ಶೋಕಾಚರಣೆ ವೇಳೆ ಸನ್ಮಾನ, ಕಾರ್ಯಕ್ರಮ ಖಂಡಿಸಿ ಬಿಜೆಪಿ ಪ್ರತಿಭಟನೆ

7

ಶೋಕಾಚರಣೆ ವೇಳೆ ಸನ್ಮಾನ, ಕಾರ್ಯಕ್ರಮ ಖಂಡಿಸಿ ಬಿಜೆಪಿ ಪ್ರತಿಭಟನೆ

Published:
Updated:
Prajavani

ಚಾಮರಾಜನಗರ: ರಾಜ್ಯದೆಲ್ಲೆಡೆ ಬುಧವಾರ ಡಾ.ಶಿವಕುಮಾರಸ್ವಾಮಿ ಅವರ ಶೋಕಾಚರಣೆ ನಡೆಸುತ್ತಿರುವ ಸಂದರ್ಭದಲ್ಲಿ ಸನ್ಮಾನ, ಸರ್ಕಾರಿ ಕಾರ್ಯಕ್ರಮ ನಡೆದಿರುವುದನ್ನು ಖಂಡಿಸಿ ಶುಕ್ರವಾರ ಬಿಜೆಪಿ ಜಿಲ್ಲಾ ಘಟಕದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ನಗರದ ಚಾಮರಾಜೇಶ್ವರಸ್ವಾಮಿ ದೇವಸ್ಥಾನದಿಂದ ಮೆರವಣಿಗೆ ನಡೆಸಿದ ಪ್ರತಿಭಟನಾಕಾರರು ಭುವನೇಶ್ವರಿ ವೃತ್ತ, ಬಿ.ರಾಚಯ್ಯ ಜೋಡಿರಸ್ತೆ ಮಾರ್ಗವಾಗಿ ಜಿಲ್ಲಾಡಳಿತ ಭವನದ ಮುಂಭಾಗ ಜಮಾಯಿಸಿ ಸರ್ಕಾರದ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಸಿದರು. ನಂತರ ಶಿರಸ್ತೇದಾರ ಕುಮಾರ್‌ ಅವರಿಗೆ ಮನವಿ ಸಲ್ಲಿಸಿದರು. 

ಅಂದು ರಾಜ್ಯದಲ್ಲಿ ಶೋಕಾಚರಣೆ ಜಾರಿಯಲ್ಲಿದ್ದರೂ ರಾಜ್ಯ ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ ಖರ್ಗೆ ತಮ್ಮ ಇಲಾಖೆಯಿಂದ ‘ಸಂವಿಧಾನ ಸಂಭಾಷಣೆ’ ಕಾರ್ಯಕ್ರಮ ಮುಂದೂಡದಿರುವುದು ಶ್ರೀಗಳಿಗೆ ಮಾಡಿದ ಅಪಮಾನ. 

ಸರ್ಕಾರದ ಅದಿಸೂಚನೆ ಪಾಲಿಸದೆ ಸಚಿವರು ತನಗೂ ಶ್ರೀಗಳ ಶೋಕಾಚರಣೆಗೂ ಸಂಬಂಧವಿಲ್ಲ ಎನ್ನುವಂತೆ ವರ್ತಸಿರುವುದು ಖಂಡನೀಯ. ಅಲ್ಲದೆ, ಇದೆ ಕಾರ್ಯಕ್ರಮಕ್ಕೆ ದೇಶದ್ರೋಹ ಹೇಳಿಕೆ ನೀಡಿದ್ದ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘದ(ಜೆಎನ್ ಯುಎಸ್ ಯು) ಮಾಜಿ ಅಧ್ಯಕ್ಷ ಕನ್ಹಯ್ಯ ಕುಮಾರ್ ಅವರನ್ನು ಆಹ್ವಾನಿಸಿದ್ದು ಸರಿಯಲ್ಲ ಎಂದು ದೂರಿದರು.

ಸಂವಿಧಾನಾತ್ಮಕ ಕಾರ್ಯ ನಿರ್ವಹಿಸುವ ಸಚಿವರೇ ಶ್ರೀಗಳಿಗೆ ಅಗೌರವ ಸಲ್ಲಿಸಿದ್ದಾರೆ. ಸಚಿವರಿಂದ ಸರ್ಕಾರ ಕೂಡಲೇ ರಾಜೀನಾಮೆ ಪಡೆದುಕೊಳ್ಳಬೇಕು ಎಂದು ಆಗ್ರಹಿಸಿದರು.

ಮೂರು ದಿನ ಶೋಕಾಚರಣೆ ಹಾಗೂ ಸರ್ಕಾರಿ ಕಾರ್ಯಕ್ರಗಳನ್ನು ರದ್ದು ಪಡಿಸಿದ್ದರೂ ಅಂದು ಮಾತ್ರ ಜಿಲ್ಲೆಯ ಗುಂಡ್ಲುಪೇಟೆ ತಾಲ್ಲೂಕಿನ ಕಸಬಾ ಹೋಬಳಿಯ ದೊಡ್ಡತುಪ್ಪೂರು ಗ್ರಾಮದಲ್ಲಿ ನೇಗಿಲಯೋಗಿ ಜೀವನೋತ್ಸವ ಕಾರ್ಯಕ್ರಮದಲ್ಲಿ ಕೃಷಿ ಇಲಾಖೆಯ ಉಪ ನಿರ್ದೇಶಕ ತಿರುಮಲ್ಲೇಶ್ ಸನ್ಮಾನ ಸ್ವೀಕರಿಸಿ ಸಭೆ ನಡೆಸಿರುವುದು ಸರಿಯಲ್ಲ. ಶ್ರೀಗಳಿಗೆ ಅಗೌರತೋರಿದ ಹಾಗೂ ಸರ್ಕಾರದ ಆದೇಶ ದಿಕ್ಕರಿಸಿದ ತಿರುಲ್ಲೇಶ್ ಅವರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಪಕ್ಷದ ಪ್ರಧಾನ ಕಾರ್ಯದರ್ಶಿಯಾದ ನೂರೊಂದು ಶೆಟ್ಟಿ, ನಾಗೇಂದ್ರಸ್ವಾಮಿ, ಕಾರ್ಯದರ್ಶಿ ಎಂ.ಎಸ್‌.ಪೃಥ್ವಿರಾಜ್‌, ನಾಗೇಶ ನಾಯಕ, ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷ ಜಿ.ಬಸವಣ್ಣ, ನಗರಸಭಾ ಸದಸ್ಯರಾದ ಸುದರ್ಶನಗೌಡ, ಶಿವರಾಜ್‌, ಮಂಜುನಾಥ್, ಮುಖಂಡರಾದ ಚಂದ್ರಶೇಖರ್‌, ಸೋಮನಾಯಕ, ವೀರೇಂದ್ರ ಪಾಲ್ಗೊಂಡಿದ್ದರು.

ಸಚಿವರು ಧ್ವಜಾರೋಹಣ ನೆರವೇರಿಸಿದರೆ ಕಪ್ಪು ಪಟ್ಟಿ ಪ್ರದರ್ಶನ

‘ಭ್ರಷ್ಟಾಚಾರ ಕಳಂಕ ಹೊತ್ತಿರುವ ಹಿಂದುಳಿದ ವರ್ಗಗಳ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಿ.ಪುಟ್ಟರಂಗಶೆಟ್ಟಿ ಅವರಿಂದ ನಾಳೆ (ಜನವರಿ 26, ಗಣರಾಜ್ಯೋತ್ಸವದ) ಧ್ವಜಾರೋಹಣ ನಡೆದರೆ ಜಿಲ್ಲಾ ಬಿಜೆಪಿಯಿಂದ ‘ಕಪ್ಪು ಪಟ್ಟಿ’ ಪ್ರದರ್ಶಿಸಿ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಪಕ್ಷದ ಪ್ರಧಾನ ಕಾರ್ಯದರ್ಶಿ ನಾಗೇಂದ್ರಸ್ವಾಮಿ ಎಚ್ಚರಿಕೆ ನೀಡಿದರು.

ಸಚಿವರ ಕಚೇರಿಯಲ್ಲಿ ಟೈಪಿಸ್ಟ್‌ ಆಗಿರುವ ಮೋಹನ್‌ ಬಳಿ ವಿಧಾನಸೌಧದಲ್ಲಿ ₹ 27 ಲಕ್ಷ ಹಣ ಸಿಕ್ಕಿದೆ. ವಿಧಾನಸೌಧದ ಒಳಗೆ ಅಷ್ಟು ಹಣ ತಂದಿದ್ದು ಅಪರಾಧ. ಈ ಹಣ ಸಚಿವರದ್ದು ಎಂದು ಮೋಹನ್‌ ಹೇಳಿದ್ದಾರೆ. ಸಚಿವರು ಕಳಂಕ ಹೊತ್ತವರು. ಇವರಿಂದ ಗಣರಾಜ್ಯೋತ್ಸವ ಧ್ವಜಾರೋಹಣ ಮಾಡಿಸಬಾರದು ಎಂದು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಆಗ್ರಹಿಸಿದರು.

ಸಚಿವರ ಬದಲಾಗಿ ಬೇರೆ ಯಾರು ಬೇಕಾದರೂ ಧ್ವಜಾರೋಹಣ ನೆರವೇರಿಸಲಿ. ಪುಟ್ಟರಂಗಶೆಟ್ಟಿ ಅವರು ನೆರವೇರಿಸಿದರೆ ಅಂದು ಪಕ್ಷದ ಎಲ್ಲ ಕಾರ್ಯಕರ್ತರು ಕಪ್ಪು ಪಟ್ಟಿ ಧರಿಸಿ ಅವರ ವಿರುದ್ಧ ಪ್ರತಿಭಟನೆಗೆ ಮುಂದಾಗಬೇಕಾಗುತ್ತದೆ. ಅಲ್ಲದೆ, ಶೋಕಾಚರಣೆ ದಿನ ಕಾರ್ಯಕ್ರಮ ನಡೆಸಿದ ರಾಜ್ಯ ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ ಖರ್ಗೆ ಕೂಡ ಧ್ವಜಾರೋಹಣ ನಡೆಸಬಾರದು ಎಂದು ತಿಳಿಸಿದರು.

ನೆರವೇರಿಸಿದರೆ ಅಲ್ಲಿನ ನಮ್ಮ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಾರೆ ಎಂದು ಅವರು ಎಚ್ಚರಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಗ್ರಾಮಾಂತರ ಮಂಡಲ ಅಧ್ಯಕ್ಷ ಎಚ್.ಎಂ. ಬಸವಣ್ಣ, ಸುಂದರ್‌ರಾಜ್‌, ಪುರುಷೋತ್ತಮ್, ಚಂದ್ರಶೇಖರ್‌ ಇದ್ದರು.

 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !