ದೇಹಕ್ಕೂ ಬೇಕು ಆತ್ಮವಿಶ್ವಾಸ

ಶುಕ್ರವಾರ, ಮಾರ್ಚ್ 22, 2019
24 °C
ಝೀರೋದಿಂದ ಪ್ಲಸ್‌ ಸೈಝಿನವರೆಗೆ...

ದೇಹಕ್ಕೂ ಬೇಕು ಆತ್ಮವಿಶ್ವಾಸ

Published:
Updated:

ಬಾಲಿವುಡ್‌ನ ‘ಪರಿಣೀತಾ’ (2005) ಸಿನಿಮಾ ನೋಡಿದವರಿಗೆ ನೆನಪಿರಬಹುದು; ಸಹಜ ಸೌಂದರ್ಯದೊಂದಿಗೆ ನಗುವನ್ನು ಚೆಲ್ಲುತ್ತ, ಪಳಗಿದ ಅಭಿಯನದ ಮೂಲಕ ಚಿತ್ರರಸಿಕರ ಮನಗೆದ್ದು, ಮನಗಳಲ್ಲಿ ನೆಲೆಯೂರಿದ ಸುಂದರಿ ವಿದ್ಯಾ ಬಾಲನ್‌. ಅದರ ನಂತರವೂ ‘ಕಹಾನಿ’, ‘ನೋ ಒನ್‌ ಕಿಲ್ಡ್‌ ಜೆಸ್ಸಿಕಾ’ ಮೊದಲಾದ ಸಿನಿಮಾಗಳಲ್ಲಿ ಹೆಸರು ಮಾಡಿದವರು. ಆದರೀಗ ದಪ್ಪ ದೇಹದಿಂದಾಗಿ ಅಭಿಮಾನಿಗಳಿಂದ ಮೂದಲಿಕೆಗೆ ಈಡಾಗಿದ್ದು ಸುಳ್ಳಲ್ಲ. ಅವರ ದಪ್ಪ ದೇಹಕ್ಕೆ ಕಾರಣಗಳು ಹಲವಿರಬಹುದು. ಝೀರೋ ಫಿಗರ್‌ ಸೌಂದರ್ಯದ ಪ್ರತೀಕ ಎಂದೇ ಪ್ರತಿಪಾದಿಸುವ ಸಿನಿಮಾ ರಂಗದಲ್ಲಿ ಇಂತಹ ಮೂದಲಿಕೆಗಳನ್ನು ಮೂಟೆ ಕಟ್ಟಿ ಬದಿಗಿಟ್ಟರು ವಿದ್ಯಾ. ಇತ್ತೀಚೆಗೆ ಸಂದರ್ಶನವೊಂದರಲ್ಲಿ ‘ದೇಹವಿಶ್ವಾಸ’(ಬಾಡಿ ಕಾನ್ಫಿಡೆನ್ಸ್‌) ದ ಬಗ್ಗೆ ಆತ್ಮವಿಶ್ವಾಸದಿಂದ ಮಾತನಾಡಿದರು. ದೇಹ ವಿಶ್ವಾಸವಿದ್ದರೆ ಟೀಕೆಗಳೆಲ್ಲ ಸಾಧನೆಯ ಹಾದಿಯಲ್ಲಿ ಲೆಕ್ಕಕ್ಕೆ ಕಾಣದು ಎಂಬ ಮಾತಿಗೆ ವಿದ್ಯಾ ಬಾಲನ್‌ ಉತ್ತಮ ಉದಾಹರಣೆಯಾಗಿ ಕಾಣುತ್ತಾರೆ. 

***

ಕಾಮಿಡಿಯನ್‌ ಭಾರತಿ ಸಿಂಗ್‌ ಅವರನ್ನು ನೆನಪಿಸಿಕೊಳ್ಳಿ. ಕಣ್ಣ ಮುಂದೆ ನಿಲ್ಲುವುದು ದಢೂತಿ ಯುವತಿಯಾದರೂ ಹಿಂದಿಯ ವಿದೂಷಕಿ ಎಂದೀಕೆ ಪ್ರಸಿದ್ಧಿ. ಬಾಲಿವುಡ್‌ ಪ್ರಶಸ್ತಿ ಸಮಾರಂಭವಿರಲಿ; ರಿಯಾಲಿಟಿ ಶೋಗಳಿರಲಿ. ವೇದಿಕೆಗೆ ಬಂದರೆ ಸಭಾಂಗಣದಲ್ಲಿದ್ದವರ ಹೊಟ್ಟೆ ಹುಣ್ಣಾಗುವಂತೆ ನಗಿಸುತ್ತಾರೆ. ಅವರಿಗೆ ತಮ್ಮ ದಪ್ಪ ದೇಹದ ಬಗ್ಗೆ ಕಿಂಚಿತ್ತೂ ಕೀಳರಿಮೆಯಿಲ್ಲ. ತನ್ನ ಪ್ರತಿಭೆಯನ್ನೇ ಬಂಡವಾಳವಾಗಿಟ್ಟುಕೊಂಡು ಸೆಲೆಬ್ರಿಟಿಗಳ ನಡುವಿನ ಸೆಲೆಬ್ರಿಟಿಯೆನಿಸಿದರು. ಇಲ್ಲಿ ಕೂಡ ಎದ್ದು ಕಾಣುವುದು ಅವರ ದೇಹವಿಶ್ವಾಸ. 

***

ಕನ್ನಡದ ಝೀ ವಾಹಿನಿಯ ‘ಬ್ರಹ್ಮಗಂಟು‘ ಧಾರಾವಾಹಿಯ ಹೀರೊಯಿನ್‌ ಗೀತಾ ಭಟ್‌ ಗೊತ್ತಲ್ಲ; ಗುಂಡಮ್ಮ ಎಂದೇ ಪ್ರಸಿದ್ಧಿ. ಬಾಲ್ಯದಲ್ಲಿ ಬಿದ್ದ ಪೆಟ್ಟಿಗೆ ಪಡೆದ ಚಿಕಿತ್ಸೆಯ ನಂತರ ಅವರ ದೇಹ ಊದಿಕೊಳ್ಳುತ್ತ ಸಾಗಿತು. ಅದು ಜೀವನದಲ್ಲಿ ಸಾಕಷ್ಟು ಅವಮಾನಗಳಿಗೆ ಎಡೆ ಮಾಡಿತು. ಬ್ರಹ್ಮಗಂಟು ಧಾರಾವಾಹಿಯಲ್ಲಿ ಅವಕಾಶ ಬಳಸಿಕೊಂಡು ಗೀತಾ ಇಂದು ಸೆಲೆಬ್ರೆಟಿಯಾಗಿದ್ದಾರೆ. ಈಗವರಲ್ಲಿ ತಾನು ದಪ್ಪವೆಂಬ ಕೀಳರಿಮೆ ಇಲ್ಲ. ತಮ್ಮ ದೇಹವಿಶ್ವಾಸದಿಂದಲೇ ಇಂದು ಅವರು ಧಾರಾವಾಹಿ ಪ್ರೇಮಿಗಳ ಮನಗೆಲ್ಲುತ್ತಿದ್ದಾರೆ. ಅಂಥ ದೇಹವನ್ನು ಬಾಗಿಸಿ, ಬಳುಕಿಸಿ ಡಾನ್ಸ್‌ ಮಾಡಿಯೂ ಸೈ ಎನಿಸಿಕೊಂಡಿದ್ದಾರೆ. ತಮ್ಮ ದೇಹದಾಕಾರವನ್ನು ಸಕಾರಾತ್ಮಕವಾಗಿ ತೆಗೆದುಕೊಂಡಿದ್ದಾರೆ. 

ಕೃಶಕಾಯದವರಿಗೆ ಹೋಲಿಸಿದರೆ ಸ್ಥೂಲಕಾಯದವರು ತಮ್ಮ ದೇಹದ ಬಗ್ಗೆ ಕೀಳರಿಮೆಯಿಂದ ಬಳಲುತ್ತಿರುತ್ತಾರೆ. ‘ದಪ್ಪವಾಗಿದ್ದೀಯಲ್ಲ’ ಎಂದು ಯಾರಾದರೂ ಹೇಳಿದರೂ ಸಾಕು, ಅದನ್ನು ಇಳಿಸಲು ಶತಾಯಗತಾಯ ಪ್ರಯತ್ನಕ್ಕೆ ಬೀಳುತ್ತಾರೆ. ಉಪವಾಸ ಬೀಳುವುದು, ಕಂಡ ಕಂಡ ಜಿಮ್‌ಗಳು, ಮೂರೇ ತಿಂಗಳಲ್ಲಿ 10 ಕೆಜಿ ತೂಕ ಇಳಿಸುವಂತಹ ಆಕರ್ಷಕ ಜಾಹೀರಾತುಗಳು ಅಥವಾ ಬೇರಿಯಾಟ್ರಿಕ್‌ ಶಸ್ತ್ರಚಿಕಿತ್ಸೆ ಎಂದೆಲ್ಲ ಹಿಂದೆ ಬಿದ್ದು ಆರೋಗ್ಯ, ಹಣ ಎರಡನ್ನೂ ಕಳೆದುಕೊಂಡ ಉದಾಹರಣೆಗಳು ನಮ್ಮ ಮುಂದಿವೆ. ಈ ಜನರೂ ಹಾಗೆಯೇ. ದಪ್ಪ ಶರೀರಿಗಳನ್ನು ಅದರಲ್ಲೂ ತೂಕ ಜಾಸ್ತಿ ಇರುವ ಯುವತಿಯರನ್ನು ಕಂಡರೆ ಸೋಮಾರಿಗಳು, ಕಂಠಮಟ್ಟ ತಿನ್ನುವವರು ಎಂದೇ ಭಾವಿಸುವುದೇಕೆ? ‘ಏನಮ್ಮ ವ್ಯಾಯಾಮ ಮಾಡುತ್ತಿಲ್ಲವೇ? ವಾಕಿಂಗ್‌ ಮಾಡು’ ಎಂದು ಪುಕ್ಕಟೆ ಸಲಹೆ ನೀಡುವ ಖಯಾಲಿ. ದಪ್ಪವಾಗಲು ಹಾರ್ಮೋನ್‌ ಕಾರಣ, ಯಾವುದೋ ಔಷಧದ ಅಡ್ಡ ಪರಿಣಾಮ ಅಥವಾ ನನ್ನ ವಂಶವಾಹಿನಿಯಲ್ಲೇ ದಪ್ಪಗಾಗುವ ಮೂಲವಿದೆ.. ಎಂದೆಲ್ಲ ಅವರಿಗೆ ಉತ್ತರಗಳನ್ನು ಹೇಳುತ್ತ ಹೋಗಲು ಸಾಧ್ಯವೇ?

ಭಾರತದಲ್ಲಿ ಶೇ 70ರಷ್ಟು ಜನರು ತಮ್ಮ ಸೌಂದರ್ಯ ಮತ್ತು ದೇಹದ ಆಕಾರದ ಬಗ್ಗೆ ನಕರಾತ್ಮಕ ಭಾವ ಬೆಳೆಸಿಕೊಂಡು, ಕೀಳರಿಮೆಯಿಂದ ಬಳಲುತ್ತಿದ್ದಾರೆ ಎನ್ನಲಾಗಿದೆ. ಆದರೆ ಆತ್ಮವಿಶ್ವಾಸದ ಜೊತೆ ದೇಹವಿಶ್ವಾಸ ಸೇರಿದರೆ ಅಲ್ಲಿ ದೈಹಿಕ ಮೂದಲಿಕೆ ಅನ್ನೋದು ನಗಣ್ಯವೆನಿಸಲಿದೆ. ಮನದಲ್ಲಿ ದೇಹವಿಶ್ವಾಸವಿದ್ದರೆ ನೀವು ಸೆಲೆಬ್ರಿಟಿಗಳಾಗಲು ಸಾಧ್ಯ ಎನ್ನಲು ಮೇಲಿನ ಮೂರು ಉದಾಹರಣೆಗಳಷ್ಟೇ ಸಾಕು. 


ವಿದ್ಯಾಬಾಲನ್‌

ದೇಹ ವಿಶ್ವಾಸ ಎಂದರೆ ಏನು?
ಆತ್ಮವಿಶ್ವಾಸದ ಒಂದು ಹೆಜ್ಜೆ ಮುಂದಿನದು ದೇಹವಿಶ್ವಾಸ (ಬಾಡಿ ಕಾನ್ಫಿಡೆನ್ಸ್‌). ವ್ಯಕ್ತಿಯ ದೈಹಿಕ ನ್ಯೂನತೆಯನ್ನು ಬದಲಿಸುವುದು ಕಷ್ಟವೆನಿಸಿದಾಗ ಆ ವ್ಯಕ್ತಿ ತನ್ನ ಅಭಿಪ್ರಾಯವನ್ನು ಬದಲಿಸಿಕೊಳ್ಳಲು ಸಾಧ್ಯವಿದೆ. ತಮ್ಮಲ್ಲಿರುವ ಪ್ರತಿಭೆಗಳನ್ನೇ ಮುಂದೆ ಮಾಡಿಕೊಂಡು ಆತ್ಮವಿಶ್ವಾಸದಿಂದ ಮುಂದಡಿಯಿಟ್ಟರೆ ಜಯ ಜೊತೆಯಾಗಲಿದೆ.

ದೇಹ ವಿಶ್ವಾಸವನ್ನು ಹೊಂದಲು ಏನು ಮಾಡಬಹುದು?
ನಿಮಗಿರುವ ಕೀಳರಿಮೆಯಿಂದ ಮೊದಲು ಹೊರಬನ್ನಿ. ಆ ನ್ಯೂನತೆಯನ್ನು ಧನಾತ್ಮಕವಾಗಿ ಸ್ವೀಕರಿಸಿ. ಇದರಿಂದ ದೈಹಿಕ ನ್ಯೂನತೆಯನ್ನು ಒಪ್ಪಿಕೊಂಡು ಅಪ್ಪಿಕೊಳ್ಳಲು ಸಾಧ್ಯ. ಆಲೋಚನೆಗಳು ಸಕಾರಾತ್ಮಕವಾಗಿರಲಿ. ಜೊತೆಗೆ ನಿಮ್ಮಲ್ಲಿರುವ ಪ್ರತಿಭೆ, ಕೌಶಲಗಳನ್ನೂ ಪಟ್ಟಿ ಮಾಡಿ. ನೀವು ಮುಂದೆ ಸಾಗುತ್ತಿದ್ದರೆ ನ್ಯೂನತೆಗಳು ಹಿಂದಾಗುತ್ತವೆ. ಒದಗಿ ಬರುವ ಅವಕಾಶಗಳನ್ನು ಬಳಸಿಕೊಳ್ಳುತ್ತ ಸಾಗಿದರೆ ಮುಂದೊಂದು ದಿನ ಅವು ಬದುಕಿನಲ್ಲಿ ಗೆಲುವು ತಂದಿಡಲಿವೆ.

ನಿಮ್ಮನ್ನು ಬೇರೆಯವರೊಂದಿಗೆ ಖಂಡಿತ ಹೋಲಿಕೆ ಮಾಡಿಕೊಳ್ಳದಿರಿ. ಎಷ್ಟೇ ಹೆಣಗಾಡಿದರೂ ತೂಕ ಮಾತ್ರ ಕಡಿಮೆಯಾಗುತ್ತಿಲ್ಲ ಎನ್ನುವವರು ಅದನ್ನೇ ಮನಸ್ಸಲ್ಲಿಟ್ಟು ಕೊರಗದಿರಿ. ಅದರಿಂದ ಮಾನಸಿಕ ಖಿನ್ನತೆಗೆ ಮನಸ್ಸು ಜಾರಬಹುದು. ಉದ್ವೇಗ, ಆತಂಕಕ್ಕೆ ದಾರಿಯಾಗಬಹುದು. ಪರಿಣಾಮ ತೂಕ ಮತ್ತಷ್ಟು ಹೆಚ್ಚಬಹುದು. ಬೆಳಗಿನ ಒಂದು ತಾಸನ್ನು ಕಡ್ಡಾಯವಾಗಿ ವಾಕಿಂಗ್‌, ಜಾಗಿಂಗ್‌, ಯೋಗ, ವ್ಯಾಯಾಮ, ಧ್ಯಾನಕ್ಕೆ ಮೀಸಲಿಡಿ. ಇದರಿಂದ ಮನಸ್ಸು ಉಲ್ಲಸಿತವಾಗಲಿದೆ. ಮನಸ್ಸು ನಿರಾಳವಾಗಿರುವಾಗ ದೈಹಿಕ ಭಾರ, ಭಾವ ಮನಸ್ಸಿನಿಂದ ದೂರವಾಗುತ್ತದೆ. ದೇಹವಿಶ್ವಾಸದೊಂದಿಗೆ ಇಟ್ಟ ಹೆಜ್ಜೆಯಲ್ಲಿ ಯಶಸ್ಸು ನಿಮ್ಮದಾದಲ್ಲಿ ಮತ್ತೆಂದೂ ತಿರುಗಿ ನೋಡಬೇಕಾಗಿಲ್ಲ. ಅವಕಾಶಗಳು ಹೆಚ್ಚು ಒದಗಿ ಬಂದಾಗ ಹೆಸರು ತಾನಾಗಿಯೇ ನಿಮ್ಮ ಜೊತೆಯಾಗುತ್ತದೆ. ನಿಮ್ಮ ದೇಹ ವಿಶ್ವಾಸ ಹೆಚ್ಚಿದಂತೆ ನ್ಯೂನತೆಗಳು ನಗಣ್ಯವೆನಿಸುತ್ತವೆ.

ದೇಹ ಆತ್ಮವಿಶ್ವಾಸಕ್ಕೆ ಅಕ್ಸೆಪ್ಟ್‌–ಅಡ್ಜೆಸ್ಟ್‌–ಅಡಾಪ್ಟ್‌ ಸೂತ್ರ
ದೈಹಿಕ ನ್ಯೂನತೆಯ ಕೊರಗಿನಿಂದ ಹೊರಬರಲು ಮೊದಲು ಮಾನಸಿಕವಾಗಿ ಸಜ್ಜುಗೊಳ್ಳಬೇಕು. ಅದಕ್ಕೊಂದು ಸುಲಭ ದಾರಿಯೆಂದರೆ ಅಕ್ಸೆಪ್ಟ್‌–ಅಡ್ಜೆಸ್ಟ್‌–ಅಡಾಪ್ಟ್‌ ಸೂತ್ರವನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದು. ಸ್ಥೂಲಕಾಯ, ಕೃಶಕಾಯ, ದೈಹಿಕ ಅಂಗವೈಕಲ್ಯ ಹೀಗೆ ಯಾವುದೇ ತೆರನಾದ ನ್ಯೂನತೆಯಿದ್ದಲ್ಲಿ ಮೊದಲು ಅದನ್ನು ಸ್ವೀಕರಿಸಬೇಕು. ಅದಕ್ಕೆ ಮೊದಲು ನಮ್ಮ ಮನಸ್ಸನ್ನು ಹೊಂದಿಸಿಕೊಳ್ಳಬೇಕು. ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು. ಈ ಸೂತ್ರ ಅನುಸರಿಸಿದಲ್ಲಿ ದೈಹಿಕ ನ್ಯೂನತೆ ಹೊರೆಯೆನಿಸದು; ಮನಸ್ಸಿಗೆ ಕೊರಗಾಗದು. ಅದರಿಂದ ಮೂಡುವ ಆತ್ಮವಿಶ್ವಾಸ ದೈಹಿಕ ನ್ಯೂನತೆಯನ್ನೂ ಮೀರಿ ಸಾಧನೆಗೆ ದಾರಿಯಾಗಲಿದೆ. ಆದ್ದರಿಂದ ನಮ್ಮ ದೈಹಿಕ ಸೌಂದರ್ಯವನ್ನು ಅದು ಇದ್ದಂತೆಯೇ ಸ್ವೀಕರಿಸುವ ಮನೋಭಾವ ಅಳವಡಿಸಿಕೊಳ್ಳುವುದು ಮುಖ್ಯ.
–ಡಾ. ಆನಂದ ಪಾಂಡುರಂಗಿ, ಮನೋವೈದ್ಯ, ಧಾರವಾಡ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !