ವಿಜಯಪುರ ಬಿಜೆಪಿಯ ಕೋಟೆ ಅಭೇದ್ಯ; ಮೈತ್ರಿಗೆ ಭಾರಿ ಮುಖಭಂಗ..!

ಭಾನುವಾರ, ಜೂನ್ 16, 2019
28 °C
ಐದನೇ ಬಾರಿಗೆ ಗೆಲುವಿನ ನಾಗಾಲೋಟ ಮುಂದುವರೆಸಿದ ಕಮಲ ಪಾಳೆಯ; ಒಂದಾದರೂ ತಪ್ಪದ ಸೋಲು

ವಿಜಯಪುರ ಬಿಜೆಪಿಯ ಕೋಟೆ ಅಭೇದ್ಯ; ಮೈತ್ರಿಗೆ ಭಾರಿ ಮುಖಭಂಗ..!

Published:
Updated:

ವಿಜಯಪುರ: ವಿಜಯಪುರ ಪರಿಶಿಷ್ಟ ಜಾತಿಯ ಮೀಸಲು ಲೋಕಸಭಾ ಕ್ಷೇತ್ರದಲ್ಲಿ, ಬಿಜೆಪಿ ತನ್ನ ಗೆಲುವಿನ ನಾಗಾಲೋಟ ಮುಂದುವರೆಸಿದೆ. ಸತತ ಐದನೇ ಬಾರಿಗೆ ಗೆಲುವು ದಾಖಲಿಸಿದೆ.

ಬಿಜೆಪಿಯ ಗೆಲುವಿಗೆ ಬ್ರೇಕ್‌ ಹಾಕಲು ಕಾಂಗ್ರೆಸ್‌–ಜೆಡಿಎಸ್‌ ಒಂದಾಗಿ ಅಖಾಡಕ್ಕಿಳಿದರೂ; ವಿಜಯದ ನಾಗಾಲೋಟದ ಓಟವನ್ನು ತಡೆಯಲಾಗಿಲ್ಲ. ಚುನಾವಣೆಯಿಂದ ಚುನಾವಣೆಗೆ ಕಮಲ ಪಾಳೆಯ ತನ್ನ ಶಕ್ತಿ ವೃದ್ಧಿಸಿಕೊಳ್ಳುತ್ತಿದೆ. ಕ್ಷೇತ್ರದಲ್ಲಿ ಪ್ರಾಬಲ್ಯ ಸಾಧಿಸಿ, ಹಿಡಿತವನ್ನು ಬಿಗಿಗೊಳಿಸಿಕೊಳ್ಳುತ್ತಿದೆ.

2014ರ ಲೋಕಸಭಾ ಚುನಾವಣೆ ಸಂದರ್ಭ ಜಿಲ್ಲೆಯ ಎಂಟು ವಿಧಾನಸಭಾ ಕ್ಷೇತ್ರಗಳ ಪೈಕಿ ಏಳರಲ್ಲಿ ಕಾಂಗ್ರೆಸ್‌ ಶಾಸಕರಿದ್ದರೂ; ವಿಜಯದ ಹೂಮಾಲೆಯನ್ನು ತನ್ನ ಕೊರಳಿಗೇರಿಸಿಕೊಂಡಿದ್ದ ಕಮಲ ಪಾಳೆಯ, ಇದೀಗ ಮೂವರು ಶಾಸಕರ ಬಲದಿಂದ ಅಭೂತಪೂರ್ವ ಜಯಭೇರಿ ಬಾರಿಸಿದೆ.

ಗೆಲುವಿನ ಕಾರಣಗಳು:

ಚುನಾವಣೆ ಪೂರ್ವದಿಂದಲೂ ಕ್ಷೇತ್ರದ ಮೂಲೆ ಮೂಲೆಯಿಂದಲೂ ವ್ಯಕ್ತವಾಗುತ್ತಿದ್ದ ಮೋದಿ, ಮೋದಿ ಎಂಬ ಕೂಗು; ಪುಲ್ವಾಮಾ, ಬಾಲಾಕೋಟ್‌ ಘಟನೆಗಳ ಬಳಿಕ ಮತ್ತಷ್ಟು ಹೆಚ್ಚಿತು. ಯುವ ಸಮೂಹದ ನಾಡಿ ಮಿಡಿತಕ್ಕೆ ತಕ್ಕಂತೆ ಚುನಾವಣೆಯ ತಂತ್ರಗಾರಿಕೆ ರೂಪಿಸಿಕೊಂಡಿದ್ದು ಬಿಜೆಪಿ ಗೆಲುವಿಗೆ ಪೂರಕವಾಯ್ತು.

ನಾಲ್ಕು ದಶಕದ ರಾಜಕೀಯ ಅನುಭವ ಹೊಂದಿರುವ ರಮೇಶ ಜಿಗಜಿಣಗಿ ಅವರ ಸರಳತೆ, ವಿನಯ ನಡವಳಿಕೆ, ಸೌಮ್ಯ ಸ್ವಭಾವ, ಜನರೊಟ್ಟಿಗೆ ಬೆರೆಯುವಿಕೆ. ಅಣ್ಣ, ಕಾಕಾ, ಬಾಬಾ, ಮಾಮಾ ಎಂದೇ ಹಿರಿ–ಕಿರಿಯರನ್ನು ಮಾತನಾಡಿಸುವಿಕೆ, ವಿರೋಧಿಗಳು ನಡೆಸಿದ ಕಟು ನಿಂದನೆ... ಈ ಎಲ್ಲವೂ ಮತಗಳಾಗಿ ಪರಿವರ್ತನೆಗೊಂಡ ಪರಿಣಾಮ ಜಿಗಜಿಣಗಿ ಭಾರಿ ಅಂತರದಿಂದ ಗೆಲುವು ಸಾಧಿಸಲು ಸಹಕಾರಿಯಾಯ್ತು ಎಂದು ಬಿಜೆಪಿಯ ಜಿಲ್ಲಾ ಘಟಕದ ಅಧ್ಯಕ್ಷ ಚಂದ್ರಶೇಖರ ಕವಟಗಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಚುನಾವಣೆಗೂ ಪೂರ್ವದಲ್ಲೇ ತಳಹಂತದಿಂದಲೂ ಸಂಘಟನೆ ಬಲಪಡಿಸುವಿಕೆ, ಬೂತ್ ಸಶಕ್ತೀಕರಣ, ಕಾರ್ಯಕರ್ತರ ಸಜ್ಜುಗೊಳಿಸುವಿಕೆ, ದೇಶ–ಮೋದಿ ಹೆಸರಿನಲ್ಲಿ ಕಾರ್ಯಕರ್ತರು ನಿಸ್ವಾರ್ಥಿಗಳಾಗಿ ಅಹೋರಾತ್ರಿ ದುಡಿದ ಫಲ ಈ ಗೆಲುವು’ ಎನ್ನುತ್ತಾರೆ ವಿಜಯಿ ಅಭ್ಯರ್ಥಿ ರಮೇಶ ಜಿಗಜಿಣಗಿ.

ಫಲಿಸದ ಮೈತ್ರಿಯ ಒಗ್ಗಟ್ಟು

ಲೋಕಸಭಾ ಕ್ಷೇತ್ರಕ್ಕಾಗಿಯೇ ಕಾಂಗ್ರೆಸ್‌–ಜೆಡಿಎಸ್‌, ನಾಮಪತ್ರ ಸಲ್ಲಿಕೆ ಆರಂಭದವರೆಗೂ ಕಿತ್ತಾಟ, ತಿಕ್ಕಾಟ ನಡೆಸಿದ್ದು. ಟಿಕೆಟ್‌ ಆಕಾಂಕ್ಷಿಗಳಾಗಿದ್ದ ದಲಿತ ಬಲಗೈ ಸಮುದಾಯದ ಮುನಿಸನ್ನು ಸಕಾಲಕ್ಕೆ ತಣಿಸಲು ಮುಂದಾಗದಿದ್ದುದು.

ನಾಮಪತ್ರ ಸಲ್ಲಿಕೆಯ ಕೊನೆ ಕ್ಷಣದವರೆಗೂ ಅಭ್ಯರ್ಥಿಯನ್ನೇ ಎರವಲು ಪಡೆಯಲು ಯತ್ನ ನಡೆಸಿದ್ದು. ಟಿಕೆಟ್‌ಗಾಗಿ ಆಂತರಿಕವಾಗಿ ಅತೀವ ಯತ್ನ ನಡೆಸಿದರೂ; ಬಹಿರಂಗವಾಗಿ ಶಾಸಕ ದೇವಾನಂದ ಪಕ್ಷದ ವಲಯದಲ್ಲೇ ಘೋಷಿಸಿಕೊಳ್ಳದಿದ್ದುದು.

ಬಿಜೆಪಿ ಅಭ್ಯರ್ಥಿ ರಮೇಶ ಜಿಗಜಿಣಗಿ ವಿರುದ್ಧ ಮೈತ್ರಿ ಮುಖಂಡರು, ನಾಯಕರು ವ್ಯಂಗ್ಯವಾಗಿ ವೈಯಕ್ತಿಕ ನಿಂದನೆ ನಡೆಸಿದ್ದು. ಟೀಕಿಸಿದ್ದು. ಮುಖಂಡರ ಮೈತ್ರಿ ಸಭೆ–ಸಮಾವೇಶಗಳಿಗೆ ಸೀಮಿತವಾಗಿದ್ದು. ತಳ ಹಂತದ ಕಾರ್ಯಕರ್ತರು ಒಟ್ಟಾಗಿ, ಸಂಘಟನಾತ್ಮಕವಾಗಿ ಚುನಾವಣಾ ಕೆಲಸ ನಡೆಸದಿದ್ದುದು ಸಹ ಮೈತ್ರಿ ಅಭ್ಯರ್ಥಿಯ ಸೋಲಿಗೆ ಪ್ರಮುಖ ಕಾರಣವಾಗಿದೆ.

ಇವಿಎಂ ಯಂತ್ರಗಳಲ್ಲಿ ಕಾಂಗ್ರೆಸ್‌ನ ‘ಹಸ್ತ’ದ ಚಿಹ್ನೆ ಇರಲ್ಲ. ನಮ್ಮ ಚಿಹ್ನೆ ‘ತೆನೆ ಹೊತ್ತ ಮಹಿಳೆ’ ಎಂಬುದನ್ನು ಗ್ರಾಮೀಣ ಮತದಾರರಿಗೆ ಮುಟ್ಟಿಸುವಲ್ಲಿ ಮೈತ್ರಿ ಕಾರ್ಯಕರ್ತರ ಪಡೆ, ಮುಖಂಡರು ವಿಫಲವಾಗಿದ್ದು ಸಹ ಹಿನ್ನಡೆಗೆ ಪ್ರಮುಖ ಕಾರಣ ಎಂದು ಜೆಡಿಎಸ್‌ ಮುಖಂಡರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಆಡಳಿತಾರೂಢ ‘ಮೈತ್ರಿ’ ಕನಸು ಭಗ್ನ...

ಬಿಜೆಪಿಯ ಭದ್ರಕೋಟೆ ಛಿದ್ರಗೊಳಿಸುತ್ತೇವೆ ಎಂಬ ಸಂಕಲ್ಪ, ಕನಸಿನೊಂದಿಗೆ ಚುನಾವಣಾ ಅಖಾಡಕ್ಕಿಳಿದ ಮೈತ್ರಿ ಮುಖಂಡರಿಗೆ ಲೋಕಸಭಾ ಚುನಾವಣೆಯಲ್ಲಿ ಭಾರಿ ಮುಖಭಂಗವಾಗಿದೆ.

ಜಿಲ್ಲೆಯ ಐದು ಕ್ಷೇತ್ರಗಳಲ್ಲಿ ಕಾಂಗ್ರೆಸ್‌–ಜೆಡಿಎಸ್‌ ಶಾಸಕರಿದ್ದು, ಈ ಎಲ್ಲರೂ ಅಧಿಕಾರ ಹೊಂದಿದ್ದಾರೆ. ಕಾಂಗ್ರೆಸ್‌ನ ಎಂ.ಬಿ.ಪಾಟೀಲ ಗೃಹ ಸಚಿವ. ಶಿವಾನಂದ ಪಾಟೀಲ ಆರೋಗ್ಯ ಸಚಿವ. ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ ನಗರ ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿ ಅಧ್ಯಕ್ಷ.

ಜೆಡಿಎಸ್‌ನ ಎಂ.ಸಿ.ಮನಗೂಳಿ ತೋಟಗಾರಿಕೆ ಹಾಗೂ ವಿಜಯಪುರ ಜಿಲ್ಲಾ ಸಚಿವ. ನಾಗಠಾಣ ಶಾಸಕ ಹಾಗೂ ಅಭ್ಯರ್ಥಿ ಪತಿ ದೇವಾನಂದ ಚವ್ಹಾಣ ಮುಖ್ಯಮಂತ್ರಿ ಸಂಸದೀಯ ಕಾರ್ಯದರ್ಶಿ (ಶಿಕ್ಷಣ ಇಲಾಖೆ).

ಈ ಐವರು ರಾಜ್ಯ ಸರ್ಕಾರದಲ್ಲಿ ಅಧಿಕಾರರೂಢರಾಗಿದ್ದರೂ; ಭಾರಿ ಅಂತರದ ಸೋಲಾಗಿರುವುದಕ್ಕೆ ತೀವ್ರ ಮುಖಭಂಗ ಅನುಭವಿಸಿದ್ದಾರೆ. ತಮ್ಮ ತಮ್ಮ ಕ್ಷೇತ್ರಗಳಲ್ಲೇ ಮುನ್ನಡೆ ಸಾಧಿಸುವಲ್ಲಿ ವಿಫಲರಾಗಿದ್ದಾರೆ ಎಂಬುದು ಮತ ಎಣಿಕೆಯಲ್ಲಿ ಬಹಿರಂಗಗೊಂಡಿದೆ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !