ಶಿಸ್ತುಕ್ರಮಕ್ಕೆ ಕಮಲ ಪಾಳೆಯದಲ್ಲೇ ಅಪಸ್ವರ..!

7
ಪ್ರಮುಖರಲ್ಲೇ ಪರ–ವಿರೋಧ; ಜಿಲ್ಲಾ ಘಟಕದ ನಿರ್ಧಾರಕ್ಕೆ ಒಮ್ಮತವಿಲ್ಲ..?

ಶಿಸ್ತುಕ್ರಮಕ್ಕೆ ಕಮಲ ಪಾಳೆಯದಲ್ಲೇ ಅಪಸ್ವರ..!

Published:
Updated:

ವಿಜಯಪುರ: ಹೊಂದಾಣಿಕೆ ರಾಜಕಾರಣಕ್ಕೆ ವಿಜಯಪುರ ಜಿಲ್ಲೆ ಕುಖ್ಯಾತಿ. ಲೋಕಸಭೆ, ವಿಧಾನಸಭಾ ಚುನಾವಣೆಗೆ ಸೀಮಿತವಾಗಿದ್ದ ಪ್ರಭಾವಿ ನಾಯಕರ ಪಕ್ಷಾತೀತ ಒಳ ಮೈತ್ರಿ, ಇದೀಗ ಸ್ಥಳೀಯ ಸಂಸ್ಥೆಗಳಿಗೂ ವಿಸ್ತರಣೆಯಾಗಿದೆ.

ವಿಜಯಪುರ ಮಹಾನಗರ ಪಾಲಿಕೆ ಅಸ್ತಿತ್ವಕ್ಕೆ ಬಂದ ಬಳಿಕ; ಬೃಹತ್‌ ಪಕ್ಷವಾಗಿದ್ದ ಬಿಜೆಪಿಯೊಳಗೆ, ಕಮಲ ನಿಷ್ಠೆ ಮೆರೆದ ಸದಸ್ಯರಿಗಿಂತ; ಈ ಹಿಂದಿನ ಸರ್ಕಾರದಲ್ಲಿ ಬರೋಬ್ಬರಿ ಐದು ವರ್ಷ ಜಿಲ್ಲಾ ಉಸ್ತುವಾರಿ ಹಾಗೂ ಜಲಸಂಪನ್ಮೂಲ ಸಚಿವರಿದ್ದ ಎಂ.ಬಿ.ಪಾಟೀಲಗೆ ನಿಷ್ಠೆ ಪ್ರದರ್ಶಿಸಿದವರೇ ಹೆಚ್ಚು.

‘ಐದು ಬಾರಿ ನಡೆದ ಮೇಯರ್‌–ಉಪ ಮೇಯರ್ ಚುನಾವಣೆಯಲ್ಲಿ ಒಮ್ಮೆಯೂ ಬಿಜೆಪಿ ಅಧಿಕಾರದ ಗದ್ದುಗೆ ಹಿಡಿಯಲು ಸಾಧ್ಯವಾಗಲಿಲ್ಲ. ಎಂ.ಬಿ.ಪಾಟೀಲ ಮುಂದೆ ಮಂಡಿಯೂರಿ ಉಪ ಮೇಯರ್‌ಗೆ ತೃಪ್ತಿಪಟ್ಟುಕೊಂಡವರೇ ಬಿಜೆಪಿಗರು.

ಮತದಾರನಿಗಿದ್ದ ಪಕ್ಷ ನಿಷ್ಠೆ, ಚುನಾಯಿತ ಜನಪ್ರತಿನಿಧಿಗಳಿಗಿಲ್ಲವಾಗಿದೆ. ಶಿಸ್ತಿನ ಪಕ್ಷ ಎಂದೇ ಹೆಮ್ಮೆಯಿಂದ ಬೀಗುವ ಬಿಜೆಪಿಯ ಸ್ಥಿತಿ ಚಿಂತಾಜನಕ. ವಿಜಯಪುರ ಜಿಲ್ಲಾ ಬಿಜೆಪಿ ಘಟಕ ಅರಾಜಕತೆಯಿಂದ ಕೂಡಿದೆ. ವಿಜಯಪುರ ನಗರ ಮಂಡಲವೂ ಇದಕ್ಕೆ ಹೊರತಾಗಿಲ್ಲ. ಮುಂಬರುವ ಚುನಾವಣೆಯಲ್ಲಿ ಬಿಜೆಪಿಗೆ ಮತ ಚಲಾಯಿಸುವುದಕ್ಕಿಂತ, ಕಾಂಗ್ರೆಸ್‌ಗೆ ಮತ ಹಾಕುವುದೇ ಉತ್ತಮ’ ಎಂಬ ಅಭಿಪ್ರಾಯಗಳುಳ್ಳ ಒಕ್ಕಣೆ ಜಿಲ್ಲಾ ಪಂಚಾಯ್ತಿ ಚುನಾವಣೆ ಪ್ರಹಸನದ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ಬಿರುಸಿನ ಚರ್ಚೆಗೆ ಗ್ರಾಸವೊದಗಿಸಿದೆ.

‘ವಿಜಯಪುರ ಮಹಾನಗರ ಪಾಲಿಕೆಯೊಳಗಿದ್ದ ‘ಬಿಜೆಪಿಯೊಳಗಿನ ಎಂ.ಬಿ.ಪಾಟೀಲ ಬಳಗ’ ಇದೀಗ ಜಿಲ್ಲಾ ಪಂಚಾಯ್ತಿ ಅಖಾಡಕ್ಕೂ ವಿಸ್ತರಣೆಯಾಗಿದೆ. ಮುಂದಿನ 15 ತಿಂಗಳ ಬಳಿಕ ಇದು ಇನ್ನಷ್ಟು ಪ್ರಬಲವಾಗಿರಲಿದೆ.

ರಾಜ್ಯ ಬಿಜೆಪಿಯ ಅಗ್ರೇಸರ ಬಿ.ಎಸ್‌.ಯಡಿಯೂರಪ್ಪ ವಿಧಾನಸಭಾ ಚುನಾವಣೆ ಪೂರ್ವದಲ್ಲಿ ಹಲವು ಬಾರಿ ತಮ್ಮ ಪಕ್ಷದ ಪದಾಧಿಕಾರಿಗಳು, ಚುನಾಯಿತ ಜನಪ್ರತಿನಿಧಿಗಳಿಗೆ ಬಹಿರಂಗವಾಗಿ ಎಂ.ಬಿ.ಪಾಟೀಲ ದೋಸ್ತಿಗಾಗಿ ‘ಕೈ’ ಕೊಡುವವರಿಗೆ ಪಕ್ಷದಲ್ಲಿ ಸ್ಥಾನಮಾನವಿಲ್ಲ ಎಂದು ಗುಡುಗಿದ್ದರೂ; ಸ್ಥಳೀಯ ಪ್ರಭಾವಿಗಳ ಸ್ವಹಿತಾಸಕ್ತಿ ಮುಂದೆ ಎಲ್ಲವೂ ಗೌಣವಾಗಿದೆ.

ದಿನದಿಂದ ದಿನಕ್ಕೆ ಬಿಜೆಪಿಯೊಳಗಿನ ಎಂ.ಬಿ.ಪಾಟೀಲ ಅಭಿಮಾನಿಗಳ ಬಳಗ ವೃದ್ಧಿಯಾಗುತ್ತಿದೆ. ಬಿಜೆಪಿ ಸಂಘಟನೆ ಕುಸಿಯುತ್ತಿದೆ. ನೆಪಮಾತ್ರಕ್ಕೆ ಪಕ್ಷದ ಅಸ್ತಿತ್ವವಿದೆ. ಏನು ಉಳಿದಿಲ್ಲ. ಒಂದೆಡೆ ಬಸನಗೌಡ ಪಾಟೀಲ ಯತ್ನಾಳ. ಇನ್ನೊಂದೆಡೆ ರಮೇಶ ಜಿಗಜಿಣಗಿ. ಮಗದೊಂದೆಡೆ ಹಾಲಿ ಪದಾಧಿಕಾರಿಗಳ ತಂಡದ ಸಾರಥ್ಯದಲ್ಲಿ ಪಕ್ಷದ ಶವಪೆಟ್ಟಿಗೆಗೆ ಕೊನೆಯ ಮೊಳೆ ಹೊಡೆಯುವ ಕೆಲಸ ವ್ಯವಸ್ಥಿತವಾಗಿ ನಡೆದಿದೆ’ ಎಂದು ಬಿಜೆಪಿಯ ಹಿರಿಯ ಮುಖಂಡರೊಬ್ಬರು ‘ಪ್ರಜಾವಾಣಿ’ ಬಳಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಸಾಬು ಮಾಶ್ಯಾಳ ‘ಪೇಮೆಂಟ್‌’ ಪೋಸ್ಟ್‌ ವೈರಲ್..!

ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಸ್ಥಾನದ ಚುನಾವಣೆಗೆ ಬಿಜೆಪಿಯ ಅಭ್ಯರ್ಥಿಯಾಗಿದ್ದ, ತಿಕೋಟಾ ತಾಲ್ಲೂಕಿನ ಕನಮಡಿ ಕ್ಷೇತ್ರದ ಸದಸ್ಯ ಸಾಬು ಎಸ್‌.ಮಾಶ್ಯಾಳ, ಸೋಲಿನ ನಂತರ ತಮ್ಮ ಫೇಸ್‌ಬುಕ್‌ ಖಾತೆಯಲ್ಲಿ ಪ್ರಕಟಿಸಿರುವ ಸಂದೇಶ ಈ ಭಾಗದ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಪ್ರಮಾಣದಲ್ಲಿ ಹರಿದಾಡುತ್ತಿದೆ.

‘ವಿಜಯಪುರ ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಚುನಾವಣೆಯಲ್ಲಿ, ಬಿಜೆಪಿಯಿಂದ ಬಿಜೆಪಿ ಸೋತಿದ್ದು, ತಲಾ ಹತ್ತು ಲಕ್ಷ ಹಣ ಪಡೆದು ಗೈರಾದ ಸಮಯ ಸಾಧಕರು. ಇವರಿಂದ ಬಿಜೆಪಿಗೆ..’ ಎಂಬ ಒಕ್ಕಣೆಯ ಪೋಸ್ಟ್‌ಗೆ ಸಾಕಷ್ಟು ಕಟು ಟೀಕೆ ವ್ಯಕ್ತವಾಗಿವೆ. ಇದರ ಜತೆಯಲ್ಲೇ ಜಿಲ್ಲಾ ಪಂಚಾಯ್ತಿ ಸದಸ್ಯರು ಮಾರಾಟವಾಗಿದ್ದಾರೆ ಎಂಬ ವಿಷಯವೂ ಬಿರುಸಿನ ಚರ್ಚೆಗೆ ಎಡೆ ಮಾಡಿಕೊಟ್ಟಿದೆ.

ಬಿಜೆಪಿ ಜಿಲ್ಲಾ ಮಾಧ್ಯಮ ವಕ್ತಾರ ಕೃಷ್ಣ ಗುನ್ಹಾಳಕರ ತಮ್ಮ ಫೇಸ್‌ಬುಕ್‌ ಖಾತೆಯಲ್ಲಿ ‘ಪಕ್ಷದ ಹೆಸರಿನಲ್ಲಿ ಆರಿಸಿ ಬಂದು... ಆ ಮೇಲೆ ಹೊಂದಾಣಿಕೆ ಮಾಡಿ, ಪಕ್ಷದ ಹೆಸರು ಹಾಳು ಮಾಡುವ ಪ್ರತಿನಿಧಿಗಳಿಗೆ ಪಕ್ಷದ ಸದಸ್ಯತ್ವದಿಂದ ಹೊರಗೆ ಹಾಕಿ...’ ಎಂದು ಅಪ್‌ಲೋಡ್‌ ಮಾಡಿರುವ ಸಂದೇಶಕ್ಕೂ ವ್ಯಾಪಕ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಬಿಜೆಪಿಗೆ ಮತ ಚಲಾಯಿಸುವುದಕ್ಕಿಂತ, ಕಾಂಗ್ರೆಸ್‌ಗೆ ಮತ ಹಾಕುವುದೇ ಉತ್ತಮವಲ್ಲವೇ ? ಎಂಬ ಪ್ರಶ್ನೆಗಳನ್ನು ವಿಜಯಪುರಿಗರು ಸಾಮಾಜಿಕ ಜಾಲತಾಣದಲ್ಲಿ ಕೇಳಿದ್ದು, ವಿಜಯಪುರ ಜಿಲ್ಲಾ ಬಿಜೆಪಿ ಘಟಕ ತೀವ್ರ ಮುಖಭಂಗಕ್ಕೀಡಾಗುತ್ತಿದೆ.

‘ವಿಜಯಪುರ ಮಹಾನಗರ ಪಾಲಿಕೆ ಸದಸ್ಯರ ಮೇಲಿಲ್ಲದ ಶಿಸ್ತುಕ್ರಮ, ಜಿಲ್ಲಾ ಪಂಚಾಯ್ತಿ ಸದಸ್ಯರ ಮೇಲ್ಯಾಕೆ. ಆಗಲೇ ಈ ಕ್ರಮ ಜರುಗಿಸಿದ್ದರೇ ಪಕ್ಷ ಸತತವಾಗಿ ಮುಖಭಂಗ ಅನುಭವಿಸುತ್ತಿರಲಿಲ್ಲ. ಮುಖಂಡರ ಸ್ವಾರ್ಥಕ್ಕೆ ಒಂದು ಕಣ್ಣಿಗೆ ಸುಣ್ಣ–ಮತ್ತೊಂದಕ್ಕೆ ಬೆಣ್ಣೆ ಹಚ್ಚುವ ಕೆಲಸ ವ್ಯವಸ್ಥಿತವಾಗಿ ನಡೆದಿದೆ’ ಎಂದು ಸಂಘಟನೆಯ ಪ್ರಮುಖರೊಬ್ಬರು ‘ಪ್ರಜಾವಾಣಿ’ ಬಳಿ ತಮ್ಮ ಅಪಸ್ವರ ವ್ಯಕ್ತಪಡಿಸಿದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !