ಇಳಿದ ಬಸ್‌ ಪಾಸ್‌ ಭಾರ!

ಗುರುವಾರ , ಜೂಲೈ 18, 2019
23 °C

ಇಳಿದ ಬಸ್‌ ಪಾಸ್‌ ಭಾರ!

Published:
Updated:

ವಿದ್ಯಾರ್ಥಿಗಳ ಬಸ್‌ ಪಾಸ್‌ ದರವನ್ನು ಏಕಾಏಕಿ ₹100ರಿಂದ ₹250ರಷ್ಟು ಏರಿಕೆ ಮಾಡಿ ಗುರುವಾರ ಆದೇಶ ಹೊರಡಿಸಿದ್ದ ಸರ್ಕಾರ ತನ್ನ ನಿರ್ಧಾರ ಬದಲಿಸಿ ಆದೇಶವನ್ನು ಹಿಂದಕ್ಕೆ ಪಡೆದಿದ್ದು, ವಿದ್ಯಾರ್ಥಿಗಳು ನಿರಾಳರಾಗಿದ್ದಾರೆ. 

ಖಾಸಗಿ ಶಾಲೆ, ಕಾಲೇಜಿನ ಶುಲ್ಕ ಕಟ್ಟಲು ಆಗದೆ ಹತ್ತಾರು ಕಿ.ಮೀ ದೂರದ ಸರ್ಕಾರಿ ಶಾಲೆಗೆ ಬಸ್‌ನಲ್ಲಿ ಸಂಚರಿಸುತ್ತಿದ್ದ ಆಟೊ ಡ್ರೈವರ್‌, ಗಾರ್ಮೆಂಟ್‌ ಉದ್ಯೋಗಿಗಳು, ಮನೆಗೆಲಸದವರು, ದಿನಗೂಲಿಗಳು, ಕಾರ್ಮಿಕರ ಮಕ್ಕಳಿಗೆ ಬಸ್‌ ಪಾಸ್‌ ದರ ಏರಿಕೆ ಆತಂಕಕ್ಕೆ ದೂಡಿತ್ತು. ವಿದ್ಯಾರ್ಥಿಗಳು ಮತ್ತು ವಿವಿಧ ವಿದ್ಯಾರ್ಥಿ ಸಂಘಟನೆಗಳ ಆತಂಕವೀಗ ದೂರಾಗಿದೆ. ಸರ್ಕಾರದ ನಿರ್ಧಾರವನ್ನು ಎಲ್ಲರೂ ಸ್ವಾಗತಿಸಿ ಹರ್ಷ ವ್ಯಕ್ತಪಡಿಸಿದ್ದಾರೆ.

‘ಸರ್ಕಾರ ತನ್ನ ಆದೇಶ ವಾಪಸ್‌ ಪಡೆದಿದ್ದು, ವಿದ್ಯಾರ್ಥಿಗಳ ಬಸ್‌ ಪಾಸ್‌ ದರಗಳು ಮೊದಲಿನಂತೆ ಇರಲಿವೆ‘ ಎಂದು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ವ್ಯವಸ್ಥಾಪಕ ನಿರ್ದೇಶಕ ಎನ್‌.ವಿ. ಪ್ರಸಾದ್‌ ‘ಮೆಟ್ರೊ’ಗೆ ತಿಳಿಸಿದರು.

ಸುತ್ತೋಲೆಯೇ ಪಾಸ್‌ 

ಶಾಲೆ, ಕಾಲೇಜುಗಳು ಆರಂಭವಾಗಿದ್ದರೂ ಸಾರಿಗೆ ಇಲಾಖೆ ಇನ್ನೂ ವಿದ್ಯಾರ್ಥಿಗಳಿಗೆ ಬಸ್‌ ಪಾಸ್‌ ವಿತರಿಸಿಲ್ಲ. ಶಾಲೆ, ಕಾಲೇಜುಗಳ ಪ್ರವೇಶಾತಿ ದಾಖಲೆ ಅಥವಾ ಗುರುತಿನ ಚೀಟಿ ತೋರಿಸಿ ಉಚಿತವಾಗಿ ಪ್ರಯಾಣಿಸಲು ಅವಕಾಶ ನೀಡಿ ಕೆಎಸ್‌ಆರ್‌ಟಿಸಿ ಸುತ್ತೋಲೆ ಹೊರಡಿಸಿದೆ. 

ವಿದ್ಯಾರ್ಥಿಗಳು ತೋರಿಸುವ ಈ ಸುತ್ತೋಲೆಗೆ ಬಸ್‌ ನಿರ್ವಾಹಕರು ಕವಡೆ ಕಾಸಿನ ಕಿಮ್ಮತ್ತು ನೀಡುತ್ತಿಲ್ಲ. ಬಸ್‌ ಚಾಲಕರು ಮತ್ತು ನಿರ್ವಾಹಕರು ವಿದ್ಯಾರ್ಥಿಗಳ ಜತೆಗೆ ಅಮಾನವೀಯವಾಗಿ ನಡೆದುಕೊಳ್ಳುತ್ತಿರುವ ಪ್ರಕರಣಗಳು ವರದಿಯಾಗುತ್ತಿವೆ. ಟಿಕೆಟ್‌ ಪಡೆಯದ ವಿದ್ಯಾರ್ಥಿಗಳನ್ನು ಅರ್ಧ ದಾರಿಯಲ್ಲಿಯೇ ಇಳಿಸಿ ಅವಮಾನಿಸಲಾಗುತ್ತಿದೆ ಎಂಬ ದೂರುಗಳು ವ್ಯಾಪಕವಾಗಿವೆ. 

ಕಳೆದ ಬಾರಿ ಸಾಕಷ್ಟು ವಿದ್ಯಾರ್ಥಿಗಳಿಗೆ ಪಾಸ್‌ ಸಿಕ್ಕಿಲ್ಲ. ಆನ್‌ಲೈನ್‌ನಲ್ಲಿ ಅರ್ಜಿ ಹಾಕಬೇಕು ಅಂದ್ರು. ವೆಬ್‌ಸೈಟ್‌ ತೆರೆದುಕೊಳ್ಳುತ್ತಿರಲಿಲ್ಲ. ಅರ್ಜಿ ಹಾಕಿದವರಿಗೂ ಪಾಸ್‌ ಸಮಯಕ್ಕೆ ಸರಿಯಾಗಿ ಸಿಕ್ಕಿಲ್ಲ. 

– ಅರ್ಚನಾ, ಶೇಷಾದ್ರಿಪುರ ಕಾನೂನು ಕಾಲೇಜು

***

ಇನ್ನೂ ಪಾಸ್‌ ನೀಡಿಲ್ಲ

ಇನ್ನೂ ಬಿಎಂಟಿಸಿ ವಿದ್ಯಾರ್ಥಿಗಳ ಪಾಸ್‌ ನೀಡಿಲ್ಲ. ಪ್ರವೇಶ ಶುಲ್ಕ ಪಾವತಿಸಿದ ರಶೀದಿ ಮತ್ತು ಗುರುತಿನ ಚೀಟಿ ತೋರಿಸಿ ಓಡಾಡುತ್ತೇವೆ. ಕೆಲವು ನಿರ್ವಾಹಕರು ಉಡಾಫೆಯಾಗಿ ಮಾತನಾಡುತ್ತಾರೆ. 

- ಕುಸುಮಾ ಕೆ. ಪಿಯು ಪ್ರಥಮ ವರ್ಷ (ವಾಣಿಜ್ಯ).ಸರ್ಕಾರಿ ಪಿಯು ಬಾಲಕಿಯರ ಕಾಲೇಜು, ಮಲ್ಲೇಶ್ವರ

***

ಪಾಸ್‌ ದುರುಪಯೋಗ 

ಪಾಸ್‌ನಲ್ಲಿ ಚಿಪ್‌ ಅಳವಡಿಸಲಾಗಿದೆ. ಆಯಾ ಮಾರ್ಗದ ಬಸ್‌ ಹತ್ತಿದರೆ ಅದು ಚಿಪ್‌ ಮೂಲಕ ಮಾಹಿತಿ ಪಡೆದುಕೊಳ್ಳುತ್ತದೆ. ಆದರೆ ಈ ವ್ಯವಸ್ಥೆ ಇನ್ನೂ ಬಳಕೆಗೆ ಬಂದಿಲ್ಲ. ಪಾಸ್‌ನಲ್ಲೂ ವಿದ್ಯಾರ್ಥಿಗಳು ಯಾವ ಮಾರ್ಗಗಳಲ್ಲಿ ಮಾತ್ರ ಓಡಾಡಬೇಕು ಎಂಬ ಮಾಹಿತಿ  ಇಲ್ಲ. ಇದರಿಂದ ವಿದ್ಯಾರ್ಥಿಗಳು ಬೇರೆ ಬೇರೆ ಮಾರ್ಗಗಳಲ್ಲಿಯೂ ಪಾಸ್ ಬಳಕೆ ಮಾಡುತ್ತಿದ್ದಾರೆ. 

- ಚೇತನ್‌ ದೇವಯ್ಯ, ಬಾಲಾಜಿ ಕಾನೂನು ಕಾಲೇಜ್‌

***

ಮಹಿಳಾ ಕಂಡಕ್ಟರ್‌ಗಳದ್ದೇ ದರ್ಪ

ಅಪ್ಪ ಕಾರ್ಪೆಂಟರ್‌ ಕೆಲಸ ಮಾಡುತ್ತಾರೆ. ಅಮ್ಮ ಮನೆಗೆಲಸ ಮಾಡುತ್ತಾರೆ. ಜೂನ್‌ 30ರವರೆಗೆ ಪ್ರವೇಶ ದಾಖಲಾತಿ, ಗುರುತಿನ ಚೀಟಿ ಮತ್ತು ಶುಲ್ಕ ಪಾವತಿ ರಶೀದಿ ತೋರಿಸಿ ಬಿಎಂಟಿಸಿ ಬಸ್‌ನಲ್ಲಿ ಓಡಾಡಬಹುದು ಎಂದು ಸರ್ಕಾರ ಆದೇಶ ಹೊರಡಿಸಿದೆ. ಪಾಸ್‌ ಇಲ್ಲದಿದ್ದರೆ ಬಿಎಂಟಿಸಿ ಬಸ್‌ನಲ್ಲಿ ಪ್ರಯಾಣಿಸಲು ಬಿಡ್ತಾ ಇಲ್ಲ. ಟಿಕೆಟ್‌ ಪಡೆಯದಿದ್ದರೆ ಅರ್ಧದಲ್ಲಿಯೇ ಇಳಿಸುತ್ತಾರೆ. ವಿಪರ್ಯಾಸ ಎಂದರೆ ಮಹಿಳಾ ಕಂಡಕ್ಟರ್‌ಗಳೇ ಈ ರೀತಿ ಹೆಚ್ಚಾಗಿ ವರ್ತಿಸುತ್ತಾರೆ. ಸರ್ಕಾರ ಹೊರಡಿಸಿದ ಸುತ್ತೋಲೆ ತೋರಿಸಿದರೂ ಕ್ಯಾರೇ ಅನ್ನುವುದಿಲ್ಲ. ಪುರುಷ ಕಂಡಕ್ಟರ್‌ಗಳೇ ಎಷ್ಟೋ ವಾಸಿ ಎನಿಸುತ್ತದೆ. 

- ಜೆನ್ನಿಫರ್‌ ಜೆ. ಪಿಯು ಪ್ರಥಮ ವರ್ಷ (ವಿಜ್ಞಾನ), ಸರ್ಕಾರಿ ಪಿಯು ಬಾಲಕಿಯರ ಕಾಲೇಜು, ಮಲ್ಲೇಶ್ವರ

***

ಅರ್ಧ ದಾರಿಯಲ್ಲಿ ಇಳಿಸುತ್ತಾರೆ

ವಿದ್ಯಾರ್ಥಿಗಳ ಬಸ್‌ ದರ ಏಕಾಏಕಿ ಏರಿಕೆ ವಿರೋಧಿಸಿ ಮೈಸೂರು ಬ್ಯಾಂಕ್‌ ಸರ್ಕಲ್‌ನಲ್ಲಿ ಪ್ರತಿಭಟನೆ ನಡೆಸಿದ್ದೆವು. ಕೊನೆಗೂ ನಮ್ಮ ಒತ್ತಡಕ್ಕೆ ಸರ್ಕಾರ ಮಣಿದಿದೆ. ಒಳ್ಳೆಯ ನಿರ್ಧಾರ. ತುಂಬಾ ಜನ ಬಡ ವಿದ್ಯಾರ್ಥಿಗಳಿಗೆ ಬಸ್‌ ಪಾಸ್‌ಗೆ ಕೊಡಲು ಹಣ ಇರುವುದಿಲ್ಲ. ಬಸ್‌ ಕಂಡಕ್ಟರ್‌ಗಳು ಅರ್ಧ ದಾರಿಯಲ್ಲಿ ಇಳಿಸಿದಾಗ ಎಷ್ಟೋ ಬಾರಿ ನಡೆದುಕೊಂಡು ಮನೆ ಸೇರಿದ್ದೇವೆ. ಬಸ್‌ ಚಾಲಕರು ಮತ್ತು ನಿರ್ವಾಹಕರು ವಿದ್ಯಾರ್ಥಿಗಳ ಜತೆ ಇಷ್ಟು ಕಠೋರವಾಗಿ ವರ್ತಿಸಬಾರದು.

– ಸೋಮಪತ್ರ ಪಿಯು ಪ್ರಥಮ ವರ್ಷ (ವಿಜ್ಞಾನಿ),ಸರ್ಕಾರಿ ಪಿಯು ಬಾಲಕಿಯರ ಕಾಲೇಜು, ಮಲ್ಲೇಶ್ವರ

***

ಬಿಎಂಟಿಸಿ ಅಲ್ಲ, ಖಾಸಗಿ ಕಂಪನಿ 

ಬಿಎಂಟಿಸಿ ಮತ್ತು ಸರ್ಕಾರ ಸಾರ್ವಜನಿಕ ಸಾರಿಗೆಯನ್ನು ಜನರಿಗೆ ನೀಡಬೇಕಾದ ಅಗತ್ಯ ಸೇವೆ ಎಂದು ಪರಿಗಣಿಸಿಲ್ಲ. ಬಿಎಂಟಿಸಿಯನ್ನು ಒಂದು ಕಂಪನಿಯ ರೀತಿ ನಡೆಸಲಾಗುತ್ತಿದೆ. ಜನರಿಗೆ ಆಗುವ ಆರ್ಥಿಕ ಹೊರೆ, ತೊಂದರೆಗಿಂತ, ಲಾಭ, ನಷ್ಟದ ಲೆಕ್ಕಾಚಾರದ ಮೇಲೆ ಬಿಎಂಟಿಸಿ ನಡೆಯುತ್ತಿದೆ. ಕೇರಳ, ತಮಿಳುನಾಡಿನಲ್ಲಿ ವಿದ್ಯಾರ್ಥಿಗಳಿಗೆ ಉಚಿತ ಇಲ್ಲವೇ ರಿಯಾಯ್ತಿ ಬಸ್‌ ಪಾಸ್‌ ನೀಡಲಾಗುತ್ತದೆ. ಸರ್ಕಾರ ಕನಿಷ್ಠ ಪಕ್ಷ ವಿದ್ಯಾರ್ಥಿಗಳಿಗೆ ರಿಯಾಯ್ತಿ ಸಾರಿಗೆ ಸೇವೆಯನ್ನಾದರೂ ಒದಗಿಸಬೇಕು. ಬಿಎಂಟಿಸಿಯನ್ನು ಖಾಸಗಿ ಕಂಪನಿ ರೀತಿಯಲ್ಲಿ ನಡೆಸುವುದನ್ನು ಬಿಡಬೇಕು. 

- ಲೇಖಾ ಅಡವಿ, ಸದಸ್ಯೆ, ಬಸ್‌ ಪ್ರಯಾಣಿಕರ ವೇದಿಕೆ

***

ಉಚಿತ ಪಾಸ್ ನೀಡಲಿ

ಹಿಂದೆ ಇದ್ದ ಕಾಂಗ್ರೆಸ್ ಸರ್ಕಾರ ಬಜೆಟ್‌ನಲ್ಲಿ ಪ್ರಾಥಮಿಕ ಶಿಕ್ಷಣದಿಂದ ಉನ್ನತ ಶಿಕ್ಷಣದವರೆಗೆ ಎಲ್ಲ ವಿದ್ಯಾರ್ಥಿಗಳಿಗೆ ಉಚಿತ ಬಸ್ ನೀಡುವುದಾಗಿ ಘೋಷಿಸಿತ್ತು. ಸರ್ಕಾರ ಮತ್ತು ಸಾರಿಗೆ ಇಲಾಖೆ ಕೂಡಲೇ ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ಯೋಜನೆಯನ್ನು  ಜಾರಿ ಮಾಡಬೇಕು. ಬಸ್ ಪಾಸ್ ದೂರದ ಮಿತಿಯನ್ನು 60 ಕಿ.ಮಿ ಬದಲು 100 ಕಿ.ಮಿ ಹೆಚ್ಚಿಸಬೇಕು. 

ಬೇರೆ ರಾಜ್ಯಗಳಲ್ಲಿ ವಿದ್ಯಾರ್ಥಿಗಳಿಗೆ ರಿಯಾಯ್ತಿ ದರದಲ್ಲಿ ಬಸ್‌ ಪಾಸ್‌ ನೀಡಲಾಗುತ್ತಿದೆ. ತಮಿಳುನಾಡಿನಲ್ಲಿ ವಿದ್ಯಾರ್ಥಿಗಳಿಗೆ ಉಚಿತವಾಗಿ ಬಸ್ ಪಾಸ್ ನೀಡಲಾಗುತ್ತಿದೆ. ಕೇರಳದಲ್ಲಿ ನಾಲ್ಕು ರೂಪಾಯಿ ಬಸ್ ಚಾರ್ಜ ಇದ್ದರೆ 1 ರೂಪಾಯಿ ಮಾತ್ರ ವಿದ್ಯಾರ್ಥಿಗಳು ನೀಡಬೇಕು. ಹರಿಯಾಣದಲ್ಲಿ ವಿದ್ಯಾರ್ಥಿಗಳಿಗೆ ಉಚಿತ ಬಸ್ ನೀಡಲಾಗುತ್ತಿದೆ. ಆ ವ್ಯವಸ್ಥೆ ಕರ್ನಾಟಕದಲ್ಲೂ ಜಾರಿಯಾಗಲಿ.

- ಬಸವರಾಜ ಪೂಜಾರ,  ರಾಜ್ಯ ಕಾರ್ಯದರ್ಶಿ, ಡಿವೈಎಫ್‌ಐ

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !