ನಿಮ್ಹಾನ್ಸ್‌: ಸ್ವೀಕಾರ ಕೇಂದ್ರದ ಸಿಬ್ಬಂದಿ ವಿರುದ್ಧ ಮಹಿಳಾ ಮೋರ್ಚಾ ಪ್ರತಿಭಟನೆ

7

ನಿಮ್ಹಾನ್ಸ್‌: ಸ್ವೀಕಾರ ಕೇಂದ್ರದ ಸಿಬ್ಬಂದಿ ವಿರುದ್ಧ ಮಹಿಳಾ ಮೋರ್ಚಾ ಪ್ರತಿಭಟನೆ

Published:
Updated:
Prajavani

ಚಾಮರಾಜನಗರ: ‘ಬೆಂಗಳೂರಿನಲ್ಲಿರುವ ನಿಮ್ಹಾನ್ಸ್‌ ಕೇಂದ್ರದಲ್ಲಿನ ಸ್ವೀಕಾರ ಕೇಂದ್ರ ಅನೈತಿಕ ಚಟುವಟಿಕೆಗಳ ಕೇಂದ್ರವಾಗಿದ್ದು, ಇದಕ್ಕೆ ಅಲ್ಲಿನ ಅಧಿಕಾರಿ ಹಾಗೂ ಸಿಬ್ಬಂದಿ ನೇರ ಕಾರಣ’ ಎಂದು ಆರೋಪಿಸಿ ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾದ  ಸದಸ್ಯರು ಮಂಗಳವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.

ಪಕ್ಷದ ಜಿಲ್ಲಾ ಕಚೇರಿಯಿಂದ ಮೆರವಣಿಗೆ ನಡೆಸಿದ ಪ್ರತಿಭಟನಾಕಾರರು ಭುವನೇಶ್ವರಿ ವೃತ್ತ, ಬಿ.ರಾಚಯ್ಯ ಜೋಡಿ ರಸ್ತೆ ಮಾರ್ಗವಾಗಿ ಜಿಲ್ಲಾಡಳಿತ ಭವನಕ್ಕೆ ತೆರಳಿ ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ ಅವರಿಗೆ ಮನವಿ ಸಲ್ಲಿಸಿದರು.

‘ಬೆಂಗಳೂರಿನಲ್ಲಿರುವ ನಿಮ್ಹಾನ್ಸ್‌ನಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವ್ಯಾಪ್ತಿಯಲ್ಲಿ ಬರುವ ಸ್ವೀಕಾರ ಕೇಂದ್ರವು ಅನೈತಿಕ ಚಟುವಟಿಕೆಗಳ ತಾಣವಾಗಿದೆ. ಇಲ್ಲಿ ಅನಾಚಾರಗಳು ನಡೆಯುತ್ತಿವೆ’ ಎಂದು ಆರೋಪಿಸಿದರು.

‘ಕೇಂದ್ರದಿಂದ ಹಲವು ಅಬಲೆಯರು ನಾಪತ್ತೆಯಾಗಿದ್ದಾರೆ. ಅನೇಕ ಮಹಿಳೆಯರ ಮೇಲೆ ಅಲ್ಲಿನ ಕೆಲವು ದುರುಳರು ಅತ್ಯಾಚಾರ ಎಸಗಿದ್ದಾರೆ. ಈ ಸ್ವೀಕಾರ ಕೇಂದ್ರಕ್ಕೆ ಆಶ್ರಯ ಪಡೆಯಲು ಬರುವ ಹೆಣ್ಣು ಮಕ್ಕಳನ್ನು ರಾಜ್ಯದ ವೈಶ್ಯವಾಟಿಕೆ ಸ್ಥಳಗಳಿಗೂ ರವಾನಿಸಲಾಗುತ್ತಿದೆ. ಕೆಲವು ಮಂದಿ ಎಲ್ಲಿದ್ದಾರೆ ಎನ್ನುವ ಸುಳಿವಿಲ್ಲ, ದಾಖಲೆಯೂ ಇಲ್ಲ’ ಎಂದು ದೂರಿದರು.

‘ಬೆಂಗಳೂರು ಸ್ವೀಕಾರ ಕೇಂದ್ರದಲ್ಲಿ ಅನೇಕ ವರ್ಷಗಳಿಂದ ಕರ್ತವ್ಯದಲ್ಲಿರುವ ಬಿ.ವಾಸಂತಿ, ಸಿ.ದಾಕ್ಷಾಯಿಣಿ ಹಾಗೂ ಕನ್ನಿಗ ಅವರೇ ಅನೈತಿಕ ಚಟುವಟಿಕೆಗಳಿಗೆ ಮೂಲ ಕಾರಣಕರ್ತರು. ಉನ್ನತ ಅಧಿಕಾರಿಗಳು ಇವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.

ಮಹಿಳಾ ಮೋರ್ಚಾದ ಪ್ರಧಾನ ಕಾರ್ಯದರ್ಶಿಗಳಾದ ಸರಸ್ವತಿ, ಶಿವಮ್ಮ, ಮಹದೇವಮ್ಮ, ಮುಖಂಡರಾದ ಪದ್ಮ, ವನಜಾಕ್ಷಿ, ಪುಷ್ಪಮಾಲಾ, ಲಕ್ಷ್ಮಿ, ದೇವಮಣಿ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !