ನಿಸ್ವಾರ್ಥ ರಕ್ತದಾನಿಗಳೇ ಶ್ರೇಷ್ಠ: ನ್ಯಾಯಾಧೀಶ ಜಿ.ಬಸವರಾಜ

7
ರಕ್ತದಾನ ಶಿಬಿರ

ನಿಸ್ವಾರ್ಥ ರಕ್ತದಾನಿಗಳೇ ಶ್ರೇಷ್ಠ: ನ್ಯಾಯಾಧೀಶ ಜಿ.ಬಸವರಾಜ

Published:
Updated:
Deccan Herald

ಚಾಮರಾಜನಗರ: ಸಮಾಜಕ್ಕೆ ವಿನಿಯೋಗವಾಗಬೇಕಿದ್ದ ಹಣವನ್ನು ಲೂಟಿ ಮಾಡಿ ಸಂಪತ್ತು ಮಾಡಿಕೊಂಡವರ ನಡುವೆ ನಿಸ್ವಾರ್ಥದಿಂದ ರಕ್ತದಾನ ಮಾಡುವವರೇ ಶ್ರೇಷ್ಠರಾಗಿ ಕಾಣುತ್ತಾರೆ ಎಂದು ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್‌ ನ್ಯಾಯಾಧೀಶ ಜಿ.ಬಸವರಾಜ ಅವರು ಗುರುವಾರ ಪ್ರತಿಪಾದಿಸಿದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ, ವೈದ್ಯಕೀಯ ವಿಜ್ಞಾನ ಸಂಸ್ಥೆ, ಭಾರತೀಯ ರೆಡ್‌ ಕ್ರಾಸ್‌ ಸೊಸೈಟಿ ಜಂಟಿಯಾಗಿ ನ್ಯಾಯಾಲಯದ ಆವರಣದಲ್ಲಿ ಹಮ್ಮಿಕೊಂಡಿದ್ದ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಸರ್ಕಾರಿ ಅಧಿಕಾರಿಗಳ ಬಳಿ ನೂರಾರು ಕೋಟಿ ಮೊತ್ತದ ಅಕ್ರಮ ಸಂಪತ್ತು ಸಿಕ್ಕಿರುವ ಬಗ್ಗೆ ಮಾಧ್ಯಮಗಳಲ್ಲಿ  ಪ್ರತಿದಿನ ನೋಡುತ್ತಿದ್ದೇವೆ. ನ್ಯಾಯಾಲಯಗಳಲ್ಲಿ ಅಂತಹ ಪ್ರಕರಣಗಳೂ ನಡೆಯುತ್ತಿವೆ. ಸಮಾಜದಲ್ಲಿ ವಿನಿಯೋಗಿಸಬೇಕಾದ ಹಣವನ್ನು ದುರಾಸೆಯಿಂದ ಲೂಟಿ ಮಾಡಿ ಒಬ್ಬೊಬ್ಬರೇ ಇಟ್ಟುಕೊಂಡಿದ್ದಾರೆ’ ಎಂದು ಹೇಳಿದರು.

ಆರೋಗ್ಯವೇ ಸಂಪತ್ತು ಎಂಬುದನ್ನು ಎಲ್ಲರೂ ತಿಳಿದುಕೊಳ್ಳಬೇಕು. ಎಷ್ಟೇ ಆಸ್ತಿ ಇದ್ದರೂ ಆರೋಗ್ಯ ಸರಿ ಇಲ್ಲದಿದ್ದರೆ ಅದು ಉಪಯೋಗಕ್ಕೆ ಬರುವುದಿಲ್ಲ. ಆರೋಗ್ಯದಿಂದ ಇರುವ ಯಾರೇ ಆದರೂ ರಕ್ತದಾನ ಮಾಡಬಹುದು. ಅದಕ್ಕೆ ಉದಾರವಾದ ಮನಸ್ಸು ಇರಬೇಕಷ್ಟೆ ಎಂದರು.

ಕೋಶಗಳನ್ನು ಪ್ರತ್ಯೇಕಿಸುವ ಘಟಕ: ಸರ್ಕಾರಿ ಜಿಲ್ಲಾಸ್ಪತ್ರೆಯ ಮುಖ್ಯ ಶಸ್ತ್ರಚಿಕಿತ್ಸಕ ಡಾ. ರಘುರಾಮ್‌ ಮಾತನಾಡಿ, ‘ವೈದ್ಯಕೀಯ ವಲಯದಲ್ಲಿ ರಕ್ತವನ್ನು ದೇಹದ ಅಂಗ ಎಂದೇ ಗುರುತಿಸಲಾಗುತ್ತದೆ. ನಮ್ಮಲ್ಲಿ ಈಗ ಎಲ್ಲ ರೀತಿಯ ಸಿಬ್ಬಂದಿ, ತಜ್ಞರು ಇದ್ದಾರೆ. ಆದರೆ, ರಕ್ತಕ್ಕೆ ಕೊರತೆ ಇದೆ’ ಎಂದು ಹೇಳಿದರು.

‘ತುರ್ತು ಸಂದರ್ಭದಲ್ಲಿ ರೋಗಿಗಳಿಗೆ ಅಗತ್ಯವಾಗಿ ರಕ್ತ ಬೇಕಾದಾಗ ಆಸ್ಪತ್ರೆಯಲ್ಲಿ ಅದು ಲಭ್ಯವಿರಬೇಕು ಎಂದು ರೋಗಿಗಳ ಸಂಬಂಧಿಕರು ಬಯಸುತ್ತಾರೆ. ಆದರೆ, ರಕ್ತವನ್ನು ಇನ್ನೊಬ್ಬರು ಕೊಟ್ಟರೆ ಮಾತ್ರ ಅದು ಲಭ್ಯವಾಗುತ್ತದೆ ಎಂಬುದನ್ನು ನಾವು ಜನರಿಗೆ ತಿಳಿವಳಿಕೆ ಹೇಳುವ ಕೆಲಸ ಆಗಬೇಕು. ಈ ವಿಚಾರದಲ್ಲಿ ವೈದ್ಯರು ಮಧ್ಯವರ್ತಿಗಳಷ್ಟೇ’ ಎಂದು ಅವರು ಹೇಳಿದರು.

ಜಿಲ್ಲಾಸ್ಪತ್ರೆಯ ರಕ್ತನಿಧಿ ಕೇಂದ್ರಕ್ಕೆ ರಕ್ತದ ಕಣ, ಕೋಶಗಳನ್ನು ಪ್ರತ್ಯೇಕಿಸುವ ಘಟಕ ಮಂಜೂರಾಗಿದ್ದು, ಪರವಾನಗಿ ಸಿಕ್ಕಿದೆ. ಶೀಘ್ರದಲ್ಲಿ ಘಟಕ ಸ್ಥಾಪ‍ನೆಯಾಗಲಿದೆ ಎಂದರು.

ಶಿಬಿರದಲ್ಲಿ 23 ಯೂನಿಟ್‌ ರಕ್ತ ಸಂಗ್ರಹವಾಗಿದೆ.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಿ.ಜಿ.ವಿಶಾಲಾಕ್ಷಿ, ಸಿವಿಲ್‌ ನ್ಯಾಯಾಧೀಶರಾದ ವಿ.ದೀಪಾ, ಉಮೇಶ್‌ ಎಂ.ಪಿ, ವಕೀಲರ ಸಂಘದ ಅಧ್ಯಕ್ಷ ಉಮ್ಮತ್ತೂರು ಇಂದುಶೇಖರ್‌, ಕಾರ್ಯದರ್ಶಿ ಅರುಣ್‌ ಕುಮಾರ್‌, ವೈದ್ಯ ಡಾ. ಮಹೇಶ್‌, ಬಾಲನ್ಯಾಯ ಮಂಡಳಿ ಸದಸ್ಯ ಟಿ.ಜೆ. ಸುರೇಶ್‌, ರೆಡ್‌ ಕ್ರಾಸ್‌ ಸಂಸ್ಥೆಯ ಸುರೇಶ್‌ ಇದ್ದರು.

ಆರೋಗ್ಯಕ್ಕೆ ಹಾನಿ ಇಲ್ಲ: ರಮೇಶ್‌

‘ರಕ್ತದಾನದ ಬಗ್ಗೆ ಜನರಲ್ಲಿ ಭಯವಿದೆ. ಆದರೆ, ಇದರಿಂದ ನಮ್ಮ ಆರೋಗ್ಯಕ್ಕೆ ಯಾವುದೇ ಹಾನಿ ಇಲ್ಲ. ನಾನು 21ನೇ ವಯಸ್ಸಿನಿಂದ ಪ್ರತಿ ಆರು ತಿಂಗಳಿಗೊಮ್ಮೆ ರಕ್ತದಾನ ಮಾಡುತ್ತಿದ್ದೇನೆ. ನನ್ನ ಆರೋಗ್ಯ ಉತ್ತಮವಾಗಿದೆ’ ಎಂದು ಹಿರಿಯ ಸಿವಿಲ್‌ ನ್ಯಾಯಾಧೀಶ ಎಂ.ರಮೇಶ್‌ ಹೇಳಿದರು.

ಪರಿಸ್ಥಿತಿ ಸುಧಾರಣೆ: ಡಾ.ಸುಜಾತಾ

ಚಾಮರಾಜನಗರದಲ್ಲಿ ಐದು ವರ್ಷಗಳ ಹಿಂದೆ ರಕ್ತನಿಧಿ ಆರಂಭವಾದಾಗ ವರ್ಷಕ್ಕೆ 100 ಯೂನಿಟ್‌ ರಕ್ತಕ್ಕೆ ಬೇಡಿಕೆ ಇತ್ತು. ನಂತರ ಅದು 500ಕ್ಕೆ ಏರಿತು. ಈಗ ವರ್ಷಕ್ಕೆ 2,800 ಯೂನಿಟ್‌ಗಳಿಗೆ ಬೇಡಿಕೆ ಇದೆ ಎಂದು ರಕ್ತನಿಧಿ ಕೇಂದ್ರದ ವೈದ್ಯೆ ಡಾ.ಸುಜಾತಾ ಹೇಳಿದರು.

‘ಮೊದಲು ಹೆಚ್ಚು ರಕ್ತ ಸಂಗ್ರಹವಾಗುತ್ತಿರಲಿಲ್ಲ. ಒಂದು ವರ್ಷದಿಂದೀಚೆಗೆ ಪರಿಸ್ಥಿತಿ ಸುಧಾರಿಸಿದೆ. ಅಗತ್ಯಬಿದ್ದರೆ ಮೈಸೂರಿನಿಂದ ರಕ್ತ ತರಿಸಿಕೊಳ್ಳುತ್ತೇವೆ’ ಎಂದರು.

ಹಾಳಾಗುವುದಿಲ್ಲ: ರಕ್ತದಲ್ಲಿರುವ ಪ್ಲೇಟ್‌ಲೆಟ್‌, ಪ್ಲಾಸ್ಮಾ, ರಕ್ತದ ಕಣಗಳನ್ನು ವಿಂಗಡಿಸಲು ಸಾಧ್ಯವಿರುವುದರಿಂದ ಸಂಗ್ರಹವಾಗಿರುವ ರಕ್ತ ಹಾಳಾಗುವುದಿಲ್ಲ. ಪ್ಲೇಟ್‌ಲೆಟ್‌ಗಳನ್ನು ಗರಿಷ್ಠ 5 ದಿನಗಳವರೆಗೆ ಇಡಬಹುದು, ಪ್ಲಾಸ್ಮಾಗಳನ್ನು ಒಂದರಿಂದ ಐದು ವರ್ಷಗಳವವರೆಗೆ ಕಾಪಿಡಬಹುದು ಎಂದು ವಿವರಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !