ತ್ರಿಪಕ್ಷೀಯ ಮಾತುಕತೆ ವಿವರ ಸಲ್ಲಿಕೆ

7
ಸರ್ಕಾರದ ನಿಲುವಿಗೆ ಮೆಟ್ರೊ ನೌಕರರ ಸಂಘದ ಆಕ್ಷೇಪ

ತ್ರಿಪಕ್ಷೀಯ ಮಾತುಕತೆ ವಿವರ ಸಲ್ಲಿಕೆ

Published:
Updated:

ಬೆಂಗಳೂರು: ‘ಸರ್ಕಾರಿ ರಜೆ ದಿನಗಳಂದು ಮೆಟ್ರೊ ನೌಕರರಿಗೆ ಭತ್ಯೆ ನೀಡಲು, ಬಿಎಂಆರ್‌ಸಿಎಲ್ ಸಿಬ್ಬಂದಿ ಪರಿಷತ್ತು ರಚಿಸಲು, ರಿಯಾಯಿತಿ ದರದಲ್ಲಿ ನೌಕರರಿಗೆ ಊಟ ಪೂರೈಸಲು ಬೆಂಗಳೂರು ಮೆಟ್ರೊ ರೈಲು ನಿಗಮ ನಿಯಮಿತ (ಬಿಎಂಆರ್‌ಸಿಎಲ್) ಮತ್ತು ನೌಕರರ ಸಂಘವು ಒಪ್ಪಿಗೆ ನೀಡಿವೆ’ ಎಂದು ರಾಜ್ಯ ಸರ್ಕಾರ ಹೈಕೋರ್ಟ್‌ಗೆ ತಿಳಿಸಿದೆ.

ಮೆಟ್ರೊ ರೈಲ್ವೆ ನೌಕರರ ಸಂಘಕ್ಕೆ ಮಾನ್ಯತೆ ನೀಡುವುದೂ ಸೇರಿದಂತೆ ವಿವಿಧ ಬೇಡಿಕೆಗಳ ಸಂಬಂಧ ಸಂಘದ ಪ್ರತಿನಿಧಿಗಳು ಮತ್ತು ಮೆಟ್ರೊ ನಿಗಮದ ನಡುವೆ ಸರ್ಕಾರ ನಡೆಸಿರುವ ಸಭೆ ಹಾಗೂ ಸಭೆಯ ನಡಾವಳಿ ವಿವರಗಳನ್ನು ಹೆಚ್ಚುವರಿ ಅಡ್ವೊಕೇಟ್ ಜನರಲ್ ಎ.ಎಸ್.ಪೊನ್ನಣ್ಣ ಮಂಗಳವಾರ ನ್ಯಾಯಮೂರ್ತಿ ಎ.ಎಸ್.ಬೋಪಣ್ಣ ಅವರಿದ್ದ ಏಕಸದಸ್ಯ ನ್ಯಾಯಪೀಠಕ್ಕೆ ಸಲ್ಲಿಸಿದರು.

ವಿಚಾರಣೆ ವೇಳೆ ಪೊನ್ನಣ್ಣ, ‘ಹೈಕೋರ್ಟ್‌ ನಿರ್ದೇಶನದಂತೆ ಬಿಎಂಆರ್‌ಸಿಎಲ್ ನೌಕರರ ಸಂಘ ಹಾಗೂ ಮೆಟ್ರೊ ರೈಲು ನಿಗಮದ ನಡುವೆ ಉಂಟಾಗಿರುವ ಬಿಕ್ಕಟ್ಟು ಪರಿಹರಿಸಲು ತ್ರಿಪಕ್ಷೀಯ ಮಾತುಕತೆ ನಡೆಸಲಾಗಿದೆ’ ಎಂದರು.

‘ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯ ಭಾಸ್ಕರ್ ಅವರು, ಜೂನ್ 8ರಂದು ನೌಕರರ ಸಂಘದ ಪ್ರತಿನಿಧಿಗಳು ಹಾಗೂ ಮೆಟ್ರೊ ನಿಗಮದ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಚರ್ಚಿಸಿದ್ದಾರೆ. ನಂತರ ಜೂನ್ 15ರಂದು ಸರ್ಕಾರದ ಮುಖ್ಯ ಕಾರ್ಯದರ್ಶಿ ಕೆ.ರತ್ನಪ್ರಭಾ ಸಭೆ ನಡೆಸಿ ಚರ್ಚಿಸಿದ್ದಾರೆ’ ಎಂದು ವಿವರಿಸಿ ಎರಡೂ ಸಭೆಗಳ ನಡಾವಳಿಯನ್ನು ನ್ಯಾಯಪೀಠದ ಗಮನಕ್ಕೆ ತಂದರು.

ಸಂಘ, ನಿಗಮ ಒಪ್ಪಿರುವ ವಿಷಯಗಳು

* ಬೆಂಗಳೂರು ಮೆಟ್ರೊ ರೈಲು ನಿಗಮ ನಿಯಮಿತ ನೌಕರರ ಸಂಘಕ್ಕೆ ಮಾನ್ಯತೆ ನೀಡುವುದರ ಬಗ್ಗೆ ಕೋರ್ಟ್ ಆದೇಶ ಬರುವವರೆಗೂ ಕಾಯುವುದು.

* ವೇತನ ಶ್ರೇಣಿ ಪರಿಷ್ಕರಣೆ, ಮಕ್ಕಳಿಗೆ ಶಿಕ್ಷಣ ಭತ್ಯೆ ನೀಡುವುದು, ರಾಷ್ಟ್ರೀಯ ಪಿಂಚಣಿ ಯೋಜನೆ ಜಾರಿ ಕುರಿತು ಬಿಎಂಆರ್‌ಸಿಎಲ್ ಹಣಕಾಸು ಪರಿಸ್ಥಿತಿ ಆಧರಿಸಿ ಹಂತ ಹಂತವಾಗಿ ಪರಿಗಣಿಸುವುದು.

* ನೌಕರರ ಸಂಘದ ಬದಲು ಸದ್ಯಕ್ಕೆ ಬಿಎಂಆರ್‌ಸಿಎಲ್ ಸಿಬ್ಬಂದಿ ಪರಿಷತ್ತು ರಚಿಸಲು ಅಧಿಸೂಚನೆ ಪ್ರಕಟಿಸುವುದು.

* ನೌಕರರು ಮೆಟ್ರೊ ಆಡಳಿತ ಮಂಡಳಿ ಜೊತೆ ಸಹಕರಿಸುವ ಮೂಲಕ ಪರಿಷತ್ತಿನ ಸಭೆಯಲ್ಲಿ ತಮ್ಮ ಸಮಸ್ಯೆಗಳ ಬಗ್ಗೆ ಚರ್ಚಿಸಿ ಬಗೆಹರಿಸಿಕೊಳ್ಳುವುದು.

ಬೇಡಿಕೆ ಈಡೇರಿಕೆಗೆ ಚರ್ಚಿಸಿ ನಿರ್ಣಯ

‘ಮುಷ್ಕರ ಹಿಂಪಡೆಯಲು ನೌಕರರು ಸಮ್ಮತಿ ಸೂಚಿಸಿದ್ದಾರೆ’ ಎಂಬ ಪೊನ್ನಣ್ಣ ಅವರ ಹೇಳಿಕೆಗೆ ನೌಕರರ ಸಂಘದ ಪರ ವಕೀಲರು ಆಕ್ಷೇಪ ವ್ಯಕ್ತಪಡಿಸಿದರು.

‘ಮುಷ್ಕರ ಹಿಂಪಡೆಯುವುದಾಗಿ ಸಂಘವು ಹೇಳಿಲ್ಲ. ಹೀಗಾಗಿ ಸರ್ಕಾರ ಸಲ್ಲಿಸಿರುವ ನಡಾವಳಿಗೆ ನಮ್ಮ ಆಕ್ಷೇಪ ಸಲ್ಲಿಸಲಾಗುವುದು. ಅದಕ್ಕೆ ಕಾಲಾವಕಾಶ ಬೇಕು’ ಎಂದು ಕೋರಿದರು.

‘ನೌಕರರ ಸಂಘದ ಅನೇಕ ಬೇಡಿಕೆಗಳ ಈಡೇರಿಕೆಗೆ ಮೆಟ್ರೊ ನಿಗಮ ಒಪ್ಪಿಗೆ ನೀಡಿದೆ. ಈ ಕುರಿತು ಸಭೆಯಲ್ಲಿ ನಿರ್ಣಯವನ್ನೂ ಕೈಗೊಳ್ಳಲಾಗಿದೆ. ಇನ್ನೂ ಹಲವು ಬೇಡಿಕೆಗಳ ಈಡೇರಿಕೆ ಬಗ್ಗೆ ಹಂತ ಹಂತವಾಗಿ ಚರ್ಚಿಸಿ ನಿರ್ಣಯ ಕೈಗೊಳ್ಳಲಾಗುವುದು’ ಎಂದು ಪೊನ್ನಣ್ಣ ವಿವರಿಸಿದರು.

ಆಕ್ಷೇಪಕ್ಕೆ ಕಾಲಾವಕಾಶ ಕೋರಿಕೆ ಮಾನ್ಯ ಮಾಡಿದ ಎ.ಎಸ್.ಬೋಪಣ್ಣ, ಅರ್ಜಿ ವಿಚಾರಣೆ ಮುಂದೂಡಿದರು.

 

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !