ಸೂಚ್ಯಂಕ 140 ಅಂಶ ಇಳಿಕೆ

7

ಸೂಚ್ಯಂಕ 140 ಅಂಶ ಇಳಿಕೆ

Published:
Updated:
ಸೂಚ್ಯಂಕ 140 ಅಂಶ ಇಳಿಕೆ

ಮುಂಬೈ: ಅಮೆರಿಕದ ಫೆಡರಲ್‌ ರಿಸರ್ವ್‌ನ ಬಡ್ಡಿದರ ಹೆಚ್ಚಳ ನಿರ್ಧಾರ ಮತ್ತು ಸಗಟು ಹಣದುಬ್ಬರದ ಏರಿಕೆಯ ಪ್ರಭಾವದಿಂದ ಗುರುವಾರ ಷೇರುಪೇಟೆ ವಹಿವಾಟು ಇಳಿಕೆ ಕಂಡಿತು.

ಅಮೆರಿಕದ ಕೇಂದ್ರೀಯ ಬ್ಯಾಂಕ್‌ ಫೆಡರಲ್ ರಿಸರ್ವ್, ಬಡ್ಡಿದರವನ್ನು ಶೇ 0.25 ರಷ್ಟು ಏರಿಕೆ ಮಾಡಿದೆ. ಇದರಿಂದ ಸಾಲದ ಮೇಲಿನ ಬಡ್ಡಿದರ ಏರಿಕೆಯಾಗಲಿದ್ದು, ಪ್ರವರ್ಧಮಾನಕ್ಕೆ ಬರುತ್ತಿರುವ ದೇಶಗಳಲ್ಲಿ ವಿದೇಶಿ ಹೂಡಿಕೆ ಪ್ರಮಾಣದಲ್ಲಿ ಇಳಿಕೆಯಾಗಲಿದೆ.

ಹಣಕಾಸು ವರ್ಷದಲ್ಲಿ ಇನ್ನೂ ಎರಡು ಬಾರಿ ಬಡ್ಡಿದರ ಏರಿಕೆ ಸುಳಿವು ನೀಡಿರುವುದು ಪೇಟೆಯಲ್ಲಿ ನಕಾರಾತ್ಮಕ ಚಟುವಟಿಕೆಗೆ ಕಾರಣವಾಯಿತು. ಇನ್ನೊಂದೆಡೆ, ದೇಶಿ ಮಟ್ಟದಲ್ಲಿ ಸಗಟು ಹಣದುಬ್ಬರ ಮೇ ತಿಂಗಳಿನಲ್ಲಿ 14 ತಿಂಗಳ ಗರಿಷ್ಠ ಮಟ್ಟವಾದ ಶೇ 4.43ಕ್ಕೆ ತಲುಪಿದೆ. ಚಾಲ್ತಿ ಖಾತೆ ಕೊರತೆ ಮೂರು ಪಟ್ಟು ಹೆಚ್ಚಾಗಿದೆ. ಈ ಸಂಗತಿಗಳಿಂದಾಗಿ ಷೇರುಪೇಟೆ ವಹಿವಾಟಿನಲ್ಲಿ ಇಳಿಕೆ ಕಾಣುವಂತಾಗಿದೆ ಎಂದು ಪರಿಣತರು ವಿಶ್ಲೇಷಣೆ ಮಾಡಿದ್ದಾರೆ.

ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕವು (ಬಿಎಸ್‌ಇ) 140 ಅಂಶ ಇಳಿಕೆ ಕಂಡು 35,599 ಅಂಶಗಳಲ್ಲಿ ವಹಿವಾಟು ಅಂತ್ಯವಾಗಿದೆ.

ಹಿಂದಿನ ಮೂರು ವಹಿವಾಟು ಅವಧಿಯಲ್ಲಿ ಸಂವೇದಿ ಸೂಚ್ಯಂಕವು 295 ಅಂಶಗಳಷ್ಟು ಏರಿಕೆ ಕಂಡಿತ್ತು. ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ (ಎನ್‌ಎಸ್‌ಇ) ನಿಫ್ಟಿ 48 ಅಂಶ ಇಳಿಕೆಯಾಗಿ 10,808 ಅಂಶಗಳಲ್ಲಿ ವಹಿವಾಟು ಅಂತ್ಯಕಂಡಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry