ಜನನ ದೋಷ: ದೂರವಿಲ್ಲ ಪತ್ತೆಯ ಮಾರ್ಗ

7

ಜನನ ದೋಷ: ದೂರವಿಲ್ಲ ಪತ್ತೆಯ ಮಾರ್ಗ

Published:
Updated:

ನಿರ್ದಿಷ್ಟ ಜನನ ದೋಷವನ್ನು ಆಧರಿಸಿ, ಗರ್ಭಧಾರಣೆ ಸಮಯದಲ್ಲಿ, ಇಲ್ಲವೇ ಮಗು ಜನಿಸಿದ ನಂತರ ಚಿಕಿತ್ಸೆಯನ್ನು ನಿರ್ಧರಿಸಬಹುದು. ಗರ್ಭಧಾರಣೆ ಸಮಯದಲ್ಲಿ, ಪ್ರಸವಪೂರ್ವ ಪರೀಕ್ಷೆ ಮೂಲಕ ಮಗುವಿನಲ್ಲಿರುವ ಸಮಸ್ಯೆಗಳ ಪತ್ತೆ ಹಚ್ಚುವಿಕೆ ಸಾಧ್ಯವಿದೆ. ಇದರಲ್ಲಿ ಸ್ಕ್ರೀನಿಂಗ್ ಹಾಗೂ ರೋಗನಿರ್ಣಯ ಪರೀಕ್ಷೆಯನ್ನು ಪ್ರಮುಖವಾಗಿ ನಡೆಸಲಾಗುತ್ತದೆ.

ಸ್ಕ್ರೀನಿಂಗ್ ಪರೀಕ್ಷೆ
ಗರ್ಭಿಣಿ ಅಥವಾ ಮಗುವಿನಲ್ಲಿ ಸಮಸ್ಯೆಯ ಸಾಧ್ಯತೆಯನ್ನು ಪತ್ತೆ ಹಚ್ಚಲು ಕೈಗೊಳ್ಳುವ ಪರೀಕ್ಷೆ ಸ್ಕ್ರೀನಿಂಗ್. ಸ್ಕ್ರೀನಿಂಗ್ ಪರೀಕ್ಷೆ ನಿರ್ದಿಷ್ಟ ಸಮಸ್ಯೆಯನ್ನು ಗುರುತಿಸುವುದಿಲ್ಲ. ಕೆಲವೊಮ್ಮೆ ತಾಯಿ ಅಥವಾ ಮಗುವಿಗೆ ಯಾವುದೇ ಸಮಸ್ಯೆ ಇರದಿದ್ದರೂ ತಪ್ಪಾದ ಫಲಿತಾಂಶ ಅಥವಾ ಮಾಹಿತಿ ದೊರೆಯುವ ಸಾಧ್ಯತೆ ಇರುತ್ತದೆ. ಆದರೆ ಗರ್ಭಧಾರಣೆ ಸಮಯದಲ್ಲಿ, ಮಗುವಿನಲ್ಲಿ ಇರಬಹುದಾದ ಜನನ ದೋಷ ಅಥವಾ ಇನ್ನಿತರ ಸಮಸ್ಯೆಯನ್ನು ಗುರುತಿಸಲು ಸ್ಕ್ರೀನಿಂಗ್ ನಡೆಸುವುದು ವಾಡಿಕೆ.

ಮೊದಲ ತ್ರೈಮಾಸಿಕ ಸ್ಕ್ರೀನಿಂಗ್ ಪರೀಕ್ಷೆ: ಗರ್ಭಧಾರಣೆಯ 11– 13ನೇ ವಾರದ ನಡುವೆ ಹಲವು ಪರೀಕ್ಷೆಗಳನ್ನು ನಡೆಸಲಾಗುತ್ತದೆ. ಮಗುವಿನ ಹೃದಯ ಅಥವಾ ಬುದ್ಧಿಮಾಂದ್ಯತೆಯಂತಹ ಸಮಸ್ಯೆಗೆ ಕಾರಣವಾಗಬಲ್ಲ ಕ್ರೋಮೊಸೋಮಿನಲ್ಲಿನ (ವರ್ಣತಂತು) ವ್ಯತ್ಯಯದ ಪತ್ತೆಗೆ ಪರೀಕ್ಷೆ ನಡೆಸಲಾಗುತ್ತದೆ. ಇದು ಪ್ರಮುಖವಾಗಿ ಮೆಟರ್ನಲ್ ಬ್ಲಡ್ ಸ್ಕ್ರೀನ್ (ತಾಯಿಯ ರಕ್ತಪರಿಶೀಲನೆ) ಹಾಗೂ ಅಲ್ಟ್ರಾಸೌಂಡ್ ಒಳಗೊಂಡಿರುತ್ತದೆ.

ಎ. ಡಮೆಟರ್ನಲ್ ಬ್ಲಡ್ ಸ್ಕ್ರೀನ್: ಇದು ರಕ್ತದ ಸರಳ ಪರೀಕ್ಷೆ. ಎಚ್‍ಸಿಜಿ (ಹ್ಯೂಮನ್ ಕೊರಿಯೋನಿಕ್ ಗ್ಯಾನಡೊಟ್ರೋಪಿನ್) ಹಾಗೂ ಗರ್ಭಧಾರಣೆ ಸಂಬಂಧಿ ಪ್ಲಾಸ್ಮ ಪ್ರೊಟೀನ್ ಎ (ಪಿಎಪಿಪಿ-ಎ) ಮಟ್ಟವನ್ನು ಈ ಪರೀಕ್ಷೆಯಿಂದ ಅಳೆಯಲಾಗುತ್ತದೆ. ಪ್ರೊಟೀನ್‍ ಮಟ್ಟ ಅಸಹಜವಾಗಿ ಕಡಿಮೆ ಅಥವಾ ಹೆಚ್ಚಿನ ಪ್ರಮಾಣದಲ್ಲಿದ್ದರೆ, ಮಗುವಿನಲ್ಲಿ ವರ್ಣತಂತುವಿನ ಸಮಸ್ಯೆಯಿದೆ ಎಂದರ್ಥ.

ಬಿ. ಅಲ್ಟ್ರಾಸೌಂಡ್: ಅಲ್ಟ್ರಾಸೌಂಡ್, ಮಗುವಿನ ಚಿತ್ರವನ್ನು ಸೃಷ್ಟಿಸುತ್ತದೆ. ಗರ್ಭಧಾರಣೆಯ ಮೊದಲ ಮೂರು ತಿಂಗಳಿನಲ್ಲಿ ನಡೆಸುವ ಈ ಪರೀಕ್ಷೆಯಲ್ಲಿ, ಮಗುವಿನ ಕುತ್ತಿಗೆ ಹಿಂಭಾಗದಲ್ಲಿ ಅಧಿಕ ದ್ರವ ಸೇರಿರುವ ಸಾಧ್ಯತೆಯನ್ನು ಕಂಡುಕೊಳ್ಳಲಾಗುತ್ತದೆ. ಹೆಚ್ಚಿನ ದ್ರವ ಇರುವುದು ಗೋಚರಿಸಿದರೆ, ಮಗುವಿಗೆ ಕ್ರೋಮೊಸೋಮಿನ ಅಥವಾ ಹೃದಯದ ಸಮಸ್ಯೆ ಇದೆ ಎಂದರ್ಥ.

ಎರಡನೇ ತ್ರೈಮಾಸಿಕ ಪರೀಕ್ಷೆ: ಗರ್ಭಧಾರಣೆಯ 15– 20ನೇ ವಾರದ ನಡುವೆ ಎರಡನೇ ತ್ರೈಮಾಸಿಕ ಪರೀಕ್ಷೆ ನಡೆಯುತ್ತದೆ. ಮಗುವಿನಲ್ಲಿ ಕೆಲವು ಜನ್ಮ ದೋಷಗಳನ್ನು ಕಂಡುಕೊಳ್ಳಲು ಇದು ನೆರವಾಗುತ್ತದೆ. ಮೆಟರ್ನಲ್ ಸೆರಂ ಸ್ಕ್ರೀನ್ (ರಕ್ತಸಾರ ಪರೀಕ್ಷೆ) ಹಾಗೂ ಅಲ್ಟ್ರಾಸೌಂಡ್ ಫಲಿತಾಂಶದ ಒಟ್ಟಾರೆ ಪರಿಶೀಲನೆ ಇಲ್ಲಿ ನಡೆಯುತ್ತದೆ. ಇದರಿಂದ ಮಗುವಿನ ದೇಹ ರಚನೆಯಲ್ಲಿನ ಅಸಹಜತೆಯನ್ನು ಪತ್ತೆ ಹಚ್ಚುವ ಪ್ರಯತ್ನ ನಡೆಸಲಾಗುತ್ತದೆ. ಇದನ್ನು ಅನಾಮಲಿ ಅಲ್ಟ್ರಾಸೌಂಡ್ ಎಂದು ಕರೆಯುತ್ತಾರೆ.

ಎ. ಮೆಟರ್ನಲ್ ಸೆರಂ ಸ್ಕ್ರೀನ್: ಮಗುವಿನಲ್ಲಿ ಬುದ್ಧಿಮಾಂದ್ಯತೆಯಂತಹ ವರ್ಣತಂತು ಸಂಬಂಧಿ ಸಮಸ್ಯೆ ಅಥವಾ ನರವ್ಯೂಹದಲ್ಲಿ ದೋಷಗಳು ಇರುವ ಸಾಧ್ಯತೆಯನ್ನು ಕಂಡುಕೊಳ್ಳಲು ತಾಯಿಗೆ ನಡೆಸುವ ಸರಳ ರಕ್ತ ಪರೀಕ್ಷೆ ಇದಾಗಿದೆ. ತಾಯಿಯ ರಕ್ತದಲ್ಲಿನ ಪ್ರೊಟೀನಿನ ಸಂಖ್ಯೆಯ ಅಳತೆಯನ್ನು ಆಧರಿಸಿ ‘ಟ್ರಿಪಲ್ ಸ್ಕ್ರೀನ್’ ಅಥವಾ ‘ಕ್ವಾಡ್ ಸ್ಕ್ರೀನ್’ ಎಂಬ ಪರೀಕ್ಷೆ ನಡೆಯುತ್ತದೆ. ಉದಾಹರಣೆಗೆ ಕ್ವಾಡ್ ಸ್ಕ್ರೀನ್- ಎಎಫ್‍ಪಿ (ಆಲ್ಫಾ ಫೆಟೊಪ್ರೊಟೀನ್), ಎಚ್‍ಸಿಜಿ, ಎಸ್ಟ್ರಿಯೊಲ್ ಮತ್ತು ಇನ್‍ಹಿಬಿನ್ ಎ ಎಂಬ ನಾಲ್ಕು ಪ್ರೊಟೀನ್‍ಗಳ ಮಟ್ಟವನ್ನು ಪರೀಕ್ಷಿಸುತ್ತದೆ. ಸಾಮಾನ್ಯವಾಗಿ, ಎರಡನೇ ತ್ರೈಮಾಸಿಕದಲ್ಲಿ ಈ ಪರೀಕ್ಷೆ ಪೂರ್ಣಗೊಂಡಿರುತ್ತದೆ.

ಬಿ. ಅನಾಮಲಿ ಅಲ್ಟ್ರಾಸೌಂಡ್: ಗರ್ಭಧಾರಣೆಯ 18-20 ವಾರಗಳ ನಡುವೆ, ಮಗುವಿನ ಗಾತ್ರ ಪರಿಶೀಲನೆಗೆ ಈ ಪರೀಕ್ಷೆ ನಡೆಯುತ್ತದೆ. ಜೊತೆಗೆ ಮಗುವಿನಲ್ಲಿ ಯಾವುದೇ ಸಮಸ್ಯೆಗಳ ಇರುವಿಕೆಯನ್ನೂ ಕಂಡುಕೊಳ್ಳಬಹುದಾಗಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !