ಶುಕ್ರವಾರ, ನವೆಂಬರ್ 15, 2019
22 °C

ಬಿಎಸ್‌ವೈ ಭೇಟಿಗೆ ಸಮಯ ಕೊಡದ ಮೋದಿ

Published:
Updated:
Prajavani

ಬೆಂಗಳೂರು: ನೆರೆ ಪರಿಹಾರ, ರಾಜ್ಯದ ಅಭಿವೃದ್ಧಿಗೆ ಸಹಕಾರ ಕೋರಲು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಲು ಬಯಸಿದ್ದ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರಿಗೆ ಮತ್ತೊಮ್ಮೆ ನಿರಾಸೆಯಾಗಿದೆ.

ಮೋದಿ ಅವರನ್ನು ಭೇಟಿ ಮಾಡಲು ಸಮಯ ಕೋರಿ ಪ್ರಧಾನಿ ಕಚೇರಿಗೆ ರಾಜ್ಯ ಸರ್ಕಾರದಿಂದ ಪತ್ರ ಹೋಗಿತ್ತು. ಸಮಯ ನಿಗದಿಯಾದರೆ ನವದೆಹಲಿಗೆ ತೆರಳಬೇಕಾಗುತ್ತದೆ ಎಂಬ ಲೆಕ್ಕಾಚಾರದಲ್ಲಿ, ಬುಧವಾರ ಸಂಜೆ 5 ಗಂಟೆಗೆ ನಿಗದಿಯಾಗಿದ್ದ ಸಚಿವ ಸಂಪುಟ ಸಭೆಯನ್ನು ಮಧ್ಯಾಹ್ನದ 1 ಗಂಟೆಗೆ ಮರು ನಿಗದಿ ಮಾಡಿ, ಮಂಗಳವಾರ ಸಂಜೆ ಎಲ್ಲ ಸಚಿವರಿಗೂ ಸಂದೇಶ ಕಳುಹಿಸಲಾಯಿತು.

ಆದರೆ, ಮಧ್ಯಾಹ್ನದ ಒಂದು ಗಂಟೆ ವರೆಗೂ ಪ್ರಧಾನಿ ಕಚೇರಿಯಿಂದ ಯಾವುದೇ ಸಂದೇಶ ಬರಲಿಲ್ಲ. ಭೇಟಿಗೆ ಗುರುವಾರ ಸಮಯ ಕೊಟ್ಟರೆ, ಸಂಜೆ ಹೋಗುವ ಅಂದಾಜು ಯಡಿಯೂರಪ್ಪ ಅವರದ್ದಾಗಿತ್ತು. ಪ್ರಧಾನಿ ಕಚೇರಿಯಿಂದ ಯಾವುದೇ ಸೂಚನೆ ಬರದ ಕಾರಣ ಬುಧವಾರ ರಾತ್ರಿಯವರೆಗೂ ಕಾಯ್ದು ಗುರುವಾರದ ಕಾರ್ಯಕ್ರಮವನ್ನು ನಿಗದಿ ಮಾಡಲಾಯಿತು ಎಂದು ಮೂಲಗಳು ಹೇಳಿವೆ.

ಸ್ಪಂದನೆ ಇಲ್ಲ: ರಾಜ್ಯದ 22 ಜಿಲ್ಲೆಗಳಲ್ಲಿ ಭಾರಿ ಮಳೆಯಿಂದ ಅಪಾರ ಹಾನಿ ಸಂಭವಿಸಿದೆ. ಸರ್ಕಾರದ ಲೆಕ್ಕದ ಪ್ರಕಾರವೇ ನಷ್ಟದ ಮೊತ್ತ ₹35 ಸಾವಿರ ಕೋಟಿಗೂ ಮಿಗಿಲಾಗಿದೆ. ಪ್ರವಾಹದಿಂದ ಹಾನಿಗೀಡಾಗಿರುವ ಪರಿಸ್ಥಿತಿ ವೀಕ್ಷಿಸಲು ಪ್ರಧಾನಿ ಬರಬೇಕಿತ್ತು ಎಂಬ ಆಗ್ರಹ ವಿರೋಧ ಪಕ್ಷದ ನಾಯಕರದ್ದಾಗಿದ್ದರೆ, ಪ್ರಧಾನಿ ಬರಬೇಕಿತ್ತು ಎಂಬ ಭಾವನೆ ಬಿಜೆಪಿಯವರಲ್ಲೂ ಇದೆ.

ಚಂದ್ರಯಾನ–2 ನ ವಿಕ್ರಮ್ ಲ್ಯಾಂಡರ್‌ ಚಂದ್ರನ ನೆಲ ಸ್ಪರ್ಶಿಸುವ ಕ್ಷಣವನ್ನು ಇಸ್ರೊದಲ್ಲಿ ಕುಳಿತು ವೀಕ್ಷಿಸಲು ಮೋದಿ ಅವರು ರಾಜ್ಯಕ್ಕೆ ಭೇಟಿ ನೀಡಿದ್ದರು. ಈ ವೇಳೆ ಪ್ರವಾಹದ ಸ್ಥಳಗಳಿಗೆ ಭೇಟಿ ನೀಡಲಿಲ್ಲ ಎಂದು ಕಾಂಗ್ರೆಸ್ ನಾಯಕರು ಟೀಕಿಸಿದ್ದರು. ಗೃಹ ಸಚಿವ ಅಮಿತ್ ಶಾ ಹಾಗೂ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ರಾಜ್ಯಕ್ಕೆ ಬಂದು ಹೋಗಿ ತಿಂಗಳು ಕಳೆದರೂ ನಯಾಪೈಸೆ ಪರಿಹಾರ ಸಿಕ್ಕಿಲ್ಲ ಎಂದೂ ಅವರು ದೂರಿದ್ದರು.

ಪ್ರಧಾನಿ ಅವರನ್ನು ಆಗ ಯಡಿಯೂರಪ್ಪ ಭೇಟಿ ಮಾಡಿದ್ದರು. ಆದರೆ, ನೆರೆಯಿಂದ ಆಗಿರುವ ಹಾನಿಯ ಕುರಿತು ಅವರಿಗೆ ವಿವರಣೆ ನೀಡಲು ಅವಕಾಶ ಒದಗಿರಲಿಲ್ಲ.  

ಈ ಬೆಳವಣಿಗೆಗಳ ಬೆನ್ನಲ್ಲೇ, ಮಾಧ್ಯಮದವರ ಜತೆ ಮಾತನಾಡಿದ್ದ ಯಡಿಯೂರಪ್ಪ, ನೆರೆ ಪರಿಹಾರ ಹಾಗೂ ಅಭಿವೃದ್ಧಿಗೆ ಕೇಂದ್ರದ ನೆರವು ಕೋರಿ ರಾಜ್ಯದ ನಿಯೋಗವನ್ನು ಕರೆದೊಯ್ಯುವುದಾಗಿ ಹೇಳಿದ್ದರು. ಅದಕ್ಕೂ ಅವಕಾಶ ಸಿಕ್ಕಿಲ್ಲ. 

‘ಕೇಂದ್ರ ಸ್ಪಂದಿಸುತ್ತಿಲ್ಲ ಎಂಬ ಸಂಶಯ’

ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ (ಜುಲೈ 26) ಕೂಡಲೇ ಪ್ರಧಾನಿ ಭೇಟಿಗೆ ಒಲವು ತೋರಿದ್ದರು. ಆದರೆ, ಅವಕಾಶವನ್ನು ಪ್ರಧಾನಿ ಕಚೇರಿ ನೀಡಿರಲಿಲ್ಲ.

ಆಗಸ್ಟ್ 16ರಂದು ಪ್ರಧಾನಿ ಅವರನ್ನು ಭೇಟಿಯಾಗಿದ್ದ ಯಡಿಯೂರಪ್ಪ, ರಾಜ್ಯದ ಸಂಕಷ್ಟವನ್ನು ವಿವರಿಸಿ, ನೆರವು ಕೋರಿದ್ದರು. ಭೇಟಿ ಮಾಡಿ ತಿಂಗಳಾದರೂ ನೆರವಿನ ಹಸ್ತ ಚಾಚಲು ಕೇಂದ್ರ ಸರ್ಕಾರ ಮುಂದಾಗದೇ ಇರುವುದನ್ನು ನೋಡಿದರೆ, ರಾಜ್ಯ ಸರ್ಕಾರದ ಬೇಡಿಕೆ–ಅಹವಾಲುಗಳಿಗೆ ಕೇಂದ್ರ ಸ್ಪಂದಿಸುತ್ತಿಲ್ಲ ಎಂಬ ಸಂಶಯ ಮೂಡುತ್ತದೆ ಎಂಬ ಅಭಿಪ್ರಾಯ ಬಿಜೆಪಿ ನಾಯಕರಲ್ಲೇ ಬಲವಾಗತೊಡಗಿದೆ.

ಪ್ರತಿಕ್ರಿಯಿಸಿ (+)