ಬಿಜೆಪಿ ಬಣ ತಿಕ್ಕಾಟ ಬಿರುಸು; ಕಮಲದೊಳಗೆ ತಳಮಳ..!

7
ಸಾಮಾಜಿಕ ಜಾಲತಾಣದಲ್ಲಿ ತೀವ್ರ ಚರ್ಚೆಗೀಡಾದ ಶಾಸಕ ಬಸನಗೌಡ ಪಾಟೀಲ ಯತ್ನಾಳ ಪೋಸ್ಟ್‌

ಬಿಜೆಪಿ ಬಣ ತಿಕ್ಕಾಟ ಬಿರುಸು; ಕಮಲದೊಳಗೆ ತಳಮಳ..!

Published:
Updated:
Prajavani

ವಿಜಯಪುರ: ಕೇಂದ್ರ ಸಚಿವ ರಮೇಶ ಜಿಗಜಿಣಗಿ, ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ನಡುವಿನ ತಿಕ್ಕಾಟ, ಲೋಕಸಭಾ ಚುನಾವಣೆ ಸನ್ನಿಹಿತಗೊಂಡಂತೆ ಬಿರುಸುಗೊಳ್ಳುತ್ತಿದೆ. ಈ ಬೆಳವಣಿಗೆ ಕಮಲ ಪಾಳೆಯದಲ್ಲಿ ತಳಮಳ ಸೃಷ್ಟಿಸಿದೆ.

ವಿಧಾನಸಭಾ ಚುನಾವಣೆ ಬಳಿಕ, ಲೋಕಸಭಾ ಅಭ್ಯರ್ಥಿ ಬದಲಿಸಲೇಬೇಕು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಬಸನಗೌಡ ಬೆಂಬಲಿಗರು ಬೃಹತ್‌ ಆಂದೋಲನ ನಡೆಸಿದ್ದರು. ಇದ್ಯಾವುದಕ್ಕೂ ಸೊಪ್ಪು ಹಾಕದ ಕಮಲ ಪಾಳೆಯದ ವರಿಷ್ಠರು ಆಂತರಿಕವಾಗಿ ಕೇಂದ್ರ ಸಚಿವ ರಮೇಶ ಜಿಗಜಿಣಗಿ ಅವರನ್ನೇ ವಿಜಯಪುರ ಕ್ಷೇತ್ರದಿಂದ ಕಣಕ್ಕಿಳಿಸುವುದಾಗಿ ಘೋಷಿಸಿಕೊಂಡಿದ್ದರು.

ಯತ್ನಾಳ ಬೆಂಬಲಿಗರ ಪಡೆ ಜಿಗಜಿಣಗಿ ವಿರುದ್ಧದ ತನ್ನ ಆಂದೋಲನ ಮುಂದುವರೆಸಿತ್ತು. ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಸಹ ಕೇಂದ್ರ ಸಚಿವರ ಪರವೇ ಬ್ಯಾಟ್‌ ಬೀಸಿದ್ದರು. ಇದು ಬಸನಗೌಡ ಬೆಂಬಲಿಗರಲ್ಲಿ ನಿರಾಸೆ ಮೂಡಿಸಿತ್ತು.

ವಿಧಾನಸಭಾ ಚುನಾವಣೆ ಪೂರ್ವದಲ್ಲಿ ವಿಠ್ಠಲ ಕಟಕದೊಂಡ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಸ್ಥಾನಕ್ಕೆ ದಿಢೀರ್ ರಾಜೀನಾಮೆ ನೀಡಿದ ನವಮಾಸದ ಬಳಿಕ, ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ನೂತನ ಅಧ್ಯಕ್ಷರನ್ನಾಗಿ ಚಂದ್ರಶೇಖರ ಕವಟಗಿ ಅವರನ್ನು ನೇಮಿಸಿದ್ದರು. ಇದರ ಬಳಿಕವೂ, ಶಾಸಕ ಹಾಗೂ ಅವರ ಬೆಂಬಲಿಗರ ಅಸಮಾಧಾನ ತುಸು ಹೆಚ್ಚಾಯಿತು. ಬಸನಗೌಡ ಬಹಿರಂಗವಾಗಿ ಹೇಳಿಕೆಯನ್ನು ನೀಡಿದ್ದರು. ತಮ್ಮ ಅಸಮ್ಮತಿ ವ್ಯಕ್ತಪಡಿಸಿದ್ದರು.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷರಾಗಿ ಚಂದ್ರಶೇಖರ ಕವಟಗಿ ಶನಿವಾರ ಕೇಂದ್ರ ಸಚಿವ ರಮೇಶ ಜಿಗಜಿಣಗಿ ಸಮ್ಮುಖ ಕಮಲ ಪಾಳೆಯದ ಸಾರಥ್ಯ ವಹಿಸಿಕೊಳ್ಳುವ ಸಮಾರಂಭಕ್ಕೂ ಕೆಲ ಗಂಟೆಗಳ ಮುನ್ನವೇ, ಬಸನಗೌಡ ಪಾಟೀಲ ಯತ್ನಾಳ ತಮ್ಮ ಫೇಸ್‌ಬುಕ್‌ನ ಎರಡು ಖಾತೆಗಳಲ್ಲಿ ಅಪ್‌ಲೋಡ್‌ ಮಾಡಿರುವ ಸಂದೇಶ ಜಿಲ್ಲಾ ಬಿಜೆಪಿ ಘಟಕದಲ್ಲಿ ತೀವ್ರ ಚರ್ಚೆ ಹುಟ್ಟುಹಾಕಿದೆ.

ಯತ್ನಾಳ ಪೋಸ್ಟ್‌ನ ಸಾರ..!

‘ರಾಜ್ಯವನ್ನು ಪ್ರತಿನಿಧಿಸುತ್ತಿರುವ ಕೆಲ ಬಿಜೆಪಿ ಸಂಸದರು ಪ್ರಧಾನಿ ನರೇಂದ್ರ ಮೋದಿ ಅವರ ಅಭಿವೃದ್ಧಿ ಅಲೆಯಲ್ಲಿ ಮತ್ತೊಮ್ಮೆ ಗೆದ್ದು ಬರುವ ಕನಸು ಕಾಣುತ್ತಿದ್ದಾರೆ. ತಮ್ಮ ನಾಲ್ಕು ಮುಕ್ಕಾಲು ವರ್ಷದ ಅಧಿಕಾರದ ಅವಧಿಯಲ್ಲಿ ಕೇಂದ್ರದ ಸೇವೆಗಳನ್ನು ಜನರಿಗೆ ತಲುಪಿಸುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ.

ತಮ್ಮ ಕ್ಷೇತ್ರಕ್ಕೆ ಯಾವೊಂದು ಅಭಿವೃದ್ಧಿಯ ಕೊಡುಗೆ ನೀಡಿಲ್ಲ. ಪಕ್ಷದ ತಳಹಂತದ ಕಾರ್ಯಕರ್ತರ ಜತೆ ಯಾವುದೇ ಬಾಂಧವ್ಯವನ್ನು ಹೊಂದಿಲ್ಲ. ಪಕ್ಷದ ಸಂಘಟನಾ ಕೆಲಸದಲ್ಲೂ ಭಾಗಿಯಾಗಿಲ್ಲ. ಸಂಸದರ ನಿಧಿಯನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ.

ಪಕ್ಷದ ಹೈಕಮಾಂಡ್‌ ಇನ್ನಾದರೂ ಸ್ಥಳೀಯ ಕಾರ್ಯಕರ್ತರ ಅಭಿಪ್ರಾಯಕ್ಕೆ ಮನ್ನಣೆ ನೀಡದಿದ್ದರೆ ಸ್ಥಾನ ಕಳೆದುಕೊಳ್ಳಬೇಕಾಗುತ್ತದೆ’ ಎಂಬ ಒಕ್ಕಣೆಯುಳ್ಳ ಸಂದೇಶವನ್ನು ಯತ್ನಾಳ ತಮ್ಮ ಫೇಸ್‌ಬುಕ್‌ ಖಾತೆಗಳಲ್ಲಿ ಪ್ರಕಟಿಸಿಕೊಂಡಿದ್ದಾರೆ.

ಬಸನಗೌಡ ಜಿಗಜಿಣಗಿ ವಿರುದ್ಧವೇ ಪರೋಕ್ಷವಾಗಿ ಈ ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ. ಯತ್ನಾಳ ಈ ಸಂದೇಶ ಅಪ್‌ಲೋಡ್‌ ಮಾಡಿದ ಕೆಲವೇ ಗಂಟೆಗಳಲ್ಲಿ ಹಲ ಬೆಂಬಲಿಗರು ಲೈಕ್‌ ಮಾಡಿದ್ದಾರೆ. ತಮ್ಮ ಅಭಿಪ್ರಾಯ ದಾಖಲಿಸಿದವರು ಇದ್ದಾರೆ. ಪರ–ವಿರೋಧದ ಚರ್ಚೆಯೂ ಇಬ್ಬರೂ ಬೆಂಬಲಿಗರ ನಡುವೆ ಸಾಮಾಜಿಕ ಜಾಲತಾಣದಲ್ಲೇ ನಡೆದಿದೆ. ಇನ್ನೂ ಹಲವರು ಈ ಪೋಸ್ಟ್‌ಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ತಮ್ಮ ಸ್ನೇಹ ಬಳಗಕ್ಕೆ ಹಂಚಿಕೊಂಡಿದ್ದಾರೆ.

ಕವಟಗಿ ಅಧಿಕಾರ ಸ್ವೀಕಾರ...

ವಿಜಯಪುರದ ವನಶ್ರೀ ಮಂಗಳ ಕಾರ್ಯಾಲಯದಲ್ಲಿ ಶನಿವಾರ ನಡೆದ ಸಮಾರಂಭದಲ್ಲಿ ಜಿಲ್ಲಾ ಘಟಕದ ಅಧ್ಯಕ್ಷರಾಗಿ ಚಂದ್ರಶೇಖರ ಕವಟಗಿ ಅಧಿಕಾರ ಸ್ವೀಕರಿಸಿದರು.

ಕೇಂದ್ರ ಸಚಿವ ರಮೇಶ ಜಿಗಜಿಣಗಿ ಕವಟಗಿಗೆ ಪಕ್ಷದ ಬಾವುಟ ಹಸ್ತಾಂತರಿಸಿದರು. ವಿಧಾನ ಪರಿಷತ್ ಸದಸ್ಯ ಅರುಣ ಶಹಾಪುರ, ಜಿಲ್ಲಾ, ಮಂಡಲ ಘಟಕದ ಹಲ ಪದಾಧಿಕಾರಿಗಳು ಉಪಸ್ಥಿತರಿದ್ದರು. ಚುನಾಯಿತ ಜನಪ್ರತಿನಿಧಿಗಳ ಗೈರು ಹಾಜರಿಯೇ ಹೆಚ್ಚಾಗಿ ಗೋಚರಿಸಿತು.

ಶಾಸಕ ಬಸನಗೌಡ ಪಾಟೀಲ ಯತ್ನಾಳ ಉದ್ದೇಶಪೂರ್ವಕವಾಗಿಯೇ ಸಮಾರಂಭಕ್ಕೆ ಗೈರಾಗುವ ಮೂಲಕ ತಮ್ಮ ಅಸಮ್ಮತಿ ವ್ಯಕ್ತಪಡಿಸಿದ್ದಾರೆ ಎಂಬ ಮಾತುಗಳು ಪದಗ್ರಹಣ ಸಮಾರಂಭದ ಅಂಗಳದಲ್ಲೇ ಕೇಳಿ ಬಂದವು.

ಒಂದೆಡೆ ಸಮಾರಂಭ ನಡೆದಿದ್ದರೆ; ಮಗದೊಂದೆಡೆ ಖಾಲಿ ಕುರ್ಚಿಗಳಿರುವ ಛಾಯಾಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದವು. ಬಿಜೆಪಿಯೊಳಗಿನ ಆಂತರಿಕ ಬೇಗುದಿ ಸಾಮಾಜಿಕ ಜಾಲತಾಣಗಳ ಮೂಲಕ ಬಹಿರಂಗಗೊಂಡು, ಅಪಹಾಸ್ಯಕ್ಕೀಡಾಗುತ್ತಿದೆ.

ಬರಹ ಇಷ್ಟವಾಯಿತೆ?

 • 0

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !