ಕಡು ಬಿಸಿಲು; ರಜೆಯ ಮೋಜಿಗಾಗಿ ಈಜು..!

ಬುಧವಾರ, ಏಪ್ರಿಲ್ 24, 2019
31 °C
ವಿಜಯಪುರದಲ್ಲಿ 6 ಖಾಸಗಿ ಸ್ವಿಮ್ಮಿಂಗ್‌ ಪೂಲ್‌; ತೋಟದ ಬಾವಿಯಲ್ಲೂ ಈಜು

ಕಡು ಬಿಸಿಲು; ರಜೆಯ ಮೋಜಿಗಾಗಿ ಈಜು..!

Published:
Updated:
Prajavani

ವಿಜಯಪುರ: ‘ನೀರಿಗೆ ಇಳಿದರೆ ಎದ್ದು ಮೇಲೆ ಬರುವ ಮನಸ್ಸೇ ಆಗಲ್ಲ. ತಾಸುಗಟ್ಟಲೇ ನೀರಿನೊಳಗೆ ಇರಬೇಕು ಎನ್ನಿಸುತ್ತದೆ’... ಇದು ಈಜು ಪ್ರಿಯರ ವ್ಯಾಖ್ಯಾನವಾದರೆ, ಬಿಸಿಲ ತಾಪ ತಡೆಯಲಾಗದೆ ನೀರಿಗಿಳಿದವರ ಅನಿಸಿಕೆಯೂ ಇದೇ.

ಮಾರ್ಚ್‌ ಆರಂಭದಿಂದ ನಗರದಲ್ಲಿರುವ ಆರು ಖಾಸಗಿ ಈಜುಕೊಳಗಳು ಭರ್ತಿ. ಗಂಟೆಗೊಮ್ಮೆ ಶುಲ್ಕ ಪಾವತಿಸಲು ಸಾಧ್ಯವಿಲ್ಲದವರು, ನಗರದ ಹೊರ ವಲಯದಲ್ಲಿರುವ ಖಾಸಗಿಯವರ ತೋಟದ ಬಾವಿಗಳು, ಐತಿಹಾಸಿಕ ಬಾವಿಯಲ್ಲಿ ನಿತ್ಯವೂ ಮಿಂದೇಳುತ್ತಿದ್ದಾರೆ.

ಯುವಕರು–ಚಿಣ್ಣರ ನೀರಿನಾಟಕ್ಕೆ ಮಿತಿಯೇ ಇಲ್ಲವಾಗಿದೆ. ಇದೀಗ ಬಿರು ಬಿಸಿಲಿನ ಸಮಯ. ಗರಿಷ್ಠ ತಾಪಮಾನ 41 ಡಿಗ್ರಿ ಆಸುಪಾಸು ದಾಖಲಾಗುತ್ತಿದೆ. ಮನೆ ಒಳಗೂ–ಹೊರಗೂ ಇರಲಾರದ ಸ್ಥಿತಿ. ತಂಪಿನ ವಾತಾವರಣ ಅರಸುವವರೇ ಅಧಿಕ.

ಶಾಲಾ–ಕಾಲೇಜುಗಳಿಗೆ ರಜೆಯ ಸಮಯ. ಚಿಣ್ಣರು ಮಧ್ಯಾಹ್ನದ ವೇಳೆ ಹೊರಗೆ ಆಟವಾಡಲು ಸಾಧ್ಯವಿಲ್ಲದಂಥ ಬಿಸಿಲು. ಇಂಥ ವಾತಾವರಣವನ್ನು ತಮ್ಮ ಅನುಕೂಲಕ್ಕೆ ಬಳಸಿಕೊಳ್ಳುವ ಬಹುತೇಕರು ಈಜುಕೊಳದಲ್ಲಿ ಮುಳುಗೇಳುತ್ತಿದ್ದಾರೆ.

ವಿಜಯಪುರದಲ್ಲಿ ಸರ್ಕಾರದ ಈಜುಕೊಳವಿಲ್ಲ. ಖಾಸಗಿ ಒಡೆತನದ ಆರು ಈಜುಕೊಳಗಳಿವೆ. ಬಿಸಿಲ ಧಗೆ ತಡೆಯಲಾರದೆ ಗಂಟೆಗೆ ₹ 50 ನೀಡಿ ಈಜುವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ನಸುಕಿನ 6.30ರಿಂದ ಮುಸ್ಸಂಜೆ 6ರವರೆಗೂ ಈಜುಕೊಳಗಳು ಭರ್ತಿ.

ಒಂದೊಂದು ಈಜುಕೊಳದಲ್ಲಿ ಮಹಿಳೆಯರಿಗಾಗಿಯೇ ಒಂದು ತಾಸು ಪ್ರತ್ಯೇಕ ಸಮಯ ನಿಗದಿ ಪಡಿಸಲಾಗಿದೆ. ಹಲವರು ನಿತ್ಯವೂ ಈಜಿಗಾಗಿ ಇಲ್ಲಿಗೆ ಬರುವುದು ವಿಶೇಷ. ಗಂಟೆಗೊಮ್ಮೆ ಶುಲ್ಕ ಪಾವತಿ ಕಡ್ಡಾಯ.

ನಗರದ ಬಹುತೇಕ ಖಾಸಗಿ ಈಜುಕೊಳಗಳಲ್ಲಿ ಗಂಟೆಗೆ ₹ 50 ಶುಲ್ಕ ನಿಗದಿಪಡಿಸಲಾಗಿದೆ. ಮಾಸಿಕ ಪಾಸ್‌ಗೆ ₹ 1000. ಕೋಚ್‌ ಬೇಕೆಂದರೇ ₹ 1,500. ಕೆಲ ಷರತ್ತುಗಳು ಅನ್ವಯವಾಗುತ್ತವೆ. ನಗರದ ಜನತೆ ಬಿಸಿಲ ತಾಪ ತಾಳಲಾರದೆ ಎಲ್ಲದಕ್ಕೂ ಸಮ್ಮತಿಸಿ ಈಜಿನ ಮೋಜು ಅನುಭವಿಸುತ್ತಿದ್ದಾರೆ.

‘ಬಿಸಿಲ ಪ್ರಖರತೆ ಹೆಚ್ಚಿದೆ. ಮನೆಯಲ್ಲಿ ಕೂರಲು ಆಗಲ್ಲ. ಬೆವರು ಒರೆಸಿಕೊಂಡೇ ಸುಸ್ತಾಗುತ್ತೇವೆ. ಎಸಿ, ಫ್ಯಾನ್‌ ಪ್ರಯೋಜನಕ್ಕೆ ಬರುತ್ತಿಲ್ಲ. ಮಕ್ಕಳ ಕಿರಿಕಿರಿ ಸಹಿಸದೆ ಈಜುಕೊಳದತ್ತ ವಾರಕ್ಕೆ 2–3 ಬಾರಿ ಹೋಗಬೇಕಾದ ಸ್ಥಿತಿ ನಿರ್ಮಾಣಗೊಂಡಿದೆ.

ಈಜುಕೊಳದತ್ತ ಹೆಜ್ಜೆ ಹಾಕಿದರೆ ಸಾಕು ಮಕ್ಕಳ ಮೊಗದಲ್ಲಿ ಆನಂದ ಕಂಗೊಳಿಸುತ್ತದೆ. ನೀರಿಗಿಳಿದರೆ 3–4 ತಾಸು ಮೇಲೆ ಬಾರದೆ ಸಂತೋಷದಿಂದ ಈಜಾಡುತ್ತಾರೆ’ ಎನ್ನುತ್ತಾರೆ ನಗರದ ನಿವಾಸಿ ಪವನ್‌ಕುಮಾರ್‌ ಅಂಗಡಿ.

ಕನಸಾದ ಸರ್ಕಾರಿ ಈಜುಕೊಳ..!

ವಿಜಯಪುರದಲ್ಲಿ ಸರ್ಕಾರಿ ಒಡೆತನದ ಈಜುಕೊಳ ನಿರ್ಮಿಸಬೇಕು ಎಂಬುದು ಸಾರ್ವಜನಿಕರ ದಶಕಗಳ ಬೇಡಿಕೆ. ವರ್ಷಗಳು ಗತಿಸಿದರೂ ಈಜುಕೊಳ ನಿರ್ಮಾಣ ಎಂಬುದು ಗಗನ ಕುಸುಮವಾಗಿದೆ.

ಲೋಕಸಭಾ ಚುನಾವಣೆ ಘೋಷಣೆಗೂ ಮುನ್ನ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಕನಕದಾಸ ಬಡಾವಣೆಯಲ್ಲಿರುವ ಮೂರುವರೆ ಎಕರೆ ಭೂಮಿಯಲ್ಲಿ, ₨ 2.20 ಕೋಟಿ ವೆಚ್ಚದಲ್ಲಿ ಅತ್ಯಾಧುನಿಕ ಅಂತರರಾಷ್ಟ್ರೀಯ ಮಟ್ಟದ ಈಜುಕೊಳ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿದ್ದಾರೆ.

ಆದರೆ ಈ ಬೇಸಿಗೆಯ ಅವಧಿಯೊಳಗೆ ಸರ್ಕಾರಿ ಈಜುಕೊಳ ನಿರ್ಮಾಣವಾಗುವುದು ಅನುಮಾನ ಎಂಬುದು ಈಜು ಪ್ರಿಯರ ಅನಿಸಿಕೆ. ಮುಂದಿನ ಜನವರಿ–ಫೆಬ್ರುವರಿಯೊಳಗಾದರೂ ಸುಸಜ್ಜಿತ ಈಜುಕೊಳ ಸಿದ್ಧಗೊಳ್ಳಲಿ ಎಂಬುದು ಈಜು ಕ್ರೀಡಾಸಕ್ತರ ಅಂಬೋಣ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !