ಶನಿವಾರ, ಫೆಬ್ರವರಿ 27, 2021
31 °C

ಭವಿಷ್ಯ ಯೋಚಿಸಿ ಹೂಡಿಕೆ ಮಾಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಭವಿಷ್ಯ ಯೋಚಿಸಿ ಹೂಡಿಕೆ ಮಾಡಿ

ಪ್ರತಿಯೊಬ್ಬರಿಗೂ ಕಷ್ಟಪಟ್ಟು ಗಳಿಸಿದ ತಮ್ಮ ಹಣದ ಬಗ್ಗೆ ಅಪಾರ ಕಾಳಜಿ ಇದ್ದೇ ಇರುತ್ತದೆ. ಆದರೆ,  ಇಂತಹ ಅಮೂಲ್ಯ ಹಣವನ್ನು ಎಲ್ಲಿ ತೊಡಗಿಸಬೇಕು, ಹೇಗೆ  ಹೂಡಿಕೆ ಮಾಡಬೇಕು ಎನ್ನುವುದರ ಬಗ್ಗೆ ಬಹುತೇಕರಿಗೆ ಹೆಚ್ಚಿನ ಪರಿಜ್ಞಾನ ಇರುವುದಿಲ್ಲ.   ಅದೆಷ್ಟೋ ಸಂದರ್ಭಗಳಲ್ಲಿ ಅನೇಕರು ತಪ್ಪು ಸ್ಥಳಗಳಲ್ಲಿ ತಮ್ಮ ಹಣ  ಹೂಡಿಕೆ ಮಾಡುತ್ತಿರುವುದು ಸಂಶೋಧನೆಗಳಿಂದ ಗೊತ್ತಾಗಿದೆ.ಇಂದಿನ ತಲೆಮಾರಿನ ವಿಶೇಷ  ಏನೆಂದರೆ ಆಗಾಗ ಉದ್ಯೋಗ ಬದಲಿಸುವುದು, ಜೀವನಶೈಲಿಯತ್ತ ಹೆಚ್ಚು ಗಮನ ಹರಿಸಿ ಭವಿಷ್ಯದ ಹೂಡಿಕೆಯ ಬಗ್ಗೆ ಹೆಚ್ಚು ಗಮನ ಹರಿಸದೆ ಇರುವುದು. ಇದರಿಂದಾಗಿ ಅವರ ಭವಿಷ್ಯದ ಹಣಕಾಸು ನಿರ್ವಹಣೆಯನ್ನು ಮಾಡುವುದು ಅವರಿಗೆ ಕಷ್ಟವಾಗುತ್ತಿದೆ. ಈ ಸಂಕಷ್ಟದಿಂದ ಪಾರಾಗಲು ಕೆಲವೇ ಕೆಲವು ಸರಳ ಕ್ರಮಗಳನ್ನು ಅನುಸರಿಸಿದರೆ ಸಾಕು.ಬಜೆಟ್‌ ಸಿದ್ಧತೆ

ನೀವು ಅಗತ್ಯಕ್ಕಿಂತ ಹೆಚ್ಚು ವೆಚ್ಚ ಮಾಡುತ್ತಿದ್ದೀರಾ? ಬಜೆಟ್‌ ಹಾಕಿಕೊಂಡರೆ ನೀವು ಎಲ್ಲಿ ನಿಂತಿದ್ದೀರಿ ಮತ್ತು ಭವಿಷ್ಯದಲ್ಲಿ ನೀವು ಎಲ್ಲಿಗೆ ಹೋಗಬೇಕು ಎಂಬುದು ಸ್ಪಷ್ಟವಾಗಿ ತಿಳಿಯುತ್ತದೆ. ಬಜೆಟ್‌ ಬಗ್ಗೆ ಚಿಂತಿಸುವುದು ಎಂದರೆ ನೀವು ಈಗಿನ ಸ್ಥಿತಿಯಿಂದ ಒಂದು ಹೆಜ್ಜೆ ಹಿಂದಕ್ಕೆ ಚಲಿಸಿ ನಿಮ್ಮ ಆದಾಯವನ್ನು ವಿವಿಧ ಸಾಲ, ವೆಚ್ಚಗಳಿಗೆ ಸೂಕ್ತವಾಗಿ ಹಂಚಿಕೆ ಮಾಡುವುದು ಎಂದರ್ಥ. ಹೀಗೆ ಮಾಡುವುದರಿಂದ ಯಾವ ವೆಚ್ಚವನ್ನು ತ್ಯಾಗ ಮಾಡಬಹುದು ಮತ್ತು ಭವಿಷ್ಯದ ಹಣಕಾಸು ಸುರಕ್ಷತೆಗಾಗಿ ಏನನ್ನು ಮಾಡಬಹುದು ಎಂಬುದು ತಿಳಿಯುತ್ತದೆ. ತಿಂಗಳಿಗೆ ಕೇವಲ 1 ಸಾವಿರ ರೂಪಾಯಿ ಹೂಡಿಕೆ ಮಾಡುವುದರಿಂದಲೇ ಭವಿಷ್ಯದಲ್ಲಿ ದೊಡ್ಡ ಬದಲಾವಣೆಯನ್ನು ಮಾಡಿಕೊಳ್ಳಬಹುದು.ನಿಮ್ಮ ಹೆಚ್ಚುವರಿ ಆದಾಯ ನಿಮ್ಮ ಬ್ಯಾಂಕ್‌ ಖಾತೆಯಲ್ಲಿ ಸುಮ್ಮನೆ ಉಳಿಯುವುದರ ಬದಲಿಗೆ ಅದನ್ನು ನೀವು ಮ್ಯೂಚುವಲ್‌ ಫಂಡ್‌ಗಳಲ್ಲಿ ತೊಡಗಿಸಬಹುದು. ಪ್ರತಿ ತಿಂಗಳೂ ಮ್ಯೂಚುವಲ್ ಫಂಡ್‌ಗಾಗಿ ಒಂದಿಷ್ಟು ನಿಶ್ಚಿತ ಹಣವನ್ನು ತೆಗೆದಿಡಬಹುದು. ಇದನ್ನು ವ್ಯವಸ್ಥಿತ ಹೂಡಿಕೆ ಯೋಜನೆ (ಎಸ್‌ಐಪಿ) ಎಂದು ಕರೆಯಲಾಗುತ್ತದೆ.ತೆರಿಗೆ ಉಳಿತಾಯ 

ತೆರಿಗೆಯನ್ನು ಉಳಿಸುವ ಮೂಲಕ ತಮ್ಮ ಸಂಪತ್ತನ್ನು ಹೆಚ್ಚಿಸಿಕೊಳ್ಳಬಹುದು ಎಂಬ ಸೂಕ್ಷ್ಮವನ್ನು ಹೆಚ್ಚಿನವರು ತುಂಬ ತಡವಾಗಿ ತಿಳಿದುಕೊಳ್ಳುತ್ತಾರೆ. ತೆರಿಗೆಯನ್ನು ಪರಿಣಾಮಕಾರಿಯಾಗಿ ಉಳಿಸಬೇಕು ಎನ್ನುವುದಾದರೆ, ಬಹಳ ಮೊದಲಿನಿಂದಲೇ ವ್ಯವಸ್ಥಿತ ಯೋಜನೆ ರೂಪಿಸಬೇಕು. ಮ್ಯೂಚುವಲ್‌ ಫಂಡ್‌ಗಳಂತಹ ಷೇರು ಸಂಬಂಧಿತ ಉಳಿತಾಯ ಯೋಜನೆಗಳಲ್ಲಿ ಹಣ ತೊಡಗಿಸುವುದರಿಂದ ಅಲ್ಪಾವಧಿಯಲ್ಲಿ ತೆರಿಗೆ ಮುಕ್ತ ವರಮಾನ ಬರುವುದರೊಂದಿಗೆ ದೀರ್ಘಾವಧಿಯಲ್ಲಿ ಹಣದುಬ್ಬರ ಸಂಬಂಧಿತ ತೊಡಕುಗಳನ್ನು ನಿವಾರಿಸಿಕೊಂಡು  ವರಮಾನ ಗಳಿಸಿಕೊಡುತ್ತದೆ.ವೆಚ್ಚ ಮಾಡಿದರೂ ಗಮನ ಇರಲಿ

ದುಬಾರಿಯಾದ ವಿದೇಶಿ ಪ್ರವಾಸಿ ತಾಣಗಳಿಗೆ ಹೋಗಬೇಕು ಎಂಬ ಬಯಕೆ ಅನೇಕರಲ್ಲಿ ಇರುತ್ತದೆ. ದುಬಾರಿ ಹ್ಯಾಂಡ್‌ಬ್ಯಾಗ್‌, ಶೂ, ಡ್ರೆಸ್‌, ಫಿಫಾ ವಿಶ್ವಕಪ್‌ ಫುಟ್‌ಬಾಲ್‌ ಟಿಕೆಟ್‌ ಖರೀದಿಸಬೇಕು ಎನ್ನುವುದೂ ಸೇರಿದಂತೆ ಹಲವಾರು ಬಗೆಯ  ಕನಸುಗಳೂ ಇರುತ್ತವೆ. ಗಳಿಸಿದ ದುಡ್ಡು ಇರುವುದೇ ಇಂತಹ ಮನೋಭಿಲಾಷೆ ಈಡೇರಿಸುವುದಕ್ಕೆ ತಾನೆ? ಆದರೆ, ಇಂತಹ ವೆಚ್ಚ ಮಾಡುವಾಗಲೂ ಹಣಕಾಸು ಯೋಜನೆಯೊಂದು ನಿಮ್ಮ ಮನಸ್ಸಿನಲ್ಲಿರಬೇಕು.ಪ್ರತಿ ತಿಂಗಳು ನೀವು ನಿರ್ದಿಷ್ಟ ಹಣವನ್ನು ಅಲ್ಪಾವಧಿ ನಿಧಿಯಲ್ಲಿ ಹೂಡಿಕೆ ಮಾಡುತ್ತಿದ್ದರೆ, ವರ್ಷಾಂತ್ಯಕ್ಕೆ ಅದು ಶೇ 8ರಿಂದ 9ರಷ್ಟು ಬಡ್ಡಿ ಸಹಿತ ನಿಮಗೆ ವರಮಾನ ತಂದುಕೊಡುತ್ತದೆ. ಅದರಿಂದ ಅಲ್ಪಾವಧಿ ಮಾತ್ರವಲ್ಲ, ದೀರ್ಘಾವಧಿಯಲ್ಲೂ ಬಹಳ ಅನುಕೂಲವಾಗುತ್ತದೆ.ಆರೋಗ್ಯ ವಿಮೆ

ನಿಮ್ಮ ಜೀವನ ಗುಣಮಟ್ಟ ನಿಮ್ಮ ಆರೋಗ್ಯವನ್ನು ಅವಲಂಬಿಸಿದೆ. ಸಹಜವಾಗಿಯೇ ಉತ್ತಮ ಆರೋಗ್ಯ ವಿಮಾ ಯೋಜನೆ ರೂಪಿಸಿಕೊಳ್ಳುವುದು ಮುಖ್ಯವಾಗುತ್ತದೆ. ಜೀವನದ ಆರಂಭಿಕ ಹಂತದಲ್ಲಿ ಅಂದರೆ ನಿಮ್ಮ ಪ್ರೌಢಾವಸ್ಥೆಯಲ್ಲೇ ನೀವು ಆರೋಗ್ಯ ವಿಮೆಯನ್ನು ಮಾಡಿಸಿಕೊಳ್ಳುವ ಮೂಲಕ ಭವಿಷ್ಯದಲ್ಲಿ ಬರಬಹುದಾದ ವೈದ್ಯಕೀಯ ವೆಚ್ಚದಿಂದ ಪಾರಾಗಬಹುದು. ಹೀಗಾಗಿ ಈಗಲೇ ಉತ್ತಮ ಆರೋಗ್ಯ ವಿಮೆ ಪಾಲಿಸಿ ಮಾಡಿಸಿಕೊಳ್ಳಿ. ಸಣ್ಣ ಪ್ರಾಯದಲ್ಲಿ ವಿಮೆ ಮಾಡಿಸಿಕೊಳ್ಳುವುದರಿಂದ ವಾರ್ಷಿಕ ಪ್ರೀಮಿಯಂ ಮೊತ್ತವೂ ಕಡಿಮೆ ಇರುತ್ತದೆ.ಉತ್ತಮ ಆರೋಗ್ಯ ವಿಮೆ ಮಾಡಿಸಿಕೊಳ್ಳುವುದಾದರೆ ಅದಕ್ಕೆ ಒಂದಿಷ್ಟು ಸಂಶೋಧನೆಯೂ ಅಗತ್ಯ. ಕೆಲವು ಯೋಜನೆಗಳು ನಿಮ್ಮ ಅಗತ್ಯಗಳನ್ನು ಪೂರೈಸಲಾರದು. ನೀವು ಆರೋಗ್ಯ ವಿಮೆಗಾಗಿ ಮಾಡುವ ಹೂಡಿಕೆ ನಿಮಗೆ ತೆರಿಗೆ ಉಳಿಸುವುದು ಮಾತ್ರವಲ್ಲ, ನಿಮ್ಮ ಭವಿಷ್ಯದ ಆರೈಕೆಗಾಗಿ ಮಾಡುವ ವೆಚ್ಚವನ್ನು ತಗ್ಗಿಸುವಂತಿರಬೇಕು. ಆರೋಗ್ಯಕ್ಕಾಗಿ ಮಾಡುವ ವೆಚ್ಚವನ್ನು ಇತರ ವೆಚ್ಚಗಳಿಗೆ ಹೋಲಿಸುವುದು ಸಲ್ಲ.ಭವಿಷ್ಯಕ್ಕಾಗಿ ಹಣ ಹೂಡಬೇಕು ಎಂದು ಹೇಳುವುದು ಸುಲಭ. ಆದರೆ, ಅದನ್ನು ಕಾರ್ಯಗತಗೊಳಿಸುವ ಮನೋಭಾವ ಎಲ್ಲರಲ್ಲೂ ಮೂಡಬೇಕು. ಹೂಡಿಕೆ ಮಾಡುವುದನ್ನು ಇಂದೇ ಆರಂಭಿಸಿ. ಅದು ಎಷ್ಟು ಚಿಕ್ಕ ಹೂಡಿಕೆಯಾದರೂ ಸರಿ. ಇಂದು ಬೇಡ, ನಾಳೆ ಮಾಡೋಣ ಎಂದು ಹೂಡಿಕೆ ಅವಕಾಶಗಳನ್ನು ಮುಂದೂಡುತ್ತಲೇ ಇದ್ದರೆ ಭವಿಷ್ಯದಲ್ಲಿ ನಿಮಗೆ ಹೂಡಿಕೆ ಮಾಡಲು ಹೆಚ್ಚಿನ ಅವಕಾಶವೇ ಇಲ್ಲವಾದೀತು.

-ಇ.ಆರ್‌.ಅಶೋಕ್‌ ಕುಮಾರ್‌ (ಲೇಖಕರು ಸ್ಕ್ರಿಪ್‌ಬಾಕ್ಸ್‌ ಸಂಸ್ಥೆಯ ಸಿಇಒ)

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.