ಬಿಜೆಪಿ ಭಿನ್ನಮತ; ಜಾಲತಾಣದಲ್ಲೂ ಜಿದ್ದಾಜಿದ್ದಿ..!

7
ಶಾಸಕ ಬಸನಗೌಡ ಪಾಟೀಲ ಯತ್ನಾಳ ಬೆಂಬಲಿಗರಿಗೆ ಟಾಂಗ್ ನೀಡಿದ ಬಿಜೆಪಿ ಜಿಲ್ಲಾ ಮಾಧ್ಯಮ ವಕ್ತಾರ

ಬಿಜೆಪಿ ಭಿನ್ನಮತ; ಜಾಲತಾಣದಲ್ಲೂ ಜಿದ್ದಾಜಿದ್ದಿ..!

Published:
Updated:
Deccan Herald

ವಿಜಯಪುರ: ವಿಜಯಪುರ ಜಿಲ್ಲಾ ಕಮಲ ಪಾಳೆಯದೊಳಗಿನ ಅವಿಭಾಜ್ಯ ಅಂಗದಂತಿರುವ ಆಂತರಿಕ ಬೇಗುದಿ, ಈಚೆಗೆ ಸಾಮಾಜಿಕ ಜಾಲತಾಣದಲ್ಲೂ ಭಾರಿ ಸದ್ದು ಮಾಡಲಾರಂಭಿಸಿದೆ.

ಜಿಲ್ಲಾ ಬಿಜೆಪಿ ಘಟಕ ದಶಕದಿಂದಲೂ ಬಣ ರಾಜಕಾರಣದಿಂದಲೇ ಹೈರಾಣಾಗಿದೆ. ಒಂಬತ್ತು ತಿಂಗಳಿಂದ ಕಮಲ ಪಾಳೆಯದ ರಥ ಮುನ್ನಡೆಸುವ ಸಾರಥಿಯೇ ಇಲ್ಲ.

ಲೋಕಸಭಾ ಚುನಾವಣೆ ಸನ್ನಿಹಿತಗೊಂಡ ಸಂದರ್ಭ, ಶಾಸಕ ಬಸನಗೌಡ ಪಾಟೀಲ ಯತ್ನಾಳ ಬೆಂಬಲಿಗರು ಸಾಮಾಜಿಕ ಜಾಲತಾಣದಲ್ಲಿ ಹಾಲಿ ಸಂಸದ, ಕೇಂದ್ರ ಸಚಿವ ರಮೇಶ ಜಿಗಜಿಣಗಿ ವಿರುದ್ಧ ಹರಿಹಾಯುವ ಮೂಲಕ ಪಕ್ಷದ ಅಭ್ಯರ್ಥಿ ಬದಲಾವಣೆಗೆ ಪ್ರಬಲ ಹಕ್ಕೊತ್ತಾಯ ಮಂಡಿಸುತ್ತಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಕೇಂದ್ರ ಸಚಿವರಿಗೆ, ಪಕ್ಷಕ್ಕೆ ಮುಜುಗರವುಂಟಾಗುತ್ತಿದ್ದರೂ; ಯಾರೊಬ್ಬರೂ ಇದೂವರೆಗೂ ಸೊಲ್ಲೆತ್ತಿರಲಿಲ್ಲ. ಹಿರಿಯ ನಾಯಕರ‍್ಯಾರು ಅಖಾಡಕ್ಕೆ ಇಳಿಯದಿದ್ದರಿಂದ ಬಿಜೆಪಿ ಜಿಲ್ಲಾ ಮಾಧ್ಯಮ ಪ್ರಮುಖ ಕೃಷ್ಣಾ ಗುನ್ನಾಳಕರ ಪಕ್ಷದ ಪರ ಸಾಮಾಜಿಕ ತಾಣಗಳಲ್ಲಿ ಯತ್ನಾಳ ಬೆಂಬಲಿಗರ ಪ್ರಶ್ನೆಗಳಿಗೆ ಮರು ಪ್ರಶ್ನೆ ಹಾಕುತ್ತಿರುವುದು ತೀವ್ರ ಕುತೂಹಲ ಕೆರಳಿಸಿದೆ.

ವಿಜಯಪುರ ಜಿಲ್ಲಾ ಬಿಜೆಪಿಯೊಳಗಿನ ಬಣ ರಾಜಕಾರಣ, ನಾಯಕ ನಿಷ್ಠೆಯ ಪ್ರತಿಷ್ಠೆ ಇದೀಗ ಸಾಮಾಜಿಕ ಜಾಲತಾಣದ ಮೂಲಕ ಬಹಿರಂಗಗೊಳ್ಳುತ್ತಿದೆ. ಇದು ಬಿರುಸಿನ ಚರ್ಚೆಗೂ ಕಾರಣವಾಗಿದೆ. ಕೆಲವರು ಇದನ್ನು ಮನೋರಂಜನೆಯ ತಾಣವನ್ನಾಗಿಯೂ ಪರಿಗಣಿಸುತ್ತಿದ್ದಾರೆ.

ವಿಧಾನಸಭಾ ಚುನಾವಣೆ ಸಂದರ್ಭ ಪಕ್ಷದ ಅಭ್ಯರ್ಥಿ ಬಸನಗೌಡ ಪಾಟೀಲ ಯತ್ನಾಳರ ಪರವೇ ಅಹರ್ನಿಶಿ ದುಡಿದಿದ್ದ ಕೃಷ್ಣ ಗುನ್ನಾಳಕರ ಇದೀಗ, ಲೋಕಸಭಾ ಚುನಾವಣೆಯ ಬಿಜೆಪಿ ಸಂಭವನೀಯ ಅಭ್ಯರ್ಥಿ ರಮೇಶ ಜಿಗಜಿಣಗಿ ಪರ ಬ್ಯಾಟ್‌ ಬೀಸಲಾರಂಭಿಸಿದ್ದಾರೆ.

ಜಾಲತಾಣದ ಜಗಳ್‌ಬಂದಿ:

ಕೃಷ್ಣ ತಮ್ಮ ಫೇಸ್‌ಬುಕ್‌ ಖಾತೆಯಲ್ಲಿ ಶನಿವಾರವಷ್ಟೇ ‘ವಿಜಯಪುರ ಲೋಕಸಭಾ ಅಭ್ಯರ್ಥಿ ಬದಲಾಗಬೇಕು ಎಂದು ಕೆಲವರ ಬೇಡಿಕೆ... ನಿಮ್ಮ ಹತ್ತಿರ ಸೂಕ್ತ ಅಭ್ಯರ್ಥಿ ಇದ್ದರೆ ಅವರ ಹೆಸರು ಪ್ರಸ್ತಾಪ ಮಾಡಿ... ನೋಡೋಣ’ ಎಂಬ ಪೋಸ್ಟ್‌ ಅಪ್‌ಲೋಡ್‌ ಮಾಡುವ ಮೂಲಕ ಎದುರಾಳಿಗಳಿಗೆ ಸವಾಲು ಹಾಕಿದ್ದರು.

ಇದು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಪ್ರಮಾಣದಲ್ಲಿ ಟ್ರೋಲ್ ಆಗಿತ್ತು. ಫೇಸ್‌ಬುಕ್‌ನಲ್ಲೂ ಸಹ 200ಕ್ಕೂ ಹೆಚ್ಚು ಜನರು ಇಷ್ಟಪಟ್ಟಿದ್ದರೆ, 400ಕ್ಕೂ ಹೆಚ್ಚು ಜನರು ತಮ್ಮ ತರಹೇವಾರಿ ಅಭಿಪ್ರಾಯ ದಾಖಲಿಸಿದ್ದರು. ಕೆಲವರು ಇದನ್ನು ಹಂಚಿಕೊಂಡಿದ್ದರು.

ಇದಕ್ಕೆ ಪ್ರತಿಯಾಗಿ ಭಾನುವಾರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅತ್ಯಾಪ್ತ, ನಗರ ಯುವ ಮೋರ್ಚಾ ಘಟಕದ ಮಾಜಿ ಅಧ್ಯಕ್ಷ ರಾಘವ ಅಣ್ಣಿಗೇರಿ, ‘ವಿಜಯಪುರ ನಗರ ವಿಧಾನಸಭೆ ಚುನಾವಣೆಯಲ್ಲಿ, ಪಕ್ಷದಲ್ಲಿ ಇದ್ದುಕೊಂಡೇ ಪಕ್ಷ ವಿರೋಧಿ ಕೆಲಸ ಮಾಡಿದ ‘ಕೆಲವರು’ ಇಂದು ಬಿಜೆಪಿಯ ನಿಷ್ಠಾವಂತರಂತೆ ?’ ಎಂಬ ಒಕ್ಕಣೆಯುಳ್ಳ ಪೋಸ್ಟನ್ನು ತಮ್ಮ ಫೇಸ್‌ಬುಕ್‌ ಖಾತೆಯಲ್ಲಿ ಅಪ್‌ಲೋಡ್‌ ಮಾಡಿದ್ದಾರೆ.

ಕೇಂದ್ರ ಸಚಿವ ರಮೇಶ ಜಿಗಜಿಣಗಿ, ವಿಧಾನ ಪರಿಷತ್ ಸದಸ್ಯ ಅರುಣ ಶಹಾಪುರ, ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಗುಂಪನ್ನೇ ಕೇಂದ್ರೀಕರಿಸಿಕೊಂಡು ಪರೋಕ್ಷವಾಗಿ ರಾಘವ ಮಾಡಿರುವ ಈ ಪೋಸ್ಟನ್ನು ಆರು ತಾಸಿನಲ್ಲೇ 124 ಜನರು ಇಷ್ಟಪಟ್ಟಿದ್ದಾರೆ.

ಇದರ ಕುರಿತಾಗಿ ಕೆಲವರು ಪ್ರತಿಕ್ರಿಯೆ ನೀಡಿದ್ದಾರೆ. ಹಿಂದಿನ ವಿಧಾನಸಭಾ ಚುನಾವಣೆ, ಹಿಂದೂ ಎಂಬುದನ್ನೆಲ್ಲಾ ಉಲ್ಲೇಖಿಸಿದ್ದಾರೆ. 10ಕ್ಕೂ ಹೆಚ್ಚು ಜನರು ಹಂಚಿಕೊಂಡಿದ್ದಾರೆ. ಇನ್ನಿತರೆ ಸಾಮಾಜಿಕ ಜಾಲತಾಣಗಳಲ್ಲೂ ಇದು ವ್ಯಾಪಕವಾಗಿ ಟ್ರೋಲ್‌ ಆಗಿದೆ.

ಇದಕ್ಕೆ ಪ್ರತಿಯಾಗಿ ಕೃಷ್ಣ ಮತ್ತೊಂದು ಖಾರವಾದ ಪ್ರತಿಕ್ರಿಯೆಯನ್ನು ತಮ್ಮ ಫೇಸ್‌ಬುಕ್‌ ಖಾತೆಯ ವಾಲ್‌ನಲ್ಲಿ ಪ್ರಕಟಿಸಿಕೊಂಡಿದ್ದಾರೆ. ‘ಪಕ್ಷ ನಿಷ್ಠೆಯ ಪ್ರಮಾಣ ಪತ್ರ... ಯಾರು ಬೇಕಾದವರು ಕೊಡಬಹುದಾ...? ?’ ಎಂಬ ಉಲ್ಲೇಖವುಳ್ಳ ಪೋಸ್ಟ್‌, ಬಿಜೆಪಿ ಸೇರಿದಂತೆ ಜಿಲ್ಲಾ ರಾಜಕಾರಣದ ಪಡಸಾಲೆಯಲ್ಲಿ ಮೈಕೊರೆವ ಚಳಿಯಲ್ಲೂ ತೀವ್ರ ಕಾವಿನ ಚರ್ಚೆಗೆ ಗ್ರಾಸವೊದಗಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !