ವಿಜಯಪುರ: ಹೊಲದ ಮಾಲೀಕರಿಲ್ಲದೆ ಬರ ವೀಕ್ಷಿಸಿದ ಬಿಜೆಪಿ ತಂಡ..!

7
ಬಿಜೆಪಿ ಮುಖಂಡರು, ರೈತ ಮೋರ್ಚಾ ಪ್ರಮುಖರ ಹಾಜರಿ; ಸಂಕಷ್ಟವನ್ನೇ ಕೇಳಲಿಲ್ಲ ಬರ ಅಧ್ಯಯನ ತಂಡ

ವಿಜಯಪುರ: ಹೊಲದ ಮಾಲೀಕರಿಲ್ಲದೆ ಬರ ವೀಕ್ಷಿಸಿದ ಬಿಜೆಪಿ ತಂಡ..!

Published:
Updated:
Deccan Herald

ವಿಜಯಪುರ: ‘ಹೊಲಕ್ಕೆ ಭೇಟಿ ನೀಡಿದರೂ; ರೈತರ ಸಂಕಷ್ಟ ಆಲಿಸಲಿಲ್ಲ. ಜಮೀನಿನ ಮಾಲೀಕರಿಂದ ಬೆಳೆಯ ಬಗ್ಗೆ ಕಿಂಚಿತ್‌ ಮಾಹಿತಿ ಪಡೆಯಲಿಲ್ಲ. ನಮ್ಮಗಳ ಮುಂದಿನ ಭವಿಷ್ಯದ ಕುರಿತಂತೆ ಎಲ್ಲಿಯೂ ಚರ್ಚಿಸಲಿಲ್ಲ. ತಮ್ಮ ಪಕ್ಷದ ಮುಖಂಡರು ತೋರಿದ ಹಾದಿಯಲ್ಲಿ ಬಂದರು... ಹೋದರು...!’

ಬಿಜೆಪಿಯ ಹಿರಿಯ ಮುಖಂಡ, ಶಾಸಕ ಕೆ.ಎಸ್‌.ಈಶ್ವರಪ್ಪ ಬುಧವಾರ ತೊರವಿಯ ಕಲ್ಲಪ್ಪ ಶಿರಹಟ್ಟಿ, ಮಲ್ಲಯ್ಯ ಹಿರೇಮಠರ ಜಮೀನುಗಳಿಗೆ ಭೇಟಿ ನೀಡಿ, ಬರ ಅಧ್ಯಯನ ನಡೆಸಿದ್ದನ್ನು ಸ್ಥಳದಲ್ಲಿದ್ದ ರೈತರು ‘ಪ್ರಜಾವಾಣಿ’ ಬಳಿ ತಿಳಿಸಿದ ಪರಿಯಿದು.

‘ನಮ್ಮೂರುಗಳಿಗೆ ಯಾವೊಬ್ಬ ಸಚಿವರೂ ಭೀಕರ ಬರದಲ್ಲೂ ಭೇಟಿ ನೀಡಿರಲಿಲ್ಲ. ಕೇಂದ್ರ–ರಾಜ್ಯ ಸರ್ಕಾರದ ಅಧಿಕಾರಿಗಳು ಬಂದಿರಲಿಲ್ಲ. ನಮ್ಮ ಸಂಕಷ್ಟವನ್ನು ಆಲಿಸುವವರೇ ಇಲ್ಲವಾಗಿದ್ದರು. ಬಿತ್ತಿದ್ದ ಮುಂಗಾರು–ಹಿಂಗಾರು ಎರಡೂ ಹೊಲದಲ್ಲೇ ಬತ್ತಿವೆ. ಇದೀಗ ಹಿಂಗಾರಿ ಪೀಕುಗಳಾದ ಜೋಳ, ಕಡಲೆ, ಸೂರ್ಯಕಾಂತಿ ಸಕಾಲಕ್ಕೆ ಮಳೆ ಸುರಿಯದೆ, ವಾತಾವರಣದಲ್ಲಿ ತೇವಾಂಶವಿಲ್ಲದೆ ಕಮರಿವೆ.

ಇದರ ಬೆನ್ನಿಗೆ ನಮ್ಮ ಭವಿಷ್ಯವೂ ಮಸುಕಾಗಿದೆ. ಇಂಥ ಹೊತ್ತಲ್ಲಿ ಬಿಜೆಪಿಯವ್ರು ನಮ್ಮೂರ ಜಮೀನುಗಳಿಗೆ ಬರ ವೀಕ್ಷಿಸಲು ಬರ್ತ್ವಾರೆ ಎಂಬುದೇ ನಮಗೆ ಆಶಾದಾಯಕವಾಗಿತ್ತು. ನಮ್ಮ ಜತೆ ಚರ್ಚಿಸುತ್ತಾರೆ. ಸಂಕಷ್ಟ ಕೇಳುತ್ತಾರೆ. ಬೆಳಗಾವಿ ಅಧಿವೇಶನದಲ್ಲಿ ನಮ್ಮ ನೋವಿನ ಬಗ್ಗೆ ಮಾತನಾಡುತ್ತಾರೆ ಎಂಬ ಆಶಾವಾದ ಹೊಂದಿದ್ದೆವು. ಆದರೆ ಇಲ್ಲಿ ನಡೆದಿದ್ದೇ ಬೇರೆ’ ಎಂದು ಹೆಸರು ಬಹಿರಂಗಪಡಿಸಲಿಚ್ಚಿಸದ ರೈತರೊಬ್ಬರು ‘ಪ್ರಜಾವಾಣಿ’ ಬಳಿ ಅಸಮಾಧಾನ ತೋಡಿಕೊಂಡರು.

‘ಮೊದಲಿಗೆ ತಿಕೋಟಾ ತಾಲ್ಲೂಕಿನ ರತ್ನಾಪುರ ಬಳಿ ಬಿಜೆಪಿ ಮುಖಂಡರು ಬರ ವೀಕ್ಷಣೆಗೆ ತೆರಳುತ್ತಾರೆ ಎಂದಿದ್ದರು. ನಾವು ಸುಮ್ಮನಿದ್ದೆವು. ಕೊನೆ ಕ್ಷಣದಲ್ಲಿ ತೊರವಿಯ ಜಮೀನಿಗೆ ಈಶ್ವರಪ್ಪ ಬರ್ತಾರಂತೆ. ಬನ್ರೀ ಎಂದು ಸ್ಥಳೀಯ ಮುಖಂಡರು ಕರ್ಕೊಂಡ್‌ ಬಂದ್ರು. ಅದರಂತೆ ನಾವು ಇಲ್ಲಿಗೆ ಬಂದ್ರೇ ಈಶ್ವರಪ್ಪ ನಮ್ಮನ್‌ ಮಾತನಾಡಿಸಲೇ ಇಲ್ಲ.

ರಸ್ತೆ ಬದಿಯಿದ್ದ ಹೊಲಕ್ಕಿಳಿದರು. ತಮ್ಮ ಪಕ್ಷದ ಶಾಸಕರು, ಸ್ಥಳೀಯ ಮುಖಂಡರ ಜತೆ ಅತ್ತಿಂದಿತ್ತ ಓಡಾಡಿದರು. ಜೋಳ, ಕಡಲೆ, ಸೂರ್ಯಕಾಂತಿ ಗಿಡ ಕಿತ್ತುಕೊಂಡು ಮಾಧ್ಯಮದವರಿಗೆ ಫೋಟೋ ಫೋಸು ಕೊಟ್ಟು ತಮ್ಮವರ ಜತೆಯೇ ಮಾತನಾಡಿಕೊಂಡು ಹೊಲದಿಂದ ಹೋದರು.

ಕನಿಷ್ಠ ಸೌಜನ್ಯಕ್ಕೂ ಹೊಲದ ಮಾಲೀಕ ಯಾರು ಎಂದು ಪ್ರಶ್ನಿಸಲಿಲ್ಲ. ಆತನನ್ನು ಕರೆಸಿಕೊಂಡು ಸಂಕಷ್ಟ ಕೇಳಲಿಲ್ಲ. ಏನು ಮಾಡಿದರು ಎಂಬುದೇ ತಿಳಿಯದಾಯ್ತು’ ಎಂದು ಈಶ್ವರಪ್ಪ ಭೇಟಿ ನೀಡಿದ್ದ ಸನಿಹದ ಹೊಲದ ರೈತರೊಬ್ಬರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಮೂರು ಸ್ಥಳ ಬದಲಾವಣೆ
‘ಮುಖಂಡ ಕೆ.ಎಸ್‌.ಈಶ್ವರಪ್ಪ ನೇತೃತ್ವದ ಬರ ಅಧ್ಯಯನ ತಂಡ ಜಿಲ್ಲೆಯ ವ್ಯಾಪ್ತಿಯ ಯಾವ ಊರಿನ ಹೊಲದಲ್ಲಿ ಬರ ಅಧ್ಯಯನ ನಡೆಸಬೇಕು ಎಂಬುದರ ಕುರಿತಂತೆ ಮೂರು ಬಾರಿ ಸ್ಥಳ ಬದಲಾವಣೆಯಾಯ್ತು. ಇದು ಸ್ಥಳೀಯ ಮುಖಂಡರಲ್ಲಿ ಗೊಂದಲ ಸೃಷ್ಟಿಸಿತು.

ಕೊನೆ ಕ್ಷಣದಲ್ಲಿನ ಗೊಂದಲದಿಂದಾಗಿ ಈಶ್ವರಪ್ಪ ಬರ ಅಧ್ಯಯನ ನಡೆಸಿದ ಸಂದರ್ಭ ಹೊಲದ ಮಾಲೀಕ, ರೈತರು ಸ್ಥಳದಲ್ಲಿರಲಿಲ್ಲ. ಇದರಿಂದ ಅಧ್ಯಯನ ತಂಡವೂ ಹೊಲದ ಮಾಲೀಕರಿಂದ ಮಾಹಿತಿ ಪಡೆಯಲು ಸಾಧ್ಯವಾಗಲಿಲ್ಲ’ ಎಂದು ಜಿಲ್ಲಾ ಬಿಜೆಪಿ ಘಟಕದ ಪ್ರಮುಖ ಪದಾಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ಬರಹ ಇಷ್ಟವಾಯಿತೆ?

 • 2

  Happy
 • 2

  Amused
 • 0

  Sad
 • 1

  Frustrated
 • 3

  Angry

Comments:

0 comments

Write the first review for this !