ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲೆಯಲ್ಲೇ ಬದುಕು ಕಟ್ಟಿಕೊಂಡ ಮೋಹನ–ಸುರೇಶ ಬಡಿಗೇರ ಸಹೋದರರು..!

ಕುಟುಂಬದ ಕಲೆಗೆ ಉದ್ಯಮದ ಸ್ವರೂಪ
Last Updated 24 ಜನವರಿ 2019, 6:30 IST
ಅಕ್ಷರ ಗಾತ್ರ

ಬಸವನಬಾಗೇವಾಡಿ: ಕುಟುಂಬದ ಹಿರಿಯರು ಹವ್ಯಾಸಕ್ಕಾಗಿ, ಜೀವನೋಪಾಯಕ್ಕಾಗಿ ಕರಗತ ಮಾಡಿಕೊಂಡಿದ್ದ ಕಲೆಗೆ, ಉದ್ಯಮದ ಸ್ವರೂಪ ನೀಡಲು ಪಟ್ಟಣದ ಮೋಹನ ಬಡಿಗೇರ ಸಹೋದರರು ಮುಂದಾಗಿದ್ದಾರೆ. ಇದರಲ್ಲಿ ಯಶಸ್ಸನ್ನು ಕಂಡಿದ್ದಾರೆ.

ಬಾಗೇವಾಡಿಯ ದೇವೇಂದ್ರ ಎಂ.ಬಡಿಗೇರ ಅಲಂಕಾರಿಕ ಕಟ್ಟಿಗೆ ಚೌಕಟ್ಟು, ಕೃಷಿ ಪರಿಕರ ಹಾಗೂ ಗಣೇಶ ಚತುರ್ಥಿಯಲ್ಲಿ ಗಣೇಶ ಮೂರ್ತಿ ಸೇರಿದಂತೆ ಇನ್ನಿತರೆ ಸಮಯದಲ್ಲಿ ವಿವಿಧ ಮೂರ್ತಿ ತಯಾರಿಸುತ್ತಿದ್ದರು. ಇದನ್ನು ಚಿಕ್ಕಂದಿನಿಂದಲೂ ಸೂಕ್ಷ್ಮವಾಗಿ ಗಮನಿಸುತ್ತಿದ್ದ ಮೋಹನ, ಸುರೇಶ ಬಡಿಗೇರ ಸಹೋದರರು, ಶಿಕ್ಷಣದತ್ತ ಲಕ್ಷ್ಯ ಕೊಡದೆ, ತಂದೆ ನಿರ್ವಹಿಸುತ್ತಿದ್ದ ಕಲೆಯನ್ನೇ ಕರಗತ ಮಾಡಿಕೊಂಡಿದ್ದಾರೆ.

ಮೋಹನ ಬಡಿಗೇರ ಓದಿದ್ದು 7ನೇ ತರಗತಿ. ತಂದೆಯ ಮಾರ್ಗದರ್ಶನ, ಅನುಭವಗಳಿಂದ ವಿವಿಧ ಕಲಾಕೃತಿಗಳ ತಯಾರಿಕೆಯಲ್ಲಿ ಸಿದ್ಧಹಸ್ತರು. ಇವರ ಕೈಯಲ್ಲಿ ಮೂಡಿಬಂದ ಕಂಚು, ಕಲ್ಲು, ಸಿಮೆಂಟ್, ಮಣ್ಣಿನಿಂದ ತಯಾರಿಸಿದ ವಿವಿಧ ಮೂರ್ತಿಗಳು, ಉಬ್ಬು ಚಿತ್ರಗಳಿಗೆ ಇದೀಗ ಎಲ್ಲೆಡೆ ಬಹು ಬೇಡಿಕೆ.

ಇವರ ಕೈಚಳಕದಲ್ಲಿ ತಯಾರಾದ ಫೈಬರ್ ಗ್ಲಾಸ್‌ನ 7 ಅಡಿ ಎತ್ತರದ ಅಶ್ವಾರೂಢ ರಾಣಿ ಚನ್ನಮ್ಮ ಮೂರ್ತಿ ನೋಡಲು ಕಂಚಿನ ಮೂರ್ತಿಯ ರೀತಿಯೇ ಕಾಣುತ್ತದೆ. ಸಹೋದರರು ಮೂರು ತಿಂಗಳಲ್ಲಿ ತಯಾರಿಸಿರುವ ಈ ಮೂರ್ತಿಯ ಮೌಲ್ಯ ₹ 5 ಲಕ್ಷ. ಇದು 100ರಿಂದ 150 ವರ್ಷ ಬಾಳಿಕೆ ಬರಲಿದೆ ಎನ್ನುತ್ತಾರೆ ಮೋಹನ. ಇದೇ ರೀತಿಯ ಕಂಚಿನ ಮೂರ್ತಿ ತಯಾರಿಕೆಗೆ ಕನಿಷ್ಠ ₹ 22 ಲಕ್ಷ ಖರ್ಚು ಬರಲಿದೆ ಎನ್ನುತ್ತಾರೆ ಅವರು.

ವಿವಿಧ ದೇವರು, ಶರಣರು, ಸಂತರು, ಮಹಾನ್ ಪುರುಷರ ಮೂರ್ತಿಗಳನ್ನು ತಯಾರಿಸುವುದನ್ನು ಹಾಗೂ ಉಬ್ಬು ಚಿತ್ರ ತಯಾರಿಕೆಯನ್ನು ಸಹೋದರರಿಬ್ಬರು ಕರಗತ ಮಾಡಿಕೊಂಡಿದ್ದಾರೆ. ಇವರ ಕೈಚಳಕದಲ್ಲಿ ಮೂಡಿಬಂದ ಬಗೆ ಬಗೆಯ ಕಲಾಕೃತಿಗಳು ರಾಜ್ಯವಲ್ಲದೇ ತಮಿಳುನಾಡು, ಆಂಧ್ರಪ್ರದೇಶ, ಮಹಾರಾಷ್ಟ್ರದ ಮಠ, ಮಂದಿರಗಳಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ ದೊಡ್ಡ ಮನೆ, ಹೋಟೆಲ್‌ಗಳಲ್ಲೂ ಕಾಣಸಿಗುತ್ತವೆ.

ಮೋಹನ ಸಹೋದರ ಸುರೇಶ ಬಡಿಗೇರ ಓದಿದ್ದು 5ನೇ ತರಗತಿ. ಇವರು ಮನೆಗೆ ಅಗತ್ಯವಿರುವ ಕಟ್ಟಿಗೆಯ ಅಲಂಕಾರಿಕ ಬಾಗಿಲು ಚೌಕಟ್ಟು, ಸೋಫಾಸೆಟ್, ಮಂಚ, ಸಿಂಹಾಸನ, ಪಲ್ಲಕ್ಕಿ ತಯಾರಿಕೆಯಲ್ಲಿ ಸಿದ್ಧಹಸ್ತರು.

ಮೋಹನ ಅವರ ಇನ್ನೊಬ್ಬ ಸಹೋದರ ಮಹಾದೇವ ಬಡಿಗೇರ ಹಂಪಿ ವಿಶ್ವವಿದ್ಯಾಲಯದಿಂದ ಬ್ಯಾಚುಲರ್ ಆಫ್ ಫೈನ್ ಆರ್ಟ್‌ನಲ್ಲಿ ಪದವಿ ಪಡೆದುಕೊಂಡ ನಂತರ, ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕಾರ್ಯ ನಿರ್ವಹಿಸುತ್ತಲೇ ವಿವಿಧ ಕಲಾಕೃತಿಗಳನ್ನು ರಚಿಸಿದ್ದಾರೆ. ಇದರ ಜತೆಯಲ್ಲೆ ಬೇಸಿಗೆ ರಜೆಯಲ್ಲಿ ಶಾಲಾ, ಕಾಲೇಜು ವಿದ್ಯಾರ್ಥಿಗಳಿಗೆ ಚಿತ್ರಕಲಾ ಕೌಶಲ ಶಿಬಿರಗಳನ್ನು ಆಯೋಜಿಸುತ್ತಿದ್ದಾರೆ.

ಪ್ರಸ್ತುತ ಆಲಮಟ್ಟಿ ಅಣೆಕಟ್ಟೆಯ ಎರಡು ಬದಿಯ ಸಾಲು ದೀಪದ ಅಲಂಕಾರಿಕ ಸಿಮೆಂಟ್ ಕಂಬಗಳ ಲ್ಯಾಂಪ್ ಪಿಲ್ಲರ್ ತಯಾರಿಕೆಯಲ್ಲಿ ಸಹೋದರರೊಂದಿಗೆ ತಲ್ಲೀನರಾಗಿದ್ದಾರೆ.

ಕಾಂಕ್ರೀಟ್‌ನಿಂದ ತಯಾರಿಸಿದ ಅಲಂಕಾರಿಕ ಲ್ಯಾಂಪ್ ಪಿಲ್ಲರ್ ಆಕರ್ಷಣೀಯವಾಗಿವೆ. ಇವುಗಳ ತಯಾರಿಕೆಯಲ್ಲಿ ಸಹೋದರರೊಟ್ಟಿಗೆ 10 ಕಲಾವಿದರು ನಿರಂತರ ಕಾರ್ಯ ನಿರ್ವಹಿಸುತ್ತಿದ್ದಾರೆ. ಈಗಾಗಲೇ 150ಕ್ಕೂ ಹೆಚ್ಚು ಲ್ಯಾಂಪ್ ಪಿಲ್ಲರ್‌ಗಳನ್ನು ತಯಾರಿಸಿದ್ದಾರೆ. ಇವರ ಕಾರ್ಯಕ್ಕೆ ಪದವೀಧರ ಮತ್ತೊಬ್ಬ ಸಹೋದರ ಮಂಜುನಾಥ ಬಡಿಗೇರ ಸಹ ಸಾಥ್‌ ನೀಡಿದ್ದಾರೆ.

‘ಹಿರಿಯರ ಸಂಪ್ರದಾಯವನ್ನು ಉಳಿಸಿ, ಬೆಳೆಸಿಕೊಂಡು ಹೋಗುವುದರೊಂದಿಗೆ ಅದನ್ನು ಒಂದು ಉದ್ದಿಮೆಯನ್ನಾಗಿಸುವ ನಿಟ್ಟಿನಲ್ಲಿ ಯತ್ನಿಸುತ್ತಿದ್ದೇವೆ. ನಮಗೆ ಸೂಕ್ತ ಸ್ಥಳದ ಅವಕಾಶ ಇಲ್ಲದೇ ಇರುವುದರಿಂದ ವಿವಿಧೆಡೆ ಕಾರ್ಯ ನಿರ್ವಹಿಸುತಿದ್ದೇವೆ.

ಸರ್ಕಾರ ವಿಶಾಲವಾದ ಸ್ಥಳದ ಅವಕಾಶ ಮಾಡಿಕೊಟ್ಟರೆ, ತರಬೇತಿ ಶಿಬಿರ ಆರಂಭಿಸಬೇಕೆಂದಿದ್ದೇವೆ. ಶರಣರ, ಮಹಾಪುರುಷರ ಮೂರ್ತಿ ಸೇರಿದಂತೆ ವಿವಿಧ ಕಲಾಕೃತಿಗಳನ್ನು ಒಳಗೊಂಡ ಆರ್ಟ್ ಗ್ಯಾಲರಿ ನಿರ್ಮಿಸುವ ಉದ್ದೇಶವಿದೆ’ ಎಂದು ಮೋಹನ ಬಡಿಗೇರ, ಮಹಾದೇವ ಬಡಿಗೇರ ‘ಪ್ರಜಾವಾಣಿ’ಗೆ ತಿಳಿಸಿದರು.

ಆಕರ್ಷಣೀಯ ಮೂರ್ತಿಗಳು
ಆಲಮಟ್ಟಿಯ ರಾಕ್ ಗಾರ್ಡನ್‌ನಲ್ಲಿ ಸಿಮೆಂಟ್‌ನಿಂದ ತಯಾರಿಸಿದ ಡೈನೋಸಾರ್‌, ಹಾವು, ಹಕ್ಕಿಗಳು ಸೇರಿದಂತೆ ವಿವಿಧ ಕಲಾಕೃತಿಗಳು ಗಮನ ಸೆಳೆಯುತ್ತವೆ. ಹಿಂದಿನ ವರ್ಷ ಅಣೆಕಟ್ಟೆಯ ಮಹಾದ್ವಾರದ ವೃತ್ತದಲ್ಲಿ ಸಿಮೆಂಟ್‌ನಿಂದ ತಯಾರಿಸಿದ ದಂಡಿ ಯಾತ್ರೆಯ ಮೂರ್ತಿಗಳು ಪ್ರವಾಸಿಗರನ್ನು ಆಕರ್ಷಿಸುತ್ತಿವೆ.

ಮಂತ್ರಾಲಯದ ಮಠದಲ್ಲಿ ರಾಘವೇಂದ್ರ ಸ್ವಾಮಿಯ ಉಬ್ಬು ಚಿತ್ರ, ಬಸವಕಲ್ಯಾಣದಲ್ಲಿ ಬಸವಾದಿ ಶರಣರ ಕಲಾಕೃತಿಗಳು, ಮದ್ದೂರು ಬಳಿಯ 25 ಅಡಿ ಎತ್ತರದ ಆಂಜನೇಯ ಮೂರ್ತಿ ಸೇರಿದಂತೆ ಇತರ ಕಲಾಕೃತಿಗಳು ಆಕರ್ಷಣೀಯವಾಗಿವೆ. ಇವೆಲ್ಲಾ ಬಡಿಗೇರ ಸಹೋದರರ ಕೈಯಲ್ಲಿ ರೂಪುಗೊಂಡಿದ್ದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT