ಶುಕ್ರವಾರ, ಡಿಸೆಂಬರ್ 6, 2019
19 °C
ಪ್ರಸ್ತಾವ ಕಾರ್ಯಗತಗೊಳಿಸುವಲ್ಲಿ ವಿಫಲ: ನಂ 1 ಖ್ಯಾತಿಗೆ ಧಕ್ಕೆ

ಬಂಡವಾಳ ಹೂಡಿಕೆ: ಹಿಂದೆ ಬಿದ್ದ ರಾಜ್ಯ

Published:
Updated:
ಬಂಡವಾಳ ಹೂಡಿಕೆ: ಹಿಂದೆ ಬಿದ್ದ ರಾಜ್ಯ

ಬೆಂಗಳೂರು: ಬಂಡವಾಳ ಹೂಡಿಕೆ ಆಕರ್ಷಿಸುವಲ್ಲಿ ದೇಶದಲ್ಲಿಯೇ ಮೊದಲ ಸ್ಥಾನದಲ್ಲಿ ಇರುವುದಾಗಿ ಕರ್ನಾಟಕ ಸರ್ಕಾರ ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದರೂ, ವಾಸ್ತವದಲ್ಲಿ ಈ ಹೂಡಿಕೆ ಯೋಜನೆಗಳನ್ನು ಕಾರ್ಯಗತಗೊಳಿಸುವಲ್ಲಿ ತುಂಬ ಹಿಂದೆ ಬಿದ್ದಿದೆ.

₹ 1.52 ಲಕ್ಷ ಕೋಟಿಗಳಷ್ಟು ಬಂಡವಾಳ ಹೂಡಿಕೆ ಉದ್ದೇಶದ ಪ್ರಸ್ತಾವಗಳನ್ನು 2017ರಲ್ಲಿ ರಾಜ್ಯ ಸರ್ಕಾರಕ್ಕೆ ಸಲ್ಲಿಕೆಯಾಗಿದ್ದವು. ಇದು ಗುಜರಾತ್‌ ಮತ್ತು ಮಹಾರಾಷ್ಟ್ರ ರಾಜ್ಯಗಳ ಒಟ್ಟು ಹೂಡಿಕೆ ಪ್ರಸ್ತಾಪಕ್ಕಿಂತ ಹೆಚ್ಚಿಗೆ ಇತ್ತು.

2017ರ ಜನವರಿಯಿಂದ ಡಿಸೆಂಬರ್‌ ಅವಧಿಯಲ್ಲಿ ರಾಜ್ಯವು ಬಂಡವಾಳ ಹೂಡಿಕೆ ಯೋಜನೆಗಳನ್ನು ಕಾರ್ಯಗತಗೊಳಿಸುವಲ್ಲಿ ಶೇ 73ರಷ್ಟು ಕುಸಿತ ಕಂಡಿದೆ. ₹ 1.52 ಲಕ್ಷ ಕೋಟಿಗಳ ಹೂಡಿಕೆ ಪ್ರಸ್ತಾವಗಳ ಪೈಕಿ, ಕಾರ್ಯಗತಗೊಳಿಸಿದ ಹೂಡಿಕೆ ಯೋಜನೆಗಳ ಒಟ್ಟಾರೆ ಮೊತ್ತ ಕೇವಲ ₹ 2,455 ಕೋಟಿ ಮಾತ್ರ. 2016ರಲ್ಲಿ ₹ 1.54 ಲಕ್ಷ ಕೋಟಿ ಮೊತ್ತದ ಪ್ರಸ್ತಾವಗಳ ಪೈಕಿ ₹ 9,162 ಕೋಟಿ ಮೊತ್ತದ ಯೋಜನೆಗಳಷ್ಟೆ ಕಾರ್ಯಗತಗೊಂಡಿದ್ದವು ಎನ್ನುವುದು ಕೈಗಾರಿಕಾ ನೀತಿ ಮತ್ತು ಉತ್ತೇಜನಾ ಇಲಾಖೆಯಲ್ಲಿನ (ಡಿಐಪಿಇ) ಅಂಕಿ ಅಂಶಗಳು ತಿಳಿಸುತ್ತವೆ.

ಹೂಡಿಕೆ ಪ್ರಸ್ತಾವಗಳನ್ನು ಕಾರ್ಯಗತಗೊಳಿಸುವಲ್ಲಿ ಹಿಂದೆ ಬಿದ್ದ ರಾಜ್ಯಗಳ ಪಟ್ಟಿಯಲ್ಲಿ ಕರ್ನಾಟಕ 4ನೇ ಸ್ಥಾನದಲ್ಲಿ ಇದೆ.

ಉದ್ಯಮಿಗಳು ತಮ್ಮ ಯೋಜನೆಗಳ ಕುರಿತು ‘ಡಿಐಪಿಪಿ’ಗೆ ಅಗತ್ಯ ದಾಖಲೆಗಳನ್ನು (ಪಾರ್ಟ್‌–ಬಿ)  ಸಲ್ಲಿಸದ ಕಾರಣಕ್ಕೆ ಈ ಯೋಜನೆಗಳು ಕಾರ್ಯಗತಗೊಂಡಿಲ್ಲ ಎಂದು ಕೈಗಾರಿಕಾ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ನೆರೆ ರಾಜ್ಯಗಳ ಆಮಿಷ: ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳು ಉದ್ಯಮ ಸ್ನೇಹಿ ಕೊಡುಗೆಗಳ ಆಮಿಷ ಒಡ್ಡುತ್ತಿರುವುದರಿಂದ  ಹೂಡಿಕೆದಾರರು ತಮ್ಮ ಗಮನವನ್ನು ಈ ರಾಜ್ಯಗಳತ್ತ ಹರಿಸಿದ್ದಾರೆ. ರಾಜ್ಯದಲ್ಲಿ ಹೂಡಿಕೆ ಪ್ರಸ್ತಾವಗಳು ಕಡಿಮೆ ಪ್ರಮಾಣದಲ್ಲಿ ಕಾರ್ಯಗತಗೊಳ್ಳಲು ಇದೂ ಒಂದು ಪ್ರಮುಖ ಕಾರಣವಾಗಿದೆ ಎಂದು ಉದ್ದಿಮೆ ಪರಿಣತರು ಅಭಿಪ್ರಾಯಪಟ್ಟಿದ್ದಾರೆ.

ರಾಷ್ಟ್ರೀಯ ಮಟ್ಟದ ಚಿತ್ರಣವೂ ಇದಕ್ಕಿಂತ ಭಿನ್ನವಾಗಿಲ್ಲ. ಬಂಡವಾಳ ಮೊತ್ತದ ಲೆಕ್ಕದಲ್ಲಿ ಕಳೆದ ವರ್ಷ ದೇಶದಲ್ಲಿನ ಹೂಡಿಕೆ ಪ್ರಮಾಣ ಶೇ 29ರಷ್ಟು ಕಡಿಮೆಯಾಗಿದೆ.

-ಫುರ್ಖಾನ್‌ ಮೊಹರಕಾನ್‌

ಪ್ರತಿಕ್ರಿಯಿಸಿ (+)