3.45 ಲಕ್ಷ ಕ್ವಿಂಟಲ್ ತೊಗರಿ ಖರೀದಿ..!

ಬುಧವಾರ, ಏಪ್ರಿಲ್ 24, 2019
27 °C
37,769 ರೈತರಿಂದ ತೊಗರಿ ಮಾರಾಟ; 85 ಖರೀದಿ ಕೇಂದ್ರಗಳಲ್ಲಿ ಪ್ರಕ್ರಿಯೆ ಪೂರ್ಣ

3.45 ಲಕ್ಷ ಕ್ವಿಂಟಲ್ ತೊಗರಿ ಖರೀದಿ..!

Published:
Updated:
Prajavani

ವಿಜಯಪುರ: ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ, ವಿಜಯಪುರ ಜಿಲ್ಲೆಯ 85 ಖರೀದಿ ಕೇಂದ್ರಗಳಲ್ಲಿ ಜ.16ರಿಂದ ಆರಂಭಗೊಂಡಿದ್ದ, ತೊಗರಿ ಖರೀದಿ ಪ್ರಕ್ರಿಯೆ ಏ.10ರ ಬುಧವಾರ ಪೂರ್ಣಗೊಂಡಿದೆ. ಈ ಅವಧಿಯಲ್ಲಿ 37,769 ರೈತರು, ಒಟ್ಟಾರೆ 3,45,516 ಕ್ವಿಂಟಲ್‌ ತೊಗರಿಯನ್ನು ಬೆಂಬಲ ಬೆಲೆ ಯೋಜನೆಯಡಿ ಸರ್ಕಾರಕ್ಕೆ ಮಾರಾಟ ಮಾಡಿದ್ದಾರೆ.

ಇದೀಗ ಖರೀದಿ ಪ್ರಕ್ರಿಯೆ ಪೂರ್ಣಗೊಂಡಿದೆ. ಮೂರು ತಿಂಗಳ ಆಸುಪಾಸಿನಿಂದ ಸರ್ಕಾರಕ್ಕೆ ಪ್ರತಿ ಕ್ವಿಂಟಲ್‌ಗೆ ₹ 6100ರಂತೆ ತಲಾ 10 ಕ್ವಿಂಟಲ್‌ ಹಾಗೂ ಇದಕ್ಕಿಂತ ಕಡಿಮೆ ಪ್ರಮಾಣದ ತೊಗರಿಯನ್ನು ಮಾರಾಟ ಮಾಡಿರುವ ರೈತರು; ಚಾತಕ ಹಕ್ಕಿಗಳಂತೆ ರೊಕ್ಕಕ್ಕಾಗಿ ಕಾದು ಕುಳಿತಿದ್ದಾರೆ.

ಲೋಕಸಭಾ ಸಾರ್ವತ್ರಿಕ ಚುನಾವಣೆ ನಡೆದಿದೆ. ಚುನಾವಣಾ ಪ್ರಕ್ರಿಯೆ, ನೀತಿ ಸಂಹಿತೆ ಮುಗಿದ ಬಳಿಕವೇ ರೈತರ ಖಾತೆಗೆ ರೊಕ್ಕ ಜಮೆಯಾಗಬಲ್ಲವು ಎಂಬುದು ಎಪಿಎಂಸಿ ಮೂಲಗಳ ಹೇಳಿಕೆ.

‘ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ತೊಗರಿ ಖರೀದಿ ಪ್ರಕ್ರಿಯೆ ಆರಂಭಗೊಂಡ ಬೆನ್ನಿಗೆ, ಜಿಲ್ಲೆಯ 59,426 ರೈತರು ನೋಂದಣಿ ಮಾಡಿಸಿಕೊಂಡಿದ್ದರು. ಇದರಲ್ಲಿ 53,409 ರೈತರ ನೋಂದಣಿಯಷ್ಟೇ ಯಶಸ್ವಿಯಾಗಿತ್ತು. ಸಾಫ್ಟ್‌ವೇರ್‌ನಲ್ಲಿ ರೈತರ ಹೆಸರು, ಬೆಳೆ ಹೊಂದಾಣಿಕೆಯಾಗದಿರುವುದರಿಂದ ಹಲವರ ಹೆಸರು ನೋಂದಣಿಯಾಗಿರಲಿಲ್ಲ.’

‘ಅಂತಿಮವಾಗಿ ನೋಂದಣಿ ದಾಖಲಾತಿ ಸಮರ್ಪಕವಾಗಿದ್ದ 51,119 ರೈತರಲ್ಲಿ, ನಿಗದಿತ ಅವಧಿಯೊಳಗೆ 37,769 ರೈತರು ಮಾತ್ರ ಸರ್ಕಾರಕ್ಕೆ ಜಿಲ್ಲೆಯ 85 ಖರೀದಿ ಕೇಂದ್ರಗಳ ಮೂಲಕ ತೊಗರಿ ಮಾರಾಟ ಮಾಡಿದ್ದಾರೆ. ಇನ್ನೂ 13,350 ರೈತರು ಹೆಸರು ನೋಂದಾಯಿಸಿದ್ದರೂ; ಖರೀದಿ ಕೇಂದ್ರಗಳಲ್ಲಿ ಮಾರಾಟವನ್ನೇ ಮಾಡಿಲ್ಲ’ ಎಂದು ವಿಜಯಪುರ ಎಪಿಎಂಸಿಯ ಕೃಷಿ ಮಾರಾಟ ಇಲಾಖೆಯ ಸಹಾಯಕ ನಿರ್ದೇಶಕ ಎಂ.ಡಿ.ಚಬನೂರ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

‘ಬೆಂಬಲ ಬೆಲೆ ಯೋಜನೆಯಡಿ ತೊಗರಿ ಖರೀದಿ ಪ್ರಕ್ರಿಯೆ ಚುರುಕುಗೊಂಡ ಬೆನ್ನಿಗೆ, ಮುಕ್ತ ಮಾರುಕಟ್ಟೆಯಲ್ಲೂ ತೊಗರಿಗೆ ಬೇಡಿಕೆ ಹೆಚ್ಚಿ, ಧಾರಣೆ ಗಗನಮುಖಿಯಾಗಿತ್ತು. ಕ್ವಿಂಟಲ್‌ಗೆ ₹ 5600, ₹ 5700ರ ಆಸುಪಾಸಾಯ್ತು.’

‘ಈ ಅವಧಿಯಲ್ಲಿ ಹೆಸರು ನೋಂದಾಯಿಸಿದ್ದ ಬಹುತೇಕ ರೈತರು ತಮ್ಮ ಪಾಳಿ ಬಂದರೂ; ತೊಗರಿ ಮಾರಾಟಕ್ಕಾಗಿ ಖರೀದಿ ಕೇಂದ್ರಕ್ಕೆ ಬರಲಿಲ್ಲ. ನೇರವಾಗಿ ಮುಕ್ತ ಮಾರುಕಟ್ಟೆಯಲ್ಲೇ ಅಡತಿ ಅಂಗಡಿಗಳಿಗೆ ಮಾರಾಟ ಮಾಡಿ, ರೊಕ್ಕ ಪಡೆದರು. ಇದರಿಂದ ನೋಂದಾಯಿಸಿಕೊಂಡಷ್ಟು ರೈತರು ಖರೀದಿ ಕೇಂದ್ರಗಳಿಗೆ ಮಾರಾಟ ಮಾಡಿಲ್ಲ’ ಎಂದು ಚಬನೂರ ವಿಶ್ಲೇಷಿಸಿದರು.

ಬರಹ ಇಷ್ಟವಾಯಿತೆ?

 • 7

  Happy
 • 1

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !