ಬುಧವಾರ, ಮಾರ್ಚ್ 3, 2021
31 °C

ಚಿನ್ನ, ಬೆಳ್ಳಿ ಹೂಡಿಕೆ ಹೆಚ್ಚು ಲಾಭಕರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿನ್ನ, ಬೆಳ್ಳಿ ಹೂಡಿಕೆ ಹೆಚ್ಚು ಲಾಭಕರ

ನವದೆಹಲಿ (ಪಿಟಿಐ): ಷೇರುಗಳಿಗೆ ಹೋಲಿಸಿದರೆ ಚಿನ್ನ ಮತ್ತು ಬೆಳ್ಳಿಯಲ್ಲಿನ ಹೂಡಿಕೆಯು ಈ ವರ್ಷದ ಆರಂಭದಿಂದಲೂ ಹೂಡಿಕೆದಾರರಿಗೆ ಹೆಚ್ಚು ಲಾಭ ತಂದುಕೊಟ್ಟಿದೆ.ಪ್ರಸಕ್ತ ಹಣಕಾಸು ವರ್ಷದಲ್ಲಿ ಇದುವರೆಗೆ ಚಿನ್ನ ಮತ್ತು ಬೆಳ್ಳಿ ಬೆಲೆ ಕ್ರಮವಾಗಿ ಶೇ 22.29 ಮತ್ತು ಶೇ 40.69ರಷ್ಟು ಏರಿಕೆ ದಾಖಲಿಸಿವೆ. ಇದರಿಂದಾಗಿ ಚಿನ್ನ ಮತ್ತು ಬೆಳ್ಳಿಯಲ್ಲಿ ಹಣ ಹೂಡಿಕೆ ಮಾಡಿದವರಿಗೆ ಶೇ 41ರಷ್ಟು ಲಾಭವಾಗಿದೆ.ಚಿನ್ನ ಮತ್ತು ಬೆಳ್ಳಿ ಬೆಲೆಗೆ ಹೋಲಿಸಿದರೆ, ಷೇರುಪೇಟೆ ಸಂವೇದಿ ಸೂಚ್ಯಂಕವು ಶೇ 7.79 ಮಾತ್ರ ಏರಿಕೆ ಕಂಡಿದೆ. ಆಗಸ್ಟ್‌ 9ಕ್ಕೆ  ಸೂಚ್ಯಂಕವು ವರ್ಷದ ಗರಿಷ್ಠ ಮಟ್ಟವಾದ 28,289.96ಕ್ಕೆ ತಲುಪಿತ್ತು.2015ರ ಮಾರ್ಚ್‌ 4ರಂದು ಸೂಚ್ಯಂಕವು 30,024.74 ಅಂಶಗಳಿಗೆ ತಲುಪಿ ಸಾರ್ವಕಾಲೀನ ದಾಖಲೆ ನಿರ್ಮಿಸಿತ್ತು. ಅದಕ್ಕೆ ಹೋಲಿಸಿದರೆ ಸದ್ಯದ ಮಟ್ಟವು 1,872 ಅಂಶಗಳಷ್ಟು (ಶೇ 6.23) ಕಡಿಮೆ ಇದೆ.ಕಚ್ಚಾ ತೈಲ ಬೆಲೆ ಏರಿಳಿತ ಮತ್ತು  ಚೀನಾದ ಆರ್ಥಿಕತೆ ಕುರಿತ ಕಳವಳದ ಕಾರಣಕ್ಕೆ ವರ್ಷದ ಆರಂಭದಲ್ಲಿ ಷೇರುಪೇಟೆಯಲ್ಲಿ ಖರೀದಿ ಉತ್ಸಾಹ ಕುಸಿದಿತ್ತು.ನಂತರದ ದಿನಗಳಲ್ಲಿ ಉದ್ದಿಮೆ ಸಂಸ್ಥೆಗಳ  ಉತ್ತಮ ಹಣಕಾಸು ಸಾಧನೆ ಮತ್ತು ಮುಂಗಾರು ಮಳೆಯ ಪ್ರಗತಿಯ ಕಾರಣಕ್ಕೆ ಪೇಟೆಯಲ್ಲಿ ಉತ್ಸಾಹ ಮರಳಿ ಕಾಣಿಸಿಕೊಂಡಿತ್ತು.ಷೇರುಪೇಟೆಯ ಡೋಲಾಯಮಾನದ ಸಂದರ್ಭದಲ್ಲಿ ಹೂಡಿಕೆದಾರರು ಸುರಕ್ಷಿತ ಹೂಡಿಕೆಯಾದ ಚಿನ್ನದತ್ತ ಹೆಚ್ಚು ಗಮನ ಹರಿಸಿದ್ದರಿಂದ ಚಿನ್ನದ ಮೇಲಿನ ಹೂಡಿಕೆಯು ಹೆಚ್ಚು ಲಾಭದಾಯಕವಾಗಿ ಪರಿಣಮಿಸಿದೆ. 2015 ವರ್ಷಾಂತ್ಯದಲ್ಲಿ ಪ್ರತಿ 10 ಗ್ರಾಂಗಳಿಗೆ ₹ 25 ಸಾವಿರದ ಆಸುಪಾಸಿನಲ್ಲಿದ್ದ ಚಿನ್ನದ ಬೆಲೆ, ಈ ವರ್ಷದ ಆಗಸ್ಟ್‌ ತಿಂಗಳಲ್ಲಿ ₹ 31,050ಕ್ಕೆ ತಲುಪಿದೆ.  ಬೆಳ್ಳಿ ಬೆಲೆಯು ಪ್ರತಿ ಕೆಜಿಗೆ ₹ 33,300 ರಿಂದ ₹ 46,850ಕ್ಕೆ ತಲುಪಿದೆ.ಈ ಹಿಂದಿನ ಅಂಕಿ ಅಂಶ ಆಧರಿಸಿ ಹೇಳುವುದಾದರೆ, ಚಿನ್ನವು 15 ವರ್ಷಗಳ ಪೈಕಿ,  12 ವರ್ಷಗಳಲ್ಲಿ  ಉತ್ತಮ ಲಾಭ ತಂದುಕೊಟ್ಟಿದೆ.2015ರಲ್ಲಿ ಷೇರು ಮತ್ತು ಚಿನ್ನದ ಹೂಡಿಕೆಯು ಹೆಚ್ಚು ಲಾಭ ತಂದುಕೊಟ್ಟಿರಲಿಲ್ಲ. 2014ರಲ್ಲಿ  ಮಾತ್ರ ಷೇರುಪೇಟೆಯಲ್ಲಿನ ಹೂಡಿಕೆಯು ಚಿನ್ನಕ್ಕಿಂತ ಹೆಚ್ಚು ಲಾಭ ತಂದುಕೊಟ್ಟಿತ್ತು. ಬೆಳ್ಳಿ ಹೂಡಿಕೆಯು ಸತತ 3ನೇ ವರ್ಷವೂ ಉತ್ತಮ ಲಾಭ ತಂದುಕೊಟ್ಟಿದೆ.ಚಿನ್ನ ಆಮದು ಶೇ 52 ಇಳಿಕೆ

ನವದೆಹಲಿ (ಪಿಟಿಐ):
ಪ್ರಸಕ್ತ ಹಣಕಾಸು ವರ್ಷದ ಮೊದಲ ನಾಲ್ಕು ತಿಂಗಳಿನಲ್ಲಿ ಚಿನ್ನದ ಆಮದು ಶೇ 52ರಷ್ಟು ತಗ್ಗಿದ್ದು, ₹33,500 ಕೋಟಿಗಳಿಗೆ ಇಳಿಕೆಯಾಗಿದೆ.

2015ರ ಏಪ್ರಿಲ್‌–ಜುಲೈ ಅವಧಿಯಲ್ಲಿ ₹67 ಸಾವಿರ ಕೋಟಿ ಮೌಲ್ಯದ ಚಿನ್ನ ಆಮದಾಗಿತ್ತು ಎಂದು ಕೇಂದ್ರ ವಾಣಿಜ್ಯ ಸಚಿವಾಲಯ ಮಾಹಿತಿ ನೀಡಿದೆ.ಚಿನ್ನದ ಆಮದು ತಗ್ಗಿರುವುದರಿಂದ ಚಾಲ್ತಿ ಖಾತೆ ಕೊರತೆಯು ₹87,100 ಕೋಟಿಗಳಿಂದ ₹53,600 ಕೋಟಿಗಳಿಗೆ ಇಳಿದಿದೆ.2015–16ರಲ್ಲಿ ಚಾಲ್ತಿ ಖಾತೆ ಕೊರತೆಯನ್ನು ಶೇ 1.5 ರಿಂದ ಶೇ 1.3ಕ್ಕೆ ತಗ್ಗಿಸಲಾಗಿದೆ. ಈ ಅವಧಿಯಲ್ಲಿ ಬೆಳ್ಳಿ ಆಮದು ಸಹ ಶೇ 80ರಷ್ಟು ಇಳಿಕೆ ಕಂಡಿದೆ ಎಂದು ಸಚಿವಾಲಯ ತಿಳಿಸಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.