ಶುಕ್ರವಾರ, ನವೆಂಬರ್ 22, 2019
25 °C
ನಮ್ಮ ಮೆಟ್ರೊ: ಪ್ರಯಾಣದ ಅವಧಿಗಿಂತಲೂ ಸರದಿಯಲ್ಲಿ ಕಾಯುವ ಸಮಯವೇ ಹೆಚ್ಚು!

ಹೆಚ್ಚದ ಎಎಫ್‌ಸಿ ಗೇಟ್: ಪರದಾಟ

Published:
Updated:
Prajavani

ಬೆಂಗಳೂರು: ನಿಲ್ದಾಣವೊಂದರಲ್ಲಿ ನಿತ್ಯ ಸಂಚರಿಸುವ ಪ್ರಯಾಣಿಕರ ಸಂಖ್ಯೆ ಆಧರಿಸಿ, ಎಎಫ್‌ಸಿ (ಸ್ವಯಂಚಾಲಿತ ಶುಲ್ಕ ಸಂಗ್ರಹ) ಗೇಟ್‌ಗಳನ್ನು ತೆರೆಯಲಾಗಿದೆ ಎಂದು ಬಿಎಂಆರ್‌ಸಿಎಲ್‌ ಹೇಳುತ್ತದೆ. ಆದರೆ, ಎಲ್ಲ ನಿಲ್ದಾಣಗಳಲ್ಲಿ ಪ್ರಯಾಣಿಕರ ದಟ್ಟಣೆ ಹೆಚ್ಚುತ್ತಿದ್ದು, ಅದಕ್ಕೆ ತಕ್ಕಂತೆ ಈ ಗೇಟ್‌ಗಳ ಸಂಖ್ಯೆ ಹೆಚ್ಚಿಸಿಲ್ಲ ಎಂದು ಪ್ರಯಾಣಿಕರು ದೂರಿದ್ದಾರೆ. 

‘ಕೆಲವು ನಿಲ್ದಾಣಗಳಲ್ಲಿ ಎರಡು–ಮೂರು ಗೇಟ್‌ಗಳು ಇದ್ದರೆ, ಮತ್ತೆ ಕೆಲವು ನಿಲ್ದಾಣಗಳಲ್ಲಿ ಆರರಿಂದ ಎಂಟು ಗೇಟ್‌ಗಳಿವೆ. ಕಡಿಮೆ ಗೇಟ್‌ಗಳಿರುವ ನಿಲ್ದಾಣಗಳಲ್ಲಿ ಅಕ್ಕ–ಪಕ್ಕ ಜಾಗವಿದ್ದರೂ, ಹೆಚ್ಚುವರಿ ಗೇಟ್‌ಗಳನ್ನು ನಿರ್ಮಾಣ ಮಾಡಿಲ್ಲ. ಅಲ್ಲದೆ, ಕೆಲವು ನಿಲ್ದಾಣಗಳಲ್ಲಿ ಕೆಲವು ಗೇಟ್‌ಗಳನ್ನು ಸ್ಥಗಿತ ಗೊಳಿಸಲಾಗಿರುತ್ತದೆ’ ಎಂದು ಜಾಲಹಳ್ಳಿಯ ಸೋನಂ ಶಾ ದೂರುತ್ತಾರೆ. 

‘ದಾಸರಹಳ್ಳಿ ನಿಲ್ದಾಣದ ಎಎಫ್‌ಸಿ ಗೇಟ್‌ಗಳ ಪಕ್ಕದಲ್ಲಿ ಹೆಚ್ಚು ಜಾಗವಿದೆ. ಅಲ್ಲಿ, ಗಾಜಿನ ಬ್ಯಾರಿಯರ್‌ ಹಾಕಿದ್ದಾರೆ. ಅದರ ಬದಲು ಹೆಚ್ಚುವರಿಯಾಗಿ ಎರಡು ಎಎಫ್‌ಸಿ ಗೇಟ್‌ಗಳನ್ನು ಮಾಡಬಹುದು. ಬೆಳಿಗ್ಗೆ 8.15ರ ವೇಳೆಗೆ ತುಂಬಾ ಜನರಿರುತ್ತಾರೆ. ಕಚೇರಿ ಸಮಯ ಹತ್ತಿರವಾದಂತೆ ಈ ನಿಲ್ದಾಣಗಳಲ್ಲಿ ಕಾಲಿಡಲು ಜಾಗವಿರುವುದಿಲ್ಲ. 10ರಿಂದ 15 ನಿಮಿಷ ಕಾಯಬೇಕು. ಸಂಚಾರ ಅವಧಿಗಿಂತ, ಸರದಿಯಲ್ಲಿ ಕಾಯುವ ಸಮಯವೇ ಹೆಚ್ಚಾಗುತ್ತದೆ. ಆದರೆ, ಪ್ರಯಾಣಿಕರಿಗೆ ಆಗುವ ತೊಂದರೆಯ ಬಗ್ಗೆ ನಿಗಮದ ಅಧಿಕಾರಿಗಳು ಯೋಚಿಸುವುದೇ ಇಲ್ಲ. ಸರದಿಯಲ್ಲಿ ನಿಲ್ಲಲಿ ಬಿಡಿ ಎಂಬ ಧೋರಣೆ ಅವರದ್ದಾಗಿದೆ’ ಎಂದು ಅವರು ಅಸಮಾಧಾನ
ವ್ಯಕ್ತಪಡಿಸುತ್ತಾರೆ.

ಜಯನಗರ, ಸೆಂಟ್ರಲ್‌ ಕಾಲೇಜು, ಮಹಾಕವಿ ಕುವೆಂಪು, ಎಂ.ಜಿ. ರಸ್ತೆ ನಿಲ್ದಾಣಗಳಲ್ಲಿಯೂ ಇದೇ ಸ್ಥಿತಿ ಇದೆ. ಬೆಳಿಗ್ಗೆ ಮತ್ತು ಸಂಜೆ ಪ್ರಯಾಣಿಕರ ನೂಕು ನುಗ್ಗಲು ಕಂಡುಬರುತ್ತದೆ.

‘ಎಂ.ಜಿ. ರಸ್ತೆ ನಿಲ್ದಾಣದಲ್ಲಿ ಐದಾರು ಗೇಟ್‌ಗಳಿವೆ. ಇವುಗಳಲ್ಲಿ ಕೆಲವನ್ನು ಮುಚ್ಚಲಾಗಿರುತ್ತದೆ. ದಟ್ಟಣೆಯಸಂದರ್ಭದಲ್ಲಿಯೂ ತೆರೆಯುವುದಿಲ್ಲ’ ಎಂಬ ದೂರು ಚಂದನ್‌ ಅವರದು.

ಹೆಚ್ಚಾಗದ ಲೋಹಶೋಧಕ ಯಂತ್ರ: ಪ್ರಯಾಣಿಕರ ಹೆಚ್ಚಳಕ್ಕೆ ತಕ್ಕಂತೆ ಸೌಲಭ್ಯಗಳನ್ನು ಕಲ್ಪಿಸಲು ನಿಗಮ ಮುಂದಾಗಿಲ್ಲ ಎಂಬ ದೂರು ಪ್ರಯಾಣಿಕರದ್ದು. ಪ್ರವೇಶ ದ್ವಾರಗಳಲ್ಲಿ ಒಂದೇ ಲೋಹಶೋಧಕ ಯಂತ್ರಗಳನ್ನು ಇಡಲಾಗಿದೆ. ನಿಲ್ದಾಣದಿಂದ 500–600 ಮೀಟರ್‌ ದೂರದವರೆಗೆ ಇದಕ್ಕಾಗಿ ಸರದಿಯಲ್ಲಿ ನಿಲ್ಲುವ ಪರಿಸ್ಥಿತಿ ಇದೆ.

ಎಂ.ಜಿ. ರಸ್ತೆ, ಮೆಜೆಸ್ಟಿಕ್‌, ಸೆಂಟ್ರಲ್‌ ಕಾಲೇಜು, ಜಯನಗರ, ಜಾಲಹಳ್ಳಿ ಸೇರಿದಂತೆ ಪ್ರಯಾಣಿಕರ ದಟ್ಟಣೆ ಹೆಚ್ಚಾಗಿರುವ ನಿಲ್ದಾಣಗಳಲ್ಲಿ ಲೋಹಶೋಧಕ ಯಂತ್ರಗಳ ಸಂಖ್ಯೆ ಹೆಚ್ಚಿಸಬೇಕು ಎಂದು ಪ್ರಯಾಣಿಕರು ಒತ್ತಾಯಿಸುತ್ತಾರೆ. 

ಮೆಟ್ರೊ ಪ್ರಯಾಣಿಕರು ಎದುರಿಸುತ್ತಿರುವ ಈ ಸಮಸ್ಯೆಯ ಬಗ್ಗೆ, ಪ್ರತಿಕ್ರಿಯೆ ಪಡೆಯಲು ನಿಗಮದ ವ್ಯವಸ್ಥಾಪಕ ನಿರ್ದೇಶಕ ಅಜಯ್‌ ಸೇಠ್‌ ಅವರನ್ನು ಸಂಪರ್ಕಿಸಲು ಪ್ರಯತ್ನಿಸಲಾಯಿತು. ಆದರೆ ಅವರು ಕರೆ ಸ್ವೀಕರಿಸಲಿಲ್ಲ.

ಕನಿಷ್ಠ ₹50 ಷರತ್ತಿಗೆ ವಿರೋಧ

‘ನನ್ನ ವಾಹನ ಇದ್ದುದು ಹೈಕೋರ್ಟ್‌ನಲ್ಲಿ. ಎಂ.ಜಿ. ರಸ್ತೆ ನಿಲ್ದಾಣದಿಂದ ಕಬ್ಬನ್‌ ಪಾರ್ಕ್‌ ನಿಲ್ದಾಣಕ್ಕೆ ಪ್ರಯಾಣಿಸಬೇಕಿತ್ತು. ನನ್ನ ಸ್ಮಾರ್ಟ್‌ಕಾರ್ಡ್‌ನಲ್ಲಿ ₹44 ಇತ್ತು. ಕನಿಷ್ಠ ₹50 ಬಾಕಿ ನಿಮ್ಮ ಕಾರ್ಡ್‌ನಲ್ಲಿ ಇರಬೇಕು. ಅದಕ್ಕಿಂತ ಕಡಿಮೆ ಮೊತ್ತ ಇದ್ದರೆ ನೀವು ಪ್ರಯಾಣಿಸುವಂತಿಲ್ಲ ಎಂದು ಎಂ.ಜಿ. ರಸ್ತೆ ನಿಲ್ದಾಣದ ಸಿಬ್ಬಂದಿ ಹೇಳಿದರು. ಇದು ಸರಿಯಲ್ಲ’ ಎಂದು ಅಶೋಕ್‌ ಲೋಬೊ ಅಸಮಾಧಾನ ವ್ಯಕ್ತಪಡಿಸುತ್ತಾರೆ. 

‘ಎಂ.ಜಿ. ರಸ್ತೆ ನಿಲ್ದಾಣದಿಂದ ಕಬ್ಬನ್‌ ಪಾರ್ಕ್‌ ನಿಲ್ದಾಣದವರೆಗಿನ ಟಿಕೆಟ್‌ ದರ ₹8 ಮಾತ್ರ. ನನ್ನ ಕಾರ್ಡ್‌ನಲ್ಲಿ ಇದಕ್ಕಿಂತ ನಾಲ್ಕು ಪಟ್ಟು ಹೆಚ್ಚು ದುಡ್ಡು ಇತ್ತು. ಸ್ಮಾರ್ಟ್‌ಕಾರ್ಡ್‌ನಲ್ಲಿ ಕನಿಷ್ಠ ₹50 ಇರಬೇಕು ಎಂಬ ನಿಯಮ ಜನವಿರೋಧಿಯಾದುದು. ಅಕ್ರಮ ವ್ಯಾಪಾರ ಅಭ್ಯಾಸ (ಐಟಿಪಿ) ಇದು. ಈ ಬಗ್ಗೆ ನಾನು ದೂರು ಕೂಡ ದಾಖಲಿಸಿದ್ದೇನೆ’ ಎಂದು ಅವರು ಹೇಳಿದರು. 

ಪ್ರತಿಕ್ರಿಯಿಸಿ (+)