ಸ್ತನ್ಯಪಾನ: ಕಾಮನೆಯ ದೃಷ್ಟಿಯೇಕೆ?

ಭಾನುವಾರ, ಮೇ 19, 2019
32 °C

ಸ್ತನ್ಯಪಾನ: ಕಾಮನೆಯ ದೃಷ್ಟಿಯೇಕೆ?

Published:
Updated:
Prajavani

ಇತ್ತೀಚೆಗೆ ಕೊಲ್ಕತ್ತದ ಮಾಲ್‌ ಒಂದರಲ್ಲಿ ನಡೆದ ಘಟನೆ: ಮಗುವಿಗೆ ಹಾಲೂಡಿಸುತ್ತಿದ್ದ ಯುವತಿಗೆ ಮಾಲ್‌ನ ಸಿಬ್ಬಂದಿ ಬೈದಿದ್ದಲ್ಲದೇ, ಶೌಚಾಲಯಕ್ಕೆ ತೆರಳಿ ಸ್ತನ್ಯಪಾನ ಮಾಡಿಸುವಂತೆ ಹೇಳಿದರಂತೆ.

ಇನ್ನೊಂದು ವಿಮಾನದಲ್ಲಿ ನಡೆದ ಘಟನೆ: ಯುವತಿಯೊಬ್ಬಳು ರಚ್ಚೆ ಹಿಡಿದ ಮಗುವಿಗೆ ಹಾಲುಣಿಸುತ್ತಿದ್ದ ಸಂದರ್ಭ ಮರೆಮಾಚಲು ಹೊದ್ದಿದ್ದ ಟವೆಲ್‌ ಜಾರಿ ಬಿದ್ದಾಗ ಮುಂದಿನ ಸೀಟ್‌ಗಳಲ್ಲಿದ್ದ ಇಬ್ಬರು ಮಧ್ಯ ವಯಸ್ಕರು ಹಿಂದೆ ತಿರುಗಿ ದಿಟ್ಟಿಸಿ ನೋಡುತ್ತ ಅಶ್ಲೀಲ ಪದ ಉಚ್ಛರಿಸಿದರಂತೆ. ಈ ಬಗ್ಗೆ ಗಲಾಟೆಯಾದರೂ ಯಾರೂ ನೆರವಿಗೆ ಬರದೆ ಆಕೆ ಸಾಮಾಜಿಕ ಜಾಲತಾಣದಲ್ಲಿ ದೂರಿದ್ದರು.

ಪ್ರತಿ ಬಾರಿ ಯುವತಿಯೊಬ್ಬಳು ಉಪಾಹಾರಗೃಹದಲ್ಲೋ, ವಿಮಾನದಲ್ಲೋ, ಸೂಪರ್‌ ಮಾರ್ಕೆಟ್ಟಿನಲ್ಲೋ ಅಥವಾ ಇನ್ನಿತರ ಸಾರ್ವಜನಿಕ ಸ್ಥಳದಲ್ಲಿ ಮಗುವಿಗೆ ಹಾಲುಣಿಸುತ್ತಿದ್ದಾಗ ವರದಿಯಾಗುವ ಇಂತಹ ಅಹಿತಕರ ಘಟನೆಗಳು ನಿಜವಾಗಿಯೂ ನಾವು 21ನೆಯ ಶತಮಾನದಲ್ಲಿ, ಕೃತಕ ಬುದ್ಧಿಮತ್ತೆ ಮುಂಚೂಣಿಗೆ ಬಂದಿರುವ ಯುಗದಲ್ಲಿ ಬದುಕುತ್ತಿದ್ದೀವಾ ಎನಿಸಿಬಿಡುತ್ತದೆ.

ಕಾಮನೆ ತುಂಬಿದ ದೃಷ್ಟಿಯೇಕೆ?

ಫ್ಯಾಷನ್‌ ಹೆಸರಿನಲ್ಲಿ ನಟಿಯರು, ರೂಪದರ್ಶಿಯರು ತೆರೆದೆದೆ ಪ್ರದರ್ಶಿಸಿಸುವುದಿಲ್ಲವೇ! ಆದರೆ ಕಂದನ ಹಾಲುಣ್ಣುವ ಹಕ್ಕಿಗೆ ಅಡ್ಡಿಪಡಿಸುವುದು, ಆ ಸಂದರ್ಭದಲ್ಲೂ ಕಾಮನೆಗಳನ್ನು ಪ್ರದರ್ಶಿಸುವುದು ಎಷ್ಟು ಸರಿ? ಇದಕ್ಕೆ ಕಾರಣ ಮಹಿಳೆಯ ಈ ಅಂಗವನ್ನು ಲೈಂಗಿಕವಾಗಿ ಪ್ರಚೋದಿಸಲು ಇರುವುದು ಎಂಬಂತೆ ಬಿಂಬಿಸಲಾಗಿರುವುದು.

‘ಆ ಸಂದರ್ಭದಲ್ಲಿ ಏನು ಮಾಡಬೇಕು ಎಂದು ನನಗೆ ತೋಚಲಿಲ್ಲ. ಅವನಿಗೆ ಚೆನ್ನಾಗಿ ಬಯ್ದು ಕೂಗಾಡಲೇ ಎನಿಸಿಬಿಟ್ಟಿತ್ತು. ಪುಟ್ಟ ಮಗುವಿಗೆ ಹಾಲು ಕುಡಿಸುವುದನ್ನೂ ಕಾಮನೆಗಳನ್ನು ತೃಪ್ತಿಪಡಿಸಿಕೊಳ್ಳುವುದಕ್ಕಾಗಿ ನೋಡುತ್ತಾರಲ್ಲ! ಪುರುಷರು ಸಾರ್ವಜನಿಕ ಸ್ಥಳದಲ್ಲಿ ಮೂತ್ರ ವಿಸರ್ಜನೆ ಮಾಡುವಾಗ ಮಹಿಳೆಯರು ನೋಡುತ್ತಾರೆ ಎಂದು ಅನಿಸುವುದಿಲ್ಲವೇ? ಆ ಕುರಿತು ಅವರಿಗೆ ನಾಚಿಕೆ ಇಲ್ಲವೇ? ಅಂದ ಮೇಲೆ ಸಾರ್ವಜನಿಕ ಸ್ಥಳದಲ್ಲಿ ಹಾಲೂಡಿಸಲು ನಾವ್ಯಾಕೆ ನಾಚಿಕೆ ಪಡಬೇಕು?’ ಎಂದು ವಿಮಾನದಲ್ಲಿ ನಡೆದ ಘಟನೆ ಕುರಿತು ಆ ಯುವತಿ ಬರೆದುಕೊಂಡಿದ್ದಾಳೆ.

ಬಾಕ್ಸ್‌ ಆಫೀಸ್‌ ಕೊಳ್ಳೆ ಹೊಡೆದ ‘ಬಾಹುಬಲಿ’ ಚಲನಚಿತ್ರದಲ್ಲಿ ಶಿವಗಾಮಿ (ರಮ್ಯಕೃಷ್ಣ) ರಾಜಸಭೆಯಲ್ಲಿ ಸಿಂಹಾಸನದಲ್ಲಿ ಕೂತು ಇಬ್ಬರು ಮಕ್ಕಳಿಗೆ ಸ್ತನ್ಯಪಾನ ಮಾಡಿಸುವ ದೃಶ್ಯವಿದೆ. ಇದು ನಮ್ಮ ಸಮಾಜದಲ್ಲಿ ಸಾಮಾನ್ಯ ಎಂಬಂತೆ ಬಿಂಬಿಸಲಾಗಿದೆ. ಹಾಗೆಯೇ ಬ್ರೆಜಿಲ್‌ನಲ್ಲಿ ಸಂಸದೆಯೊಬ್ಬಳು ಕಲಾಪದಲ್ಲಿ ಭಾಗವಹಿಸಿದಾಗ ಮಗುವಿಗೆ ಹಾಲೂಡಿಸಿದ ಚಿತ್ರ ಪ್ರಕಟವಾಗಿತ್ತು. ಆ ಬಗ್ಗೆ ಪರವಾದ ಚರ್ಚೆಗಳೇ ನಡೆದಿದ್ದವು. ಆದರೆ ವರ್ಷದ ಹಿಂದೆ ಕೇರಳದ ಪತ್ರಿಕೆಯೊಂದು ತನ್ನ ಮುಖಪುಟದಲ್ಲಿ ತಾಯಿಯೊಬ್ಬಳು ಮಗುವಿಗೆ ಹಾಲೂಡಿಸುತ್ತಿದ್ದ ಚಿತ್ರ ಪ್ರಕಟಿಸಿದಾಗ ‘ಲೈಂಗಿಕ ಆಸಕ್ತಿ ಪ್ರಚೋದಕ’ ಎಂದು ಕೆಲವರು ಕೋರ್ಟ್‌ ಮೆಟ್ಟಿಲೇರಿದ್ದರು, (ಆಕೆ ರೂಪದರ್ಶಿ, ಆ ಮಗು ಆಕೆಯದ್ದಲ್ಲ ಎಂಬ ವಿವಾದಗಳೂ ಹುಟ್ಟಿಕೊಂಡಿದ್ದವು).

ಅಮೆರಿಕದಲ್ಲಿ ಬಹುತೇಕ ರಾಜ್ಯಗಳಲ್ಲಿ ಸಾರ್ವಜನಿಕವಾಗಿ ಸ್ತನ್ಯಪಾನ ಮಾಡಿಸುವುದಕ್ಕೆ ಕಾನೂನು ಬೆಂಬಲವಿದೆ. ಜರ್ಮನಿಯಲ್ಲಿ ಮಹಿಳಾ ಉದ್ಯೋಗಿಗಳಿಗೆ ಇದಕ್ಕೆಂದೇ ಪ್ರತ್ಯೇಕ ಸ್ಥಳವನ್ನು ನಿಗದಿಪಡಿಸಲಾಗಿದೆ. ಭಾರತ ಸೇರಿದಂತೆ ಏಷ್ಯಾ, ಆಫ್ರಿಕಾ, ಚೀನಾ, ಆಸ್ಟ್ರೇಲಿಯಾ, ಯೂರೋಪ್, ಇಂಗ್ಲೆಂಡ್‌ನಲ್ಲಿ ತೆರೆದ ಎದೆಯಿಂದ ಸಾರ್ವಜನಿಕ ಸ್ಥಳಗಳಲ್ಲಿ ಎದೆ ಉಣಿಸುವುದು ಅಪರಾಧವಲ್ಲ ಮತ್ತು ಇದಕ್ಕೆ ಸಾಮಾಜಿಕ ಬೆಂಬಲವಿದೆ. ನಮ್ಮ ದೇಶದಲ್ಲೂ ಕೆಲವು ಬಸ್‌– ರೈಲ್ವೆ– ವಿಮಾನ ನಿಲ್ದಾಣಗಳಲ್ಲಿ ಪ್ರತ್ಯೇಕ ಕೊಠಡಿಯನ್ನು ನಿರ್ಮಿಸಲಾಗಿದ್ದರೂ ಹೆಚ್ಚಿನವು ಕೊಳಕಾಗಿದ್ದು, ಹಾಲೂಡಿಸಲು ಯೋಗ್ಯವಲ್ಲ.

ಎದೆ ಹಾಲು ಅಮೃತ ಸಮಾನ

ಸಹಜ ಹೆರಿಗೆ ಆಗಿದ್ದರೆ ಒಂದು ಗಂಟೆಯೊಳಗೆ, ಶಸ್ತ್ರಚಿಕಿತ್ಸೆ ಮೂಲಕ (ಸಿಜೇರಿಯನ್) ಹೆರಿಗೆ ಆಗಿದ್ದರೆ ನಾಲ್ಕು ಗಂಟೆಯೊಳಗೆ ಎದೆ ಹಾಲು ಕುಡಿಸಲು ಆರಂಭಿಸಬೇಕು. ಕೇವಲ ಎದೆಹಾಲನ್ನು ಆರು ತಿಂಗಳವರೆಗೆ ಮುಂದುವರೆಸಿ, ಏಳನೇ ತಿಂಗಳಿಂದ ಪೂರಕ ಆಹಾರ ಆರಂಭಿಸಿ ಇದರ ಜೊತೆ ಎದೆಹಾಲನ್ನು ಎರಡು ವರ್ಷದವರೆಗೆ ಉಣಿಸಬೇಕು ಎನ್ನುತ್ತದೆ ವಿಶ್ವ ಆರೋಗ್ಯ ಸಂಸ್ಥೆ.

ಎಳೆ ಕಂದಮ್ಮಗಳ ಹೊಟ್ಟೆ ಬಹಳ ಸಣ್ಣದು. ಪ್ರತಿ 2–4 ಗಂಟೆಗೊಮ್ಮೆ ಹೊಟ್ಟೆ ಖಾಲಿಯಾಗಿ ಹಸಿವಾದಾಗ ಅಳುತ್ತವೆ. ಈ ಅಳುವಿಗೆ ಸಮಯ, ಸಂದರ್ಭ, ಸ್ಥಳದ ಮಿತಿಯಿಲ್ಲ. ಇವು ವಿಮಾನ, ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ, ಷಾಪಿಂಗ್ ಮಾಲ್, ಪ್ರವಾಸಿ ತಾಣ, ಮೃಗಾಲಯ, ಉದ್ಯಾನವನ, ಪಾದಚಾರಿ ಮಾರ್ಗ, ಸಬ್-ವೇ ಅಥವಾ ಸಿನಿಮಾ ಹಾಲ್ ಆಗಿರಬಹುದು. ಈ ಸ್ಥಳಗಳಲ್ಲಿ ಹಾಲಿಗಾಗಿ ಶಿಶುಗಳ ರಂಪಾಟ ಅಪರೂಪವೇನಲ್ಲ.

ಷಾಪಿಂಗ್ ಮಾಲ್‌ನಲ್ಲಿ ಮಗುವಿಗೆ ಎದೆ ಹಾಲು ಉಣಿಸಲು ಪ್ರತ್ಯೇಕ ಜಾಗ ಇಲ್ಲದ್ದರಿಂದ ಮಹಡಿ ಮೆಟ್ಟಿಲ ಮೇಲೆ ಕುಳಿತ ಯುವತಿ ಹಾಲು ಕುಡಿಸಿದ ಘಟನೆಯನ್ನೇ ತೆಗೆದುಕೊಳ್ಳಿ. ಬಾತ್‌ರೂಮಿಗೆ ಹೋಗಿ ಹಾಲು ಕುಡಿಸಿ ಎಂದರೆ.. ಅದು ಇರುವುದು ಬೇರೆ ಕೆಲಸಕ್ಕೆ. ದೊಡ್ಡವರಾದ ನಾವು ಬಾತ್‌ರೂಮ್‌ನಲ್ಲಿ ಊಟ, ತಿಂಡಿ ಸೇವಿಸಿದ್ದೇವೆಯೇ? ಅಮ್ಮನ ಅಮೃತ ಅಲ್ಲಿ ಸವಿಯಲು ಸಾಧ್ಯವೇ?

ಇನ್ನೊಂದು ಘಟನೆ: ಬಸ್‌ನಲ್ಲಿ ಹೋಗ್ತಾ ಇರುವಾಗ ಹಸಿವಿನಿಂದ ಅಳುವ ಮಗುವಿಗೆ ಮಗು ಹಾಲುಣಿಸಲು ಶುರುಮಾಡಿದಳು. ಎದುರು ಸೀಟಿನ ಗಂಡಸು ಕಳ್ಳಗಣ್ಣಿನಿಂದ ಯುವತಿಯ ಎದೆ, ಮುಖ ನೋಡ್ತಾ ಇದ್ದ. ಇದನ್ನು ಸಹಿಸಿದ ಆಕೆ ಸೀರೆ ಸೆರಗಿನಿಂದ ತನ್ನ ಎದೆ, ಮಗುವಿನ ಮುಖ ಮುಚ್ಚಿದಳು. ಮಗುವಿಗೆ ತುಂಬ ಸೆಕೆ. ಉಸಿರುಗಟ್ಟಿ ಹೊಯ್ತು. ಅಮ್ಮನ ಮುಖ ಕಾಣದ್ದಕ್ಕೆ ಜೋರಾಗಿ ಅಳಲು ಪ್ರಾರಂಭಿಸಿ, ಸೆರಗನ್ನು ಕಿತ್ತೆಸೆಯಿತು. ಆ ತಾಯಿ ಮುಖ ಮುಚ್ಚುವುದು, ಮಗು ಕಿತ್ತೆಸೆಯುವುದು, ಅಳುವುದು ನಡೆಯತ್ತಲೇ ಇತ್ತು, ಆದರೆ ಮಗು ಮಾತ್ರ ಹಾಲು ಕುಡಿಯಲೇ ಇಲ್ಲ.

ಎದೆ ಮುಚ್ಚಿ ಹಾಲೂಡುವುದು ವೈಜ್ಞಾನಿಕವಾಗಿ ತಪ್ಪು ವಿಧಾನ ಮತ್ತು ತಾಯಿ– ಮಗುವಿಗೆ ಅನಾನುಕೂಲ. ‘ಇದು ಅಶ್ಲೀಲ, ಸಂಸ್ಕೃತಿಗೆ ವಿರೋಧವಾಗಿದೆ, ಫ್ಯಾಷನ್‌ಗಾಗಿ ಮತ್ತು ವ್ಯಕ್ತಿಗತ ಪ್ರಚಾರಕ್ಕಾಗಿ ಹೀಗೆ ಮಾಡುತ್ತಿದ್ದಾರೆ‘ ಎಂಬ ಸಂಪ್ರದಾಯವಾದಿಗಳ ಟೀಕೆ ನಿರಾಧಾರ. ತಾಯಂದಿರು ಸಾರ್ವಜನಿಕವಾಗಿ ಎದೆ ಬಿಚ್ಚಿ ಹಾಲು ಕುಡಿಸಲು ಅಸಹ್ಯಪಡಬೇಕಿಲ್ಲ.  

ಬಾಂಧವ್ಯದ ಪ್ರತೀಕ

ಹಾಲು ಉಣಿಸುವಾಗ ಅಮ್ಮನ ಎದೆ ತೆರೆದಿರಬೇಕು. ಆಗ ಮಾತ್ರ ಮಗು ಸರಿಯಾಗಿ ಮೊಲೆ ತೊಟ್ಟು ಹಿಡಿದು ಹಾಲು ನುಂಗುತ್ತದೆ. ಹಾಲು ಉಣ್ಣುವಾಗ ಮಗು ಎಚ್ಚರವಾಗಿದೆಯೇ ಅಥವಾ ನಿದ್ರೆ ಬಂದಿದೆಯೇ ಅಥವಾ ಬಾಯಿಯಿಂದ ಹಾಲು ಉಕ್ಕಿ ಬರುತ್ತಿದೆಯೇ ಎಂಬುದು ತಾಯಿಗೆ ಕಾಣುತ್ತಿರಬೇಕು. ಅಮ್ಮನಿಗೆ ಮಗುವಿನ ಮುಖ, ಮಗುವಿಗೆ ಅಮ್ಮನ ಮುಖ ಕಾಣುತ್ತಿರಬೇಕು. ವೈದ್ಯಕೀಯವಾಗಿ ಇದು ಸರಿಯಾದ ವಿಧಾನ. ಹೀಗಿದ್ದರೆ ಎದೆ ಹಾಲಿನ ಪ್ರಮಾಣ ಹೆಚ್ಚುತ್ತದೆ. ಪ್ರೀತಿ, ಅಕ್ಕರೆ, ಬಾಂಧವ್ಯ ಹೆಚ್ಚುತ್ತದೆ.

(ಲೇಖಕರು ಬೆಂಗಳೂರಿನಲ್ಲಿ ಮಕ್ಕಳ ತಜ್ಞರು)

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !