ಬಿಜೆಪಿಗೆ 300ಕ್ಕೂ ಹೆಚ್ಚು ಸ್ಥಾನ ಖಚಿತ: ವಿ.ಶ್ರೀನಿವಾಸ ಪ್ರಸಾದ್‌ ವಿಶ್ವಾಸ

ಶನಿವಾರ, ಏಪ್ರಿಲ್ 20, 2019
32 °C
'ವಯಸ್ಸಾಗಿದೆ, ಅನಾರೋಗ್ಯ ಇದೆ ಎಂಬುದು ಗೊತ್ತಿದೆ, ಜನತ ಪ್ರೀತಿ ವಿಶ್ವಾಸಕ್ಕೆ ತಲೆಬಾಗಿ ಸ್ಪರ್ಧಿಸುತ್ತಿದ್ದೇನೆ'

ಬಿಜೆಪಿಗೆ 300ಕ್ಕೂ ಹೆಚ್ಚು ಸ್ಥಾನ ಖಚಿತ: ವಿ.ಶ್ರೀನಿವಾಸ ಪ್ರಸಾದ್‌ ವಿಶ್ವಾಸ

Published:
Updated:
Prajavani

ಚಾಮರಾಜನಗರ: ‘ದೇಶದಲ್ಲಿ ಮೋದಿ ಅವರ ಆಡಳಿತವನ್ನು ಜನ ಈಗಲೂ ಇಷ್ಟಪಡುತ್ತಿದ್ದಾರೆ. ಹಾಗಾಗಿ, ಈ ಲೋಕಸಭಾ ಚುನಾವಣೆಯಲ್ಲಿ ಮೋದಿ ನೇತೃತ್ವದಲ್ಲಿ ಬಿಜೆಪಿ 300ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲಲಿದೆ’ ಎಂದು ಚಾಮರಾಜನಗರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿ.ಶ್ರೀನಿವಾಸ ಪ್ರಸಾದ್‌ ವಿಶ್ವಾಸ ವ್ಯಕ್ತಪಡಿಸಿದರು.

ನಗರದ ಶ್ರೀ ಮಲ್ಲಿಕಾರ್ಜುನ ಭ್ರಮರಾಂಬ ಕಲ್ಯಾಣ ಮಂಟಪದಲ್ಲಿ ಏರ್ಪಡಿಸಿದ್ದ ಕ್ಷೇತ್ರದ ಜನಪ್ರತಿನಿಧಿಗಳು ಹಾಗೂ ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.

‘ರಾಜ್ಯದಲ್ಲೂ ಬಿಜೆಪಿ ಪರವಾದ ಒಲವಿದೆ. ಕ್ಷೇತ್ರದಲ್ಲೂ ಗೆಲ್ಲುವ ವಾತಾವರಣ ಇದೆ. ಯಡಿಯೂರಪ್ಪ, ಶ್ರೀನಿವಾಸ ಪ್ರಸಾದ್‌ ಅವರನ್ನು ಜನ ಬೆಂಬಲಿಸುತ್ತಿದ್ದಾರೆ. ಎಲ್ಲ ಎಂಟು ವಿಧಾನಸಭಾ ಕ್ಷೇತ್ರಗಳಲ್ಲೂ ಬಿಜೆಪಿಗೆ ಮುನ್ನಡೆ ಸಿಗಲಿದೆ. ಮೈಸೂರಿನಲ್ಲೂ ಪಕ್ಷ ಗೆಲ್ಲಲಿದೆ’ ಎಂದರು.

ಮಗ್ಗುಲಮುಳ್ಳು: ‘ರಾಜ್ಯದ ಮೈತ್ರಿ ಸರ್ಕಾರದ ಎಂಟು ತಿಂಗಳ ಆಡಳಿತದಲ್ಲಿ ಏನಾದರೂ ಸಮನ್ವಯ ಇದೆಯೇ? ಸಿದ್ದರಾಮಯ್ಯ ಸಮನ್ವಯ ಸಮಿತಿ ಅಧ್ಯಕ್ಷರಾಗಿದ್ದಾರೆ. ಮೈತ್ರಿ ಪಕ್ಷಗಳಿಗೆ ಕೆಲವು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳೇ ಸಿಕ್ಕಿಲ್ಲ. ಬೆಂಗಳೂರು ಉತ್ತರ ಮತ್ತು ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳಲ್ಲಿ ಜೆಡಿಎಸ್‌ ಬಳಿ ಅಭ್ಯರ್ಥಿಗಳಿಲ್ಲದೆ, ಕಾಂಗ್ರೆಸ್‌ ಮುಖಂಡರು ನಿಂತಿದ್ದಾರೆ’ ಎಂದು ಟೀಕಿಸಿದರು.

‘ಎಲ್ಲ 28 ಕ್ಷೇತ್ರಗಳನ್ನೂ ಗೆಲ್ಲುತ್ತೇವೆ ಎಂದು ಸಿದ್ದರಾಮಯ್ಯ ಸೇರಿದಂತೆ ಮೈತ್ರಿ ಪಕ್ಷಗಳ ನಾಯಕರು ಹೇಳುತ್ತಿದ್ದಾರೆ. ಆದರೆ, ಸಿದ್ದರಾಮಯ್ಯ ಅವರು ಮಗ್ಗುಲಮುಳ್ಳು ಎಂಬುದು ಜೆಡಿಎಸ್‌ನವರಿಗೆ ಚೆನ್ನಾಗಿ ಗೊತ್ತಿದೆ’ ಎಂದು ಹೇಳಿದರು.

ವಯಸ್ಸಾಗಿರುವುದು ಗೊತ್ತು: ‘ನನಗೆ ವಯಸ್ಸಾಗಿದೆ ಎಂದು ಎದುರಾಳಿಗಳು ಹೇಳುತ್ತಿದ್ದಾರೆ. ಅದು ನನಗೆ ಗೊತ್ತಿಲ್ಲವೇ?, ಅನಾರೋಗ್ಯದಿಂದಲೂ ಬಳಲುತ್ತಿದ್ದೇನೆ. ರಾಜಕೀಯದಲ್ಲಿ ದಶಕಗಳ ಅನುಭವವಿದೆ. ಕೇಂದ್ರದಲ್ಲಿ ಸಚಿವನೂ ಆಗಿದ್ದೇನೆ. ಇಷ್ಟವಿಲ್ಲದಿದ್ದರೂ ಬೆಂಬಲಿಗರ ಪ್ರೀತಿ, ವಿಶ್ವಾಸಕ್ಕೆ ಮಣಿದು ಚುನಾವಣೆಗೆ ನಿಂತಿದ್ದೇನೆ. ಈ ಬಾರಿ ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲಲೇಬೇಕು ಎಂಬ ಉದ್ದೇಶದಿಂದ ನನ್ನನ್ನು ನಿಲ್ಲುವಂತೆ ಮಾಡಿದ್ದಾರೆ’ ಎಂದರು.

ಅಭಿವೃದ್ಧಿ ಮಾಡಿದ್ದೇನೆ: ‘ಐದು ಬಾರಿ ಕ್ಷೇತ್ರದ ಸಂಸದನಾಗಿದ್ದೇನೆ. ಕ್ಷೇತ್ರದ ಅಭಿವೃದ್ಧಿಯನ್ನು ನಾನೂ ಮಾಡಿದ್ದೇನೆ. 1977ರಲ್ಲಿ ನಾನು ಚುನಾವಣೆಗೆ ನಿಂತಾಗ ಇದು ತಾಲ್ಲೂಕು ಕೇಂದ್ರವಾಗಿತ್ತು. ಇಲ್ಲಿ ಏನೂ ಇರಲಿಲ್ಲ. ಬಾಡಿಗೆ ಕಾರು ಹಿಡಿದುಕೊಂಡು ಓಡಾಡಬೇಕಿತ್ತು. ಆ ಸಂದರ್ಭದಲ್ಲಿ ಕೇಂದ್ರದ ಯೋಜನೆಗಳು ಹಾಗೂ ಅನುದಾನ ಹೆಚ್ಚು ಬರುತ್ತಿರಲಿಲ್ಲ. 1980ರಿಂದ 1991ರ ವರೆಗೆ ಅನುದಾನವೇ ಇರಲಿಲ್ಲ. ಹಾಗಿದ್ದರೂ ಅಭಿವೃದ್ಧಿ ಮಾಡಿದ್ದೇನೆ. ಮಾದರಿಯಾದ ಅಂಬೇಡ್ಕರ್‌ ಭವನ ಸೇರಿದಂತೆ ಹಲವಾರು ಸಮುದಾಯ ಭವನಗಳನ್ನು ನಿರ್ಮಿಸಿದ್ದೇನೆ. ಈಗ ಕೋಟ್ಯಂತರ ರೂಪಾಯಿ ಅನುದಾನ ಸಿಗುತ್ತಿದೆ. ಅದನ್ನು ತರಲು ಧ್ರುವನಾರಾಯಣ ಅವರೇ ಬೇಕೆ’ ಎಂದು ಪ್ರಶ್ನಿಸಿದರು.

‘ಆರ್‌.ಧ್ರುವನಾರಾಯಣ, ಕಾಗಲವಾಡಿ ಶಿವಣ್ಣ ಮತ್ತು ಎ.ಆರ್‌.ಕೃಷ್ಣಮೂರ್ತಿ ಅವರು ಈ ಹಿಂದೆ ಒಬ್ಬರಿಗೊಬ್ಬರು ಬೈಯುತ್ತಿದ್ದವರು. ಈಗ ಒಟ್ಟಾಗಿ ಸೇರಿ ನನ್ನ ವಿರುದ್ಧ ಮತ ಕೇಳುತ್ತಿದ್ದಾರೆ. ಇವರಿಗೆ ನಾಚಿಕೆಯಾಗುವುದಿಲ್ಲವೇ’ ಎ‌ಂದು ವ್ಯಂಗ್ಯವಾಡಿದರು.

ಸದಾ ಸಿದ್ಧ: ‘ಇದು ಪ್ರಚಾರಕ್ಕೆ ಸಂಬಂಧಿಸಿದ ಸಿದ್ಧತಾ ಸಭೆ. ನೀವು ಎಲ್ಲಿಗೆ ಕರೆಯುತ್ತೀರೋ ಅಲ್ಲಿಗೆ ಪ್ರಚಾರರಕ್ಕೆ ನಾನು ಬರುತ್ತೇನೆ. ಇಲ್ಲಿ ನನ್ನನ್ನು ಗೆಲ್ಲಿಸುವುದರ ಮೂಲಕ ಕೇಂದ್ರದಲ್ಲಿ ಮೋದಿ ಅವರು ಮತ್ತೆ ಪ್ರಧಾನಿಯಾಗಲು ಅವಕಾಶ ಮಾಡಿಕೊಡಬೇಕು’ ಎಂದು ಅವರು ಮನವಿ ಮಾಡಿದರು.

ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷ ಪ್ರೊ.ಕೆ.ಆರ್‌.ಮಲ್ಲಿಕಾರ್ಜುನಪ್ಪ, ಬಿಜೆಪಿ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಮತ್ತು ಕ್ಷೇತ್ರ ಉಸ್ತುವಾರಿ ರಾಜೇಂದ್ರ ಮಾತನಾಡಿದರು.

ಮುಖಂಡರಾದ ಸಿ.ಗುರುಸ್ವಾಮಿ, ಡಾ.ಭಾರತೀ ಶಂಕರ್‌, ಸಿ.ಬಸವೇಗೌಡ, ಮಲ್ಲೇಶ್‌, ಎಂ.ರಾಮಚಂದ್ರ, ಎಸ್‌.ಮಹದೇವಯ್ಯ, ಕೆ.ವೀರಭದ್ರಸ್ವಾಮಿ, ಸುಂದರಪ್ಪ, ವೆಂಕಟರಮಣಸ್ವಾಮಿ, ಸುಂದರ್‌ರಾಜು ಮತ್ತಿತರರು ಇದ್ದರು.

ಕಾಗಲವಾಡಿ ಶಿವಣ್ಣ ವಿರುದ್ಧ ವಾಗ್ದಾಳಿ

ಇತ್ತೀಚೆಗಷ್ಟೆ ಬಿಜೆಪಿ ತೊರೆದು ಕಾಂಗ್ರೆಸ್‌ ಸೇರಿದ ಮಾಜಿ ಸಂಸದ ಕಾಗಲವಾಡಿ ಶಿವಣ್ಣ ವಿರುದ್ಧ ಶ್ರೀನಿವಾಸ ಪ್ರಸಾದ್‌ ಅವರು ಏಕವಚನದಲ್ಲೇ ಹರಿಹಾಯ್ದರು.

‘ಕಾಗಲವಾಡಿ ಶಿವಣ್ಣ ಏನೇನೂ ಆಗಿರಲಿಲ್ಲ.‌ ಆತನಿಗೆ ರಾಜಕೀಯದ ಹಿನ್ನೆಲೆಯೂ ಇರಲಿಲ್ಲ. ಅಂತಹವನಿಗೆ ಎಲ್ಲರ ವಿರೋಧದ ನಡುವೆಯೂ 2004ರ ಲೋಕಸಭಾ ಚುನಾವಣೆಯಲ್ಲಿ ಟಿಕೆಟ್‌ ಕೊಟ್ಟು ಗೆಲ್ಲಿಸಿದೆ. ಆದರೆ, ಇವತ್ತು ನನ್ನ ಬಗ್ಗೆ ಏನೇನೋ ಮಾತನಾಡುತ್ತಿದ್ದಾನೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಜೆಡಿಎಸ್‌ ಸಂಸದನಾಗಿ ಯುಪಿಎ ಪರವಾಗಿ ಒಂದು ಗುಂಡಿ ಒತ್ತಿ ಕೋಟ್ಯಧಿಪತಿಯಾದ. ಸಂಸದನಾಗಿ ಐದು ವರ್ಷದಲ್ಲಿ ಒಂದು ರೂಪಾಯಿಯ ಅಭಿವೃದ್ಧಿ ಕೆಲಸ ಮಾಡಲಿಲ್ಲ. ದುಡ್ಡು ಮಾಡಿದ್ದಾನೆ. ಶ್ರೀಮಂತ ಆಗಿದ್ದಾನೆ. ಬಂಗಲೆ ಕಟ್ಟಿಸಿಕೊಂಡಿದ್ದಾನೆ’ ಎಂದು ಆರೋಪಿಸಿದರು.

‘ಇಡೀ ದೇಶದಲ್ಲಿ ರಾಜಕೀಯವಾಗಿ ದೇವೇಗೌಡರಿಗೆ ಯಾರಾದರೂ ಕೈಕೊಟ್ಟಿದ್ದರೆ ಅದು ಕಾಗಲವಾಡಿ ಶಿವಣ್ಣ ಮಾತ್ರ’ ಎಂದು ಟೀಕಾ ಪ್ರಹಾರ ನಡೆಸಿದರು.

ಬರಹ ಇಷ್ಟವಾಯಿತೆ?

  • 3

    Happy
  • 0

    Amused
  • 0

    Sad
  • 0

    Frustrated
  • 0

    Angry

Comments:

0 comments

Write the first review for this !