ಬಿಎಂಟಿಸಿ ‘ಪಿಂಕ್‌ ಸಾರಥಿ’ ಸಿದ್ಧ

7

ಬಿಎಂಟಿಸಿ ‘ಪಿಂಕ್‌ ಸಾರಥಿ’ ಸಿದ್ಧ

Published:
Updated:
Prajavani

ಬೆಂಗಳೂರು: ಮಹಿಳಾ ಪ್ರಯಾಣಿಕರ ಸುರಕ್ಷತೆಗಾಗಿ ಅನುಷ್ಠಾನಕ್ಕೆ ತಂದ ‘ಪಿಂಕ್‌ ಸಾರಥಿ’ ಯೋಜನೆಯ ವಾಹನಗಳು ಬಿಎಂಟಿಸಿ ಘಟಕಕ್ಕೆ ಬಂದಿವೆ. 
‘ಆಧುನಿಕ ಮಾದರಿಯ 25 ಬೊಲೆರೊ ವಾಹನಗಳನ್ನು ಬಿಎಂಟಿಸಿ ಖರೀದಿಸಿದ್ದು ಗುಲಾಬಿ ಹಾಗೂ ಬಿಳಿಬಣ್ಣದಿಂದ ಸಿಂಗಾರಗೊಂಡಿವೆ. ಇನ್ನು ಒಂದು ವಾರದಲ್ಲಿ ಈ ವಾಹನಗಳು ರಸ್ತೆಗಿಳಿಯಲಿವೆ’ ಎಂದು ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕ ಎನ್‌.ವಿ.ಪ್ರಸಾದ್‌ ಮಾಹಿತಿ ನೀಡಿದರು. 

ಜಿಪಿಎಸ್‌ ಅಳವಡಿಕೆ

‘ಎಲ್ಲ ವಾಹನಗಳಿಗೆ ಜಿಪಿಎಸ್‌, ಧ್ವನಿವರ್ಧಕ ಅಳವಡಿಸಲಾಗುತ್ತಿದೆ. ಕೆಲವು ವಾಹನಗಳ ಸ್ಟಿಕ್ಕರಿಂಗ್‌ (ಗುಲಾಬಿ ಬಣ್ಣದ ಸ್ಟಿಕ್ಕರ್‌ ಅಳವಡಿಕೆ) ನಡೆಯುತ್ತಿದೆ. ನಾಲ್ಕು ಅಂಕಿಗಳ ಟೋಲ್‌ಫ್ರೀ ದೂರವಾಣಿ ಸಂಖ್ಯೆ ಸಿಗುವುದು ಬಾಕಿ ಇದೆ. ಅದಾದ ತಕ್ಷಣ ಪೊಲೀಸ್‌ ಇಲಾಖೆ ಜತೆ ಸಂಯೋಜಿಸಿಕೊಂಡು ಈ ವಾಹನಗಳನ್ನು ರಸ್ತೆಗೆ ಬಿಡಲಾಗುವುದು. ಮುಖ್ಯಮಂತ್ರಿ ಅವರ ಲಭ್ಯತೆಯ ಮೇಲೆ ಉದ್ಘಾಟನೆಯ ದಿನ ನಿಗದಿಪಡಿಸಲಾಗುವುದು’ ಎಂದು ಅವರು ಹೇಳಿದರು.

‘ನಿಗಮದಲ್ಲಿರುವ ನಿರ್ಭಯಾ ನಿಧಿಯಿಂದ ಈ ವಾಹನಗಳನ್ನು ಖರೀದಿಸಲಾಗಿದೆ. ನಮ್ಮಲ್ಲಿರುವ ಭದ್ರತಾ ವಿಭಾಗದ ಸಿಬ್ಬಂದಿಯೇ ಈ ವಾಹನಗಳಲ್ಲಿ ಕಾರ್ಯನಿರ್ವಹಿಸಲಿದ್ದಾರೆ. ನಿಗಮದ ಸಹಾಯವಾಣಿಗೆ ಬರುವ ಕರೆಗಳು, ಮತ್ತು ಹೊಸದಾಗಿ ನೀಡಲಾಗುವ ಶುಲ್ಕರಹಿತ ಸಂಖ್ಯೆಗೆ ಬರುವ ಕರೆಗಳಿಗೆ ಈ ಪಡೆ ಶೀಘ್ರ ಸ್ಪಂದಿಸಲಿದೆ’ ಎಂದು ಅವರು ತಿಳಿಸಿದರು. 

‘ಚಾಲಕ ನಿರ್ವಾಹಕರ ವರ್ತನೆ, ಚಾಲನಾ ಕ್ರಮ ಸೇರಿದಂತೆ ಪ್ರತಿ ಅಂಶವನ್ನೂ ಈ ತಂಡ ಗಮನಿಸಲಿದೆ. ಅಪಘಾತ/ ತೊಂದರೆ ಸಂಭವಿಸಿದಲ್ಲಿ ತಕ್ಷಣ ಸ್ಥಳಕ್ಕೆ ಧಾವಿಸಲು ಅನುಕೂಲವಾಗಲಿದೆ’ ಎಂದು ಅವರು ಹೇಳಿದರು. 

ದಟ್ಟಣೆ ಹೆಚ್ಚು ಇರುವ ಅವಧಿ, ರಾತ್ರಿ ಪ್ರಯಾಣದ ಮಾರ್ಗಗಳಲ್ಲಿ ಈ ತಂಡ ಪಾಳಿಯ ಪ್ರಕಾರ ಕಾರ್ಯನಿರ್ವಹಿಸಲಿದೆ ಎಂದು ಅವರು ಮಾಹಿತಿ ನೀಡಿದರು. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !