ಭಾನುವಾರ, ಫೆಬ್ರವರಿ 28, 2021
23 °C
ಭಾರತ,ಅಮೆರಿಕ ವಾಣಿಜ್ಯೋದ್ಯಮ ಸಂಘದ ಸಮಾವೇಶ

ಕೃಷಿಗೆ ಪೂರಕ ಹೂಡಿಕೆ: ಸಿ.ಎಂ. ಸಲಹೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೃಷಿಗೆ ಪೂರಕ ಹೂಡಿಕೆ: ಸಿ.ಎಂ. ಸಲಹೆ

ಬೆಂಗಳೂರು:  ದೇಶಿ ಕೃಷಿ ಕ್ಷೇತ್ರದಲ್ಲಿ ಪ್ರಗತಿಗೆ ಸಾಕಷ್ಟು ಅವಕಾಶವಿದೆ. ಇದನ್ನು ಸಾಧ್ಯಗೊಳಿಸುವುದಕ್ಕೆ ಪೂರಕವಾಗಿ  ಬಂಡವಾಳ ಹೂಡಿಕೆಗೆ ಮುಂದಾಗುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಮೆರಿಕದ ಉದ್ಯಮಿಗಳಿಗೆ ಸಲಹೆ ನೀಡಿದರು.ಶುಕ್ರವಾರ ಇಲ್ಲಿ ನಡೆದ ಭಾರತ – ಅಮೆರಿಕ ವಾಣಿಜ್ಯೋದ್ಯಮ ಸಂಘದ (ಐಎಸಿಸಿ) ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಕರ್ನಾಟಕ ಸರ್ಕಾರವು ಕೃಷಿ ಉತ್ಪನ್ನ ಗಳಿಗೆ ರೂಪಿಸಿರುವ ಆನ್‌ಲೈನ್‌ ವೇದಿಕೆಯನ್ನು ಉಲ್ಲೇಖಿಸಿದ ಅವರು, ಈ ಕಾರ್ಯಕ್ರಮವನ್ನು ಈಗ ಅನೇಕ ರಾಜ್ಯಗಳು ಅನುಸರಿಸಿವೆ. ದೇಶದಲ್ಲಿನ ಕೃಷಿ ಕ್ಷೇತ್ರದ ಆಮೂಲಾಗ್ರ ಬದಲಾವ ಣೆಗೆ ಇಂಥ ಕ್ರಮಗಳು ಅಗತ್ಯ ಎಂದು ಪ್ರತಿಪಾದಿಸಿದರು.ಆಹಾರ ಸಂಸ್ಕರಣಾ ಉದ್ಯಮ, ಪ್ಯಾಕೇಜಿಂಗ್‌, ಆಹಾರ ಧಾನ್ಯಗಳ ರಫ್ತು ಹೆಚ್ಚಳವು ದೇಶಿ ಕೃಷಿ ವಲಯದಲ್ಲಿ ಗಮನಾರ್ಹ ಬದಲಾವಣೆ ತರಲಿವೆ. ಕೃಷಿ ಯಾಂತ್ರೀಕರಣ, ಗರಿಷ್ಠ ಫಸಲಿನ ಬೀಜಗಳ ಉತ್ಪಾದನೆ, ಶೈತ್ಯಾಗಾರಗಳ ನಿರ್ಮಾಣ, ಬೇಗನೆ ಕೊಳೆಯುವ ಉತ್ಪನ್ನಗಳ ಸಾಗಣೆಗೆ ವಿಶೇಷ ವಾಹನಗಳ ತಯಾರಿಕೆ ವಲಯದಲ್ಲಿ ಬಂಡವಾಳ ಹೂಡಿಕೆಗೆ ಸಾಕಷ್ಟು ಅವಕಾಶಗಳಿವೆ ಎಂದರು.ಭಾರತ–ಅಮೆರಿಕ ವಹಿವಾಟನ್ನು  2020ರ ವೇಳೆಗೆ ₹ 33.50 ಲಕ್ಷ ಕೋಟಿಗಳಿಗೆ ಹೆಚ್ಚಿಸುವುದು ಈ ಸಮಾವೇಶದ ಪ್ರಮುಖ ಗುರಿಯಾಗಿದೆ.  ಈ ಬಗ್ಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ ಅವರು, ಉಭಯ ದೇಶಗಳ ವಹಿವಾಟಿನ ಪ್ರಮಾಣ ಹೆಚ್ಚಲು ಆರ್ಥಿಕ ವಹಿವಾಟು ವೃದ್ಧಿಯಾಗುವ ಅಗತ್ಯವಿದೆ. ಜತೆಗೆ ತಂತ್ರಜ್ಞಾನದ ವಿನಿಮಯ, ಜಂಟಿ ಅಧ್ಯಯನ ಸಹ ನಡೆಯಬೇಕು ಎಂದು ಹೇಳಿದರು.ಸಹಯೋಗ ಅಗತ್ಯ: ದೀರ್ಘಾವಧಿಯಲ್ಲಿ ಭಾರತವು ಸ್ಥಿರ ಆರ್ಥಿಕ ಪ್ರಗತಿ ಸಾಧಿಸಲು, ಉನ್ನತ ಶಿಕ್ಷಣ ಮತ್ತು ಸಂಶೋಧನಾ ಕ್ಷೇತ್ರಗಳಲ್ಲಿ ಎರಡೂ ದೇಶಗಳ ಉತ್ತಮ ಸಹಯೋಗದ ಅವಶ್ಯಕತೆ ಇದೆ ಎಂದು ಇನ್ಫೊಸಿಸ್‌ ಸಹ ಸಂಸ್ಥಾಪಕ ಎನ್‌. ಆರ್‌. ನಾರಾಯಣ ಮೂರ್ತಿ ಅಭಿಪ್ರಾಯಪಟ್ಟರು.‘ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ  ಯೋಜನೆ ‘ಭಾರತದಲ್ಲಿ ತಯಾರಿಸಿ’ ಯಶಸ್ವಿಯಾಗಲು ಸ್ಥಳೀಯ ಮಟ್ಟದಲ್ಲಿ ಆವಿಷ್ಕಾರ ಮತ್ತು ನಿರ್ಮಾಣ ಕಾರ್ಯಗಳು ನಡೆಯುವ ಅಗತ್ಯವಿದೆ’ ಎಂದರು. ಐಎಸಿಸಿ ರಾಷ್ಟ್ರೀಯ ಅಧ್ಯಕ್ಷ ಡಾ. ಲಲಿತ್ ಕನೋಡಿಯಾ ಹಾಗೂ ಉದ್ಯಮ ವಲಯದ ಪ್ರಮುಖರು ಹಾಜರಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.