ಶುಕ್ರವಾರ, ಏಪ್ರಿಲ್ 16, 2021
20 °C

ಬ್ಯಾಂಕ್ ನೌಕರರ ಮುಷ್ಕರ ಆರಂಭ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಬ್ಯಾಂಕಿಂಗ್ ಕಾಯ್ದೆಗೆ ತಿದ್ದುಪಡಿ  ಮತ್ತು ಖಂಡೇಲ್‌ವಾಲ್ ಸಮಿತಿ ಶಿಫಾರಸು ಜಾರಿ ವಿರೋಧಿಸಿ ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳ ನೌಕರರು ಬುಧವಾರದಿಂದ ಎರಡು ದಿನಗಳ ಮುಷ್ಕರ ಆರಂಭಿಸಿದ್ದಾರೆ.ಖಾಸಗಿ ಮತ್ತು ವಿದೇಶಿ ಬ್ಯಾಂಕುಗಳು, ಎಟಿಎಂಗಳು ಎಂದಿನಂತೆ ಕಾರ್ಯನಿರ್ವಸುತ್ತಿವೆ. ಸರ್ಕಾರಿ ಸ್ವಾಮ್ಯದ ಒಂಬತ್ತು ಬ್ಯಾಂಕುಗಳ ಅಧಿಕಾರಿಗಳು ಮತ್ತು ನೌಕರರನ್ನು ಒಳಗೊಂಡ ಸಂಘಟನೆಯಾಗಿರುವ ಬ್ಯಾಂಕ್ ಕಾರ್ಮಿಕರ ಒಕ್ಕೂಟಗಳ ಸಂಯುಕ್ತ ವೇದಿಕೆ (ಯುಎಫ್‌ಬಿಯು) ಮುಷ್ಕರಕ್ಕೆ ಕರೆ ನೀಡಿದೆ.ಬ್ಯಾಂಕುಗಳಲ್ಲಿ ಮಾನವ ಸಂಪನ್ಮೂಲದ ಬಳಕೆ ಕುರಿತು ಖಂಡೇಲ್‌ವಾಲ್ ಸಮಿತಿ ಸಲ್ಲಿಸಿರುವ ಶಿಫಾರಸನ್ನು ಏಕಪಕ್ಷೀಯವಾಗಿ ಜಾರಿಗೊಳಿಸುತ್ತಿರುವುದು ಮತ್ತು ಸುಧಾರಣೆ ತರಲು ಮುಂದಾಗಿರುವುದನ್ನು ವಿರೋಧಿಸಿ ಈ ಮುಷ್ಕರ ನಡೆಸಲಾಗುತ್ತಿದೆ.`ಬುಧವಾರ ಬೆಳಿಗ್ಗೆಯಿಂದ ಮುಷ್ಕರ ಆರಂಭಿಸಲಾಗಿದೆ. ಸುಮಾರು 10 ಲಕ್ಷ ನೌಕರರು ಮುಷ್ಕರದಲ್ಲಿ ಪಾಲ್ಗೊಂಡಿದ್ದಾರೆ. ಇದರಲ್ಲಿ 24 ಸರ್ಕಾರಿ ಸ್ವಾಮ್ಯದ, 12 ಖಾಸಗಿ  ಮತ್ತು 6 ವಿದೇಶಿ ಬ್ಯಾಂಕುಗಳ ಉದ್ಯೋಗಿಗಳು ಸೇರಿದ್ದಾರೆ~ ಎಂದು ಅಖಿಲ ಭಾರತ ಬ್ಯಾಂಕ್ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಸಿ.ಎಚ್. ವೆಂಕಟಾಚಲಂ ತಿಳಿಸಿದ್ದಾರೆ.ಎಟಿಎಂಗಳಲ್ಲಿ ಹಣ ಇರುವವರೆಗೆ ಮಾತ್ರ ಅವುಗಳು ಕೆಲಸ ನಿರ್ವಹಿಸಲಿವೆ. ಆ ಬಳಿಕ ಆ ಸೇವೆ ಕೂಡ ಸ್ಥಗಿತಗೊಳ್ಳಲಿದೆ ಎಂದು ಹೇಳಿದ್ದಾರೆ.ಪಿಂಚಣಿ, ಗೃಹ ಸಾಲ ಪರಿಷ್ಕರಣೆ, ಕೆಲಸದ ಅವಧಿಯನ್ನು ಐದು ದಿನಗಳಿಗೆ ಸೀಮಿತಗೊಳಿಸುವುದು ಮತ್ತು ಮಾನವ ಸಂಪನ್ಮೂಲಕ್ಕೆ ಸಂಬಂಧಿಸಿದ ವಿಷಯಗಳು ಬ್ಯಾಂಕ್ ನೌಕರರ ಪ್ರಮುಖ ಬೇಡಿಕೆಗಳಾಗಿವೆ ಎಂದು ಎಸ್‌ಬಿಐ ಅಧಿಕಾರಿಗಳ ಸಂಘದ ಪ್ರಧಾನ ಕಾರ್ಯದರ್ಶಿ ರಾಕೇಶ್ ಅಗರವಾಲ್ ತಿಳಿಸಿದ್ದಾರೆ.ದೇಶದಲ್ಲಿ ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳ 87,000 ಶಾಖೆಗಳಿವೆ. ಇದರಲ್ಲಿ 10 ಲಕ್ಷ ಉದ್ಯೋಗಿಗಳು ಕೆಲಸ ನಿರ್ವಹಿಸುತ್ತಿದ್ದಾರೆ. 63,000 ಎಟಿಎಂಗಳಿದ್ದು, ದೇಶದಾದ್ಯಂತ ಶೇ 75ರಷ್ಟು ಬ್ಯಾಂಕಿಂಗ್ ಉದ್ದಿಮೆಯನ್ನು ಇವುಗಳು ನಿಯಂತ್ರಿಸುತ್ತಿವೆ ಎಂದು ಹೇಳಿದ್ದಾರೆ.ಇದೇ ವೇಳೆ ಖಾಸಗಿ ವಲಯದ ಐಸಿಐಸಿಐ, ಎಚ್‌ಡಿಎಫ್‌ಸಿ, ಆ್ಯಕ್ಸಿಸ್ ಬ್ಯಾಂಕ್ ಮತ್ತು ವಿದೇಶಿ ಬ್ಯಾಂಕ್‌ಗಳು ಮಾಮೂಲಿನಂತೆ ಕಾರ್ಯವನ್ನು ನಿರ್ವಹಿಸುತ್ತಿವೆ.2011ರ  ತಿದ್ದುಪಡಿ ಮಸೂದೆಯು ಖಾಸಗಿ ವಲಯದ ಬ್ಯಾಂಕುಗಳಲ್ಲಿ ಷೇರುದಾರರ ಮತದಾನದ ಹಕ್ಕನ್ನು ಶೇ 10ರಿಂದ 26ಕ್ಕೆ ಹೆಚ್ಚಿಸಲು ಅನುವು ಮಾಡಿಕೊಡುತ್ತದೆ.ಬ್ಯಾಂಕುಗಳಲ್ಲಿ ಕಾರ್ಯನಿರ್ವಹಿಸುವ ಎಲ್ಲ ಅಧಿಕಾರಿಗಳು ಮತ್ತು ಗುಮಾಸ್ತರಿಗೆ ಕಂಪ್ಯೂಟರ್ ಜ್ಞಾನ ಹೊಂದುವುದನ್ನು ಕಡ್ಡಾಯಗೊಳಿಸಬೇಕು. ಗುಮಾಸ್ತ ಹುದ್ದೆಗೆ ಪದವಿ ಕಡ್ಡಾಯ ಮಾಡುವುದು ಸೇರಿ ಹಲವು ಶಿಫಾರಸುಗಳನ್ನು ಖಂಡೇಲ್‌ವಾಲ್ ಸಮಿತಿ ಮಾಡಿದೆ.ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳು ಮುಷ್ಕರ ಆರಂಭಿಸಿರುವುದರಿಂದ ವರ್ತಕರು ಸೇರಿದಂತೆ ಜನಸಾಮಾನ್ಯರು ತೊಂದರೆ ಅನುಭವಿಸುವಂತಾಗಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.