ಬಿಜೆಪಿ, ಕಾಂಗ್ರೆಸ್‌ನಿಂದ ಜನ ಬೇಸತ್ತಿದ್ದಾರೆ, ಅಭಿವೃದ್ಧಿ ಬದ್ಧತೆ ನಮಗಿದೆ

ಶನಿವಾರ, ಏಪ್ರಿಲ್ 20, 2019
31 °C
ಹಗುರವಾಗಿ ಪರಿಗಣಿಸದಿರಿ, ಸಮಬಲದ ಹೋರಾಟ ಖಚಿತ, ಜನ ಬೆಂಬಲ ಪಕ್ಷದ ಪರವಾಗಿದೆ– ಬಿಎಸ್‌ಪಿ ಅಭ್ಯರ್ಥಿ ಶಿವಕುಮಾರ್‌

ಬಿಜೆಪಿ, ಕಾಂಗ್ರೆಸ್‌ನಿಂದ ಜನ ಬೇಸತ್ತಿದ್ದಾರೆ, ಅಭಿವೃದ್ಧಿ ಬದ್ಧತೆ ನಮಗಿದೆ

Published:
Updated:
Prajavani

ಚಾಮರಾಜನಗರ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‌ಗೆ ಪ್ರಬಲ ಪೈಪೋಟಿ ನೀಡುವ ವಿಶ್ವಾಸದಲ್ಲಿರುವ ಬಹುಜನ ಸಮಾಜಪಕ್ಷ (ಬಿಎಸ್‌ಪಿ) ಡಾ.ಎಂ.ಶಿವಕುಮಾರ್‌ ಅವರನ್ನು ಕಣಕ್ಕಿಳಿಸಿದೆ. ಕ್ಷೇತ್ರದಲ್ಲಿ ಪಕ್ಷದ ಬೆಳವಣಿಗೆ, ಚುನಾವಣಾ ರಾಜಕೀಯದ ಬಗ್ಗೆ ಅವರು ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ್ದಾರೆ.

**

* ಕ್ಷೇತ್ರದಲ್ಲಿ ಚುನಾವಣಾ ರಾಜಕೀಯದ ಚಿತ್ರಣ ಹೇಗಿದೆ?
ಬಿಜೆಪಿ, ಕಾಂಗ್ರೆಸ್‌ ಮತ್ತು ಬಿಎಸ್‌ಪಿ ನಡುವೆ ತ್ರಿಕೋನ ಸ್ಪರ್ಧೆ ಇದೆ. ನಮ್ಮನ್ನು ಎರಡೂ ಪಕ್ಷಗಳು ಹಗುರವಾಗಿ ಪರಿಗಣಿಸಲು ಸಾಧ್ಯವಿಲ್ಲ. 20 ವರ್ಷಗಳಿಂದ ಜಿಲ್ಲೆಯಲ್ಲಿ ಕೆಲಸ ಮಾಡಿದ್ದೇವೆ. ನಮ್ಮದೇ ಆದ ಕಾರ್ಯಕರ್ತರು ಇದ್ದಾರೆ. ಕ್ಷೇತ್ರದಲ್ಲಿ ಸಮಬಲದ ಹೋರಾಟ ಇದೆ.

* ಬಿಎಸ್‌ಪಿಯು ದಲಿತ ಮತ್ತು ಹಿಂದುಳಿದವರ ಪಕ್ಷ ಎಂಬ ಭಾವನೆ ಇದೆಯಲ್ಲಾ?
ಇದು ಹಳೆ ಅಭಿಪ್ರಾಯ. ಈಗ ಇದು ಬದಲಾಗಿದೆ. ಕಳೆದ ಕೊಳ್ಳೇಗಾಲ ವಿಧಾನಸಭೆಯಲ್ಲಿ ವೀರಶೈವ–ಲಿಂಗಾಯತರು, ಒಕ್ಕಲಿಗರು, ಮುಸ್ಲಿಮರು, ಕ್ರಿಶ್ಚಿಯನ್ನರು, ದಲಿತರು... ಎಲ್ಲರೂ ನಮಗೆ ಮತ ಹಾಕಿದ್ದಾರೆ. ಹಾಗಾಗಿ ಗೆದ್ದಿದ್ದೇವೆ. ಹಿಂದೆ ‘ಬಹುಜನ ಹಿತಾಯ, ಬಹುಜನ ಸುಖಾಯ’ ಎಂಬ ಧ್ಯೇಯವಾಕ್ಯ ನಮ್ಮದಾಗಿತ್ತು. ಈಗ ಅದನ್ನು ‘ಸರ್ವಜನ ಹಿತಾಯ, ಸರ್ವಜನ ಸುಖಾಯ’ ಎಂದು ಬದಲಾಯಿಸಲಾಗಿದೆ. ಬಿಎಸ್‌ಪಿ ಈಗ ಸರ್ವಜನರ ಪಕ್ಷ. ಅವರ ಹಿತಕ್ಕಾಗಿ ಕೆಲಸ ಮಾಡುತ್ತದೆ.

* ಎಂಟು ವಿಧಾನಸಭಾ ಕ್ಷೇತ್ರಗಳ ಪೈಕಿ ಕೊಳ್ಳೇಗಾಲದಲ್ಲಿ ಮಾತ್ರ ನಿಮ್ಮ ಶಾಸಕರಿದ್ದಾರೆ. ಉಳಿದ ಕ್ಷೇತ್ರಗಳಲ್ಲಿ ಹೆಚ್ಚು ಮತ ಪಡೆಯುವ ವಿಶ್ವಾಸವಿದೆಯೇ?
ಕ್ಷೇತ್ರ ವ್ಯಾಪ್ತಿಯ ಎಂಟೂ ವಿಧಾನ ಕ್ಷೇತ್ರಗಳಲ್ಲಿ ಚೆನ್ನಾಗಿ ಕೆಲಸ ಮಾಡಿದ್ದೇವೆ. 2018ರ ವಿಧಾನಸಭಾ ಚುನಾವಣೆಯಲ್ಲಿ ನಾವು ಜೆಡಿಎಸ್‌ ಜೊತೆ ಮೈತ್ರಿ ಮಾಡಿಕೊಂಡಿದ್ದೆವು. ಹಾಗಾಗಿ, ನಮ್ಮ ಸಾಮರ್ಥ್ಯ ಏನು ಎಂಬುದು ಗೊತ್ತಾಗಿರಲಿಲ್ಲ. ಹನೂರು, ತಿ.ನರಸೀಪುರ, ನಂಜನಗೂಡುಗಳಲ್ಲಿ ನಾವು ಸ್ಪರ್ಧಿಸಿರಲಿಲ್ಲ. ಅಲ್ಲೂ ನಮ್ಮ ಕಾರ್ಯಕರ್ತರು ಇದ್ದಾರೆ. ಈ ಚುನಾವಣೆಯಲ್ಲಿ ಕೊಳ್ಳೇಗಾಲ ಕ್ಷೇತ್ರವೊಂದರಲ್ಲೇ ಒಂದು ಲಕ್ಷಕ್ಕೂ ಹೆಚ್ಚು ಮತಗಳನ್ನು ಪಡೆಯುತ್ತೇವೆ.

* ಪಕ್ಷವನ್ನು ಯಾವ ರೀತಿ ಸಂಘಟಿಸಿದ್ದೀರಿ?
ಚಾಮರಾಜನಗರದಲ್ಲಿ 2001ರಿಂದ ಪಕ್ಷ ಸಂಘಟನೆಯಲ್ಲಿ ತೊಡಗಿದ್ದೇವೆ. ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲಿ ಬೂತ್‌ ಮಟ್ಟದ ಕಾರ್ಯಕರ್ತರನ್ನು ತಯಾರು ಮಾಡುತ್ತಿದ್ದೇವೆ. ಆಸಕ್ತ ಯುವಕರಿಗೆ ತರಬೇತಿಯನ್ನು ಕೊಡುತ್ತಿದ್ದೇವೆ.

* ಬಿಎಸ್‌ಪಿಯಿಂದಾಗಿ ದಲಿತ ಮತಗಳು ವಿಭಜನೆಯಾಗಲಿವೆಯೇ?
ವಾಸ್ತವದಲ್ಲಿ ಕ್ಷೇತ್ರದಲ್ಲಿರುವ ದಲಿತ ಮತಗಳು ನಮ್ಮ ಪಕ್ಷದ ಮತಗಳು. ಅವುಗಳನ್ನು ಕಾಂಗ್ರೆಸ್‌ ಖರೀದಿ ಮಾಡುತ್ತಾ ಬಂದಿದೆ.  ನಮ್ಮಿಂದಾಗಿ ಮತಗಳು ವಿಭಜನೆಯಾಗುವುದಿಲ್ಲ. ಬಿಜೆಪಿ ಅಭ್ಯರ್ಥಿ ಶ್ರೀನಿವಾಸ ಪ್ರಸಾದ್‌ ಅವರಿಂದಾಗಿ ಮತಗಳು ಹಂಚಿ ಹೋಗಲಿವೆ.

* ಪ್ರಚಾರಕ್ಕೆ ಹೋದಾಗ ಜನರ ಪ್ರತಿಕ್ರಿಯೆ ಹೇಗಿದೆ?
ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ. ಯಾರೂ ನಮ್ಮ ಬಗ್ಗೆ ನಕಾರಾತ್ಮಕವಾಗಿ ಪ್ರತಿಕ್ರಿಯಿಸುತ್ತಿಲ್ಲ. ಜನರು ಕಾಂಗ್ರೆಸ್‌, ಬಿಜೆಪಿ ಆಡಳಿತದಿಂದ ಬೇಸತ್ತಿದ್ದಾರೆ. ಹೋದ ಕಡೆ ಎಲ್ಲ ಜನರು ಅದ್ಧೂರಿ ಸ್ವಾಗತ ಕೊಡುತ್ತಿದ್ದಾರೆ. ಕ್ಷೇತ್ರದ ಜನರು ಚುನಾವಣೆಯಲ್ಲಿ ಪಕ್ಷವನ್ನು ಬೆಂಬಲಿಸುವ ವಿಶ್ವಾಸವಿದೆ.

* ಕ್ಷೇತ್ರದ ಅಭಿವೃದ್ಧಿಗೆ ಯೋಜನೆಗಳನ್ನು ಹಾಕಿಕೊಂಡಿದ್ದೀರಾ?
ಯುವಶಕ್ತಿ ಕಷ್ಟದಲ್ಲಿದೆ. ಉದ್ಯೋಗ ಹುಡುಕಿಕೊಂಡು ಯುವಜನತೆ ಕೇರಳ, ತಮಿಳುನಾಡಿಗೆ ಹೋಗುತ್ತಿದೆ. ಉದ್ಯೋಗ ಕಲ್ಪಿಸಲು ಆದ್ಯತೆ ನೀಡುತ್ತೇನೆ. ನಮ್ಮಲ್ಲಿರುವ ಸರ್ಕಾರಿ ಆಸ್ಪತ್ರೆಗಳಲ್ಲಿ ಮೂಲಸೌಕರ್ಯಗಳಿಲ್ಲ. ಅತ್ಯುತ್ತಮ ಆಸ್ಪತ್ರೆ ನಿರ್ಮಾಣ ಮಾಡುವ ಗುರಿ ಇದೆ. ಪ್ರವಾಸಿ ತಾಣಗಳ ಅಭಿವೃದ್ಧಿ ಆಗಬೇಕಿದೆ.

ಹಿಂದೆ ನಮ್ಮಲ್ಲಿ ರೇಷ್ಮೆ ಕೃಷಿ ಜನರಿಗೆ ಉದ್ಯೋಗ ಕೊಡುತ್ತಿತ್ತು. ಅದೀಗ ನಾಶವಾಗುವ ಹಂತಕ್ಕೆ ತಲುಪಿದೆ. ಅದರ ಪುನಶ್ಚೇತನಕ್ಕೆ ಕ್ರಮ ಕೈಗೊಳ್ಳಬೇಕಿದೆ. ಗ್ರಾಮಗಳಿಗೆ ಶುದ್ಧ ಕುಡಿಯುವ ನೀರಿನ ಯೋಜನೆ ಅನುಷ್ಠಾನಗೊಳಿಸಬೇಕು. 10 ವರ್ಷಗಳ ಕಾಲ ಸಂಸದರಾಗಿದ್ದರೂ ಧ್ರುವನಾರಾಯಣ ಅವರಿಗೆ ಕ್ಷೇತ್ರವನ್ನು ಬಯಲು ಶೌಚಾಲಯ‌ ಮುಕ್ತ ಮಾಡಲು ಆಗಿಲ್ಲ. ಸ್ವಚ್ಛತೆಗೆ ಹೆಚ್ಚು ಒತ್ತು ಕೊಡಲು ಯೋಜನೆ ಹಾಕಿಕೊಂಡಿದ್ದೇನೆ.

* ಮತದಾರರು ನಿಮಗೇ ಯಾಕೆ ಮತ ಹಾಕಬೇಕು?
ಹಲವು ವರ್ಷಗಳಿಂದ ಜಿಲ್ಲೆಯಲ್ಲಿ ವಿದ್ಯಾರ್ಥಿಗಳ ಪರ, ದಲಿತ ಪರ ಹೋರಾಟಗಳನ್ನು ಮಾಡಿಕೊಂಡು ಬಂದಿದ್ದೇನೆ. 20 ವರ್ಷಗಳಿಂದ ಜಿಲ್ಲೆಯ ವಿದ್ಯಾರ್ಥಿಗಳಿಗೆ ತರಬೇತಿ, ವ್ಯಕ್ತಿತ್ವ ವಿಕಸನ, ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ನೀಡುತ್ತಾ, ಶೈಕ್ಷಣಿಕವಾಗಿ ಅವರಿಗೆ ಉಪಯೋಗವಾಗುವಂತೆ ಮಾಡಿದ್ದೇನೆ. 

ಬಿಜೆಪಿ ಮತ್ತು ಕಾಂಗ್ರೆಸ್‌ಗಳು ಜಿಲ್ಲೆಗೆ ಶಾಶ್ವತ ಯೋಜನೆಗಳನ್ನು ನೀಡಲು, ಜಿಲ್ಲೆಯನ್ನು ಅಭಿವೃದ್ಧಿ ಪಡಿಸಲು ವಿಫಲವಾಗಿವೆ. ಒಂದರ್ಥದಲ್ಲಿ ಜಿಲ್ಲೆ ಹಿಂದುಳಿಯಲು ಕಾಂಗ್ರೆಸ್ಸೇ ಕಾರಣ. ಕ್ಷೇತ್ರದ ಲೋಕಸಭಾ ಚುನಾವಣಾ ಇತಿಹಾಸದಲ್ಲಿ ಅತಿ ಹೆಚ್ಚು ಬಾರಿ ಆಯ್ಕೆಯಾದವರು ಕಾಂಗ್ರೆಸ್‌ ಅಭ್ಯರ್ಥಿಗಳು. ಅವರು ಕೆಲಸ ಮಾಡಿದ್ದರೆ ಕ್ಷೇತ್ರ ಅಭಿವೃದ್ಧಿಯಾಗುತ್ತಿರಲಿಲ್ಲವೇ?

ನಮ್ಮ ಪಕ್ಷಕ್ಕೆ ಜಿಲ್ಲೆ, ಕ್ಷೇತ್ರದ ಅಭಿವೃದ್ಧಿ ಮಾಡುವ ಬದ್ಧತೆ ಇದೆ. ಸಾಮಾಜಿಕ ಕಾಳಜಿಯೂ ಇದೆ. ಅದಕ್ಕಾಗಿ ಜನರು ನನಗೆ ಮತ ನೀಡಬೇಕು.

* ನಿಮಗೆ ರಾಜಕೀಯ ಅನುಭವ ಕಡಿಮೆ ಎಂದು ಚರ್ಚೆಯಾಗುತ್ತಿದೆಯಲ್ಲಾ?
ರಾಜಕೀಯ ಅನುಭವವನ್ನು ಹೇಗೆ ವ್ಯಾಖ್ಯಾನ ಮಾಡುತ್ತಾರೆ ಎಂಬುದರ ಮೇಲೆ ಇದು ನಿರ್ಧಾರವಾಗುತ್ತದೆ. ಶ್ರೀನಿವಾಸ ಪ್ರಸಾದ್‌ ಅವರಿಗೆ ಐದು ಬಾರಿ ಸಂಸದರಾಗಿ 25 ವರ್ಷಗಳ ರಾಜಕೀಯ ಅನುಭವವಿದೆ. ಧ್ರುವನಾರಾಯಣ ಅವರಿಗೆ 10 ವರ್ಷಗಳ ಅನುಭವವಿದೆ. ಇಷ್ಟು ಅನುಭವವಿದ್ದೂ ಜಿಲ್ಲೆ ಯಾಕಿನ್ನೂ ಹಿಂದುಳಿದಿದೆ? ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳು ಇಲ್ಲಿವೆಯೇ? ಕಾರ್ಖಾನೆಗಳು ಬಂದಿವೆಯಾ? ಪ್ರವಾಸಿ ತಾಣಗಳು ಅಭಿವೃದ್ಧಿಯಾಗಿದೆಯಾ? ಅತ್ಯುತ್ತಮವಾದ ಹೋಟೆಲ್‌, ವಸತಿಗೃಹಗಳು ಇವೆಯೇ?

ಅಧಿಕಾರಕ್ಕಾಗಿ ಕರಾಮತ್ತು ಮಾಡುವುದೇ ರಾಜಕೀಯ ಅ‌ನುಭವವಲ್ಲ. ರಾಜಕೀಯ ಕ್ಷೇತ್ರಕ್ಕೆ ಗೌರವ ಘನತೆ ತಂದು ಕೊಡುವುದು ಮುಖ್ಯ. ಆಯ್ಕೆಯಾದವನಿಗೆ ಬದ್ಧತೆ, ಪ್ರಾಮಾಣಿಕತೆ ಇದ್ದರೆ ಸಾಕಲ್ಲವೇ? ಅದು ನನಗಿದೆ. ಅಭಿವೃದ್ಧಿ ಕೆಲಸ ಮಾಡುವುದಕ್ಕೆ ರಾಜಕೀಯ ಅನುಭವ ಅಲ್ಲ; ಬದ್ಧತೆ ಮುಖ್ಯ.

* ನಿಮಗೆ ರಾಜಕೀಯ ಅನುಭವ ಕಡಿಮೆ ಎಂದು ಚರ್ಚೆಯಾಗುತ್ತಿದೆಯಲ್ಲಾ?
ರಾಜಕೀಯ ಅನುಭವವನ್ನು ಹೇಗೆ ವ್ಯಾಖ್ಯಾನ ಮಾಡುತ್ತಾರೆ ಎಂಬುದರ ಮೇಲೆ ಇದು ನಿರ್ಧಾರವಾಗುತ್ತದೆ. ಶ್ರೀನಿವಾಸ ಪ್ರಸಾದ್‌ ಅವರಿಗೆ ಐದು ಬಾರಿ ಸಂಸದರಾಗಿ 25 ವರ್ಷಗಳ ರಾಜಕೀಯ ಅನುಭವವಿದೆ. ಧ್ರುವನಾರಾಯಣ ಅವರಿಗೆ 10 ವರ್ಷಗಳ ಅನುಭವವಿದೆ. ಇಷ್ಟು ಅನುಭವವಿದ್ದೂ ಜಿಲ್ಲೆ ಯಾಕಿನ್ನೂ ಹಿಂದುಳಿದಿದೆ? ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳು ಇಲ್ಲಿವೆಯೇ? ಕಾರ್ಖಾನೆಗಳು ಬಂದಿವೆಯಾ? ಪ್ರವಾಸಿ ತಾಣಗಳು ಅಭಿವೃದ್ಧಿಯಾಗಿದೆಯಾ? ಅತ್ಯುತ್ತಮವಾದ ಹೋಟೆಲ್‌, ವಸತಿಗೃಹಗಳು ಇವೆಯೇ? ಅಧಿಕಾರಕ್ಕಾಗಿ ಕರಾಮತ್ತು ಮಾಡುವುದೇ ರಾಜಕೀಯ ಅ‌ನುಭವವಲ್ಲ. ರಾಜಕೀಯ ಕ್ಷೇತ್ರಕ್ಕೆ ಗೌರವ ಘನತೆ ತಂದು ಕೊಡುವುದು ಮುಖ್ಯ. ಆಯ್ಕೆಯಾದವನಿಗೆ ಬದ್ಧತೆ, ಪ್ರಾಮಾಣಿಕತೆ ಇದ್ದರೆ ಸಾಕಲ್ಲವೇ? ಅದು ನನಗಿದೆ. ಅಭಿವೃದ್ಧಿ ಕೆಲಸ ಮಾಡುವುದಕ್ಕೆ ರಾಜಕೀಯ ಅನುಭವ ಅಲ್ಲ; ಬದ್ಧತೆ ಮುಖ್ಯ.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !