ಬಿಎಸ್‌ಪಿ ಸ್ವತಂತ್ರ ಸ್ಪರ್ಧೆ: ಎನ್‌.ಮಹೇಶ್‌

7

ಬಿಎಸ್‌ಪಿ ಸ್ವತಂತ್ರ ಸ್ಪರ್ಧೆ: ಎನ್‌.ಮಹೇಶ್‌

Published:
Updated:
Deccan Herald

ಚಾಮರಾಜನಗರ: ನಗರಸಭಾ ಚುನಾವಣೆಯಲ್ಲಿ ಬಹುಜನ ಸಮಾಜ ಪಕ್ಷ (ಬಿಎಸ್‌ಪಿ) ಸ್ವತಂತ್ರವಾಗಿ ಸ್ಪರ್ಧಿಸಲಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎನ್. ಮಹೇಶ್ ಅವರು ಸ್ಪಷ್ಟಪಡಿಸಿದರು.

ಬಿಎಸ್‌ಪಿ ಜಿಲ್ಲಾ ಸಮಿತಿಯು ನಗರಸಭಾ ಚುನಾವಣಾ ಸಂಬಂಧ ಶನಿವಾರ ಪಟ್ಟಣದ ಜೋಡಿ ರಸ್ತೆಯಲ್ಲಿರುವ ವರ್ತಕರ ಭವನದಲ್ಲಿ ಆಯೋಜಿಸಿದ್ದ ಕಾರ್ಯಕರ್ತರ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.

‘ಈ ಚುನಾವಣೆಯಲ್ಲಿ ಯಾವ ಪಕ್ಷದ ಜೊತೆ ಹೊಂದಾಣಿಕೆಯಿಲ್ಲ. ಜಿಲ್ಲೆಯ ಕೊಳ್ಳೇಗಾಲ, ಚಾಮರಾಜನಗರ ನಗರಸಭೆಗಳ ಎಲ್ಲ 62 ವಾರ್ಡ್‌ಗಳಲ್ಲೂ ಪಕ್ಷದ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗುವುದು’ ಎಂದರು.

‘ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್, ಬಿಎಸ್‌ಪಿ ಹೊಂದಾಣಿಕೆ ಮಾಡಿಕೊಂಡಿತು. ರಾಜ್ಯದಲ್ಲಿ ಜೆಡಿಎಸ್, ಕಾಂಗ್ರೆಸ್, ಬಿಎಸ್‌ಪಿ ಸಮ್ಮಿಶ್ರ ಸರ್ಕಾರವಿದ್ದು ಮೂರು ಪಕ್ಷಗಳು ಸ್ವತಂತ್ರವಾಗಿ ಸ್ಪರ್ಧೆ ಮಾಡುತ್ತಿವೆ. ಏನಾದರೂ ಸ್ಥಳೀಯವಾಗಿ, ವಾರ್ಡ್ ಮಟ್ಟದಲ್ಲಿ ಹೊಂದಾಣಿಕೆ ಮಾಡಬೇಕಾದ ಸಂದರ್ಭಗಳು ಬಂದರೆ ಈ ಬಗ್ಗೆ ನಿರ್ಧಾರ ಕೈಗೊಳ್ಳುವುದು ಆಯಾಯ ನಗರಸಭೆ ವಾರ್ಡ್‌, ತಾಲ್ಲೂಕು ಸಮಿತಿ, ಜಿಲ್ಲಾ ಸಮಿತಿಗೆ ಬಿಟ್ಟಿದ್ದು’ ಎಂದು ಅವರು ಹೇಳಿದರು.

‘ಎಲ್ಲ ವಾರ್ಡ್‌ಗಳಿಗೂ ಮೀಸಲಾತಿ ಪ್ರಕಾರ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗುವುದು. ಚಾಮರಾಜನಗರ ನಗರಸಭೆ ಉಸ್ತುವಾರಿ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಅರಕಲವಾಡಿ ನಾಗೇಂದ್ರ, ಕೊಳ್ಳೇಗಾಲ ನಗರಸಭೆ ಉಸ್ತುವಾರಿಯನ್ನು ಪಕ್ಷದ ಜಿಲ್ಲಾಧ್ಯಕ್ಷ ಮಾದಪ್ಪ ಅವರಿಗೆ ವಹಿಸಲಾಗಿದೆ. ಅಲ್ಲದೇ ಎಲ್ಲ ವಾರ್ಡ್‌ಗಳಿಗೂ ಭೇಟಿ ನೀಡಿ ಅಭ್ಯರ್ಥಿಗಳ ಪರ ಪ್ರಚಾರ ಮಾಡಲಾಗುವುದು’ ಎಂದರು.

27ನೇ ವಾರ್ಡ್‌ನಲ್ಲಿ ಪಕ್ಷ ಗೆದ್ದೇ ಗೆಲ್ಲುತ್ತೇವೆ: ‘ರಾಮಸಮುದ್ರದ 27ನೇ ವಾರ್ಡ್‌ನಲ್ಲಿ ಮತ್ತೆ ಆನೆ ಘರ್ಜಿಸಲಿದೆ. ಅದರಲ್ಲಿ ಯಾವುದೇ ಅನುಮಾನ ಬೇಡ’ ಎಂದು ಅವರು.

100 ಸದಸ್ಯತ್ವ ನೋಂದಣಿ ಮಾಡಿಸಿದವರಿಗೆ ಬಿ.ಫಾರಂ: ಪಕ್ಷಕ್ಕೆ ₹ 5,000 ಠೇವಣೆ ಇಟ್ಟು, 100 ಮಂದಿ ಸದಸ್ಯರ ಸದಸ್ಯತ್ವ ನೋಂದಣೆ ಮಾಡಿಸುವ ಆಕಾಂಕ್ಷಿಗಳಿಗೆ ಪಕ್ಷದಿಂದ ಬಿ.ಫಾರಂ ನೀಡಲಾಗುತ್ತದೆ ಎಂದು ಸಚಿವ ಮಹೇಶ್‌ ಹೇಳಿದರು.

ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಅರಕಲವಾಡಿ ನಾಗೇಂದ್ರ, ಜಿಲ್ಲಾಧ್ಯಕ್ಷ ಮಾದಪ್ಪ, ತಾಲ್ಲೂಕು ಅಧ್ಯಕ್ಷ ಆಲೂರು ಮಲ್ಲು, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬ.ಮ.ಕೃಷ್ಣಮೂರ್ತಿ, ಮುಖಂಡ ಕಣ್ಣೇಗಾಲ ಮಹದೇವನಾಯಕ, ನಿವೃತ್ತ ಉಪತಹಶೀಲ್ದಾರ್ ಕೃಷ್ಣಯ್ಯ, ಜಿಲ್ಲಾ ಕಾರ್ಯಕಾರಿಣಿ ಸದಸ್ಯ ಬ್ಯಾಡಮೂಡ್ಲು ಬಸವಣ್ಣ, ನಗರ ಘಟಕ ಅಧ್ಯಕ್ಷ ಚಿನ್ನಸ್ವಾಮಿ, ತಾಲ್ಲೂಕು ಪ್ರಧಾನ ಕಾರ್ಯದರ್ಶಿ ನಂಜುಂಡಸ್ವಾಮಿ, ಕ್ಷೇತ್ರ ಉಸ್ತುವಾರಿ ಎಸ್.ಪಿ. ಮಹೇಶ್, ಸುಶೀಲ, ಹಬೀಬ್‌ ಅಹಮದ್, ಸಿದ್ದರಾಜು ಇದ್ದರು.
 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !