ಪಾದಚಾರಿಗಳಿಗೆ ಕೆಸರು ನೀರಿನ ಸ್ನಾನ

7
ಉಪ್ಪಿನಂಗಡಿ: ನಿರ್ವಹಣೆ ಇಲ್ಲದ ಸೇತುವೆ

ಪಾದಚಾರಿಗಳಿಗೆ ಕೆಸರು ನೀರಿನ ಸ್ನಾನ

Published:
Updated:
ಉಪ್ಪಿನಂಗಡಿ ಕುಮಾರಧಾರಾ ಸೇತುವೆ ಮೇಲೆ ನೀರು ನಿಂತು ವಾಹನಗಳು ಸಂಚರಿಸುವಾಗ ಕೆಸರು ನೀರು ಎರಚುತ್ತಿದೆ.

ಉಪ್ಪಿನಂಗಡಿ: ಪ್ರತಿ ವರ್ಷ ಮಳೆಗಾಲ ಆರಂಭ ಆಗುತ್ತಿದ್ದಂತೆ ಚರಂಡಿ ಹೂಳೆತ್ತುವುದು, ಸೇತುವೆಗಳ ಮೇಲೆ ನೀರು ನಿಲ್ಲದಂತೆ, ಅದರಲ್ಲಿರುವ ಕಸ ಕಡ್ಡಿಗಳನ್ನು ತೆಗೆದು ಮಳೆ ನೀರು ಸರಾಗವಾಗಿ ಹರಿದು ಹೋಗುವಂತೆ ಮಾಡಲಾಗುತ್ತದೆ. ಆದರೆ ಈ ಬಾರಿ ಹೆದ್ದಾರಿ ಬದಿಯಲ್ಲಿ ನಿರ್ವಹಣೆ ಇಲ್ಲದೆ ಪಾದಚಾರಿಗಳು ಕೆಸರು ನೀರಿನ ಸ್ನಾನ ಮಾಡುವ ಸ್ಥಿತಿ ಎದುರಾಗಿದೆ ಎಂದು ಸಾರ್ವಜನಿಕರು ದೂರುತ್ತಿದ್ದಾರೆ.

ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಉದ್ದಕ್ಕೂ ಇಂತಹ ಸಮಸ್ಯೆ ಎದುರಾಗಿದ್ದು, ಅದರಲ್ಲೂ ಸೇತುವೆ ಮೇಲೆ ನೀರು ನಿಂತು, ಸೇತುವೆಗಳ ಮೇಲೆ ಸಂಚರಿಸುವ ಪಾದಚಾರಿಗಳು ಕೆಸರು ನೀರು ಎರಚಿಸಿಕೊಂಡು ಹೋಗುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ರಾಷ್ಟ್ರೀಯ ಹೆದ್ದಾರಿ ಮೇಲ್ದರ್ಜೆಗೇರಿದ್ದು, ರಸ್ತೆ ಚತುಷ್ಪಥವಾಗಿ ಬದಲಾಗುತ್ತಿದೆ. ಇದರ ಕಾಮಗಾರಿ ನಡೆಯುತ್ತಿದ್ದು, ಅಲ್ಲಲ್ಲಿ ಅಗೆದು ಹಾಕಲಾಗಿದೆ. ಇನ್ನೊಂದೆಡೆ ಈಗಿದ್ದ ಹೆದ್ದಾರಿಯನ್ನು ನಿರ್ವಹಣೆ ಮಾಡುವವರೇ ಇಲ್ಲವಾಗಿದೆ. ಇದರಿಂದ ಹೆದ್ದಾರಿಯ ಇಕ್ಕೆಲಗಳಲ್ಲಿ ಗಿಡ-ಗಂಟಿಗಳು, ಪೊದೆಗಳು ಹುಲುಸಾಗಿ ಬೆಳೆದು ಹೆದ್ದಾರಿಯನ್ನು ಆವರಿಸಿವೆ. ಇದರಿಂದಾಗಿ ಚರಂಡಿಯಲ್ಲಿ ಹೂಳು ತುಂಬಿ ಮುಚ್ಚಿ ಹೋಗಿರುವುದೇ ಈ ಸಮಸ್ಯೆಗೆ ಕಾರಣವಾಗಿದೆ ಎಂದು ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಉಪ್ಪಿನಂಗಡಿಯಲ್ಲಿ ಕುಮಾರಧಾರ ನದಿಯ ಸೇತುವೆಯ ಮೇಲೆ ಪಾದಚಾರಿಗಳಿಗೆ ನಡೆದಾಡಲು ಕಷ್ಟಕರವಾದ ಸ್ಥಿತಿ ನಿರ್ಮಾಣಗೊಂಡಿದೆ. ಸೇತುವೆಯಲ್ಲಿ ನೀರು ಹೋಗಲು ಮಾಡಲಾದ ರಂಧ್ರಗಳು ಮಣ್ಣು, ಕಸಕಡ್ಡಿಗಳು ತುಂಬಿ ಮುಚ್ಚಿ ಹೋಗಿದೆ. ಇದರಿಂದ ನೀರಿನ ಹರಿಯುವಿಕೆಗೆ ತಡೆಯಾಗಿ, ಮಳೆ ಬಂದ ಸಂದರ್ಭ ನೀರು ಸೇತುವೆಯ ಮೇಲೆಯೇ ನಿಂತು ಸೇತುವೆ ಹಳ್ಳವಾಗಿ ಮಾರ್ಪಾಡಾಗುತ್ತದೆ.

ಈ ಸಂದರ್ಭ ಸೇತುವೆಯ ಮೇಲೆ ವಾಹನಗಳು ಸಂಚರಿಸಿದರೆ ಬದಿಯಲ್ಲಿ ನಡೆದುಕೊಂಡು ಹೋಗುವವರು, ದ್ವಿಚಕ್ರ ವಾಹನ ಸವಾರರ ಮೈಮೇಲೆಲ್ಲಾ ಕೆಸರಿನ ಅಭಿಷೇಕವಾಗುತ್ತದೆ. ಹೆದ್ದಾರಿ ಇಲಾಖೆ ಅಧಿಕಾರಿಗಳು ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಅಗತ್ಯ ಕ್ರಮಕೈಗೊಳ್ಳುವಂತೆ ಜನರು ಆಗ್ರಹಿಸಿದ್ದಾರೆ.

 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !