ಸ್ಥಳೀಯರಿಗೇ ಟಿಕೆಟ್‌ ಕೊಡಬೇಕು: ವೆಂಕಟರಮಣಸ್ವಾಮಿ ಒತ್ತಾಯ

ಭಾನುವಾರ, ಮಾರ್ಚ್ 24, 2019
33 °C

ಸ್ಥಳೀಯರಿಗೇ ಟಿಕೆಟ್‌ ಕೊಡಬೇಕು: ವೆಂಕಟರಮಣಸ್ವಾಮಿ ಒತ್ತಾಯ

Published:
Updated:
Prajavani

ಚಾಮರಾಜನಗರ: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಚಾಮರಾಜನಗರ ಕ್ಷೇತ್ರದಲ್ಲಿ ಪಕ್ಷವು ಸ್ಥಳೀಯರಿಗೇ ಟಿಕೆಟ್‌ ನೀಡಬೇಕು ಎಂದು ಬಿಜೆಪಿ ಮುಖಂಡ ವೆಂಕಟರಮಣಸ್ವಾಮಿ (ಪಾಪು) ಶುಕ್ರವಾರ ಒತ್ತಾಯಿಸಿದರು.

‘ನಾನು ಕೂಡ ಟಿಕೆಟ್‌ ಆಕಾಂಕ್ಷಿಯೇ. ತುಂಬಾ ಜನ ಆಕಾಂಕ್ಷಿಗಳು ಇರಬಹುದು. ಆದರೆ, ಪಕ್ಷದ ನಾಯಕತ್ವ ಟಿಕೆಟ್‌ ನೀಡುವಾಗ ಆಕಾಂಕ್ಷಿಗಳ ಸಾಧನೆ, ಸಾಮರ್ಥ್ಯಗಳನ್ನು ತುಲನೆ ಮಾಡಿ ಟಿಕೆಟ್‌ ಕೊಡಬೇಕು’ ಎಂದು ಪತ್ರಿಕಾಗೋಷ್ಠಿಯಲ್ಲಿ ಅವರು ಹೇಳಿದರು.

‘ಬೆಂಗಳೂರು, ದೆಹಲಿಯಲ್ಲಿ ಮನೆ ಮಾಡಿಕೊಂಡಿರುವವರು ಬಂದು ಚಾಮರಾಜನಗರದಲ್ಲಿ ಸ್ಪರ್ಧಿಸಲು ಟಿಕೆಟ್‌ ಕೊಡಿ ಎಂದು ಕೇಳಿದರೆ ಏನರ್ಥ? ಹೊರಗಡೆ ಬಂದವರಿಗೆ ಟಿಕೆಟ್‌ ಕೊಟ್ಟರೆ ಜಿಲ್ಲೆ ಉದ್ಧಾರ ಆಗುವುದಿಲ್ಲ. ಸ್ಥಳೀಯರಿಗೆ ಆದ್ಯತೆ ನೀಡಬೇಕು ಎಂಬುದನ್ನು ಪಕ್ಷದ ನಾಯಕರಿಗೂ ತಿಳಿಸಿದ್ದೇವೆ’ ಎಂದು ಅವರು ಹೇಳಿದರು.

’ನಾನು ಕೂಡ ಜಿಲ್ಲೆಗಾಗಿ ಸಾಕಷ್ಟು ಹೋರಾಟಗಳನ್ನು ಮಾಡಿದ್ದೇನೆ. ದಲಿತರ ಏಳಿಗೆಗಾಗಿ, ನಾಡು ನುಡಿ ಸಂಸ್ಕೃತಿಗಾಗಿ ಹೋರಾಟ ಮಾಡಿಕೊಂಡೇ ಬಂದಿದ್ದೇನೆ. ನೀರಿನ ಸಮಸ್ಯೆ ಬಗೆಹರಿಸುವುದಕ್ಕಾಗಿ ಕಬಿನಿ 2ನೇ ಹಂತದ ಯೋಜನೆ‌ ಅನುಷ್ಠಾನ, ಮೆಟ್ಟುಪಾಳ್ಯ ರೈಲಿಗಾಗಿಯೂ ಚಳವಳಿ ಮಾಡಿದ್ದೇನೆ. ಕಾವೇರಿ ನೀರಿಗಾಗಿ ವಾಟಾಳ್‌ ನಾಗರಾಜ್‌ ಅವರ ಜೊತೆ ಸೇರಿ ಹೋರಾಟ ನಡೆಸಿದ್ದೇನೆ’ ಎಂದರು.

‘ಕ್ಷೇತ್ರ ವಿಂಗಡಣೆಯ ಸಂದರ್ಭದಲ್ಲಿ ಮೈಸೂರು ಮತ್ತು ಮೈಸೂರು ಗ್ರಾಮಾಂತರ ಎಂಬ ಎರಡು ಲೋಕಸಭಾ ಕ್ಷೇತ್ರಗಳನ್ನು ರಚಿಸಲಾಗಿತ್ತು. ಆದರೆ, ಚಾಮರಾಜನಗರ ಹೆಸರಲ್ಲಿ ಕ್ಷೇತ್ರ ಬೇಕು ಎಂದು ‌ಹೋರಾಟ ಮಾಡಿದ್ದೆವು’ ಎಂದರು. 

‘ಚಾಮರಾಜನಗರ ಜಿಲ್ಲೆ ಆಗಿ 22 ವರ್ಷಗಳಾದರೂ ಮೂಲಸೌಕರ್ಯ ಅಭಿವೃದ್ಧಿಯಾಗಿಲ್ಲ. ಈ ಜಿಲ್ಲೆಯೊಂದಿಗೆ ರಚನೆಯಾಗಿರುವ ಬೇರೆ 7 ಜಿಲ್ಲೆಗಳು ಅಭಿವೃದ್ಧಿಯಾಗಿವೆ. ನಮ್ಮಲ್ಲಿ ಒಳಚರಂಡಿ ಸೇರಿದಂತೆ ಯಾವುದೇ ಅಭಿವೃದ್ಧಿ ಕೆಲಸ ಆಗಿಲ್ಲ. ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ’ ಎಂದರು.

ತಾಲ್ಲೂಕು ಕುರುಬರ ಸಂಘದ ಅಧ್ಯಕ್ಷ ಮಾದಾಪುರ ರವಿಕುಮಾರ್‌, ಮುಖಂಡರಾದ ಪಣ್ಯದ ಹುಂಡಿ ಸತೀಶ್‌, ಮಹಾದೇವಸ್ವಾಮಿ, ಸುಂದರ್‌ರಾಜು ಇದ್ದರು.

ಶ್ರೀನಿವಾಸ ಪ್ರಸಾದ್‌ಗೆ ರತ್ನಗಂಬಳಿ ಸ್ವಾಗತ
‘ಪಕ್ಷದ ನಾಯಕ ಶ್ರೀನಿವಾಸ ಪ್ರಸಾದ್‌ ಅವರ ಜೊತೆ 40 ವರ್ಷಗಳಿಂದ ಇದ್ದೇನೆ. ಅವರ ನೋವಿನಲ್ಲೂ ಭಾಗಿಯಾಗಿದ್ದೇನೆ. ಅವರು ಅಭ್ಯರ್ಥಿಗಳ ಹೆಸರು ಸೂಚಿಸಿದರೆ, ಮೊದಲಿಗೆ ನನ್ನನ್ನು ಬಿಟ್ಟು ಬೇರೆ ಯಾರನ್ನು ಸೂಚಿಸಲು ಸಾಧ್ಯವಿಲ್ಲ. ಪಕ್ಷವು ಟಿಕೆಟ್‌ ಕೊಡುವಾಗ ನನ್ನನ್ನು ಪರಿಗಣಿಸುತ್ತದೆ’ ಎಂದು ವೆಂಕಟರಮಣಸ್ವಾಮಿ ಹೇಳಿದರು.

ಶ್ರೀನಿವಾಸ ಪ್ರಸಾದ್‌ ಅವರೇ ಅಭ್ಯರ್ಥಿಯಾದರೆ ಬೆಂಬಲಿಸುತ್ತೀರಾ ಎಂದು ಕೇಳಿದ್ದಕ್ಕೆ, ‘ಅವರನ್ನು ರತ್ನಗಂಬಳಿ ಹಾಕಿ ಸ್ವಾಗತಿಸುತ್ತೇವೆ. ಅವರು ನಮ್ಮ ನಾಯಕರು. ಎಲ್ಲ ಆಕಾಂಕ್ಷಿಗಳೂ ಅವರ ಪರವಾಗಿಯೇ ಕೆಲಸ ಮಾಡುತ್ತೇವೆ’ ಎಂದರು.

ಅವರನ್ನು ಸ್ಪರ್ಧಿಸುವಂತೆ ಮನವೊಲಿಸುವ ಪ್ರಯತ್ನ ಪಕ್ಷದಲ್ಲಿ ನಡೆಯುತ್ತಿದೆ ಎಂದೂ ಅವರು ಹೇಳಿದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !