ಹಿರಿಯರು‌ ಸಮಾಜದ ಕಿರಿಯರಿಗೆ ದಾರಿದೀಪವಾಗಲಿ

6
ಜಿಲ್ಲೆಯಲ್ಲಿ ಪ್ರಥಮ ಬ್ರಾಹ್ಮಣ ಸಮ್ಮೇಳನದಲ್ಲಿ ಸೂರ್ಯನಾರಾಯಣ್‌ ಕೆ.ಎನ್‌. ಕರೆ

ಹಿರಿಯರು‌ ಸಮಾಜದ ಕಿರಿಯರಿಗೆ ದಾರಿದೀಪವಾಗಲಿ

Published:
Updated:
Deccan Herald

ಚಾಮರಾಜನಗರ: ‘ದೇಶದಲ್ಲಿ ಶೇ 4ರಷ್ಟು ಇರುವ ಬ್ರಾಹ್ಮಣರು ಒಗ್ಗಟ್ಟಾದರೆ, ನಮ್ಮ ಅಭಿವೃದ್ಧಿಯನ್ನು ತಡೆಯಲು ಯಾರಿಗೂ ಸಾಧ್ಯವಿಲ್ಲ’ ಎಂದು ಜಿಲ್ಲಾ ಬ್ರಾಹ್ಮಣ ಪ್ರಥಮ ಸಮ್ಮೇಳನದ ಅಧ್ಯಕ್ಷ ಸೂರ್ಯನಾರಾಯಣ್‌ ಕೆ.ಎನ್‌. ಕರೆ ಭಾನುವಾರ ಪ್ರತಿಪಾದಿಸಿದರು.

ಜಿಲ್ಲಾ ಬ್ರಾಹ್ಮಣ ಸಂಘವು ಪಟ್ಟಣದ ನಂದಿ ಭವನದಲ್ಲಿ ಆಯೋಜಿಸಿದ್ದ ಸಮ್ಮೇಳನದಲ್ಲಿ ಮಾತನಾಡಿದ ಅವರು, ‘ಸಮಾಜದ ಹಿರಿಯರು ಮುಂದಿನ ಪೀಳಿಗೆಗೆ ದಾರಿ ದೀಪವಾಗಬೇಕು’ ಎಂದು ಸಲಹೆ ನೀಡಿದರು.

‘ವೇದ, ನಮ್ಮ ಆಚಾರ–ವಿಚಾರ, ಸಂಸ್ಕೃತಿಗಳನ್ನು ಮುಂದಿನ ಪೀಳಿಗೆಗೆ ತಿಳಿ ಹೇಳುವಂತಹ ಕೆಲಸವನ್ನು ಗುರು ಹಿರಿಯರು ಮಾಡಬೇಕು. ಸಮಾಜದ ಬಡವರಿಗೆ ನಾವು ಆರ್ಥಿಕ ಸಹಾಯ ಮಾಡಬೇಕು. ನಾವು ಒಗ್ಗಟ್ಟಾಗಿದ್ದರೆ ಎಲ್ಲವೂ ಸಾಧ್ಯ’ ಎಂದು ಸಲಹೆ ನೀಡಿದರು.

ಇದಕ್ಕೂ ಮುನ್ನ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ವೆಂಕಟನಾರಾಯಣ, ‘ಸಮುದಾಯದಲ್ಲಿ ಸಂಸ್ಕಾರ ಉಳಿಸಿ ಬೆಳೆಸುವ ಜವಾಬ್ದಾರಿ ಎಲ್ಲ ವಿಪ್ರ ಬಂಧುಗಳ ಮೇಲೆ ಇದೆ. ಅದಕ್ಕೆ ಇಂತಹ ಸಮಾವೇಶಗಳು ಅವಶ್ಯಕ. ಬ್ರಾಹ್ಮಣ ಸಮುದಾಯದವರು ತಮ್ಮಲ್ಲಿಯೇ ಪರಸ್ಪರ ಚಿಂತನೆ ಮಾಡಿ ಸಮಾಜದ ಏಳಿಗೆಗೆ ಶ್ರಮಿಸಬೇಕಾಗಿದೆ’ ಎಂದು ತಿಳಿಸಿದರು.

ಶಾಸಕ ಎಸ್‌.ಎ. ರಾಮದಾಸ್ ಮಾತನಾಡಿ, ‘ಚಾಮರಾಜನಗದಲ್ಲಿ ವಿಪ್ರ ಶಕ್ತಿ ಹೇಗೆ ಎಂಬುದನ್ನು ತೋರಿಸಿದ್ದೀರಿ. ಇದರಿಂದ ನಮ್ಮ ಜವಾಬ್ದಾರಿ ಹೆಚ್ಚಾಗಿದೆ. ರಾಷ್ಟ್ರ ನಾಯಕರಿಂದ ಹಿಡಿದು ಉನ್ನತ ಹುದ್ದೆಗಳಲ್ಲಿ ಬ್ರಾಹ್ಮಣರು ಇರುವುದು ಹೆಮ್ಮೆಯ ವಿಚಾರ, ಬ್ರಾಹ್ಮಣ ತನ್ನ ಬುದ್ದಿವಂತಿಕೆ ಹಾಗೂ ಸ್ವಂತ ಶಕ್ತಿಯಿಂದ ಉನ್ನತ ಸ್ಥಾನದಲ್ಲಿ ಇದ್ದಾನೆ. ಐಎಎಸ್‌, ಐಪಿಎಸ್‌ನಂತಹ ಹುದ್ದೆಗಳಲ್ಲಿ ಇತ್ತೀಚೆಗೆ ಬ್ರಾಹ್ಮಣರ ಸಂಖ್ಯೆ ಕಡಿಮೆಯಾಗುತ್ತಿದೆ’ ಎಂದು ಹೇಳಿದರು. 

ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಹಿರಿಯ ಉಪಾಧ್ಯಕ್ಷ ಆರ್‌.ಲಕ್ಷ್ಮೀಕಾಂತ್‌, ಉಪಾಧ್ಯಕ್ಷರಾದ ಕೆ.ಇ. ರಾಧಾಕೃಷ್ಣ, ರಾಜೀವ್‌ ಎಚ್‌.ವಿ, ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷ ಜಿ.ಎಂ. ಹೆಗಡೆ ಮಾತನಾಡಿದರು.

ಸನ್ಮಾನ: ಕಾರ್ಯಕ್ರಮದಲ್ಲಿ ಪಿಯುಸಿ ಮತ್ತು ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪು‌ರಸ್ಕಾರ ನೀಡಲಾಯಿತು. ಸಮಾಜದ ಏಳು ವಿದ್ಯಾರ್ಥಿಗಳಿಗೆ ಆರ್ಥಿಕ ಸಹಾಯ ನೀಡಲಾಯಿತು. ಸೇನೆಯಲ್ಲಿ 17 ವರ್ಷ ಸೇವೆ ಸಲ್ಲಿಸಿದ್ದ ಸಂತೇಮರಹಳ್ಳಿ ಸುರೇಶ್‌ ಹಾಗೂ ಸುಭಾಷ್‌ ಚಂದ್ರ ಬೋಸ್‌ ಅವರು ಸ್ಥಾಪಿಸಿದ್ದ ಐಎನ್‌ಎಯಲ್ಲಿ ಕರ್ತವ್ಯ ನಿರ್ವಹಿಸಿದ್ದ ರಾಮರಾವ್‌ ಅವರ ಪತ್ನಿ ಭಾಗ್ಯಲಕ್ಷ್ಮಿ ಅವರನ್ನು ಸನ್ಮಾನಿಸಲಾಯಿತು.

ಸಮ್ಮೇಳನಕ್ಕೂ ಮೊದಲು ಚಾಮರಾಜೇಶ್ವರ ದೇವಸ್ಥಾನದ ಮುಂಭಾಗದಿಂದ ಸಭಾಂಗಣದವರೆಗೆ ಬೃಹತ್‌ ಶೋಭಾಯಾತ್ರೆ ನಡೆಯಿತು. ಬ್ರಾಹ್ಮಣಸಭಾದ ಮತ್ತೊಬ್ಬ ಉಪಾಧ್ಯಕ್ಷ ವೇದ ಬ್ರಹ್ಮಶ್ರೀ ಡಾ. ಭಾನುಪ್ರಕಾಶ್‌ ಅವರು ಇದಕ್ಕೆ ಚಾಲನೆ ನೀಡಿದರು.

ಅಖಿಲ ಕರ್ನಾಟಕ ಬ್ರಾಹ್ಮಿನ್‌ ವೆಲ್‌ಫೇರ್‌ ಸೊಸೈಟಿ ಅಧ್ಯಕ್ಷ ಬಿ.ವಿ. ಮಂಜುನಾಥ್‌,  ಬ್ರಾಹ್ಮಣ ಮಹಾಸಭಾ ರಾಜ್ಯ ಉಪಾಧ್ಯಕ್ಷ ಜಿ.ಆರ್‌. ನಾಗರಾಜ್‌, ರಾಜ್ಯ ಸಂಘಟನಾ ಕಾರ್ಯದರ್ಶಿ ನಂ.ಶ್ರೀಕಂಠಕುಮಾರ್‌, ಮಹಾಸಭಾದ ಮೈಸೂರು ನಗರ ಮತ್ತು ಜಿಲ್ಲೆ ಅಧ್ಯಕ್ಷ ಡಿ.ಟಿ. ಪ್ರಕಾಶ್‌, ಅಬಕಾರಿ ಇಲಾಖೆ ಆಯುಕ್ತೆ ವೀಣಾ, ಜಿಲ್ಲಾ ಬ್ರಾಹ್ಮಣ ಸಂಘದ ಕಾರ್ಯದರ್ಶಿ ಸುರೇಶ್‌ ಎನ್‌.ಋಗ್ವೇದಿ, ಖಚಾಂಚಿ ಎಸ್‌. ಬಾಲಸುಬ್ರಹ್ಮಣ್ಯ, ಎಸ್‌. ಲಕ್ಷ್ಮಿನರಸಿಂಹ, ಉಪಾಧ್ಯಕ್ಷರಾದ ಗೋಪಾಲಕೃಷ್ಣ, ಎಚ್‌.ವಿ. ನಾಗರಾಜ್‌, ವೈ.ಕೆ. ರಂಗನಾಥರಾವ್‌, ಶೇಖರ್‌ಶಾಸ್ತ್ರಿ ಇದ್ದರು.

 ‘ಬ್ರಾಹ್ಮಣ ಎಂದು ಹೇಳಲು ಮುಜುಗರ ಪಡಬೇಕಿಲ್ಲ’

‘ಬ್ರಾಹ್ಮಣರ ಬಗ್ಗೆ ಇತರರಿಗೆ ಆಕ್ಷೇಪ, ಆಕ್ರೋಶ, ಅಸಹನೆ ಎಲ್ಲವೂ ಇದೆ. ಆದರೆ, ಅದರ ಬಗ್ಗೆ ಯೋಚಿಸಬೇಕಾಗಿಲ್ಲ. ನಾವು ಬ್ರಾಹ್ಮಣರು ಎಂದು ಹೇಳಿಕೊಳ್ಳಲು ನಾಚಿಕೆ ಪಡಬೇಕಿಲ್ಲ. ನಮ್ಮಲ್ಲಿ ಆ ಬಗ್ಗೆ ಅಭಿಮಾನ ಇರಬೇಕು. ಸ್ವಾಭಿಮಾನ ಬೇಕು. ಆದರೆ ದುರಭಿಮಾನ ಬೇಡ’ ಎಂದು ಚಿಂತಕ ಡಾ. ಕೆ.ಪಿ ಪುತ್ತೂರಾಯ ಅವರು ಹೇಳಿದರು.

‘ಈ ದೇಶದಲ್ಲಿ ಸಂಖ್ಯಾದೃಷ್ಟಿಯಲ್ಲಿ ಬ್ರಾಹ್ಮಣರು ಅಲ್ಪಸಂಖ್ಯಾತರು. ಆದರೆ ಪ್ರತಿಭೆಯಲ್ಲಿ ಬಹುಸಂಖ್ಯಾತರು. ಈ ಸಮಾಜದವರ ಉದ್ಧಾರವನ್ನು ಯಾರೂ ಮಾಡುವುದಿಲ್ಲ. ಅವರವರೇ ಮಾಡಿಕೊಳ್ಳಬೇಕು’ ಎಂದು ಹೇಳಿದರು.

 

 

 

 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !