ಜೀವನಶೈಲಿಯ ಬದಲಾವಣೆಯೇ ಮದ್ದು

ಬುಧವಾರ, ಜೂನ್ 19, 2019
26 °C

ಜೀವನಶೈಲಿಯ ಬದಲಾವಣೆಯೇ ಮದ್ದು

Published:
Updated:
Prajavani

ಏನಿದು ಅಧಿಕ ರಕ್ತದೊತ್ತಡ?

ರಕ್ತನಾಳಗಳಲ್ಲಿ ಮತ್ತು ಅಪಧಮನಿಗಳಲ್ಲಿ ಒತ್ತಡ ಹೆಚ್ಚಾಗಿ, ಹೃದಯ ಹೆಚ್ಚು ರಕ್ತವನ್ನು ಹೊರಗೆಡಹುವಂತೆ ಮಾಡುತ್ತದೆ.‌ ಇದನ್ನೇ ಅಧಿಕ‌ ರಕ್ತದೊತ್ತಡ ಎನ್ನುವುದು. ಇದು ಹಲವು ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ.

ಗರ್ಭಿಣಿಯರಲ್ಲಿನ‌ ರಕ್ತದೊತ್ತಡಕ್ಕೆ ಕಾರಣಗಳೇನು?

ತಡವಾಗಿ ವಿವಾಹವಾಗುವುದು, ಈಗಾಗಲೇ ಮಧುಮೇಹ ಇರುವುದು, ಒತ್ತಡದ ಜೀವನಶೈಲಿ, ಬೊಜ್ಜು, ಆಲಸ್ಯ, ಜಡತ್ವ ಮುಂತಾದವುಗಳು ಇದಕ್ಕೆ ಕಾರಣವಾಗುತ್ತವೆ. ಇದು ಆನುವಂಶೀಯವಾಗಿಯೂ ಬರುತ್ತದೆ. ಅತಿಯಾದ ತೂಕ, ಹೆಚ್ಚು ಉಪ್ಪಿನ ಸೇವನೆ, ಆಹಾರ ಪದ್ಧತಿ, ಕಲುಷಿತ ವಾತಾವರಣವೂ ಸಹ ರಕ್ತದೊತ್ತಡಕ್ಕೆ‌ ಕಾರಣ.

ರಕ್ತದೊತ್ತಡದ ಸಾಮಾನ್ಯ ಲಕ್ಷಣಗಳ‌ ಬಗ್ಗೆ ತಿಳಿಸಿ..

ಗರ್ಭಾವಸ್ಥೆಯಲ್ಲಿದ್ದಾಗ ಅಧಿಕ ರಕ್ತದೊತ್ತಡ ಕಾಣಿಸಿಕೊಂಡರೆ ಕಾಲುಗಳಲ್ಲಿ ಊತ, ಮುಖ, ಕಿಬ್ಬೊಟ್ಟೆ ಅಥವಾ ಇಡೀ ದೇಹದಲ್ಲಿ ಊತ, ವಾರಕ್ಕೆ ಎರಡು ಕೆಜಿಯಂತೆ ತೂಕದಲ್ಲಿ ಹೆಚ್ಚಳ, ತಲೆನೋವು ಮತ್ತು ಕಣ್ಣಿನಲ್ಲಿ ಉರಿ ಕಾಣಿಸಿಕೊಳ್ಳಲಾರಂಭಿಸುತ್ತದೆ. ಮೊದಲ ಬಾರಿಗೆ ಗರ್ಭ ಧರಿಸಿದಾಗ, ಬೊಜ್ಜು ಇರುವ ಮಹಿಳೆಯರು, ಅವಳಿ ಅಥವಾ ತ್ರಿವಳಿ ಭ್ರೂಣಗಳನ್ನು ಹೊಂದಿರುವ‌, ಅನುವಂಶೀಯವಾಗಿ ಅಧಿಕ ರಕ್ತದೊತ್ತಡವಿರುವ ಮಹಿಳೆಯರಲ್ಲಿ ಗಂಭೀರ ಲಕ್ಷಣಗಳು ಕಂಡುಬರುತ್ತವೆ.

ಇದರಿಂದ ತಾಯಿ ಮತ್ತು ಮಗುವಿನ‌ ಮೇಲಾಗುವ ಪರಿಣಾಮಗಳೇನು?

ರಕ್ತದೊತ್ತಡ ತಾಯಿ ಮತ್ತು ಮಗುವಿನ ಮೇಲೆ ಗಂಭೀರ ಪರಿಣಾಮಗಳನ್ನು ಬೀರುತ್ತದೆ. ಪ್ರಸವಪೂರ್ವ ಜನನ, ಸೆಳೆತ, ಭ್ರೂಣದ ಬೆಳವಣಿಗೆಯಲ್ಲಿ ಕುಂಠಿತ, ಗರ್ಭಾಶಯದಿಂದ ಬಹುಬೇಗನೆ ಹೊಕ್ಕಳುಬಳ್ಳಿ ಬೇರ್ಪಡುವುದು, ಮೂತ್ರದಲ್ಲಿ ಪ್ರೊಟೀನ್ ಮತ್ತು ದೀರ್ಘಕಾಲದ ಮೂತ್ರಪಿಂಡದ ರೋಗಕ್ಕೆ ಕಾರಣವಾಗುತ್ತದೆ. ಇದಲ್ಲದೇ ಹೆರಿಗೆ ಸಂದರ್ಭದಲ್ಲಿ ತಾಯಿಯ ಸಾವು ಕೂಡಾ ಸಂಭವಿಸಬಹುದು. ಹಾಗೆಯೇ ನಿದ್ರಾಹೀನತೆ, ತಲೆನೋವು, ಎದೆಬಡಿತ ಜಾಸ್ತಿಯಾಗುವುದು, ಕಣ್ಣು ಮಂಜಾಗುವುದು, ಸುಸ್ತು, ಕಿವಿಯೊಳಗೆ ಸದ್ದು, ಉಸಿರಾಟದ ತೊಂದರೆ ಇತ್ಯಾದಿಗಳು ಕಾಣಿಸಿಕೊಳ್ಳಬಹುದು. ರಕ್ತದೊತ್ತಡದಿಂದ ಮುಖ್ಯವಾಗಿ ಕಣ್ಣು, ಹೃದಯ, ಮೆದುಳು, ಮತ್ತು ಮೂತ್ರಪಿಂಡ ಹೆಚ್ಚು ಹಾನಿಗೊಳಗಾಗುತ್ತವೆ.

ಗರ್ಭ ಧರಿಸಿದ ಎಷ್ಟು ವಾರಗಳಲ್ಲಿ ರಕ್ತದೊತ್ತಡ ಕಾಣಿಸಿಕೊಳ್ಳುತ್ತದೆ? ಕೈಗೊಳ್ಳಬೇಕಾದ ಕ್ರಮಗಳೇನು?

ಈ ಸಮಸ್ಯೆ ಸಾಧಾರಣವಾಗಿ 26 ವಾರಗಳಲ್ಲಿ ಕಾಣಿಸಿಕೊಳ್ಳುತ್ತದೆ. ಇದರಿಂದ ಭ್ರೂಣದ ಬೆಳವಣಿಗೆ ಕುಂಠಿತವಾಗುವುದರ ಜೊತೆಗೆ ತಾಯಿಯ ಸಾವಿಗೆ ಕಾರಣವಾಗುವ ಅಪಾಯವಿರುವುದರಿಂದ‌ ಪ್ರಸವಕ್ಕೆ ಮುನ್ನ ಭ್ರೂಣವನ್ನು ಹೊರತೆಗೆಯಬೇಕಾಗುತ್ತದೆ.

ಗ್ರಾಮೀಣ ಹಾಗೂ ನಗರಪ್ರದೇಶವನ್ನು ಪರಿಗಣಿಸಿದರೆ ಯಾವ ಭಾಗದವರಲ್ಲಿ ಹೆಚ್ಚಾಗಿ ಕಂಡುಬರುತ್ತದೆ.

ಹೆಚ್ಚು ವ್ಯತ್ಯಾಸವೇನಿಲ್ಲ. ಆದರೆ ನಗರದವರಲ್ಲೇ ಹೆಚ್ಚು ಎನ್ನಬಹುದು. ಹಳ್ಳಿಯಲ್ಲಿನ ನಿರ್ಮಲ ವಾತಾವರಣ, ಕೃಷಿ ಮುಂತಾದ ಚಟುವಟಿಕೆಗಳಿಂದಾಗಿ ಗ್ರಾಮೀಣ ಮಹಿಳೆಯರಲ್ಲಿ ಕಡಿಮೆ. ಆದರೂ ಗ್ರಾಮೀಣ ಪ್ರದೇಶದಲ್ಲೂ ಇದರ ಬಗ್ಗೆ ಜಾಗೃತಿ ಮೂಡಿಸಬೇಕು.

ಇದನ್ನು ತಡೆಗಟ್ಟುವ ಮಾರ್ಗಗಳೇನು?

ಜೀವನಶೈಲಿಯಲ್ಲಿ ಬದಲಾವಣೆ ಮಾಡಿಕೊಳ್ಳಬೇಕು. ವೈದ್ಯರು ಶಿಫಾರಸು ಮಾಡುವ ಔಷಧಿಗಳ ಸೇವನೆ ಮಾಡಬೇಕು. ಹೀಗಿದ್ದರೂ ಇದರ ನಿರ್ವಹಣೆಯನ್ನು ಸೂಕ್ತವಾಗಿ ಮಾಡಿದರೆ ಮಾತ್ರ ಪ್ರಸವ ಸುಗಮವಾಗಿ ಆಗುತ್ತದೆ. ನಿಯಮಿತ ತಪಾಸಣೆ ಮಾಡಿಸಿಕೊಳ್ಳಬೇಕು. ಹೊಟ್ಟೆಯಲ್ಲಿ ನೀರು ತುಂಬಿಕೊಳ್ಳುವುದು, ಹೆಚ್ಚು ರಕ್ತದೊತ್ತಡ, ತಲೆನೋವು ಸೇರಿದಂತೆ ಇತರೆ ಅಸಹಜ ಸಮಸ್ಯೆಗಳು ಎದುರಾದರೆ ನಿರ್ಲಕ್ಷಿಸದೆ ಕೂಡಲೇ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆಯಬೇಕು.

ಗರ್ಭಿಣಿಯರ ದಿನಚರಿ‌ಯ ಬಗ್ಗೆ ನಿಮ್ಮ ಸಲಹೆಗಳೇನು?

ಸದಾ ಚಟುವಟಿಕೆಯಿಂದಿರಿ. ಕ್ರಮಬದ್ಧ ಜೀವನವಿರಲಿ. ತೂಕ ಹೆಚ್ಚಳದ ಬಗ್ಗೆ ಗಮನವಿರಲಿ. ಉಪ್ಪಿನಾಂಶ ಕಡಿಮೆ‌ ಸೇವಿಸಿ. ನಿಯಮಿತ ವ್ಯಾಯಾಮ ಬಹಳ ಮುಖ್ಯ. ಸಾತ್ವಿಕ ಆಹಾರ ಹಾಗೂ ಹೆಚ್ಚು ನೀರು ಸೇವಿಸಿ. ಒತ್ತಡದ ವಾತಾವರಣದಲ್ಲಿ ಕೆಲಸ ಮಾಡುವುದನ್ನು ಕಡಿಮೆ‌ ಮಾಡಬೇಕು. ಕೆಲಸದ ಸಮಯದಲ್ಲಿ ಅತಿಯಾದ ಒತ್ತಡದಿಂದ‌ ರಸದೂತಗಳ ಸ್ರವಿಸುವಿಕೆಯಲ್ಲಿ ಏರುಪೇರಾಗಿ ರಕ್ತದೊತ್ತಡಕ್ಕೆ ಕಾರಣವಾಗಬಹುದು. ಆಳವಾದ ಉಸಿರಾಟ, ಪ್ರಾಣಾಯಾಮ, ಯೋಗ, ಧ್ಯಾನ ಮುಂತಾದವುಗಳು‌ ಒತ್ತಡ ನಿವಾರಣೆಯ ಮಾರ್ಗಗಳು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !