ಮಲೆಮಹದೇಶ್ವರ ಬೆಟ್ಟದ ಗ್ರಾಮಪಂಚಾಯಿತಿ: ಮನೆ ನೋಂದಣಿಗೆ ಕೊಡಬೇಕು ₹3,000 ಲಂಚ!

7
ಉಪಾಧ್ಯಕ್ಷ, ಅಧಿಕಾರಿಗಳ ವಿರುದ್ಧ ಆರೋಪ

ಮಲೆಮಹದೇಶ್ವರ ಬೆಟ್ಟದ ಗ್ರಾಮಪಂಚಾಯಿತಿ: ಮನೆ ನೋಂದಣಿಗೆ ಕೊಡಬೇಕು ₹3,000 ಲಂಚ!

Published:
Updated:

ಮಲೆ ಮಹದೇಶ್ವರ ಬೆಟ್ಟ: ಮಲೆ ಮಹದೇಶ್ವರ ಬೆಟ್ಟ ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿ ಸರ್ಕಾರದ ವಿವಿಧ ಯೋಜನೆಗಳ ಅಡಿಯಲ್ಲಿ ವಸತಿ ಮಂಜೂರಾಗಿರುವ ಫಲಾನುಭವಿಗಳಿಂದ ಮನೆ ನೋಂದಣಿ ಮಾಡಿಕೊಡುವುದಕ್ಕೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಹೆಚ್ಚುವರಿಯಾಗಿ ₹2,500 ರಿಂದ ₹3,000ವರೆಗೆ ಹಣ ವಸೂಲಿ ಮಾಡುತ್ತಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.‌

‘ರಾಜೀವ್ ಗಾಂಧಿ ಗ್ರಾಮೀಣ ವಸತಿ ನಿಗಮದ ಅಡಿಯಲ್ಲಿ 220 ವಸತಿ ಹಕ್ಕುಪತ್ರವನ್ನು ನೋಂದಣಿ ಮಾಡಿಕೊಡಲು, ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಮಹೇಶ್‌ ಅವರ ಸೂಚನೆಯ ಮೇರೆಗೆ ಗ್ರಾಮ ಪಂಚಾಯಿತಿಯ ಬಿಲ್ ಕಲೆಕ್ಟರ್‌ ಫಲಾನುಭವಿಗಳಿಂದ ₹2,500 ದಿಂದ ₹3,000 ವರೆಗೆ ಹಣ ತೆಗೆದುಕೊಳ್ಳುತ್ತಿದ್ದಾರೆ’ ಅವರು ಆರೋಪಿಸಿದ್ದಾರೆ. ಆದರೆ, ತಮ್ಮ ಹೆಸರನ್ನು ಬಹಿರಂಗ ಪಡಿಸಲು ಅವರು ಇಚ್ಛಿಸಿಲ್ಲ. 

ಕಂದಾಯದ ಹಣ, ಮನೆಗಳಿಗೆ ನೀರಿನ ಸಂಪರ್ಕ ಶುಲ್ಕದ ಜೊತೆಗೆ ಹೆಚ್ಚುವರಿಯಾಗಿ ಇಷ್ಟು ಹಣವನ್ನು ಕೇಳುತ್ತಿರುವುದಕ್ಕೆ ಫಲಾನುಭವಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಆದರೆ, ಆರೋಪಗಳ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿರುವ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಮಹೇಶ್‌ ಅವರು, ‘ನಾವು ಅವರ ಕೈಯಿಂದ ಹೆಚ್ಚು ತೆಗೆದುಕೊಳ್ಳುತ್ತಿಲ್ಲ. ಕಂದಾಯದ ಹಣ ₹1,500, ನೀರಿನ ಶುಲ್ಕ ಹಾಗೂ ಇತರೆ ಶುಲ್ಕಗಳು ಸೇರಿ ₹3,000 ತೆಗೆದುಕೊಳ್ಳುತ್ತೇವೆ. ಕೊಳ್ಳೇಗಾಲದಿಂದ ಅರ್ಜಿಯನ್ನು ತರಬೇಕಾಗುತ್ತದೆ. ಅದಕ್ಕೂ ಖರ್ಚಾಗುತ್ತದೆ. ಈ ಹಣದಲ್ಲಿ ನಮಗೆ ಒಂದು ರೂಪಾಯಿಯೂ ದೊರೆಯುವುದಿಲ್ಲ’ ಎಂದು ಹೇಳಿದರು.

ಕಂದಾಯ ನೋಂದಣಿ ಶುಲ್ಕ ಮಾತ್ರ: ‘ಫಲಾನುಭವಿಗಳಿಂದ ಯಾವುದೇ ಹೆಚ್ಚುವರಿ ಹಣ ಪಡೆಯುವಂತಿಲ್ಲ. ಕಂದಾಯ ನೋಂದಣಿ ಶುಲ್ಕವನ್ನು ಮಾತ್ರ ಪಡೆಯಲು ಬಿಲ್‌ ಕಲೆಕ್ಟರ್‌ಗೆ ತಿಳಿಸಿದ್ದೆ. ಇದು ₹800–₹900 ಆಗುತ್ತದೆ. ಹೆಚ್ಚುವರಿ ಹಣ ಪಡೆಯುತ್ತಿರುವುದು ಗೊತ್ತಿಲ್ಲ’ ಎಂದು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶಿವಪ್ರಸಾದ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಗ್ರಾಮಸ್ಥರು ಮಾಡುತ್ತಿರುವ ಆರೋಪಗಳ ಬಗ್ಗೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರುಕ್ಮಿಣಿ ಅವರ ಗಮನ ಸೆಳೆದಾಗ, ‘ಯಾರೂ ಒಂದು ರೂಪಾಯಿಯನ್ನೂ ತೆಗೆದುಕೊಳ್ಳುವುದಿಲ್ಲ. ಮೂರ್ನಾಲ್ಕು ವರ್ಷಗಳಿಂದ ನಮ್ಮ ಪಂಚಾಯಿತಿಗೆ ಸರ್ಕಾರದಿಂದ ಯಾವುದೇ ರೀತಿಯ ಅನುದಾನ ಬಿಡುಗಡೆಯಾಗಿಲ್ಲ’ ಎಂದು ತಿಳಿಸಿದರು.

ಅಧಿಕಾರಿಗಳಿಂದ ಬೆದರಿಕೆ? 

ಪ್ರಧಾನಮಂತ್ರಿ ಆವಾಸ್ ಯೋಜನೆ, ಡಾ.ಬಿ.ಆರ್‌. ಅಂಬೇಡ್ಕರ್‌ ವಸತಿ ಯೋಜನೆ ಸೇರಿ ವಿವಿಧ ಯೋಜನೆಗಳಡಿ ವಸತಿ ಮಂಜೂರಾಗಿರುವ ಫಲಾನುಭವಿಗಳಿಂದ ಅಧಿಕಾರಿಗಳು ತಲಾ ₹10 ಸಾವಿರ ಹಾಗೂ ನೋಂದಣಿಗಾಗಿ ಪ್ರತ್ಯೇಕ ಲಂಚ ಕೇಳುತ್ತಾರೆ, ಪಡೆದ ಹಣಕ್ಕೆ ರಸೀದಿಯನ್ನೂ ನೀಡುವುದಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ.

‘ಈ ವಿಚಾರವನ್ನು ಬಹಿರಂಗಪಡಿಸಿದರೆ, ನಿಮಗೆ ಮನೆ ಕೊಡುವುದಿಲ್ಲ, ಪಂಚಾಯಿತಿಯಿಂದ ಯಾವ ನೆರವೂ  ಸಿಗದಂತೆ ಮಾಡುತ್ತೇವೆ ಎಂದು ಬೆದರಿಕೆ ಹಾಕುತ್ತಾರೆ. ಹಾಗಾಗಿ, ಮೇಲಧಿಕಾರಿಗಳಿಗೆ ದೂರು ನೀಡಲು ಭಯವಾಗುತ್ತದೆ’ ಎಂದು ಫಲಾನುಭವಿಯೊಬ್ಬರು ಅಳಲು ತೋಡಿಕೊಂಡರು.

‘ಕಾನೂನು ಸಮ್ಮತವಲ್ಲದ ಕೆಲಸವನ್ನು ಯಾರೇ ಮಾಡಿದ್ದರೂ ಅವರ ವಿರುದ್ಧ ಜನರು ದೂರು ನೀಡಬೇಕು. ಫಲಾನುಭವಿಗಳಿಂದ ಲಂಚ ಪಡೆಯುವುದು ಗಂಭೀರ ಅಪರಾಧ. ಅಂತಹವರ ವಿರುದ್ಧ ಕ್ರಮ ಜರುಗಿಸಲು ಅವಕಾಶ ಇದೆ’ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಡಾ.ಕೆ. ಹರೀಶ್‌ ಕುಮಾರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ದೂರು ನೀಡಲು ಜನರು ಭಯಪಡಬೇಕಾಗಿಲ್ಲ. ನೇರವಾಗಿ ಬಂದು ನನಗೆ ದೂರು ನೀಡಲಿ, ಅವರ ವಿವರಗಳನ್ನು ಗೋಪ್ಯವಾಗಿ ಇಡಲಾಗುವುದು’ ಎಂದು ಅವರು ಭರವಸೆ ನೀಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !