ಗುರುವಾರ , ನವೆಂಬರ್ 14, 2019
19 °C

ರಕ್ತನಿಧಿ ಕೇಂದ್ರದಲ್ಲಿ ರಕ್ತ ವಿದಳನ ಘಟಕ ಉದ್ಘಾಟನೆ

Published:
Updated:
Prajavani

ಚಾಮರಾಜನಗರ: ‘ರಕ್ತಸ್ರಾವವಾದ ರೋಗಿಗಳನ್ನು ಉಳಿಸಲು ರಕ್ತವಿದಳನ ಘಟಕ ಹೆಚ್ಚು ಅನುಕೂಲವಾಗಲಿದೆ’ ಎಂದು ಜಿಲ್ಲಾಸ್ಪತ್ರೆಯ ಮುಖ್ಯ ಸರ್ಜನ್‌ ಡಾ. ರಘುರಾಂ ಸರ್ವೇಗಾರ್‌ ಅಭಿಪ್ರಾಯಪಟ್ಟರು.

ನಗರದ ಜಿಲ್ಲಾ ಸಾರ್ವಜನಿಕ ಆಸ್ಪತ್ರೆಯ ರಕ್ತನಿಧಿ ಕೇಂದ್ರದಲ್ಲಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಭೋಧನಾ ಆಸ್ಪತ್ರೆ, ರಕ್ತನಿಧಿ ವಿಭಾಗ ಹಾಗೂ ಭಾರತೀಯ ರೆಡ್‌ಕ್ರಾಸ್‌ ಸೊಸೈಟಿಯಿಂದ ಶುಕ್ರವಾರ ನಡೆದ ರಕ್ತದಾನಿಗಳ ದಿನಾಚರಣೆ ಹಾಗೂ ರಕ್ತ ವಿದಳನ ಘಟಕ (ಬಿಸಿಎಸ್‌ಯು–ಬ್ಲಡ್‌ ಕಾಂಪೊನೆಂಟ್ಸ್‌ ಸಪರೇಷನ್‌ ಯುನಿಟ್)  ಉದ್ಘಾಟನೆ ಕಾರ್ಯಕ್ರಮದಲ್ಲಿ ಅವರು ಮಾತಾಡಿದರು.

‘ರಕ್ತ ವಿದಳನ ಘಟಕ ಆರಂಭಕ್ಕೆ ಬೇಕಾದಂತಹ ಅಗತ್ಯ ಮೂಲಸೌಕರ್ಯ ಸೇರಿದಂತೆ ವಿವಿಧ ಮಾನದಂಡಗಳನ್ನು ಜಿಲ್ಲಾಸ್ಪತ್ರೆ ಪಾಲಿಸಿದೆ. ಹೀಗಾಗಿ ಘಟಕ ಆರಂಭಕ್ಕೆ ಅನುಮತಿ ಸಿಕ್ಕಿದೆ’ ಎಂದರು.

‘ಜಿಲ್ಲೆಯಲ್ಲಿ ರಕ್ತನಿಧಿ ಕೇಂದ್ರ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಇದಕ್ಕೆ ಸಾರ್ವಜನಿಕರ ಸಹಕಾರವೂ ಬಹಳ ಮುಖ್ಯ. ಅಪಘಾತ ಸಂಭವಿಸಿದಾಗ ರಕ್ತಸ್ರಾವವಾದಾಗ ರಕ್ತದ ಕೊರತೆ ಕಂಡುಬರುತ್ತದೆ. ಅಂತಹ ರೋಗಿಯನ್ನು ಉಳಿಸಲು ರಕ್ತದ ಅವಶ್ಯಕತೆ ಇರುತ್ತದೆ. ರಕ್ತದಾನಿಗಳ ನೆರವಿನಿಂದ ಮಾತ್ರ ರೋಗಿಗಳಿಗೆ ರಕ್ತ ನೀಡಲು ಸಾಧ್ಯವಾಗುತ್ತದೆ’ ಎಂದರು.

ಆರೋಗ್ಯ ವೃದ್ಧಿ: ‘ರಕ್ತದಾನ ಮಾಡುವುದರಿಂದ ಮನುಷ್ಯನ ಆರೋಗ್ಯ ವೃದ್ಧಿಯಾಗುವ ಜೊತೆಗೆ ರಕ್ತ ಪರಿಶುದ್ಧತೆಯಿಂದ ಕೂಡಿರುತ್ತದೆ. ಕಾಲೇಜು ವಿದ್ಯಾರ್ಥಿಗಳು ರಕ್ತದಾನ ಪ್ರಕ್ರಿಯೆಯಲ್ಲಿ ಹೆಚ್ಚು ತೊಡಗಬೇಕು. ಆರೋಗ್ಯ ಕಾಪಾಡಿಕೊಳ್ಳುವ ಜೊತೆಗೆ ಉಳಿಸಿಕೊಳ್ಳಲು ಸಹಾಯ ಮಾಡಿದಂತೆ ಆಗುತ್ತದೆ’ ಎಂದರು.

ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಬೋಧನಾ ಅಸ್ಪತ್ರೆಯ ಡೀನ್ ಡಾ.ದೇವಕಿ ಮಾತನಾಡಿ, ‘ಜಿಲ್ಲೆಯಲ್ಲಿ ವೈದ್ಯಕೀಯ ಕಾಲೇಜು ಪ್ರಾರಾಂಭವಾದ ಬಳಿಕ ಜಿಲ್ಲಾಸ್ಪತ್ರೆಯಲ್ಲಿ ಎಲ್ಲ ಬಗೆಯ ರೋಗಗಳಿಗೆ ಚಿಕಿತ್ಸೆಯನ್ನು ನೀಡಲಾಗುತ್ತಿದೆ. ಇತ್ತೀ ಚಿನ ದಿನಗಳಲ್ಲಿ ಜಿಲ್ಲಾಸ್ಪತ್ರೆಗೆ ರೋಗಿಗಳ ಸಂಖ್ಯೆ ಹೆಚ್ಚಾಗಿದ್ದು, ರಕ್ತ ನೀಡುವ ದಾನಿಗಳು ಹೆಚ್ಚಾಗಬೇಕು. ರಕ್ತವನ್ನು ತಯಾರಿಸಲು ಸಾಧ್ಯವಿಲ್ಲ’ ಎಂದರು.

ರಕ್ತವನ್ನು ಮನುಷ್ಯನಿಂದಲೇ ಪಡೆಯಬೇಕು. ನೂತನವಾಗಿ ರಕ್ತವಿದಳನ ಘಟಕ ಕಾರ್ಯಾರಂಭದಿಂದ ಜಿಲ್ಲೆಗೆ ಬಹಳಷ್ಟು ಅನುಕೂಲವಾಗಲಿದೆ. ಇದರ ಅವಶ್ಯಕತೆಯೂ ಇದೆ. ಇದರೊಂದಿಗೆ ರಕ್ತದಾನಿಗಳೂ ಹೆಚ್ಚಾಗಬೇಕು ಎಂದರು.

ಸನ್ಮಾನ: ರಕ್ತದಾನಿಗಳ ದಿನಾಚರಣೆ ಕಾರ್ಯಕ್ರಮದಲ್ಲಿ ಅತಿ ಹೆಚ್ಚು ರಕ್ತ ದಾನ ಮಾಡಿದ ಶಿವಪ್ರಸಾದ್ ಕೊಳ್ಳೇಗಾಲ (28 ಬಾರಿ) ಶಿವಕುಮಾರ್ ಕೊಳ್ಳೇಗಾಲ (58 ಬಾರಿ) ಮೆಡಿಕಲ್ ವಿದ್ಯಾರ್ಥಿ ಮಂಥನ್ (6 ಬಾರಿ) ಇವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ರೆಡ್‌ಕ್ರಾಸ್ ಸಂಸ್ಥೆಯ ಕಾರ್ಯದರ್ಶಿ ಡಾ.ಮಹೇಶ್, ಖಜಾಂಚಿ ಡಾ.ಗಿರೀಶ್, ರಕ್ತನಿಧಿ ಕೇಂದ್ರದ ಅಧಿಕಾರಿ ಡಾ.ಸುಜಾತ, ಡಾ.ವಾಣಿ ಇದ್ದರು. 

ಘಟಕದಿಂದ ಅನುಕೂಲಗಳು

ರಕ್ತದಲ್ಲಿ ನಾಲ್ಕು ಘಟಕಗಳಿರುತ್ತವೆ (ಕಾಂಪೊನೆಂಟ್‌). ಕೆಂಪು ರಕ್ತಕಣ, ಬಿಳಿ ರಕ್ತಕಣ, ಪ್ಲಾಸ್ಮಾ ಮತ್ತು ಪ್ಲೇಟ್‌ಲೆಟ್‌. ದಾನಿಗಳಿಂದ ಸಂಗ್ರಹಿಸುವ ರಕ್ತದಲ್ಲಿರುವ ಈ ನಾಲ್ಕು ಅಂಶಗಳನ್ನು ಪ್ರತ್ಯೇಕಿಸುವ ಘಟಕವೇ ರಕ್ತ ವಿದಳನ ಘಟಕ.

ಚಿಕಿತ್ಸೆ ಪಡೆಯುತ್ತಿರುವ ರೋಗಿಗೆ ರಕ್ತದ ಯಾವ ಅಂಶ ಅಗತ್ಯವಿದೋ ಅದನ್ನು ಮಾತ್ರ ನೀಡಲು ಸಾಧ್ಯ. ಉದಾಹರಣೆ ರೋಗಿಯೊಬ್ಬರಿಗೆ ಪ್ಲೇಟ್‌ಲೆಟ್‌ನ ಕೊರತೆ ಇರುತ್ತದೆ. ಆಗ, ಆ ರೋಗಿಗೆ ಇಡೀ ರಕ್ತವನ್ನೇ ನೀಡುವ ಅಗತ್ಯವಿಲ್ಲ. ಪ್ಲೇಟ್‌ಲೆಟ್‌ ಮಾತ್ರ ಕೊಟ್ಟರೆ ಸಾಕು. ಅದರಂತೆ ಕೆಂಪು ರಕ್ತಕಣ ಕೊರತೆ ಇರುವರಿಗೆ, ಪ್ಲಾಸ್ಮಾ ಬೇಕಾದವರಿಗೆ ಅವುಗಳನ್ನೇ ಮಾತ್ರ ನೀಡಬಹುದು. ಇದರಿಂದ ರೋಗಿಗೆ ಬೇರೆ ರೀತಿಯ ಸೋಂಕು ತಗಲುವುದನ್ನು ತಡೆಗಟ್ಟಬಹುದು. 

ರಕ್ತ ಕಣಗಳ ಸಂಗ್ರಹ: ಒಂದು ಯುನಿಟ್‌ ರಕ್ತದಿಂದ ನಾಲ್ಕು ರೋಗಿಗಳಿಗೆ ಅನುಕೂಲವಾಗುತ್ತದೆ. ರಕ್ತದಿಂದ ಗರಿಷ್ಠ ಪ್ರಯೋಜನ ಪಡೆಯಬಹುದು. ಉದಾಹರಣೆಗೆ ಪ್ಲೇಟ್‌ಲೆಟ್‌ 5 ದಿನ ಉಳಿಯುತ್ತದೆ. ಕೆಂಪು ರಕ್ತಕಣ ಮತ್ತು ಬಿಳಿ ರಕ್ತಕಣಗಳನ್ನು 35 ದಿನಗಳವರೆಗೆ ಹಾಗೂ ಪ್ಲಾಸ್ಮಾವನ್ನು ಒಂದು ವರ್ಷದವರೆಗೂ ಕೆಡದಂತೆ ಇಡಬಹುದು ಎನ್ನುತ್ತಾರೆ ವೈದ್ಯರು.

ಪ್ರತಿಕ್ರಿಯಿಸಿ (+)