ಕೇಂದ್ರ ಮಧ್ಯಂತರ ಬಜೆಟ್: ಯಾರು ಏನು ಹೇಳುತ್ತಾರೆ?

ರೈತರ ಮೇಲಿನ ಕಾಳಜಿ ಈಗ ಯಾಕೆ?
ಮೋದಿ ಜನರನ್ನು ದಿಕ್ಕು ತಪ್ಪಿಸಿ ಗಿಮಿಕ್ ರಾಜಕಾರಣ ನಡೆಸುತ್ತಿದ್ದಾರೆ. ಈ ಬಜೆಟ್ ಮುಂದಿನ ಲೋಕಸಭಾ ಚುನಾವಣೆಗಾಗಿ ಮಾಡಿರುವ ತಾತ್ಕಾಲಿಕ ಬಜೆಟ್. ಚುನಾವಣೆಯನ್ನು ಮುಂದಿಟ್ಟುಕೊಂಡು ಎಲ್ಲ ಅಂಶಗಳನ್ನು ಪ್ರಸ್ತಾಪಿಸಿದ್ದಾರೆ. ಕೇಂದ್ರ ಸರ್ಕಾರ ₹ 6 ಸಾವಿರ ಹಣವನ್ನು ರೈತರ ಖಾತೆಗೆ ಹಾಕಿದರೆ ಅದು ಬಹಳ ಸಂತೋಷದ ವಿಷಯ. 5 ವರ್ಷಗಳಿಂದ ರೈತರ ಬಗ್ಗೆ ಇಲ್ಲದ ಕಾಳಜಿ ಈಗ ಯಾಕೆ ಬಂತು? ಪ್ರಧಾನಿ ಮೂಗಿಗೆ ತುಪ್ಪ ಸವರುವ ಕೆಲಸ ಮಾಡಿದ್ದಾರೆ.
–ಎನ್.ಮಹೇಶ್, ಕೊಳ್ಳೇಗಾಲ ಶಾಸಕ
ಉತ್ತಮ ಬಜೆಟ್
ಸಾಮಾನ್ಯ ವರ್ಗದವರಿಗೆ ಮತ್ತು ರೈತರಿಗೆ ಉಪಯೋಗವಾಗುವಂತಹ ಉತ್ತಮ ಬಜೆಟ್. ಜನಪರ ಕಾರ್ಯಕ್ರಮಗಳಿಗೆ ಒತ್ತು ನೀಡಲಾಗಿದೆ. ಬಜೆಟ್ನಿಂದ ರಾಜ್ಯದ ಜನರಿಗೂ ಹೆಚ್ಚು ಅನುಕೂಲವಾಗುತ್ತದೆ.
–ಸಿ.ಎಸ್.ನಿರಂಜನಕುಮಾರ್, ಗುಂಡ್ಲುಪೇಟೆ ಶಾಸಕ
ಅಪ್ರಯೋಜಕ
ಅಧಿಕಾರಕ್ಕೆ ಬಂದಾಗಿನಿಂದಲೂ ಬರೀ ಪೊಳ್ಳು ಭರವಸೆಯನ್ನು ನೀಡುತ್ತಾ ಬಂದಿರುವ ಎನ್ಡಿಎ ಸರ್ಕಾರ ಈ ಬಾರಿ ಅಪ್ರಯೋಜಕ ಬಜೆಟ್ ಮಂಡಿಸುವ ಮೂಲಕ ದೇಶದ ಜನತೆಗೆ ಮಂಕುಬೂದಿ ಎರಚಿದೆ. ಈ ಬಜೆಟ್ ಯಾರಿಗೂ ಪ್ರಯೋಜವಾದುದ್ದಲ್ಲ. ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿ, ಪ್ರತಿ ಖಾತೆಗೆ ₹15 ಲಕ್ಷ ಜಮೆ ಮುಂತಾದ ಭರವಸೆಗಳು ಬೋಗಸ್ ಎಂಬುದನ್ನು ಬಿಜೆಪಿ ಮತ್ತೊಮ್ಮೆ ಸಾಬೀತು ಮಾಡಿದೆ.
–ಆರ್.ನರೇಂದ್ರ, ಹನೂರು ಶಾಸಕ
ರೈತ ಪರ ಅಲ್ಲ
ರೈತರಿಗೆ ವರ್ಷಕ್ಕೆ ₹6,000 ನೀಡುವುದು ಎಂದರೆ, ದಿನಕ್ಕೆ ₹15 ಕೊಟ್ಟಂತೆ ಆಯಿತು. ಚಹ ಕುಡಿಯುವ ದುಡ್ಡು. ನಮಗೆ ಇಂತಹ ಕೊಡುಗೆಗಳು ಬೇಡ. ಸಂಸ್ಕರಣಾ ಘಟಕಗಳು, ಶೀತಲೀಕರಣ ಘಟಕಗಳು, ಆಯಾ ಪ್ರದೇಶಗಳಿಗೆ ಅನುಗುಣವಾಗಿ ಕೃಷಿ ಉತ್ಪನ್ನಗಳಿಗೆ ಮಾರುಕಟ್ಟೆ ವ್ಯವಸ್ಥೆ ಬೇಕು. ಬೆಲೆ ಕುಸಿದಾಗ ಬೆಂಬಲ ಬೆಲೆ ಯೋಜನೆಗಳು ಬೇಕು. ಬಜೆಟ್ನಲ್ಲಿ ಸ್ವಾಮಿನಾಥನ್ ವರದಿ ಜಾರಿ ಮಾಡುವ ಘೋಷಣೆ ಮಾಡುವ ನಿರೀಕ್ಷೆ ಇತ್ತು. ಅದು ಹುಸಿಯಾಗಿದೆ. ಇದು ರೈತಪರ ಬಜೆಟ್ ಅಲ್ಲ
–ಹೊನ್ನೂರು ಪ್ರಕಾಶ್, ಜಿಲ್ಲಾ ರೈತ ಸಂಘದ ಅಧ್ಯಕ್ಷ
ಚುನಾವಣಾ ಗಿಮಿಕ್
ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಸಿದ್ಧಪಡಿಸಿದ ಬಜೆಟ್ ಇದು. ಮಧ್ಯಮ ವರ್ಗದವರ ಹಾಗೂ ರೈತರ ಮೂಗಿಗೆ ತುಪ್ಪ ಸವರುವ ಕೆಲಸವನ್ನು ಕೇಂದ್ರ ಸರ್ಕಾರ ಮಾಡಿದೆ. 2.5 ಕೋಟಿ ಉದ್ಯೋಗ ಸೃಷ್ಟಿ ಮಾಡುತ್ತೇವೆ ಎಂದು ಹೇಳಿದ ಸರ್ಕಾರ, ಆ ಬಗ್ಗೆ ಪ್ರಸ್ತಾಪಿಸಿಲ್ಲ. ಸಾಲಮನ್ನಾ, ಕೃಷಿಗೆ ಸಹಾಯಧನ, ಬೆಂಬಲ ಬೆಲೆಯ ಘೋಷಣೆಗಳು ಇಲ್ಲದಿರುವ ಇದು ಚುನಾವಣಾ ಗಿಮಿಕ್ನ ಬಜೆಟ್.
–ಪಿ. ಮರಿಸ್ವಾಮಿ, ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ
ಜನ ಸಾಮಾನ್ಯರಿಗೆ ಅನುಕೂಲ
ಹಿರಿಯ ನಾಗರಿಕರು ಹಾಗೂ ಗ್ರಾಮೀಣಾಭಿವೃದ್ಧಿಯನ್ನು ದೃಷ್ಟಿಯಲ್ಲಿಟ್ಟುಕೊಂಡು ಮಂಡಿಸಿರುವ ಬಜೆಟ್ನಿಂದ ಜನಸಾಮಾನ್ಯರಿಗೆ ಅನುಕೂಲವಾಗಲಿದೆ. ಚುನಾವಣಾ ಗಿಮಿಕ್ಗಾಗಿ ಮಂಡಿಸಿರುವ ಬಜೆಟ್ ಎಂದು ಎಲ್ಲರೂ ಹೇಳುತ್ತಿದ್ದಾರೆ. ಆದರೆ, ಗ್ರಾಮೀಣ ಹಾಗೂ ಸಾಮಾನ್ಯ ಜನರ ಅಭಿವೃದ್ಧಿ ದೃಷ್ಟಿಯಿಂದ ಇದುವರೆಗೂ ಯಾರ ಕೊಡದ ಸೌಲಭ್ಯವನ್ನು ಕೇಂದ್ರ ಸರ್ಕಾರ ಈ ಬಾರಿ ನೀಡಿದೆ.
–ಪರಿಮಳಾ ನಾಗಪ್ಪ, ಬಿಜೆಪಿ ನಾಯಕಿ
ಉಳಿತಾಯದ ಬಜೆಟ್
ಮಧ್ಯಮ ವರ್ಗದವರಿಗೆ, ವರ್ತಕರಿಗೆ ಅತ್ಯಂತ ಅನುಕೂಲಕರ ಬಜೆಟ್. ₹5 ಲಕ್ಷದವರೆಗೆ ಆದಾಯಕ್ಕೆ ತೆರಿಗೆ ವಿನಾಯಿತಿ ನೀಡಿರುವುದರಿಂದ ಸಾಕಷ್ಟು ಜನರಿಗೆ ಉಳಿತಾಯವಾಗಲಿದೆ. ಕೇಂದ್ರ ಸರ್ಕಾರ ಯಾರ ಮೇಲೂ ಹೊರೆ ಹಾಕಿಲ್ಲ. ನನ್ನ ಅನುಭವದಲ್ಲಿ ಹೇಳುವುದಾದರೆ ಇದು ಅತ್ಯಂತ ಒಳ್ಳೆಯ ಬಜೆಟ್
–ಸಿ.ವಿ. ಶ್ರೀನಿವಾಸ್, ವರ್ತಕರ ಸಂಘದ ಅಧ್ಯಕ್ಷ, ಚಾಮರಾಜನಗರ
ಕಾರ್ಮಿಕರ ಪರ ಇಲ್ಲ
ಇದು ಕಾರ್ಮಿಕರ ಪರವಾದ ಬಜೆಟ್ ಅಲ್ಲ. ಮಧ್ಯಮ ವರ್ಗ, ಅಸಂಘಟಿತ ವಲಯದ ಕಾರ್ಮಿಕರಿಗಾಗಿ ಸ್ಪಷ್ಟವಾದ ಘೋಷಣೆ ಏನೂ ಇಲ್ಲ. ದುಡಿಯುವ ಕೈಗಳಿಗೆ ಅನುಕೂಲವಾಗುವಂತಹ ಯಾವುದೇ ಪ್ರಸ್ತಾಪ ಇಲ್ಲ. ₹5ಲಕ್ಷಕ್ಕಿಂತ ಹೆಚ್ಚು ಆದಾಯ ಇರುವವರಿಗೆ ಯಾವುದೇ ರಿಯಾಯಿತಿ ಇಲ್ಲ. ಕೇಂದ್ರ ಸರ್ಕಾರ ಇತ್ತೀಚೆಗೆ ಆರ್ಥಿಕವಾಗಿ ಹಿಂದುಳಿದುವರಿಗೆ ಶೇ 10ರಷ್ಟು ಮೀಸಲಾತಿ ತರುವಾಗ ಆದಾಯದ ಮಿತಿ ₹8 ಲಕ್ಷ ನಿಗದಿ ಪಡಿಸಿತ್ತು. ಆದರೆ ಈಗ ₹ 5ಲಕ್ಷದವರೆಗೆ ಮಾತ್ರ ತೆರಿಗೆ ವಿನಾಯಿತಿ ಮಾಡಿರುವುದು ಹಾಸ್ಯಾಸ್ಪದ.
–ಜೆ.ಸುರೇಶ್, ಜಿಲ್ಲಾ ಸಿಐಟಿಯು ಅಧ್ಯಕ್ಷ, ಚಾಮರಾಜನಗರ
ತೆರಿಗೆದಾರರಿಗೆ ಬಂಪರ್ ಕೊಡುಗೆ
ತೆರಿಗೆದಾರರಿಗೆ ಅನುಕೂಲವಾಗಿರುವಂತಹ ಬಜೆಟ್. ₹5 ಲಕ್ಷ ಆದಾಯದವರೆಗೆ ತೆರಿಗೆ ವಿನಾಯಿತಿ ಮಾಡಿರುವುದು ಒಳ್ಳೆಯ ಬೆಳವಣಿಗೆ. ಬ್ಯಾಂಕುಗಳ ಠೇವಣಿ ಮೇಲಿನ ಬಡ್ಡಿಗೆ ತೆರಿಗೆ ವಿಧಿಸುವ ಮಿತಿಯನ್ನು ₹10 ಸಾವಿರದಿಂದ ₹40 ಸಾವಿರಕ್ಕೆ ಹೆಚ್ಚಿಸಲಾಗಿದೆ. ಮಧ್ಯಮ ವರ್ಗಕ್ಕೆ ಈ ಬಜೆಟ್ ಬಂಪರ್ ಕೊಡುಗೆ ಕೊಟ್ಟಿದೆ. ಹೆಚ್ಚು ಸಂಬಳವಿರುವವರು ಗೃಹ ಸಾಲ ತೆಗೆದುಕೊಂಡವರು ಕೂಡ ತೆರಿಗೆ ವಿನಾಯಿತಿ ಪಡೆಯುವುದಕ್ಕೆ ಅವಕಾಶ ಇದೆ
–ಸಿ.ಎಂ.ವೆಂಕಟೇಶ್, ಜಿಲ್ಲಾ ಲೆಕ್ಕಪರಿಶೋಧಕರ ಸಂಘದ ಅಧ್ಯಕ್ಷ, ಚಾಮರಾಜನಗರ
ಬಂಡವಾಳಶಾಹಿಗಳ ಪರ
ನರೇಂದ್ರ ಮೋದಿ ಅವರು ನಿರುದ್ಯೋಗಿ ಯುವಕ, ಯುವತಿಯರಿಗೆ ಕೆಲಸ ಕೊಡಿಸುತ್ತೇನೆ ಎಂದು ಮೋಸ ಮಾಡಿದ್ದಾರೆ. ಹೀಗಾದರೆ ವಿದ್ಯಾವಂತರ ಮುಂದಿನ ಗತಿಯೇನು? ಈ ಬಜೆಟ್ನಿಂದ ಬಂಡವಾಳಶಾಹಿಗಳಿಗೆ ಮಾತ್ರ ಅನುಕೂಲವಾಗಿದೆ.
–ಮಹದೇವ್ ಶಂಕನಪುರ, ಸಾಹಿತಿ
ದೂರದರ್ಶಿತ್ವದ ಬಜೆಟ್
ಎಸ್ಸಿ, ಎಸ್ಟಿ ಅನುದಾನದಲ್ಲಿ ಹೆಚ್ಚಳ ಮಾಡಲಾಗಿದೆ. ಆಯುಷ್ಮಾನ್ ಭಾರತ ಯೋಜನೆಯಡಿ 10 ಲಕ್ಷ ಜನರಿಗೆ ಚಿಕಿತ್ಸೆ, ವೇತನದಾರರಿಗೆ ₹5 ಲಕ್ಷ ತನಕ ತೆರಿಗೆ ವಿನಾಯಿತಿ ನೆರವು ಒದಗಿಸಿದೆ. ಶಿಕ್ಷಣ ಕ್ಷೇತ್ರಕ್ಕೆ ಡಿಜಿಟಲ್ ಸ್ಪರ್ಶ ನೀಡುವ ಮೂಲಕ ನೆರವಾಗಿದೆ ಹಾಗೂ ಬಾಹ್ಯಾಕಾಶಕ್ಕೆ 2022ಕ್ಕೆ ಭಾರತೀಯ ಗಗನ ಯಾತ್ರಿಗಳನ್ನು ಕಳುಹಿಸುವ ಮೂಲಕ ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರತಕ್ಕೆ ವಿಶ್ವ ಮನ್ನಣೆ ತಂದು ಕೊಡುವ ಉದ್ಧೇಶದ ದೂರದರ್ಶಿತ್ವದ ಬಜೆಟ್.
–ಜಿ.ನಳಿನಿ, ಗೃಹಿಣಿ, ಯಳಂದೂರು
ಎಲ್ಲರಿಗೂ ಅನುಕೂಲ
ಕಾರ್ಮಿಕರು, ಮಧ್ಯಮವರ್ಗ, ರೈತಾಪಿ ಜನರಿಗೆ ಅತ್ಯುತ್ತಮ ಕೊಡುಗೆ ನೀಡಿದ ಬಜೆಟ್. ₹5 ಲಕ್ಷದವರೆಗೆ ತೆರಿಗೆ ವಿನಾಯಿತಿ, ₹ 40 ಸಾವಿರ ವರೆಗೆ ಬ್ಯಾಂಕ್ ಠೇವಣಿ ಮೇಲಿನ ಟಿಡಿಎಸ್ ರದ್ದು... ಇವುಗಳಿಂದ ತುಂಬ ಅನುಕೂಲವಾಗಲಿದೆ.
–ಬಸವರಾಜು, ಹಂಗಳ, ಗುಂಡ್ಲುಪೇಟೆ ತಾಲ್ಲೂಕು
ಜನರ ಓಲೈಕೆ ಬಜೆಟ್
ಜನಪರ ಯೋಜನೆಗಳನ್ನು ಜಾರಿಗೊಳಿಸುವ ಉದ್ದೇಶದಿಂದ ಬಜೆಟ್ ಮಂಡಿಸಿರುವ ಕೇಂದ್ರ ಸರ್ಕಾರ, ಐದು ವರ್ಷಗಳ ಹಿಂದೆಯೇ ಇಂತಹ ಬಜೆಟ್ ಮಂಡಿಸಬಹುದಿತ್ತು. ಆದರೆ ಕೇವಲ ಆಶ್ವಾಸನೆಗಳನ್ನು ಕೊಡುವುದರಲ್ಲೇ ಕಾಲ ಕಳೆದು ಈಗ ಜನರ ಓಲೈಕೆಗಾಗಿ ಇಂತಹ ಬಜೆಟ್ ಮಂಡಿಸಲಾಗಿದೆ.
–ಸಿದ್ದರಾಜು, ಹನೂರು
ಚುನಾವಣಾ ಬಜೆಟ್
ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಮಂಡಿಸಿರುವ ಬಜೆಟ್, ಕೇವಲ ಅರೆಕಾಲಿಕ ಬಜೆಟ್ ಆಗಿದೆ. ಇದನ್ನು ಒಂದು ಲೇಖಾನುದಾನ ಎನ್ನಬಹುದು. ಮತ್ತೊಮ್ಮೆ ಬಿಜೆಪಿ ಅಧಿಕಾರಕ್ಕೆ ಬಂದರೂ ತಾನು ನೀಡಿರುವ ಭರವಸೆಯನ್ನು ಈಡೇರಿಸಲಿದೆ ಎಂಬ ನಂಬಿಕೆ ಜನರಿಗೆ ಇಲ್ಲ
–ಶಾಗ್ಯ ಮಹೇಶ್
ಹುಸಿಯಾದ ನಿರೀಕ್ಷೆ
ಚಾಮರಾಜನಗರ, ಕೊಳ್ಳೆಗಾಲ, ಕನಕಪುರ ರೈಲು ಮಾರ್ಗಕ್ಕೆ ಈ ಬಾರಿಯಾದರೂ ಹಸಿರು ನಿಶಾನೆ ದೊರೆಯುತ್ತದೆ ಎಂಬ ನಿರೀಕ್ಷೆಯಿತ್ತು. ಅದು ಹುಸಿಯಾಗಿದೆ. ರೈತರಿಗೆ, ಮಧ್ಯಮ ವರ್ಗದವರಿಗೆ ಹೆಚ್ಚಿನ ಪ್ರಯೋಜನ ಇಲ್ಲ.
–ಶಶಿಕುಮಾರ್, ಕೊಳ್ಳೇಗಾಲ
ಆಶಾದಾಯಕ ಬಜೆಟ್
ಅನ್ನದಾತರಿಗೆ ವಾರ್ಷಿಕ ₹ 6 ಸಾವಿರ ಆದಾಯ ಬೆಂಬಲ ನೀಡಿದೆ. ಅಸಂಘಟಿತ ವಲಯದ ಶ್ರಮಿಕರು, ಕಾರ್ಮಿಕರಿಗೆ ಪಿಂಚಣಿ ನೀಡಲಾಗಿದೆ. ಅಂಚೆ ಮತ್ತು ಬ್ಯಾಂಕ್ಗಳಲ್ಲಿ ಇಟ್ಟ ಠೇವಣಿಗೆ ₹ 40 ಸಾವಿರ ತನಕ ಬರುವ ಬಡ್ಡಿಗೆ ತೆರಿಗೆ ಮುಕ್ತಗೊಳಿಸಲಾಗಿದೆ. 2 ಮನೆ ಹೊಂದಿರುವವರು ಬಂಡವಾಳದ ಲಾಭದ ಮೇಲಿನ ವಿನಾಯಿತಿ ಲಾಭ ಪಡೆಯಬಹುದು. ನರೇಗಾ ಯೋಜನೆಗೆ ₹60 ಸಾವಿರ ಕೋಟಿ ಅನುದಾನ ನೀಡಿ ಅಭಿವೃದ್ಧಿಗೆ ಒತ್ತು ನೀಡುವ ಮೂಲಕ ಜನ ಸಾಮಾನ್ಯರಿಗೆ ನೆರವಾದ ಆಶಾದಾಯಕ ಬಜೆಟ್ ಇದು.
–ಎಚ್. ಸುರೇಶ್ಕುಮಾರ್, ಯಳಂದೂರು
ಬರಹ ಇಷ್ಟವಾಯಿತೆ?
0
0
0
0
0
0 comments
View All