ಕಣ್ಮುಚ್ಚಿ ಕಾಫಿ ಹೀರುತ್ತಾ...

7

ಕಣ್ಮುಚ್ಚಿ ಕಾಫಿ ಹೀರುತ್ತಾ...

Published:
Updated:
Deccan Herald

ಕನ್ನಿಂಗ್‌ ಹ್ಯಾಂ ರಸ್ತೆಯ ಗೌಜು ಗದ್ದಲವನ್ನೆಲ್ಲ ಆಚೆ ಸರಿಸಿ, ವೆಸ್ಟ್‌ ಮಿನಿಸ್ಟರ್ ಕಟ್ಟಡದ ಹಿಂಭಾಗಕ್ಕೆ ಬನ್ನಿ. ಮೊದಲ ಹಂತದ ಕೊನೆಗೆ ಬ್ರೌನಿ ಹೆವನ್‌ ಪ್ರವೇಶಬಾಗಿಲು ಕಾಣಿಸುವುದು. ಒಳ ಹೋದರೆ ಗೋಡೆಗಂಟಿ ಕೊಂಡಿರುವ ಸಾಲು ಬೆಂಚುಗಳು. ತಮ್ಮ ಲ್ಯಾಪುಟಾಪುಗಳಲ್ಲಿ ಕಣ್ನೆಟ್ಟು ಕಾರ್ಯನಿರತರಾದವರು, ಆ ಕಾಫಿ ಘಮಕ್ಕೆ ತಲೆದೂಗದೇ ಇರುವುದಿಲ್ಲ.

ಬಿಳಿಯ ಕಪ್‌ನಲ್ಲಿ ನೊರೆನೊರೆಯಾದ ಕಾಫಿ, ಜೊತೆಗೊಂದು ಗೋದಿಬಿಸ್ಕತ್ತು. ಪಕ್ಕಕ್ಕೆ ಒಂದಷ್ಟು ಬ್ರೌನ್‌ ಶುಗರ್‌. ತುಟಿಗಿರಿಸಿದರೆ ಹಿತವಾಗಿ ಸುಡುವ ಕಾಫಿಯ ಬಿಸುಪು, ನಾಲಗೆಯ ರುಚಿಮೊಗ್ಗುಗಳಿಗೆಲ್ಲ ಒಗರು ಸ್ಪರ್ಶಿಸುತ್ತಲೇ ಕಣ್ಮುಚ್ಚುವಂತೆ ಮಾಡುತ್ತದೆ. ಹದವಾದ ಡಿಕಾಕ್ಷನ್ನಿಗೆ ಹಾಲಿನ ಬಿಳುಪು ಸೇರಿ, ಸೃಷ್ಟಿಸಿದ ನೊರೆ ನೋಡುವುದೇ ಆನಂದ. ಆದರೆ ಗುಟುಕರಿಸುತ್ತಿದ್ದರೆ ಬೇಗನೇ ಖಾಲಿ ಮಾಡಬೇಕೆಂಬ ಚಪಲ.

ಬ್ರೌನಿ ಹೆವನ್‌ನ ಕಾಫಿಯ ಸೊಗಡೇ ಅಂಥದ್ದು. ಅದೇ ಕಾರಣಕ್ಕೆ ಸುತ್ತಮುತ್ತಲಿನ ಜನ ಈ ಮಳಿಗೆಗೆ ಬರುತ್ತಾರೆ. ವಿರಾಮವಾಗಿ ಕುಳಿತು,ಕೆಲಸ ಮಾಡುತ್ತಾರೆ. ಹರಟೆ ಹೊಡೆಯುತ್ತಾರೆ. ಕಪಾಟಿನಲ್ಲಿರುವ ಪುಸ್ತಕಗಳನ್ನು ಕಣ್ಣಾಡಿಸುತ್ತಾರೆ. ಆಗಾಗ ಬ್ರೌನಿಗಳನ್ನು ಸವಿಯುತ್ತಾರೆ.

ಕೇವಲ ಬ್ರೌನಿಗಳದ್ದೇ ಈ ಮಳಿಗೆಯಲ್ಲಿ ಒಂದಷ್ಟು ಬಿಸಿ ಹಾಗೂ ತಂಪು ಪಾನೀಯಗಳ ವ್ಯವಸ್ಥೆ ಮಾಡಿದ್ದಾರೆ ಶ್ರೇಯಸ್‌. ಐಟಿಸಿ ಸಮೂಹದ ಹೋಟೆಲ್‌ನಲ್ಲಿ ಕಾರ್ಯನಿರ್ವಹಿಸಿದ್ದ ಶ್ರೇಯಸ್‌ ಕೆಲಸ ಬಿಟ್ಟು ಬ್ರೌನಿ ಪ್ರಪಂಚವನ್ನು ಬೆಂಗಳೂರಿಗರಿಗೆ ಪರಿಚಯಿಸಲು ಸಿದ್ಧರಾಗಿದ್ದಾರೆ. ಈ ಸಾಹಸ ಕಳೆದ ಆರು ತಿಂಗಳ ಹಿಂದೆಯೇ ಆರಂಭವಾಗಿತ್ತು. ಇಂದಿರಾನಗರದಲ್ಲಿ ಅಮೋಘವಾದ ಆರಂಭ ದೊರೆತ ನಂತರ ಕನ್ನಿಂಗ್‌ಹ್ಯಾಮ್‌ ರಸ್ತೆಯಲ್ಲಿ ಬ್ರೌನಿ ಹೆವನ್‌ ಆರಂಭವಾಯಿತು. ಇಲ್ಲಿಯ ಉತ್ತಮ ಪ್ರತಿಕ್ರಿಯೆಯ ನಂತರ ಕೋರಮಂಗಲದಲ್ಲಿ ಇನ್ನೊಂದು ಮಳಿಗೆ ಆರಂಭಿಸಲಾಯಿತು. ಚೆನ್ನೈ ಮೂಲದ ಬ್ರೌನಿ ಹೆವನ್‌ಗೆ ಚೆನ್ನೈನಲ್ಲಿ ಆರು ಔಟ್‌ಲೆಟ್‌ಗಳಿವೆ. ಬೆಂಗಳೂರಿನಲ್ಲಿ ಮೂರು ಇವೆ.

ಕೇವಲ ಬ್ರೌನಿಗಳ ಈ ಔಟ್‌ಲೆಟ್‌ನಲ್ಲಿ ವಿವಿಧ ಬಗೆಯ ಬ್ರೌನಿಗಳನ್ನು ಸವಿಯಬಹುದು. ಅದಕ್ಕೆ ಜೊತೆಯಾಗಿ ರುಚಿಕರ ಐಸ್‌ಕ್ರೀಮ್‌, ಅಪರೂಪಕ್ಕೆ ಪಾಪ್‌ಕಾರ್ನ್‌ ಸವಿಯ ಸಂಯೋಜನೆಯೂ ಸಿಗುತ್ತದೆ. ಬೆಣ್ಣೆಯುಪ್ಪಿನ ಕಾಪ್‌ಕಾರ್ನ್‌ನ ಬಾಯೊಳಗೆ ಕರುಂಕರುಂ ಎನಿಸುವಾಗಲೇ ಅದಕ್ಕೆ ಅಂಟಿದ ಐಸ್‌ಕ್ರೀಮ್‌, ಬಾಯಿಗಿಟ್ಟ ತಕ್ಷಣ ಕರಗುತ್ತದೆ. ಇವೆರಡರ ರುಚಿಯನ್ನು ಒಟ್ಟೊಟ್ಟಿಗೆ ಬೆರೆಸಲು ಬ್ರೌನಿ ಹೆಣಗಾಡುತ್ತಿರುತ್ತದೆ. ಸವಿಯಲು ಕುಳಿತವರಿಗೆ ಬೇಗ, ಇನ್ನಷ್ಟು ಬೇಗ, ಒಂದು ತುತ್ತು ಗಂಟಲಿಗಿಳಿಯುವ ಮುಂಚೆಯೇ ಇನ್ನೊಂದು ತುತ್ತಿಗೆ ಕೈ ಹಾಕುವ ಧಾವಂತ ಹುಟ್ಟಿಸುವಷ್ಟು ರುಚಿ ಇದರದ್ದು.

 ಬಿಸಿಬ್ರೌನಿ, ತಣ್ಣನೆಯ ಐಸ್‌ಕ್ರೀಮ್‌, ಮಿಲ್ಕ್‌ಶೇಕ್‌ ಇಲ್ಲವೇ ಬಿಸಿಯಾದ ಅಪ್ಪಟ ಕರ್ನಾಟಕದ ರುಚಿ ನೀಡುವ ಫಿಲ್ಟರ್‌ ಕಾಫಿ ಸವಿಯಲು ಬ್ರೌನಿ ಹೆವನ್‌ಗೆ ಒಮ್ಮೆ ಭೇಟಿ ನೀಡಬಹುದು.

ಆಪ್ತರಿಗೆ ಕೊಡುಗೆಯಾಗಿ ನೀಡಲು ಉಡುಗೊರೆ ನೀಡುವ ಸೌಲಭ್ಯವೂ ಇದೆ. ವಿವಿಧ ಬಗೆಯ ಐದು ಬ್ರೌನಿಗಳ ಪ್ಯಾಕುಗಳು, ನಿಮ್ಮ ಆಯ್ಕೆಯ ಬ್ರೌನಿಗಳನ್ನೂ ಕಳುಹಿಸಬಹುದು.

ಬಾಕ್ಸ್

ರೆಸ್ಟೊರೆಂಟ್:ಬ್ರೌನಿ ಹೆವನ್‌ ಕನ್ನಿಂಗ್‌ಹ್ಯಾಮ್‌,

ಸಮಯ: ಬೆಳಿಗ್ಗೆ 11ರಿಂದ ರಾತ್ರಿ 10

ವಿಶೇಷ : ವಿವಿಧ ರೀತಿಯ ಬ್ರೌನಿ

ಸ್ಥಳ: ಬ್ರೌನಿ ಹೆವನ್‌ ಕನ್ನಿಂಗ್‌ಹ್ಯಾಮ್‌, ವೆಸ್ಟ್‌ಮಿನಿಸ್ಟರ್‌, ಕಾವೇರಪ್ಪ ಲೇಔಟ್‌, ವಸಂತ ನಗರ

Tags: 

ಬರಹ ಇಷ್ಟವಾಯಿತೆ?

  • 0

    Happy
  • 0

    Amused
  • 0

    Sad
  • 0

    Frustrated
  • 0

    Angry

Comments:

0 comments

Write the first review for this !