್ಲಿ ಪ್ರತಿ ಒಂದೂವರೆ ನಿಮಿಷಕ್ಕೆ ಒಂದು ಮಗು ಜನನ ದೋಷ ಹೊತ್ತು ಹುಟ್ಟುತ್ತಿದೆ. ಅಂದರೆ ಪ್ರತಿ ವರ್ಷವೂ ಅಂದಾಜು 7,53,000 ಮಕ್ಕಳು ಜನನ ದೋಷದೊಂದಿಗೆ ಜನಿಸುತ್ತಿವೆ. ಈ ಪ್ರಮಾಣವು ವರ್ಷದಿಂದ ವರ್ಷಕ್ಕೆ ಏರಿಕೆಯಾಗುತ್ತಿರುವುದೇ ಆತಂಕದ ಸಂಗತಿಯಾಗಿದೆ.

ಜನ್ಮ ದೋಷ, ದೇಹದ ರಾಚನಿಕ ಬದಲಾವಣೆಯಾಗಿದ್ದು, ಅದು ಯಾವುದೇ ಅಂಗ ಅಥವಾ ಅಂಗಗಳಲ್ಲಿ ಕಾಣಿಸಿಕೊಳ್ಳಬಹುದು. (ಉದಾಹರಣೆಗೆ, ಹೃದಯ, ಮೆದುಳು, ಪಾದ). ಇದು ದೇಹದ ಹೊರನೋಟ, ಕಾರ್ಯವೈಖರಿ ಅಥವಾ ಎರಡರ ಮೇಲೂ ಪ್ರಭಾವ ಬೀರಬಹುದು.

ನ್ಯೂನತೆಯಲ್ಲೂ ಭಿನ್ನತೆಯಿರುತ್ತವೆ. ಕೆಲವು ಅಷ್ಟೇನೂ ಸಮಸ್ಯೆ ಎನಿಸದಿದ್ದರೆ, ಮತ್ತೂ ಕೆಲವು ಗಂಭೀರವಾಗಿರುತ್ತವೆ. ಮಗುವಿನ ಯಾವ ಅಂಗವು ಜನನ ದೋಷಕ್ಕೆ ಒಳಗಾಗಿದೆ ಹಾಗೂ ಯಾವ ಪ್ರಮಾಣದಲ್ಲಿ ದೋಷವಿದೆ ಎಂಬುದರ ಆಧಾರದ ಮೇಲೆ ಮಗುವಿನ ಆರೋಗ್ಯವನ್ನು ಅಂದಾಜಿಸಲಾಗುತ್ತದೆ. ಸಮಸ್ಯೆಯ ಗಂಭೀರತೆ ಮತ್ತು ಯಾವ ಅಂಗದಲ್ಲಿ ದೋಷವಿದೆ ಎಂಬ ಅಂಶದ ಮೇಲೆ ವ್ಯಕ್ತಿಯ ನಿರೀಕ್ಷಿತ ಜೀವಿತಾವಧಿಯು ಪ್ರಭಾವಕ್ಕೆ ಒಳಗಾಗಬಹುದು ಇಲ್ಲವೇ ಆಗದೆಯೂ ಇರಬಹುದು.

ಜನನ ದೋಷಗಳ ಪತ್ತೆ ಹಚ್ಚುವಿಕೆ: ಜನನ ದೋಷಗಳನ್ನು ಮಗುವು ಹುಟ್ಟುವ ಮುನ್ನ, ಜನನದ ಅವಧಿ ಅಥವಾ ಜನನದ ನಂತರ ಕಂಡುಕೊಳ್ಳಬಹುದು. ಸಾಮಾನ್ಯವಾಗಿ ಮಗು ಜನಿಸಿದ ಮೊದಲ ವರ್ಷದಲ್ಲೇ ನ್ಯೂನತೆಯನ್ನು ಕಂಡುಕೊಳ್ಳಲಾಗುತ್ತದೆ. ಕೆಲವು ದೋಷಗಳು, ಅಂದರೆ ಸೀಳುತುಟಿಯಂತಹ ಸಮಸ್ಯೆಯು ಕಣ್ಣಿಗೆ ಕಾಣುವುದರಿಂದ ಕಂಡುಕೊಳ್ಳುವುದು ಸುಲಭ. ಆದರೆ ಹೃದಯದ ತೊಂದರೆ ಅಥವಾ ಶ್ರವಣ ದೋಷಗಳನ್ನು ಎಕೊಕಾರ್ಡಿಯೊಗ್ರಾಂ, ಎಕ್ಸ್‌ರೇ ಅಥವಾ ಶ್ರವಣ ಪರೀಕ್ಷೆಗಳ ಮೂಲಕವೇ ಗುರುತಿಸಬೇಕಾಗುತ್ತದೆ.

ದೋಷಕ್ಕೆ ಕಾರಣಗಳೇನು: ಗರ್ಭಧಾರಣೆಯ ಯಾವುದೇ ಹಂತದಲ್ಲಾದರೂ ಮಗುವಿನಲ್ಲಿ ಜನನ ದೋಷ ಸಂಭವಿಸಬಹುದು. ಗರ್ಭಧಾರಣೆಯ ಮೊದಲ ಮೂರು ತಿಂಗಳ ಅವಧಿಯಲ್ಲಿ, ಅಂದರೆ ಮಗುವಿನ ಅಂಗರಚನೆಯಾಗುವ ಸಂದರ್ಭದಲ್ಲೇ ಜನನ ದೋಷ ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚು. ಇದು ಬೆಳವಣಿಗೆಯ ಅತಿ ಮುಖ್ಯ ಹಂತವಾಗಿರುತ್ತದೆ. ಕೆಲವು ದೋಷಗಳು ಗರ್ಭಧಾರಣೆಯ ಕೊನೆಯ ಹಂತ, ಅಂದರೆ ಮಗುವಿನಲ್ಲಿ ಕೆಲವು ಅಂಗಾಂಶಗಳು ಹಾಗೂ ಅಂಗಗಳ ಬೆಳವಣಿಗೆ ಮುಂದುವರೆಯುವ ಹಂತವಾದ, ಗರ್ಭಧಾರಣೆಯ ಕೊನೆಯ ಆರು ತಿಂಗಳಲ್ಲಿ ಕಾಣಿಸಿಕೊಳ್ಳುತ್ತವೆ.

ಕೆಲವು ದೋಷಗಳಿಗೆ, ಉದಾಹರಣೆಗೆ, ಫೀಟಲ್ ಆಲ್ಕೊಹಾಲ್ ಸಿಂಡ್ರೋಮ್‍ನಂಥ ಸಮಸ್ಯೆಗೆ ಕಾರಣ ಗುರುತಿಸುವಿಕೆ ಸುಲಭ. ಆದರೆ ಬಹುಪಾಲು ನ್ಯೂನತೆಗಳಿಗೆ ನಿರ್ದಿಷ್ಟ ಕಾರಣ ಕಂಡುಕೊಳ್ಳುವುದು ಸಾಧ್ಯವಾಗುವುದೇ ಇಲ್ಲ. ಹಲವು ಅಂಶಗಳು ಒಂದಾಗಿ ಕೆಲವು ಕೊರತೆಗಳನ್ನು ತರಬಹುದು. ವಂಶವಾಹಿ, ನಡವಳಿಕೆ, ವಾತಾವರಣದಲ್ಲಿನ ಅಂಶಗಳೂ ಒಟ್ಟಾಗಿ ಕೊರತೆಗೆ ಕಾರಣವಾಗಬಹುದು. ಆದರೆ ಇವು ಯಾವ ರೀತಿಯಲ್ಲಿ ದೋಷವನ್ನು ಉಂಟು ಮಾಡುತ್ತವೆ ಎಂಬುದರ ಕುರಿತು ಸಂಪೂರ್ಣ ಮಾಹಿತಿ ದೊರೆಯಲು ಸಾಧ್ಯವಾಗಿಲ್ಲ. ಈ ಕುರಿತು ಇನ್ನಷ್ಟು ಅಧ್ಯಯನಗಳು ನಡೆಯಬೇಕಿದೆ.

ಜೊತೆಗೆ ಹಿಂದಿನ ಸಂಶೋಧನೆಗಳನ್ನು ಅಧ್ಯಯನ ನಡೆಸಿ, ಮಗುವಿನಲ್ಲಿ ಜನನ ದೋಷಗಳನ್ನು ಉಂಟು ಮಾಡಬಲ್ಲ ಕೆಲವು ಸಾಧ್ಯತೆಗಳನ್ನು ಗುರುತಿಸಲಾಗಿದೆ. ಅವು ಇಂತಿವೆ...

* ಗರ್ಭಧಾರಣೆ ಸಮಯದಲ್ಲಿ ಧೂಮಪಾನ, ಮದ್ಯಪಾನ ಅಥವಾ ಕೆಲವು ಮಾದಕ ವಸ್ತುಗಳ ಸೇವನೆ

* ಗರ್ಭಧಾರಣೆಗೂ ಮುನ್ನ ಹಾಗೂ ಗರ್ಭಧಾರಣೆ ಅವಧಿಯಲ್ಲಿ ಅನಿಯಂತ್ರಿತ ಮಧುಮೇಹ, ಸ್ಥೂಲಕಾಯದಂಥ ಸಮಸ್ಯೆಗಳು

 * ಕೆಲವು ಔಷಧಿಗಳ ಸೇವನೆ. ಉದಾಹರಣೆಗೆ, ಅತಿಯಾದ ಮೊಡವೆಗಳ ನಿಯಂತ್ರಣಕ್ಕೆ ತೆಗೆದುಕೊಳ್ಳುವ ಐಸೊಟ್ರೆಟಿನಾಯಿನ್ ಸೇವನೆ

ಕುಟುಂಬದಲ್ಲಿ ಜನನ ದೋಷದ ಇತಿಹಾಸವಿದ್ದರೆ

 34 ವರ್ಷ ವಯಸ್ಸಿನ ನಂತರ ಗರ್ಭಧಾರಣೆ

ಇವುಗಳಲ್ಲಿ ಒಂದು ಅಥವಾ ಒಂದಕ್ಕಿಂತ ಹೆಚ್ಚು ಅಂಶಗಳು ಗರ್ಭಧಾರಣೆ ಸಮಯದಲ್ಲಿ ಇವೆ ಎಂದ ಮಾತ್ರಕ್ಕೆ ದೋಷವಿರುವ ಮಗು ಜನಿಸುತ್ತದೆ ಎಂದರ್ಥವಲ್ಲ. ಈ ಯಾವುದೇ ಅಪಾಯವಿಲ್ಲದಿದ್ದರೂ ಹುಟ್ಟುವ ಮಗುವಿಗೆ ದೋಷ ಕಾಣಿಸಿಕೊಳ್ಳಬಹುದು. ಆದ್ದರಿಂದ ಸಾಧ್ಯತೆಗಳನ್ನು ನಿಯಂತ್ರಿಸುವ ಕುರಿತು ವೈದ್ಯರೊಂದಿಗೆ ಚರ್ಚಿಸಿ, ಸೂಕ್ತ ಚಿಕಿತ್ಸೆ ಪಡೆಯುವುದು ಅತಿ ಮುಖ್ಯ ಕಾರ್ಯವಾಗಿರುತ್ತದೆ.

ಜನನ ದೋಷವಿರುವ ಮಕ್ಕಳಿಗೆ ಬದುಕಲು ಹಾಗೂ ಬೆಳವಣಿಗೆ ಹೊಂದಲು ವಿಶೇಷ ಕಾಳಜಿಯ ಅವಶ್ಯಕತೆಯಿರುತ್ತದೆ. ದೋಷದ ಶೀಘ್ರ ಪತ್ತೆ ಹಚ್ಚುವಿಕೆ ಬೆಳವಣಿಗೆಗೆ ಅತ್ಯವಶ್ಯಕವಾಗಿರುತ್ತದೆ. ಮಗುವಿಗೆ ಜನನ ದೋಷ ಇದೆ ಎಂದಾದರೆ, ಸ್ಥಳೀಯವಾಗಿ ದೊರೆಯುವ ಚಿಕಿತ್ಸೆಯ ಕುರಿತು ಮಾಹಿತಿ ಪಡೆಯುವುದು ಅವಶ್ಯಕ. ಮಕ್ಕಳ ತಜ್ಞರು, ವೈದ್ಯಕೀಯ ಸಲಹೆಗಾರರೊಂದಿಗೆ ಚರ್ಚಿಸುವುದು ಉತ್ತಮ.

ಮುಂದುವರಿಯುವುದು...

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !