ಭಾನುವಾರ, ಜನವರಿ 19, 2020
27 °C

ಏನಿದು ಬಯೋಡಿಗ್ರೇಡೆಬಲ್‌ ಪ್ಲಾಸ್ಟಿಕ್ ?

ಪ್ರಾಯೋಜಿತ ಬರಹ Updated:

ಅಕ್ಷರ ಗಾತ್ರ : | |

ಬಳಕೆಯಲ್ಲಿರುವ ಪ್ಲಾಸ್ಟಿಕ್‌ ಬದಲು ಮಣ್ಣಿನಲ್ಲಿ ಕೊಳೆಯುವ ಅಥವಾ ನೀರಿನಲ್ಲಿ ಕರಗಿ ಹೋಗುವ, ಜೈವಿಕ ವಿಘಟನೆಗೆ ಒಳಗಾಗಿ ಪರಿಸರದಲ್ಲಿ ಲೀನವಾಗಿ ಹೋಗುವಂತಹ ಪ್ಲಾಸ್ಟಿಕ್ (Biodegradable Plastic) ಬಳಕೆ ಬಗ್ಗೆ ಕೆಲ ವರ್ಷಗಳಿಂದ ಸಾಕಷ್ಟು ಚರ್ಚೆ ನಡೆಯುತ್ತಿದೆ. ಜೈವಿಕ ವಿಘಟನೆಗೆ ಒಳಗಾಗಿ ಪರಿಸರಕ್ಕೆ ಯಾವುದೇ ರೀತಿ ಹಾನಿ ಮಾಡದಂತೆ ಕರಗಿ ಹೋಗುವಂಥ ಬಯೋ–ಡಿಗ್ರೇಡೆಬಲ್‌ ಪ್ಲಾಸ್ಟಿಕ್‌ (Biodegradable Plastic) ಕುತೂಹಲ ಮೂಡಿಸುತ್ತದೆ.

ಪೇಪರ್‌ ಅಥವಾ ಎಲೆಗಳು ಮಣ್ಣಿನಲ್ಲಿ ಕೊಳೆತು ಕರಗಿ ಹೋಗುವ ಹಾಗೆಯೇ ಜೈವಿಕ ವಿಘಟಣೆಗೆ ಒಳಪಡುವ ಪ್ಲಾಸ್ಟಿಕ್‌ನ್ನೇ ಬಯೋ–ಡಿಗ್ರೇಡೆಬಲ್‌ ಎನ್ನಬಹುದು. ಆದರೆ, 'ಪ್ಲಾಸ್ಟಿಕ್‌' ಬಯೋಡಿಗ್ರೇಡೆಬಲ್‌ ಆಗುವುದಾದರೂ ಹೇಗೆ?

ಪ್ಲಾಸ್ಟಿಕ್‌ ನೈಸರ್ಗಿಕ ಉತ್ಪನ್ನ ಅಲ್ಲ. ಪೆಟ್ರೋಕೆಮಿಕಲ್‌ನಿಂದ ಕೃತಕವಾಗಿ ತಯಾರಿಸಲ್ಪಡುವ ಉತ್ಪನ್ನವಾಗಿದ್ದು, ಹೆಚ್ಚು ಕಾಲ ಉಳಿಯುವ ವಸ್ತುವಾಗಿದೆ. ಹಲವು ರೀತಿಯ ಪ್ಲಾಸ್ಟಿಕ್‌ಗಳು ಬಳಕೆಗೆ ಬಂದರೂ ಎಲ್ಲಕ್ಕಿಂತಲೂ 'ಪೆಟ್‌' ಉತ್ಕೃಷ್ಟ ಗುಣಮಟ್ಟವನ್ನು ಹೊಂದಿರುವುದು ತಿಳಿದುಬಂದಿದೆ. ಹಾಗಾಗಿಯೇ, ಜಗತ್ತಿನಾದ್ಯಂತ ಕುಡಿಯುವ ನೀರಿನ ಬಾಟಲಿಗಳು, ಆಹಾರ ಪದಾರ್ಥಗಳು ಹಾಗೂ ಪಾನೀಯ ಸಂಗ್ರಹಿಸಿ ಮಾರಾಟ ಮಾಡಲು ಪೆಟ್‌ ಪ್ಲಾಸ್ಟಿಕ್‌ನ್ನೇ ಬಳಸಲಾಗುತ್ತಿದೆ.

ಪೂರ್ಣ ನೈಸರ್ಗಿಕ ವಸ್ತುಗಳು, ಸಸ್ಯ ಮೂಲದ ವಸ್ತುಗಳು ಅಥವಾ ಪೆಟ್ರೋಕೆಮಿಕಲ್‌ ಸಂಪನ್ಮೂಲಗಳನ್ನು ಬಳಸಿ ಬಯೋಡಿಗ್ರೇಡೆಬಲ್‌ ಪ್ಲಾಸ್ಟಿಕ್‌ ತಯಾರಿಸಲಾಗುತ್ತದೆ. ಇಂಥ ಪ್ಲಾಸ್ಟಿಕ್‌ಗಳು ಸಾಮಾನ್ಯ ಪ್ಲಾಸ್ಟಿಕ್‌ಗಳಲ್ಲಿ ಇರುವಂತಹ ರಾಸಾಯನಿಕ ರಚನೆಗಳನ್ನು ಒಳಗೊಂಡಿರುವುದಿಲ್ಲ. ಪರಿಸರದಲ್ಲಿರುವ ಸೂಕ್ಷ್ಮಜೀವಿಗಳು ಬಯೋಡಿಗ್ರೇಡೆಬಲ್‌ ಪ್ಲಾಸ್ಟಿಕ್‌ ರಚನೆಯನ್ನು ಪ್ರತ್ಯೇಕಗೊಳಿಸಿ ಕಗಿಸುವ ಕ್ರಿಯೆ ನಡೆಸುತ್ತವೆ. ಇದರಿಂದಾಗಿ ಪರಿಸರಕ್ಕೆ ಹಾನಿಯಾಗದ ರೀತಿಯಲ್ಲಿ ಇಂಥ ಪ್ಲಾಸ್ಟಿಕ್‌ಗಳು ಕರಗಿ ಹೋಗುತ್ತವೆ. ಸೂಕ್ಷ್ಮಜೀವಿಗಳ ಎಂಜೈಮ್‌ಗಳು ಪ್ಲಾಸ್ಟಿಕನ್ನೇ ಶಕ್ತಿ (ಆಹಾರ) ಮೂಲವಾಗಿ ಬಳಸಿಕೊಳ್ಳುತ್ತವೆ, ಅದರ ಫಲವಾಗಿಯೇ ಪ್ಲಾಸ್ಟಿಕ್‌ ವಿಘಟನೆಗೆ ಒಳಪಡುವುದು.

ಜೈವಿಕ ವಿಘಟನೆಗೆ ನಿರ್ದಿಷ್ಟ ವಾತಾವರಣ, ಗಾಳಿಯ ಪ್ರಮಾಣ ಹಾಗೂ ಉಷ್ಣಾಂಶದ ಅವಶ್ಯಕತೆ ಇರುತ್ತದೆ. ಕೆಲವು ಬಯೋಡಿಗ್ರೇಡೆಬಲ್‌ ಪ್ಲಾಸ್ಟಿಕ್‌ಗಳು ಜೈವಿಕ ವಿಘಟನೆಗೆ ಒಳಪಡಲು ನಿಯಂತ್ರಿತ ವಾತಾವರಣದೊಂದಿಗೆ ಅಧಿಕ ಉಷ್ಣಾಂಶ ಇರಲೇಬೇಕು.

ಇಂಥ ಪ್ಲಾಸ್ಟಿಕ್‌ ಪೂರ್ಣ ಪರಿಸರ ಸ್ನೇಹಿಯೇ?

ಪ್ಲಾಸ್ಟಿಕ್‌ ವಿಘಟನೆಗೆ ಒಳಪಡಿಸುವ ಕ್ರಿಯೆ ಮೇಲ್ನೋಟಕ್ಕೆ ಪರಿಸರಸ್ನೇಹಿ ಎಂದೇ ಅನಿಸುತ್ತದೆ. ಆದರೆ, ಅದು ಈವರೆಗೂ ಸಂಪೂರ್ಣ ಪರಿಸರಸ್ನೇಹಿ ಕ್ರಿಯೆಯಾಗಿಲ್ಲ. ಜಾಗತಿಕ ತಾಪಮಾನ ಏರಿಕೆಗೆ ಪ್ರಮುಖ ಕಾರಣವಾಗಿರುವ ಹಸಿರುಮನೆ ಅನಿಲಗಳ ಬಿಡುಗಡೆಯನ್ನು ಕಡಿತಗೊಳಿಸುವ ನಿಟ್ಟಿನಲ್ಲಿ ಸಾಮಾನ್ಯ ಪ್ಲಾಸ್ಟಿಕ್‌ ಬದಲು ಬಯೋಡಿಗ್ರೇಡೆಬಲ್‌ ಪ್ಲಾಸ್ಟಿಕ್‌ ಬಳಕೆಗೆ ಹೊರಳುವ ಪ್ರಯತ್ನ ನಡೆದಿದೆ. ಕೆಲವು ಬಯೋಡಿಗ್ರೇಡೆಬಲ್‌ ಪ್ಲಾಸ್ಟಿಕ್‌ ವಿಘಟನೆಗೆ ಒಳಪಡುತ್ತಿದ್ದಂತೆ ಮಿಥೇನ್‌ ಮತ್ತು ಇಂಗಾಲದ ಡೈಆಕ್ಸೈಡ್‌ ಅನಿಲ ಬಿಡುಗಡೆಯಾಗುತ್ತವೆ. ಈ ಎರಡೂ ಅನಿಲಗಳು ಜಾಗತಿಕ ತಾಪಮಾನ ಹೆಚ್ಚಳಕ್ಕೆ ಕಾರಣವಾಗುತ್ತಿರುವ ಅಂಶಗಳೇ ಆಗಿವೆ. ಈ ಕಾರಣಗಳಿಂದಲೇ 'ಬಯೋಡಿಗ್ರೇಡೆಬಲ್‌ ಪ್ಲಾಸ್ಟಿಕ್‌' ಪರಿಸರದಲ್ಲಿ ಕರಗಿದರೂ ಅವು ಪೂರ್ಣ ಪರಿಸರಸ್ನೇಹಿ ಆಗಿಲ್ಲ.

ಸಾಮಾನ್ಯ ಪ್ಲಾಸ್ಟಿಕ್‌ಗೆ ಬಯೋಡಿಗ್ರೇಡೆಬಲ್‌ ಪ್ಲಾಸ್ಟಿಕ್‌ ಉತ್ತಮ ಪರಿಸರ ಸ್ನೇಹಿ ಪರ್ಯಾಯವಾಗಿದೆ. ಆದರೆ, ಅದನ್ನು ತಯಾರಿಸಲು ಬಳಸುವ ವಸ್ತುಗಳ ಆಧಾರ ಮೇಲೆ ಅದರ ವಿಘಟನೆ ಕ್ರಿಯೆ ಅವಲಂಬಿತವಾಗಿರುತ್ತದೆ. ಕೊಳೆಯಬಲ್ಲ ಪೆಟ್‌ ಬಾಟಲಿ ಸಿದ್ಧಪಡಿಸಲು ಸಸ್ಯ ಮೂಲದ ವಸ್ತುಗಳನ್ನು ಉತ್ಪಾದನೆಯಲ್ಲಿ ಬೆರೆಸಲಾಗುತ್ತದೆ. ಇಂಥ ವಸ್ತುಗಳ ಪ್ರಮಾಣ ಶೇ 1 ರಿಂದ ಶೇ 2ರಷ್ಟು ಮಾತ್ರ. ಆದರೆ, ಉಳಿದ ಶೇ 99–ಶೇ 98ರಷ್ಟು ರೆಸಿನ್‌ (ರಾಸಾಯನಿಕ ರಾಳ) ಆಗಿರುತ್ತದೆ. ಅಂದರೆ, ಇದು ಪೆಟ್‌ ಪಾಲಿಮರ್‌ ಆಗಿಯೇ ಇರುತ್ತದೆಯೇ ಹೊರತು ಪೂರ್ಣ ಕೊಳೆಯಬಲ್ಲ ಪೆಟ್‌ ಆಗುವುದಿಲ್ಲ. ಬ್ಯಾಕ್ಟೀರಿಯಾ ಮತ್ತು ಸೂಕ್ಷ್ಮಜೀವಿಗಳ ಪ್ರಭಾವದಿಂದ ಇಂಥ ಪ್ಲಾಸ್ಟಿಕ್‌ ಕರಗುವ ಸ್ಥಿತಿಗೆ ತಲುಪಲು ನಿರ್ದಿಷ್ಟ ವಾತಾವರಣದೊಂದಿಗೆ ಕನಿಷ್ಠ 6 ತಿಂಗಳು ಬೇಕಾಗುತ್ತದೆ. ಹಾಗಿದ್ದರೂ ಶೇ 20–ಶೇ 30ರಷ್ಟು ಮಾತ್ರ ಕರಗಬಲ್ಲದು. ಈ ಬಗ್ಗೆ ಜಗತ್ತಿನಾದ್ಯಂತ ಹಲವು ಸಂಶೋಧನೆಗಳು, ಅಧ್ಯಯನಗಳು ನಡೆದಿದ್ದು, ಬಯೋಡಿಗ್ರೇಡೆಬಲ್‌ ಪ್ಲಾಸ್ಟಿಕ್‌ ವಿಘಟನೆಗೆ (ಪುಡಿಯಾಗುವುದು) ಒಳಗಾಗುತ್ತದೆ ಎಂಬುದಕ್ಕೆ ಆಧಾರ ದೊರೆತಿಲ್ಲ. ಕೆಲವು ಬಯೋಡಿಗ್ರೇಡೆಬಲ್‌ ಪ್ಲಾಸ್ಟಿಕ್‌ ಹೇಗೆ ಮೈಕ್ರೋಪ್ಲಾಸ್ಟಿಕ್‌ ಮತ್ತು ಲೋಹಗಳನ್ನು ಉಳಿಸಿ ಪರಿಸರ ಮಾಲಿನ್ಯಕ್ಕೆ ಕಾರಣವಾಗುತ್ತದೆ ಎಂಬುದರ ಬಗ್ಗೆಯೂ ಅಧ್ಯಯನಗಳು ನಡೆದಿವೆ.

ಬಯೋಡಿಗ್ರೇಡೆಬಲ್‌ ಪ್ಲಾಸ್ಟಿಕ್‌ಗಳನ್ನು ವಿಲೇವಾರಿ ಮಾಡಲು ಸೂಕ್ತ ಮಾರ್ಗವನ್ನೂ ಕಂಡುಕೊಳ್ಳಲು ಸಾಧ್ಯವಾಗಿಲ್ಲ. ಸಾಮಾನ್ಯ ಪ್ಲಾಸ್ಟಿಕ್‌ನೊಂದಿಗೆ ಬಯೋಡಿಗ್ರೇಡೆಬಲ್‌ ಪ್ಲಾಸ್ಟಿಕ್‌ಗಳನ್ನು ಮರುಬಳಕೆ ಪ್ರಕ್ರಿಯೆಗೆ ಒಳಪಡಿಸುವುದು ಸಾಧ್ಯವಿಲ್ಲ ಎಂಬುದು ಗಮನಕೊಡಬೇಕಾದ ಪ್ರಮುಖ ಅಂಶ. ಹಾಗೇನಾದರು ಎರಡೂ ರೀತಿಯ ಪ್ಲಾಸ್ಟಿಕ್‌ಗಳನ್ನು ಒಟ್ಟಿಗೆ ಮರುಬಳಕೆ ಕ್ರಿಯೆಗೆ ಒಳಪಡಿಸಿದರೆ, ಕರಗುವ ಇಡೀ ಪ್ಲಾಸ್ಟಿಕ್‌ ಕಲುಷಿತಗೊಳ್ಳುತ್ತದೆ ಹಾಗೂ ಅದರಿಂದ ಮತ್ತೊಂದು ಸಮಸ್ಯೆ ಸೃಷ್ಟಿಯಾಗುತ್ತದೆ.

ಕೊಳೆಯಬಲ್ಲ ಪ್ಲಾಸ್ಟಿಕ್‌ ಜತೆಗೆ ಬೇರೆ ವಸ್ತುಗಳು ಸೇರುವಂತಿಲ್ಲ; ಪ್ಲಾಸ್ಟಿಕ್‌ ಆಯ್ದು ಸಂಗ್ರಹಿಸುವವರು ಇಂಥ ಬಾಟಲಿಗಳನ್ನು ತೆಗೆದುಕೊಳ್ಳುವುದಿಲ್ಲ, ಎಲ್ಲೆಂದರಲ್ಲಿ ಬಿಸಾಡಿದರೂ ಕೊಳೆಯುವುದಿಲ್ಲ, ಇದನ್ನು ಮರುಬಳಕೆಗೆ ಒಳಪಡಿಸಲು ಸಾಧ್ಯವಿಲ್ಲ ಎಂಬುದೂ ಇದರ ಮಿತಿ. ಇವು ನೀರಿಗೆ ಸೇರಿದರೆ, ಸಸ್ಯ ಮೂಲ ವಸ್ತುಗಳನ್ನು ಬಳಸಿರುವುದರಿಂದ ಇಂಗಾಲದ ಡೈಆಕ್ಸೈಡ್‌ ಬಿಡುಗಡೆಯಾಗುತ್ತದೆ. ಅಲ್ಲಿ ಸೂಕ್ಷ್ಮಾಣುಗಳು ಬೆಳವಣಿಗೆಯಾಗುತ್ತ ಇಡೀ ನೀರಿನ ಮೂಲವೇ ಕಲುಷಿತಗೊಳ್ಳಲು ಕಾರಣವಾಗುತ್ತವೆ.

ಕೊಳೆಯುತ್ತದೆಯೇ ಬಯೋಡಿಗ್ರೇಡೆಬಲ್‌ ಪ್ಲಾಸ್ಟಿಕ್‌?

ಬಯೋಡಿಗ್ರೇಡೆಬಲ್‌ ಪ್ಲಾಸ್ಟಿಕ್‌ ವಿಘಟನೆಗೆ ಒಳಪಡಲು ವಿಶೇಷ ವಾತಾವರಣ ನಿರ್ಮಿಸಬೇಕು. ಉಷ್ಣಾಂಶ 50 ಡಿಗ್ರಿಗಿಂತಲೂ ಹೆಚ್ಚಿರಬೇಕು, ಸೂರ್ಯನ ಬೆಳಕು ಹಾಗೂ ಆಮ್ಲಜನಕದ ಪ್ರಭಾವದಿಂದ ದೂರವಿರಬೇಕು. ಅಂತಹ ವಾತಾವರಣ ನಿರ್ಮಿಸುವ ಕ್ರಿಯೆ ಕ್ಲಿಷ್ಟಕರ. ಹಲವು ಹಂತಗಳನ್ನು ಒಳಗೊಂಡಿರುವ ಕೊಳೆಸುವ ಕ್ರಿಯೆಗೆ ಮುಖ್ಯವಾಗಿ 77 ಡಿಗ್ರಿಯಿಂದ 140 ಡಿಗ್ರಿ ಉಷ್ಣತೆ ವಾತಾವರಣ ಕಾಯ್ದುಕೊಳ್ಳುವುದು ಅವಶ್ಯಕ. ಬೇರ್ಪಡಿಸುವುದು, ಪುಡಿ ಮಾಡುವುದು ಹಾಗೂ ಮಿಶ್ರಣ ಮಾಡಿ ನಿಯಂತ್ರಿತ ವಾತಾವರಣದಲ್ಲಿ ಕೊಳೆಯಲು ಇರಿಸುವುದು ಜನಸಾಮಾನ್ಯರಿಗೆ ಸುಲಭ ಕಾರ್ಯವಲ್ಲ.

ಮನೆಯಲ್ಲಿಯೇ ಬಯೋಡಿಗ್ರೇಡೆಬಲ್‌ ಪ್ಲಾಸ್ಟಿಕ್‌ ಕೊಳೆಸಿ ಗೊಬ್ಬರ ಮಾಡುವುದು ಪ್ರಸ್ತುತ ಬಹು ದೂರದ ಯೋಚನೆ. ಮನೆಯಲ್ಲಿ ನಿರ್ದಿಷ್ಟ ಉಷ್ಣತೆ, ವಾತಾವರಣ, ತೇವಾಂಶ ಮಟ್ಟ ಕಾಯ್ದುಕೊಳ್ಳುವ ವ್ಯವಸ್ಥೆ ಮಾಡುವುದು ಬಹುತೇಕ ಅಸಾಧ್ಯ. ಭಾರತದ ಬಹುತೇಕ ನಗರಗಳಲ್ಲಿ ಇಂಥ ವ್ಯವಸ್ಥೆ ಲಭ್ಯವಿಲ್ಲ; ಅಂದರೆ, ಬಯೋ–ಪ್ಲಾಸ್ಟಿಕ್‌ಗಳು ಸರಿಯಾಗಿ ವಿಲೇವಾರಿ ಕಾಣದೆ ಸಾಮಾನ್ಯ ಪ್ಲಾಸ್ಟಿಕ್‌ನಂತೆಯೇ ರಸ್ತೆಗಳು ಹಾಗೂ ಎಲ್ಲೆಂದರಲ್ಲಿ ಸಿಲುಕುತ್ತವೆ. ಸಾಮಾನ್ಯ ಪ್ಲಾಸ್ಟಿಕ್‌ಗಳು ಪರಿಸರಕ್ಕೆ ಹಾನಿ ಉಂಟು ಮಾಡುವ ರೀತಿಯಲ್ಲಿಯೇ ಬಯೋ–ಪ್ಲಾಸ್ಟಿಕ್‌ಗಳು ಸಹ ಮಾರಕವಾಗುತ್ತವೆ.

ಬಯೋಡಿಗ್ರೇಡೆಬಲ್‌ ಪ್ಲಾಸ್ಟಿಕ್‌ನ ಪ್ರತ್ಯೇಕ ವಿಂಗಡಣೆ, ಸಂಗ್ರಹ ಹಾಗೂ ಅದರ ವಿಘಟನೆಗೆ ನಿರ್ದಿಷ್ಟ ವಾತಾವರಣ ಕಲ್ಪಿಸುವುದಕ್ಕೆ ಸಾಕಷ್ಟು ಅಡೆತಡೆಗಳಿವೆ. ಸಾಮಾನ್ಯ ಪ್ಲಾಸ್ಟಿಕ್‌ ಸಂಗ್ರಹದಲ್ಲಿಯೇ ಪೂರ್ಣ ಯಶಸ್ಸು ಕಂಡಿರದ ಸಂದರ್ಭದಲ್ಲಿ ಬಯೋಡಿಗ್ರೇಡೆಬಲ್‌ ಪ್ಲಾಸ್ಟಿಕ್‌ಗಳನ್ನು ಜನರಿಂದ ಪ್ರತ್ಯೇಕ ಸಂಗ್ರಹ ಮಾಡಿ, ಕೈಗಾರಿಕೆಗಳಲ್ಲಿ ಅವುಗಳನ್ನು ವಿಘಟನೆಗೆ ಒಳಪಡಿಸುವ ಕಾರ್ಯ ಆರಂಭಿಸುವುದು ಕಷ್ಟಕರ ಸಂಗತಿಯಾಗಿದೆ.

ಪ್ಲಾಸ್ಟಿಕ್‌ ಮರುಬಳಕೆ ಪರಿಹಾರ

ವೈಜ್ಞಾನಿಕವಾಗಿ ಪ್ಲಾಸ್ಟಿಕ್‌ಗಳಲ್ಲೇ ಉತ್ತಮ ಗುಣಮಟ್ಟವನ್ನು 'ಪೆಟ್‌' ಹೊಂದಿದ್ದು, 100ಕ್ಕೆ ನೂರರಷ್ಟು ಪುನರ್ಬಳಕೆ (Recycle) ಮಾಡಬಹುದಾಗಿದೆ. ಬಳಸಿದ ಪ್ಲಾಸ್ಟಿಕ್‌ನ್ನು ಕಸವಾಗಿ ಎಸೆಯದೆ ಅದು ಮರುಬಳಕೆ ಆಗುವಂತೆ ಗಮನ ಕೊಡುವುದು ಉತ್ತಮ. ಬಯೋಡಿಗ್ರೇಡೆಬಲ್‌ ಪ್ಲಾಸ್ಟಿಕ್‌ ಬಳಸಿದರೂ ಅದನ್ನು ಎಲ್ಲೆಂದರಲ್ಲಿ ಎಸೆದು ಹೋಗುವಂತಿಲ್ಲ. ಹೊಸ ಪ್ಲಾಸ್ಟಿಕ್‌ ಉತ್ಪಾದನೆಯನ್ನು ನಿಯಂತ್ರಿಸುವ ಮೂಲಕ ಪರಿಸರ ಕಾಳಜಿ ವಹಿಸಲು ಬಳಸಿದ ಪ್ಲಾಸ್ಟಿಕ್‌ ಮರುಬಳಕೆ ಸೂಕ್ತ ಮಾರ್ಗವೆನಿಸಿದೆ. ಮರುಬಳಕೆಗೆ ಒಳಗಾಗುವ ಪೆಟ್‌ನಿಂದ ಶೂ, ಜೀನ್ಸ್‌ ಬಟ್ಟೆ, ನೂಲು ಸೇರಿದಂತೆ ಹಲವು ವಸ್ತುಗಳನ್ನು ತಯಾರಿಸಬಹುದು. ಬಳಕೆಯಾದ ಪೆಟ್‌ ಬಾಟಲಿ, ಪ್ಯಾಕೆಟ್‌ಗಳ ಪೈಕಿ ಭಾರತದಲ್ಲಿ ಶೇ 80ಕ್ಕೂ ಹೆಚ್ಚು ಮರುಬಳಕೆಯಾಗುತ್ತಿದೆ.

***

* ಪುನರ್ಬಳಕೆ ಪೆಟ್‌ ಪ್ಲಾಸ್ಟಿಕ್‌ನಿಂದ ನೂಲು ತೆಗೆಯಲು ಶೇ 86 ರಷ್ಟು ಕಡಿಮೆ ಪ್ರಮಾಣದಲ್ಲಿ ನೀರು ಬಳಕೆ. ಪೆಟ್ರೋಕೆಮಿಕಲ್‌ನಿಂದ ನೇರವಾಗಿ ಕೃತಕ ನೂಲು (polyester) ತಯಾರಿಸುವಾಗ ಸಂಸ್ಕರಣೆಗೆ ನೀರಿನ ಅಧಿಕ ಬಳಕೆಯಾಗುತ್ತದೆ.

* ಒಂದು ಟನ್‌ ಪೆಟ್‌ ಪ್ಲಾಸ್ಟಿಕ್‌ ಮರುಬಳಕೆಯಿಂದ 5.6 ಕ್ಯುಬಿಕ್‌ ಮೀಟರ್‌ ಪ್ರದೇಶ ಕಸದಿಂದ ಭರ್ತಿಯಾಗುವುದನ್ನು ತಪ್ಪಿಸಬಹುದು, ಇಂಗಾಲದ ಡೈಆಕ್ಸೈಡ್‌ ಹೊರಸೂಸುವುದನ್ನು ಕಡಿತಗೊಳಿಸಬಹುದು.

* ಭಾರತದಲ್ಲಿ ಬಳಕೆ ಮಾಡಿದ ಪೆಟ್‌ ಪ್ಲಾಸ್ಟಿಕ್‌ ಬಾಟಲಿಗಳ ಪೈಕಿ ಪುನರ್ಬಳಕೆಯಾಗುತ್ತಿರುವ ಪ್ರಮಾಣ ಶೇ 80. ಅಮೆರಿಕ ಮತ್ತು ಯುರೋಪಿಯನ್‌ ರಾಷ್ಟ್ರಗಳಿಗೆ ಹೋಲಿಸಿದರೆ ಭಾರತದಲ್ಲೇ ಅಧಿಕ.

* ಪುನರ್ಬಳಕೆ ಪೆಟ್‌ ಪ್ಲಾಸ್ಟಿಕ್‌ನಿಂದ ಶೂ, ನೂಲು, ಬಟ್ಟೆ, ಇತರೆ ವಸ್ತುಗಳನ್ನು ಸಿದ್ಧಪಡಿಸಲಾಗುತ್ತಿದೆ.