‘ಬಂ ಬಂ ಭೋಲೇನಾಥ್’

7

‘ಬಂ ಬಂ ಭೋಲೇನಾಥ್’

Published:
Updated:
Deccan Herald

ಗಂಡು ಮೆಟ್ಟಿನ ನಾಡು ಹುಬ್ಬಳ್ಳಿಯಾಂವನ ತಲಿಯಾಗ ಹುಳ ಬಿಟ್ರ ಹುಟ್ಟೋ ಕಥೀನೇ ಇಂಥಾದ್ದು
ಕಿತ್ತೂರ ರಾಣಿ ಚೆನ್ನಮ್ಮನ ಕಥಿ ಆಕಾಶ ನೊಡಾಕತ್ತೇತಿ
ಅದಕ್ಕಿನ್ನೇನು ಸಿಡಿಲು ಬಂದು ಹೊಡಿಯೋ ಟೈಮ್‌ ಬಂದೇತಿ
ಅದು ಬಡೀತು ಅಂದ್ರ ಅದರ ಬಿಸಿ ನಾಲ್ಕೂ ದಿಕ್ಕಿಗೆ ತಟ್ಟೇ ತಟ್ಟತೇತಿ
ತೊಡೆ ತಟ್ಟಿ ಅಖಾಡಾಕ್ಕಿಳಿಯೋಕೆ ನಾವ್‌ ರೆಡಿ...

–ಹೀಂಗ್ ಥೇಟ್‌ ಉತ್ತರ ಕರ್ನಾಟಕದ ಜವಾರಿ ಸ್ಟೈಲ್‌ನಲ್ಲಿ ಬಿಸಿರಕ್ತದ ಹುಡುಗರು ಕಿತ್ತೂರ ರಾಣಿ ಚೆನ್ನಮ್ಮನ ಪ್ರತಿಮೆ ಎದುರು ನಿಂತು ತೊಡೆ ತಟ್ಟಿ ಖಡಕ್ಕಾಗಿ ಹೇಳುವ ದೃಶ್ಯವೊಂದು ಕನ್ನಡ ರ‍್ಯಾಪ್‌ ಸಾಂಗ್ ಆಲ್ಬಂವೊಂದರಲ್ಲಿ ಕಾಣಿಸುತ್ತದೆ. ಅದು ಹುಬ್ಬಳ್ಳಿಯ ಫೆನೊಮ್‌–ಕೆ (PHENOM-K) ತಂಡದ ಹುಡುಗರು ಸೇರಿ ಸಿದ್ಧಪಡಿಸಿದ್ದ ‘ಟ್ಯಾಲೆಂಟ್‌ ಇದ್ದೋರೆ...’ ಎಂಬ ಕನ್ನಡ ರ‍್ಯಾಪ್‌ ಅಲ್ಬಂನ ದೃಶ್ಯ. ಇದು ಬಿಡುಗಡೆಯಾಗಿ ಒಂದೆರಡು ವರ್ಷ ಆಗಿಹೋಯ್ತು.

ಈಗ ಅದೇ ತಂಡ ‘ಬಂ ಬಂ ಭೋಲೇನಾಥ್’ ಎಂಬ ವಿನೂತನ ರ‍್ಯಾಪ್‌ ವಿಡಿಯೊ ಆಲ್ಬಂ ಮಾಡಿದೆ. ಎರಡು ವರ್ಷಗಳ ಹಿಂದೆ ಈ ಸಮಾನ ಮನಸ್ಕ ಯುವಕರು ‘ಟ್ಯಾಲೆಂಟ್‌ ಇದ್ದೋರೆ...’ ಆಲ್ಬಂ ಮಾಡಿ ಯೂಟ್ಯೂಬ್‌ಗೆ ಹಾಕಿದ್ದರು. ಅದನ್ನು ಈವರೆಗೆ 3ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ. ಕಳೆದ ವರ್ಷ ಮಾಡಿದ ‘ಸನ್‌ಶೈನ್‌’ ಆಲ್ಬಂ ದೊಡ್ಡ ಮಟ್ಟದಲ್ಲಿ ಜನರ ಗಮನ ಸೆಳೆದಿದೆ. ಈಗ ಮೂರನೆಯ ವಿಡಿಯೊ ಆಲ್ಬಂ ‘ಬಂ ಬಂ ಭೋಲೇನಾಥ್’  ಸೆ.5ರಂದು ಯೂಟ್ಯೂಬ್‌ಗೆ ಅಪ್‌ಲೋಡ್‌ ಮಾಡಿದ್ದಾರೆ.

ಕನ್ನಡದಲ್ಲಿಯೇ ಏನಾದರೂ ಹೊಸದನ್ನು ಮಾಡಬೇಕು, ಕ್ರಿಯೇಟಿವಿಟಿ ಪ್ರದರ್ಶಿಸಬೇಕೆಂಬ ಈ ಹೊಸ ತಲೆಮಾರಿನ ಸಂಗೀತ ಪ್ರಿಯ ಹುಡುಗರಿಗೆ ಮೊದಲು ಆಕರ್ಷಿಸುವುದೇ ರ‍್ಯಾಪ್‌ ಸಾಂಗ್‌. ಅನೇಕ ಯುವಕರು ಸವಾಲು ಸ್ವೀಕರಿಸಿದವರಂತೆ ಆಲ್ಬಂ ಮಾಡುವುದಕ್ಕೆ ಮುಂದಾಗುತ್ತಾರೆ.

‘ನಾವೂ ಅಷ್ಟೇ, ಸಾಧನೆ ಮಾಡಿದರೆ ಕನ್ನಡದಲ್ಲಿಯೇ ಮಾಡಬೇಕು ಎನ್ನುವ ಉದ್ದೇಶದಿಂದ ರ‍್ಯಾಪ್‌ ಸಾಂಗ್‌ ಟ್ರೈ ಮಾಡಿದೆವು. ಈಗಾಗಲೇ ಎರಡು ಸಾಂಗ್‌ಗಳಿಗೆ ಸಿಕ್ಕಿರುವ ಪ್ರತಿಕ್ರಿಯೆ ನೋಡಿ ಮತ್ತಷ್ಟು ಹೊಸ ಆಲ್ಬಂಗಳನ್ನು ಮಾಡಲು ಮುಂದಾಗಿದ್ದೇವೆ’ ಎನ್ನುತ್ತಾರೆ ಭೋಲೇನಾಥ್ ರ‍್ಯಾಪ್‌ ಸಾಂಗ್‌ ಆಲ್ಬಂ ನಿರ್ದೇಶಕ ಮುಕೇಶ್ ಹವಾಲ್ದಾರ್‌.

ಈ ಆಲ್ಬಂನಲ್ಲಿನ ಹಾಡಿಗೆ ರ‍್ಯಾಪರ್‌ ಕಿರಣ್‌.ಬಿ.ಮಠದ್ ಅವರು ಸಾಹಿತ್ಯ ರಚಿಸಿದ್ದಾರೆ. ಹಾಡು ಹಾಡಿದ್ದಾರೆ. ಉಳಿದಂತೆ ಶಿವಪ್ರಕಾಶ್‌ ನಾಯಕ್‌ ನೃತ್ಯ ನಿರ್ದೇಶನ ಮಾಡಿದ್ದಾರೆ. ‘ಹುಬ್ಬಳ್ಳಿ ಮಹಾನಗರದ ಸುತ್ತಮುತ್ತಲಿನ ಜಾಗಗಳನ್ನೇ ಬಳಸಿಕೊಂಡು ಹಾಡಿನ ಚಿತ್ರೀಕರಣ ಮಾಡಿದ್ದೇವೆ. ಹಿಂದಿನ ಎರಡು ಹಾಡುಗಳನ್ನು ಕೂಡ ಇಲ್ಲಿಯೇ ಚಿತ್ರೀಕರಿಸಿದ್ದೆವು ಆ ಆಲ್ಬಂನಲ್ಲಿ ಉತ್ತರ ಕರ್ನಾಟಕದ ನೇಟಿವಿಟಿಯ ಸೊಗಡಿದೆ’ ಎನ್ನುತ್ತಾರೆ ಅವರು. 

ಸಮಾನ ಮನಸ್ಕರ ‘ಫೆನೊಮ್–ಕೆ’ ತಂಡ

ಫೆನೊಮ್‌ ಕೆ ನಲ್ಲಿ ಎಂಟರಿಂದ ಹತ್ತು ಮಂದಿ ಸಮಾನ ಮನಸ್ಕ ಯುವಕರಿದ್ದಾರೆ. ಎಲ್ಲರೂ ಹೈಸ್ಕೂಲ್, ಪಿಯುಸಿಗೆ ಹೋಗುವ ಹಂತದಲ್ಲಿ ಹಾಡು, ಸಿನಿಮಾಗಳತ್ತ ಆಕರ್ಷಿತರಾದವರು. ಟಿವಿಗಳಲ್ಲಿ, ಸ್ಟೇಜ್‌ ಷೋಗಳಲ್ಲಿ ರ‍್ಯಾಪ್ ಸಿಂಗರ್‌ಗಳನ್ನು ನೋಡುತ್ತಾ, ಅದೇ ಹಾದಿಯಲ್ಲಿ ಸಾಗಲು ಪ್ರಯತ್ನಿಸಿದವರು. ಈ ಸಂಗೀತದ ಗೀಳಿನಿಂದಾಗಿ ಕೆಲವರು ವಿದ್ಯಾಭ್ಯಾಸವನ್ನು ಅರ್ಧಕ್ಕೆ ನಿಲ್ಲಿಸಿದ್ದಾರೆ ಅಂದರೆ ಇವರದ್ದು ಸಂಗೀತದ ಬಗ್ಗೆ ಎಂಥಾ ‘ಹುಚ್ಚು’ ಇರಬಹುದು ಎಂದು ಯೋಚಿಸಿ ನೋಡಿ. ಇವರಿಗೆ ‘ಬಿಗ್‌ಬಾಸ್‌’ ಖ್ಯಾತಿಯ ಕನ್ನಡ ರ‍್ಯಾಪ್‌ ಸಿಂಗರ್‌ ಚಂದನ್‌ ಶೆಟ್ಟಿ ಹೆಚ್ಚಿನ ಸ್ಫೂರ್ತಿ. ಅವರಂತೆ ಕೆಲಸ ಮಾಡಿ ಪ್ರಸಿದ್ಧರಾಗಬೇಕು’ ಎನ್ನುವ ಗುರಿಯೂ ಇಟ್ಟುಕೊಂಡಿದ್ದಾರೆ.

ಆಲ್ಬಂಗಳ ನಿರ್ದೇಶನ ಮಾಡುವ ಮುಕೇಶ್ ಅವರಿಗೆ ಸಂಗೀತ ಹಾಗೂ ಸೃಜನಶೀಲ ಕೆಲಸದಲ್ಲಿ ತೀವ್ರ ಆಸಕ್ತಿ. ಆ ಆಸಕ್ತಿಯ ತೀವ್ರತೆ ಎಷ್ಟಿದೆಯೆಂದರೆ, ಸಂಗೀತಕ್ಕಾಗಿ ಪಿಯುಸಿಗೆ ಶರಣು ಹೇಳಿದ್ದಾರೆ. ಮನೆಯವರೆಲ್ಲ ಮೊದಲು ಇದನ್ನು ವಿರೋಧಿಸಿದರೂ ಈಚೆಗೆ ‘ಈ ಹುಡುಗ ಏನೋ ಮಾಡ್ತಿದ್ದಾನೆ’ ಅಂತ ಸುಮ್ಮನಾಗಿದ್ದಾರೆ.

ಕೆಲ ತಿಂಗಳು ಬೆಂಗಳೂರಿನಲ್ಲಿ ಚಲನಚಿತ್ರಗಳಿಗೆ ಹಾಗೂ ಧಾರಾವಾಹಿಗಳಲ್ಲಿ ಕೆಲಸ ಮಾಡಿರುವ ಮುಕೇಶ್‌ ಅವರಿಗೆ ಹುಬ್ಬಳ್ಳಿಯಲ್ಲಿ ಜಾಹೀರಾತು ಏಜೆನ್ಸಿ ಹಾಗೂ ಮಾಡೆಲಿಂಗ್‌ ಏಜೆನ್ಸಿಗಳನ್ನು ಮಾಡುವ ಉದ್ದೇಶವಿದೆ. ಅದಕ್ಕಾಗಿ ಸ್ನೇಹಿತರೆಲ್ಲ ಸೇರಿ ಕೆಲಸ ಮಾಡುತ್ತಿದ್ದಾರೆ. ಈ ತಂಡದ ಕೆಲವರು ಜಾಹಿರಾತುಗಳಿಗಾಗಿ ಕೆಲಸ ಮಾಡ್ತಾರೆ. ಸ್ಟೇಜ್‌ ಷೋಗಳನ್ನು ನೀಡುತ್ತಾರೆ.

ಆಲ್ಬಂಗೆ ಸಾಹಿತ್ಯ ಬರೆದಿರುವ ರ‍್ಯಾಪ್‌ ಸಿಂಗರ್‌ ಕಿರಣ್‌.ಬಿ.ಮಠದ್ ಹಾಗೂ ರ‍್ಯಾಪರ್ ಕಿರಣ್‌ ಕಥೆ ಇದಕ್ಕಿಂತ ಭಿನ್ನವಾಗಿಲ್ಲ. ಹಾಡು, ಸಂಗೀತ ಬಗೆಗಿನ ಆಸಕ್ತಿಯಿಂದಾಗಿ ತಮ್ಮ ಎಂಜಿನಿಯರಿಂಗ್‌ ವಿದ್ಯಾಭ್ಯಾಸವನ್ನೇ ಅರ್ಧಕ್ಕೆ ನಿಲ್ಲಿಸಿದ್ದಾರೆ. ‘ಉತ್ತರ ಕರ್ನಾಟಕದಲ್ಲಿ ಬಹಳ ಟ್ಯಾಲೆಂಟ್‌ ಇರೋವ್ರು ಇದ್ದಾರೆ. ಆದರೆ ಅದನ್ನು ಅಭಿವ್ಯಕ್ತಿಸುವಲ್ಲಿ ಕಷ್ಟಪಡ್ತಿದ್ದಾರೆ. ಜತೆಗೆ ಅಗತ್ಯವಿರುವ ಹಣಕಾಸಿನ ನೆರವು ಕೂಡ ಸಿಗ್ತಿಲ್ಲ. ಆದರೂ ನಾವೆಲ್ಲ ಗೆಳೆಯರು ಉತ್ಸಾಹದಿಂದ ಈ ಆಲ್ಬಂ ಸಿದ್ಧಪಡಿಸುವ ಮೂಲಕ ಹೊಸ ಸಾಧನೆಯತ್ತ ಹೊರಟಿದ್ದೇವೆ. ಜನರು ಮೆಚ್ಚಿ ಆಶೀರ್ವದಿಸಬೇಕಷ್ಟೆ’ ಎನ್ನುತ್ತಾರೆ ಅವರು. ‘ಈ ವಿಡಿಯೊವನ್ನು ವಿಶೇಷವಾಗಿ ಚಿತ್ರೀಕರಿಸಿದ್ದೇವೆ. ಬಾಂಬೆ ಸ್ಟುಡಿಯೊದಲ್ಲಿ ಇದರ ಮಿಕ್ಸಿಂಗ್‌ ಮಾಡಿಸಿದ್ದೇವೆ. ಹೀಗಾಗಿ ಅಂದುಕೊಂಡಿದ್ದಕ್ಕಿಂತ ಸ್ವಲ್ಪ ಹೆಚ್ಚಿನ ವೆಚ್ಚವಾಗಿದೆ. ಆದರೂ ನಮಗೆ ವಿಶೇಷವಾಗಿ ಈ ಹಾಡನ್ನು ಮಾಡಿದ ತೃಪ್ತಿ ಇದೆ’ ಎನ್ನುತ್ತಾರೆ.

‘ತಾಯಿಯ ಸೆಂಟಿಮೆಂಟ್ ಇಟ್ಟುಕೊಂಡು ‘ಟ್ಯಾಲೆಂಟ್‌ ಇದ್ದೋರೆ’ ಹಾಡು ಮಾಡಿದ್ದೆವು. ಅಂಧರಿಗೂ ಕನಸುಗಳಿವೆ ಎನ್ನುವ ವಿಷಯ ಆಧರಿಸಿ ‘ಸನ್‌ ಶೈನ್‌’ ಎಂಬ ಆಲ್ಬಂ ಮಾಡಿದ್ದೆವು. ಈಗ ಮೂರನೆಯ ಆಲ್ಬಂ ಅನ್ನು ಸಂತಶಿಶುನಾಳ ಶರೀಫರ ತತ್ವಪದಗಳು, ಶಿವನ ವಿಷಯದೊಂದಿಗೆ ತಯಾರಿಸಿದ್ದೇವೆ. ಒಟ್ಟಿನಲ್ಲಿ ಕನ್ನಡ ಭಾಷೆ ಮತ್ತು ಉತ್ತರ ಕರ್ನಾಟಕದ ಮಣ್ಣಿನ ಗುಣವನ್ನು ಎತ್ತಿತೋರಿಸುವುದೇ ನಮ್ಮ ಆಶಯ’ ಎನ್ನುವುದು ಈ ತಂಡದವರ ಅಭಿಮತ.

‘ಈ ವಿಡಿಯೋ ತಯಾರಿಗೆ ಅಂದಾಜು ₹1.40 ಲಕ್ಷ ಖರ್ಚಾಗಿದೆ. ಒಂದಿಷ್ಟು ಹಣ ಮಾತ್ರ ನಮಗೆ ಕೆಲವು ಪರಿಚಿತರ ನೆರವಿನಿಂದ ಸಿಕ್ಕಿದೆ. ಉಳಿದವನ್ನೆಲ್ಲ ನಾವೇ ಹೇಗೊ ಹೊಂದಿಸಿಕೊಂಡು ಹಾಕಿದ್ದೇವೆ. ಹಣಕಾಸಿನ ನೆರವಿಗೆ ಜನರು ಮುಂದೆ ಬಂದಲ್ಲಿ ಇನ್ನಷ್ಟು ಇಂತಹ ಪ್ರಯತ್ನಕ್ಕೆ ಮುಂದಾಗುತ್ತೇವೆ’ ಎನ್ನುತ್ತಾರೆ ಹುಬ್ಬಳ್ಳಿ ಹುಡುಗರು.

 ಈ ಹುಡುಗರು ತಯಾರಿಸಿದ ವಿಡಿಯೊ ಕ್ಲಿಪ್ಪಿಂಗ್ಸ್‌ ನೋಡಲು ಈ ಕೊಂಡಿ ಕ್ಲಿಕ್ಕಿಸಿ. https://www.youtube.com/watch?v=OaNirND3dtE&feature=youtu.be   ಹಾಗೂ https://www.youtube.com/watch?v=aTC9oKt3Sao 

 ಆಲ್ಬಂ ತಂಡ

ರ‍್ಯಾಪರ್‌ ಕಿರಣ್‌.ಎಂ.ಮಠದ್, ನಿರ್ದೇಶನ:ಮುಕೇಶ್, ಸಹ ನಿರ್ದೇಶನ: ಕೇಶವ ಚವ್ಹಾಣ್, ಸಹಾಯಕ ನಿರ್ದೇಶಕ:ಅಕ್ಷಯ್ ಉನ್ನಿ, ದಿಲೀಪ್‌, ಕ್ಯಾಮೆರಾ: ಮೃತ್ಯುಂಜಯ,ಸಂಗೀತ: ವಿನಾಯಕ ಕುಲಕರ್ಣಿ, ಶ್ರೇಯಸ್‌ ಗಾಮನಗಟ್ಟಿ,  ನೃತ್ಯ: ಶಿವಪ್ರಕಾಶ್ ನಾಯಕ್‌, ಚೇತನ್ ಪವಾರ್‌. ಕಲಾವಿದರು: ರ‍್ಯಾಪರ್‌ ಕಿರಣ್‌, ಓಂ. ಕಿರಣ್, ಆರ್ಯ, ಖುಷಿ, ವಾಣಿಶ್ರೀ, ಅಶ್ವಿನಿ, ನಾಗಾರ್ಜುನ, ಅಮಿತ್‌ ಇದ್ದಾರೆ.

 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !