ಬಿಜೆಪಿ ಮುಖಂಡನ ಮನೆಯಲ್ಲಿ 82 ಗುರುತಿನ ಚೀಟಿ !

ಬುಧವಾರ, ಏಪ್ರಿಲ್ 24, 2019
27 °C
ಚುನಾವಣಾಧಿಕಾರಿಗಳ ದಾಳಿ; ₹1.38 ಲಕ್ಷ ನಗದು, ಅಭ್ಯರ್ಥಿಯ ಕರಪತ್ರ ಜಪ್ತಿ

ಬಿಜೆಪಿ ಮುಖಂಡನ ಮನೆಯಲ್ಲಿ 82 ಗುರುತಿನ ಚೀಟಿ !

Published:
Updated:
Prajavani

ಬೆಂಗಳೂರು: ಪದ್ಮನಾಭನಗರದ ಬಿಜೆಪಿ ಮುಖಂಡ ವೇಣುಗೋಪಾಲ ಅವರ ಮನೆಯ ಮೇಲೆ ಸೋಮವಾರ ತಡರಾತ್ರಿ ದಾಳಿ ನಡೆಸಿದ್ದ ಚುನಾವಣಾಧಿಕಾರಿಗಳು, ಅಕ್ರಮವಾಗಿ ಸಂಗ್ರಹಿಸಿಟ್ಟುಕೊಂಡಿದ್ದ 82 ಚುನಾವಣಾ ಗುರುತಿನ ಚೀಟಿಗಳನ್ನು ಜಪ್ತಿ ಮಾಡಿದ್ದಾರೆ.

‘ಪಾಪಯ್ಯ ಗಾರ್ಡನ್‌ನಲ್ಲಿ ವಾಸವಿದ್ದ ವೇಣುಗೋಪಾಲ ಅವರ ಮನೆಯಲ್ಲಿ ಅಕ್ರಮ ನಡೆಯುತ್ತಿದ್ದ ಬಗ್ಗೆ ಮಾಹಿತಿ ಬಂದಿತ್ತು. ಅದನ್ನು ಆಧರಿಸಿ ದಾಳಿ ನಡೆಸಿದಾಗ ಚುನಾವಣಾ ಗುರುತಿನ ಚೀಟಿಗಳು ಪತ್ತೆಯಾದವು. ದಾಳಿ ಸಂಬಂಧ ಚನ್ನಮ್ಮನಕೆರೆ ಅಚ್ಚುಕಟ್ಟು ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ’ ಎಂದು ಚುನಾವಣಾ ಆಯೋಗದ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ ಅವರ ಭಾವಚಿತ್ರವಿರುವ 500 ಕರಪತ್ರಗಳು ಹಾಗೂ ₹1.39 ಲಕ್ಷ ನಗದು ಸಹ ಮನೆಯಲ್ಲಿ ಸಿಕ್ಕಿವೆ. ಅವೆಲ್ಲವನ್ನೂ ಜಪ್ತಿ ಮಾಡಲಾಗಿದೆ’ ಎಂದು ಹೇಳಿದರು.

ಹಣದ ಆಮಿಷವೊಡ್ಡಿರುವ ಶಂಕೆ: ‘ಪದ್ಮನಾಭನಗರ ಹಾಗೂ ಅಕ್ಕ–ಪಕ್ಕದ ಮತದಾರರಿಗೆ ಹಣದ ಆಮಿಷವೊಡ್ಡಿ ಗುರುತಿನ ಚೀಟಿಗಳನ್ನು ಪಡೆದುಕೊಂಡಿರುವ ಶಂಕೆ ಇದೆ. ಅದನ್ನು ಖಾತ್ರಿಪಡಿಸಿಕೊಳ್ಳಲು ತನಿಖೆ ನಡೆಸುತ್ತಿದ್ದೇವೆ’ ಎಂದು ಚನ್ನಮ್ಮನಕೆರೆ ಅಚ್ಚುಕಟ್ಟು ಠಾಣೆ ಪೊಲೀಸರು ಹೇಳಿದರು.

‘ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ಮಾಡುತ್ತಿದ್ದ ವೇಣುಗೋಪಾಲ್ ಅವರೇ ಸಹಚರರನ್ನು ಬಳಸಿಕೊಂಡು ಚೀಟಿಗಳನ್ನು ಸಂಗ್ರಹಿಸಿದ್ದಾರೆ. ಮತದಾನದ ದಿನ ಆ ಚೀಟಿಗಳನ್ನು ಮತದಾರರಿಗೆ ಕೊಟ್ಟು ಬಿಜೆಪಿಗೆ ಮತ ಹಾಕುವಂತೆ ಒತ್ತಾಯಿಸುವ ಉದ್ದೇಶ ಅವರದ್ದಾಗಿತ್ತು ಎಂಬುದು ಮೇಲ್ನೋಟಕ್ಕೆ ಗೊತ್ತಾಗಿದೆ’ ಎಂದು ವಿವರಿಸಿದರು.

‘ಜನಪ್ರತಿನಿಧಿಗಳ ಕಾಯ್ದೆ ಅಡಿ ವೇಣುಗೋಪಾಲ್‌ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಅವರಿಗೆ ನೋಟಿಸ್‌ ನೀಡಿ ವಿಚಾರಣೆ ನಡೆಸಬೇಕಿದೆ’ ಎಂದು ಹೇಳಿದರು. 

ಬರಹ ಇಷ್ಟವಾಯಿತೆ?

 • 14

  Happy
 • 0

  Amused
 • 0

  Sad
 • 0

  Frustrated
 • 4

  Angry

Comments:

0 comments

Write the first review for this !