ವಲಸೆ ಮಕ್ಕಳಿಗೆ ಬ್ರಿಡ್ಜ್ ಶಾಲೆ

7

ವಲಸೆ ಮಕ್ಕಳಿಗೆ ಬ್ರಿಡ್ಜ್ ಶಾಲೆ

Published:
Updated:
ಬ್ರಿಡ್ಜ್ ಶಾಲೆ

‘ನಾನು ಡಾಕ್ಟರ್ ಆಗುತ್ತೇನೆ’, ‘ನಾನು ಪೊಲೀಸ್ ಆಗುತ್ತೇನೆ’, ‘ನಾನು ಶಿಕ್ಷಕಿಯಾಗುತ್ತೇನೆ...’ ಹೀಗೆ ಒಬ್ಬೊಬ್ಬರ ಕನಸು ಒಂದೊಂದು ರೀತಿಯದ್ದು. ಡಾಕ್ಟರ್ ಎಂದರೆ ಚುಚ್ಚುವವನು, ಪೊಲೀಸ್ ಎಂದರೆ ಹೊಡೆಯುವವನು ಎಂದು ಮಾತ್ರ ಅರಿತಿದ್ದ ಮಕ್ಕಳಲ್ಲಿ ಇಂಥ ದೊಡ್ಡ ಕನಸುಗಳನ್ನು ಬಿತ್ತಿದ್ದೇ ಸಾಧನೆ.

ಕಾರಣ ಇವರೆಲ್ಲ ವಲಸೆ ಕುಟುಂಬದ ಮಕ್ಕಳು. ಆರ್ಥಿಕವಾಗಿ ಹಿಂದುಳಿದವರು. ಇವರಿಗೆ ಸರಿಯಾದ ವ್ಯವಸ್ಥೆ ಮಾಡಿಕೊಟ್ಟರೆ ಇವರೂ ಓದಬಲ್ಲರು ಎಂಬುದನ್ನು ಈ ಶಾಲೆ ತೋರಿಸಿಕೊಟ್ಟಿದೆ. ಸರ್ಕಾರದ ಮಹತ್ವದ ಯೋಜನೆಯಾದ ಗುಡಾರ ಶಾಲಾ ಯೋಜನೆಯಡಿಯಲ್ಲಿ ನಗರದ ವಲಸೆ ಕುಟುಂಬಗಳ ಮಕ್ಕಳಿಗೆ ಜಿಎಂಆರ್ ವರಲಕ್ಷ್ಮಿ ಫೌಂಡೇಷನ್ ಈ ಶಾಲೆಗೆ ಬೆಂಬಲ ನೀಡಿದರೆ, ಶಾಲೆಯ ಕಟ್ಟಡ ನಿರ್ಮಿಸಿ ಅನುಕೂಲ ಮಾಡಿಕೊಟ್ಟದ್ದು ಸುಸ್ಥಿರ ಪರಿಹಾರಗಳನ್ನು ಒದಗಿಸುವಲ್ಲಿ ಹೆಸರಾದ ಸೆಲ್ಕೋ ಫೌಂಡೇಷನ್.

ಬೆಂಗಳೂರಿನ ಹೊರವಲಯದಲ್ಲಿರುವ ರಾಮಮೂರ್ತಿ ನಗರದ ಸಮೀಪದ ಕಲ್ಕೆರೆಯ ಎನ್‍ಆರ್‌ಐ ಬಡಾವಣೆಯಲ್ಲಿ ಇಂಥದ್ದೊಂದು ಅಪರೂಪದ ಶಾಲೆ ನಡೆಸಲಾಗುತ್ತಿದೆ.

ಇಲ್ಲಿ ಬಹುತೇಕ ಹೆಣ್ಣುಮಕ್ಕಳು ಚಿಕ್ಕ ತಂಗಿಯಂದಿರು, ತಮ್ಮಂದಿರು ಸೇರಿದಂತೆ ಶಿಶುಗಳನ್ನೂ ಕರೆದುಕೊಂಡು ಬರುತ್ತಾರೆ. ಅವರ ಅಪ್ಪ-ಅಮ್ಮಂದಿರು ಕೂಲಿ ಕೆಲಸಗಳಿಗೆ ಹೋಗುವುದರಿಂದ ಅವರ ಪುಟ್ಟ ಮಕ್ಕಳನ್ನು ನೋಡಿಕೊಳ್ಳುತ್ತಾರೆ. ಹಾಗಾಗಿ ಶಾಲೆಯಲ್ಲಿ ಒಂದೊಂದು ತೊಟ್ಟಿಲನ್ನೂ ಇಡಲಾಗಿದೆ. ನಿದ್ದೆ ಬಂದ ಮಕ್ಕಳನ್ನು ಅಲ್ಲಿ ಮಲಗಿಸಿ ಈ ಅಕ್ಕಂದಿರು ಕಲಿಯುತ್ತಾರೆ.

ಶಾಲಾಪೂರ್ವ ಶಿಕ್ಷಣ ಪಡೆಯುವ ಅವಕಾಶವನ್ನು ಈ ಯೋಜನೆ ಒದಗಿಸುತ್ತದೆ. ಇಲ್ಲಿ ಮೂಲಭೂತ ಶಿಕ್ಷಣವನ್ನು ಪಡೆದು ನಂತರ ಸರ್ಕಾರಿ ಅಥವಾ ಇಂಗ್ಲಿಷ್ ಮಾಧ್ಯಮ ಶಾಲೆಗಳಿಗೆ ಹೋಗಲು ಅನುವು ಮಾಡಿಕೊಡಲಾಗುತ್ತದೆ. ಇದಕ್ಕೆ ಶಾಲಾ ಕಟ್ಟಡವನ್ನು ನಿರ್ಮಿಸಿಕೊಟ್ಟದ್ದು ಸೆಲ್ಕೋ ಫೌಂಡೇಷನ್.

ಬುಡಕಟ್ಟು ಜನಾಂಗ, ಗ್ರಾಮೀಣ ಮತ್ತು ನಗರಗಳ ಬಡ ಸಮುದಾಯದ ಬಡತನವನ್ನು ನಿವಾರಿಸಲು ಸೆಲ್ಕೋ ಫೌಂಡೇಷನ್ ಕೆಲಸ ಮಾಡುತ್ತಿದ್ದು, ಈ ಯೋಜನೆಯಡಿಯಲ್ಲಿ ಇದೀಗ ಬ್ರಿಡ್ಜ್ ಅಥವಾ ಗುಡಾರ ಶಾಲೆಗಳಿಗೆ ಪರಿಸರ ಸ್ನೇಹಿ ಕಟ್ಟಡವನ್ನು ನಿರ್ಮಿಸಿಕೊಡುತ್ತಿದೆ. ಜೊತೆಗೆ ಸೋಲಾರ್ ಪ್ರಾಜೆಕ್ಟರ್ ಅನ್ನು ನೀಡಿದೆ. ಇದರಲ್ಲಿ ಮಕ್ಕಳಿಗೆ ಬೇಕಾದ ಎಲ್ಲ ರೀತಿಯ ಪಠ್ಯಗಳನ್ನು ಅಳವಡಿಸಲಾಗಿದೆ. 6 ವರ್ಷದಿಂದ 14 ವರ್ಷದವರೆಗಿನ 44 ಮಕ್ಕಳು ಈ ಶಾಲೆಯಲ್ಲಿ ಕಲಿಯುತ್ತಿದ್ದಾರೆ.

ಹೀಗಿರುತ್ತದೆ ಇದರ ರಚನೆ

ಪಾಲಿಯಲ್ ರೂಫಿಂಗ್ ಶೀಟ್ ಮತ್ತು ಪೋಲಿಕಾರ್ಬೋನೇಟ್ ಶೀಟ್ ಬಳಸಿ ರಚಿಸಲಾಗಿದೆ. ಇವೆರೆಡೂ ಪರಿಸರ ಸ್ನೇಹಿಯಾಗಿದ್ದು, ಜಲ ನಿರೋಧಕ, ತಾಪಮಾನವನ್ನು ತಾಳಿಕೊಳ್ಳುವ ಗುಣವನ್ನು ಹೊಂದಿದೆ. ಬಾಳಿಕೆ ಹೆಚ್ಚು, ಹಗುರ, ಪಾರದರ್ಶಕವಾಗಿರುತ್ತದೆ. ಹಾಗಾಗಿ ಸಹಜ ಬೆಳಕು ಒಳಬರಲು ಇದು ಸಹಾಯಕವಾಗುತ್ತದೆ.

ನೆಲಕ್ಕೆ ಮತ್ತು ಗೋಡೆಗಳಿಗೆ ಬೈಸನ್ ಬೋರ್ಡ್‌ಗಳನ್ನು  ಬಳಸಲಾಗಿದೆ. ಇದು ಅಗ್ನಿ ನಿರೋಧಕ, ತೇವಾಂಶ ನಿರೋಧಕ. ಎಷ್ಟೇ ಭಾರವಾದ ವಸ್ತುಗಳನ್ನೂ ತಡೆಯಬಲ್ಲುದು. ಈ ಕಟ್ಟಡ ಹಗುರ ಲೋಹಗಳಿಂದ ಮಾಡಿದ ಕಾರಣ ಒಂದುಕಡೆಯಿಂದ ಇನ್ನೊಂದು ಕಡೆ ಸುಲಭವಾಗಿ ಸ್ಥಳಾಂತರಿಸಬಹುದು. ಜೊತೆಗೆ ಇದು 20 ವರ್ಷ ಬಾಳಿಕೆ ಬರುವಂಥದ್ದು. ಈಗಾಗಲೇ ನಗರದ ಮೂರು ಕಡೆ ಈ ರೀತಿಯ ರಚನೆಗಳನ್ನು ನಿರ್ಮಿಸಲಾಗಿದ್ದು, ಅವೆಲ್ಲವೂ ತುಂಬ ಯಶಸ್ವಿಯಾಗಿ ನಡೆಯುತ್ತಿದೆ ಎನ್ನುತ್ತಾರೆ ಸೆಲ್ಕೋದ ಪ್ರತಿನಿಧಿಗಳು.

ಶಾಲೆಯನ್ನು ಮಕ್ಕಳ ಸ್ನೇಹಿಯಾಗಿ ರೂಪಿಸಲಾಗಿದೆ. ಗಾಳಿ ಮತ್ತು ಬೆಳಕು ಸಮೃದ್ಧವಾಗಿ ಒಳಬರುತ್ತದೆ. ಸುತ್ತ ಗೋಡೆಗಳಿಗೆ ಮಕ್ಕಳ ಪುಸ್ತಕಗಳನ್ನು ನೇತುಹಾಕಲು ಸಾಧ್ಯವಾಗುವಂತೆ ರಚಿಸಲಾಗಿದೆ. ಇದರಿಂದ ಆ ಮಕ್ಕಳು ಪುಸ್ತಕಗಳನ್ನು ಓದಿ ಮತ್ತೆ ಅಲ್ಲಿಯೇ ಇಡಬಹುದು.

ಶಾಲೆಯ ಅಂಗಳದಲ್ಲಿ ಸುತ್ತ ಇರುವ ಕಂಬಿಗಳಿಗೆ ಅಬಾಕಸ್ ಸಲಕರಣೆಗಳನ್ನು, ಬೆಳೆಯಲು ರೋಪ್‍ಗೇಮ್, ಚಲಿಸಬಲ್ಲ ವಕ್ರಗತಿಯ ಕಂಬಿಗಳನ್ನು ಅಳವಡಿಸಿದ್ದು, ಇವೆಲ್ಲ ಮಕ್ಕಳಲ್ಲಿ ಕಲಿಕಾಶಕ್ತಿಯನ್ನು ಹೆಚ್ಚಿಸುತ್ತದೆ. ಇದರ ಜೊತೆಗೆ ಹವಾಮಾನ ದಿಕ್ಸೂಚಿಯನ್ನೂ ನೀಡಲಾಗಿದೆ. 

ಮಳೆನೀರು ಸಂಗ್ರಹದ ವ್ಯವಸ್ಥೆಯನ್ನು ಮಾಡಿಕೊಡಲಾಗಿದೆ. ಪ್ರಸ್ತುತ ಈ ಶಾಲೆಯವರು, ಕುಡಿಯುವ ಮತ್ತು ಇತರ ಬಳಕೆಗೆ ನೆರೆಹೊರೆಯವರಿಂದ ಮತ್ತು ಅಂಗಡಿಗಳಲ್ಲಿ ನೀರನ್ನು ಕೇಳಿ ಪಡೆಯುತ್ತಿದ್ದರು. ಅದನ್ನು ತಪ್ಪಿಸಲು ಈ ಟ್ಯಾಂಕ್ ನಿರ್ಮಿಸಲಾಗಿದೆ.

ಈ ಮೊದಲು ಜೋಪಡಿಗಳಲ್ಲಿ ಶಾಲೆ ನಡೆಸಲಾಗುತ್ತಿತ್ತು. ಮಕ್ಕಳು ಶಾಲೆಗೆ ಬರುವುದಕ್ಕೇ ಭಯ ಬೀಳುತ್ತಿದ್ದರು. ಈಗ ಈ ಕಟ್ಟಡ ತುಂಬ ಅನುಕೂಲವಾಗಿದೆ ಎನ್ನುತ್ತಾರೆ ಜಿಎಂಆರ್‌ವಿ ಫೌಂಡೇಷನ್‍ನ ಶಿಕ್ಷಕಿಯರಾದ ಪುಷ್ಪಾ, ಗೀತಾ ಮೊದಲಾದವರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !