ಕುಡಿಯವ ನೀರು, ನೀರಾವರಿಗೆ ಆದ್ಯತೆ

7
ಶಾಸಕ ಡಾ.ಕೆ.ಸುಧಾಕರ್ ಹುಟ್ಟುಹಬ್ಬದ ಪ್ರಯುಕ್ತ ಮಂಚೇನಹಳ್ಳಿಯಲ್ಲಿ ರಕ್ತದಾನ ಶಿಬಿರ

ಕುಡಿಯವ ನೀರು, ನೀರಾವರಿಗೆ ಆದ್ಯತೆ

Published:
Updated:
ರಕ್ತದಾನ ಶಿಬಿರದಲ್ಲಿ ಶಾಸಕ ಡಾ.ಕೆ.ಸುಧಾಕರ್ ಅವರು ದಾನಿಯೊಬ್ಬರಿಗೆ ಪ್ರಮಾಣ ಪತ್ರ ವಿತರಿಸಿದರು.

ಚಿಕ್ಕಬಳ್ಳಾಪುರ: ಕ್ಷೇತ್ರದಲ್ಲಿ ಶುದ್ಧ ಕುಡಿಯುವ ನೀರಿನ ಜತೆಗೆ ರೈತರಿಗೆ ಬೇಕಾದ ನೀರಾವರಿ ನೀರು ತಂದು ಕೊಡುವುದು ನನ್ನ ಮೊದಲ ಆದ್ಯತೆ. ಡಿಸೆಂಬರ್ ಒಳಗೆ ಏತ ನೀರಾವರಿ ಯೋಜನೆ ಪೂರ್ಣಗೊಳ್ಳಲಿದೆ’ ಎಂದು ಶಾಸಕ ಡಾ. ಕೆ. ಸುಧಾಕರ್ ಭರವಸೆ ನೀಡಿದರು.

ಶಾಸಕ ಸುಧಾಕರ್ ಅವರ ಜನ್ಮದಿನದ ಅಂಗವಾಗಿ ಬುಧವಾರ ತಾಲ್ಲೂಕಿನ ಮಂಚೇನಹಳ್ಳಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಆಯೋಜಿಸಿದ್ದ ರಕ್ತದಾನ ಶಿಬಿರದಲ್ಲಿ ಅವರು ಮಾತನಾಡಿದರು.

‘ಈ ಹೋಬಳಿಯಲ್ಲಿ ಸ್ಥಳೀಯ ಮಾನವ ಸಂಪನ್ಮೂಲ ಅರ್ಥ ಮಾಡಿಕೊಂಡು ಅದಕ್ಕೆ ಸರಿ ಹೊಂದುವ ಕೈಗಾರಿಕೆಗಳನ್ನು ಸ್ಥಾಪಿಸಲಾಗುವುದು. ಆ ಮೂಲಕ ಸಾವಿರಾರು ಯುವಜನರು, ಮಹಿಳೆಯರಿಗೆ ಉದ್ಯೋಗ ಒದಗಿಸಲು ಉದ್ದೇಶಿಸಲಾಗಿದೆ. ಮಂಚೇನಹಳ್ಳಿಯನ್ನು ನೂತನ ತಾಲ್ಲೂಕು ಮಾಡಲು ಆದ್ಯತೆ ನೀಡಲಾಗುವುದು. ಈ ಕುರಿತು ಕಂದಾಯ ಸಚಿವರೊಂದಿಗೆ ಚರ್ಚಿಸುವೆ. ಗ್ರಾಮ ಪಂಚಾಯಿತಿಯನ್ನು ಪಟ್ಟಣ ಪಂಚಾಯಿತಿಗೆ ಮೇಲ್ದರ್ಜೆಗೇರಿಸುವ ಚಿಂತನೆಯೂ ಇದೆ’ ಎಂದರು.

‘ಪಟ್ಟಣದಲ್ಲಿ ಹೊಸ ಬಸ್‌ ನಿಲ್ದಾಣ ನಿರ್ಮಿಸಲಾಗುತ್ತದೆ. ಆಸ್ಪತ್ರೆ ಮೇಲ್ದರ್ಜೆಗೇರಿಸಿ ಹೆಚ್ಚಿನ ಸೌಲಭ್ಯ ಕಲ್ಪಿಸಲಾಗುತ್ತದೆ. ಹೊಸ ಪದವಿ ಕಾಲೇಜು ಸ್ಥಾಪಿಸಲು ಪ್ರಯತ್ನಿಸುತ್ತಿರುವೆ. ಒಂದೂವರೆ ವರ್ಷದೊಳಗೆ ಬಾಕಿ ಇರುವ ರಸ್ತೆ ಕಾಮಗಾರಿ ಪೂರ್ಣಗೊಳಿಸಲಾಗುತ್ತದೆ. ಪಕ್ಷಾತೀತವಾಗಿ ಕೆಲಸ ಮಾಡುತ್ತ, ಇಲ್ಲಿನ ಜನರಿಗೆ ಸಮೃದ್ಧಿಯ ಬದುಕು ಕಟ್ಟಿಕೊಡುವ ಕೆಲಸವನ್ನು ಪ್ರಾಮಾಣಿಕವಾಗಿ ಮಾಡುವೆ’ ಎಂದು ಹೇಳಿದರು.

‘ಅಧಿಕಾರಿಗಳಿಗೆ ಚುರುಕು ಮುಟ್ಟಿಸುವ ಕೆಲಸ ಮಾಡಬೇಕಿದೆ. ಅದಕ್ಕಾಗಿ ತಿಂಗಳಲ್ಲಿ ಎರಡು ಮತ್ತು ನಾಲ್ಕನೇ ಸೋಮವಾರ ಜನತಾ ದರ್ಶನ ನಡೆಸಲಾಗುವುದು. ಅಭಿವೃದ್ದಿಗೆ ಕೋಟ್ಯಂತರ ಅನುದಾನವಿದೆ. ಕಾಮಗಾರಿಗಳನ್ನು ಶೀಘ್ರ ಆರಂಭಿಸಲಾಗುವುದು' ಎಂದು ತಿಳಿಸಿದರು.

‘ರಕ್ತದಾನಕ್ಕಿಂತ ಮಹಾದಾನ ಮತ್ತೊಂದಿಲ್ಲ. ದೇವರು ಜೀವ ನೀಡಿದರೆ, ನಾವು ರಕ್ತದಾನದಿಂದ ಕೆಲ ಜೀವಗಳನ್ನು ಉಳಿಸುವುದು ಮಹಾಕಾರ್ಯ ಮಾಡಬಹುದು. ಜನ್ಮದಿನದಂದು ರಕ್ತದಾನ ಮಾಡುವ ಮೂಲಕ ನನ್ನ ಮೇಲೆ ನಿಮ್ಮ ಋಣ ಹೊರೆಸಿದ್ದೀರಿ. ಅದನ್ನು ತೀರಿಸಲು ಶ್ರಮಿಸುವೆ’ ಎಂದು ಭರವಸೆ ನೀಡಿದರು.

ಜಿಲ್ಲಾ ಪಂಚಾಯಿತಿ ಸದಸ್ಯ ಪ್ರಕಾಶ್, ತಾಲ್ಲೂಕು ಪಂಚಾಯಿತಿ ಸದಸ್ಯ ಮೋಹನ್, ಮುಖಂಡರಾದ ಬಾಲಕೃಷ್ಣ, ಮರಳಕುಂಟೆ ಕೃಷ್ಣಮೂರ್ತಿ, ನಾರಾಯಣಸ್ವಾಮಿ, ಸುಬ್ಬಾರೆಡ್ಡಿ, ರಿಯಾಜ್, ಗಂಗಾಧರಪ್ಪ, ಗುರುಶಂಕರಪ್ಪ, ಪೆದ್ದರೆಡ್ಡಿ ಲಕ್ಷ್ಮೀನಾರಾಯಣಪ್ಪ, ಮಧು, ಈಶ್ವರ್ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !