ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

67,913 ಕ್ವಿಂಟಲ್ ಕಡಲೆ ಆವಕ; ಧಾರಣೆ ಸ್ಥಿರ

ಬರದ ಹೊಡೆತಕ್ಕೆ ಇಳುವರಿಯಲ್ಲಿ ಕುಸಿತ; ಸೂಕ್ತ ಬೆಲೆ ಸಿಗದೆ ಕಡಲೆ ಬೆಳೆಗಾರ ಕಂಗಾಲು
Last Updated 25 ಏಪ್ರಿಲ್ 2019, 19:30 IST
ಅಕ್ಷರ ಗಾತ್ರ

ವಿಜಯಪುರ:ಬರದ ಭೀಕರತೆಯ ನಡುವೆಯೂ, ಕಡಲೆ ಬೆಳೆದ ಬೆಳೆಗಾರರಿಗೆ ಮುಕ್ತ ಮಾರುಕಟ್ಟೆಯಲ್ಲಿ ಸೂಕ್ತ ಬೆಲೆ ಸಿಗದಿದ್ದರಿಂದ ಕಂಗಾಲಾಗಿದ್ದಾರೆ. ಮಾರಾಟದ ಹಂಗಾಮು ಮುಗಿದರೂ; ಒಮ್ಮೆಯೂ ಹಿಂದಿನ ವರ್ಷದ ಧಾರಣೆ ರೈತ ಸಮೂಹಕ್ಕೆ ಸಿಗಲಿಲ್ಲ.

ಮುಕ್ತ ಮಾರುಕಟ್ಟೆಯಲ್ಲಿ ಪ್ರಸ್ತುತ ಕಡಲೆ ಧಾರಣೆ ಕ್ವಿಂಟಲ್‌ಗೆ ₹ 4200ರಿಂದ ₹ 4500ರಷ್ಟಿದೆ. ಬೆಳೆಗಾರರಿಂದ ಖರೀದಿ ಕೇಂದ್ರ ಆರಂಭಕ್ಕೆ ಬೇಡಿಕೆ ಬರದಿದ್ದರಿಂದ, ಜಿಲ್ಲೆಯ ಎಲ್ಲಿಯೂ ಈ ಬಾರಿ ಸರ್ಕಾರದ ಖರೀದಿ ಕೇಂದ್ರಗಳು ಕಾರ್ಯಾಚರಿಸದಾಗಿವೆ.

2018–19ನೇ ಸಾಲಿನಲ್ಲಿ ವಿಜಯಪುರ ಎಪಿಎಂಸಿಯ ಮುಕ್ತ ಮಾರುಕಟ್ಟೆಯಲ್ಲಿ ಕ್ವಿಂಟಲ್‌ ಕಡಲೆಗೆ ₹ 3700ರಿಂದ ₹ 5400ರ ಧಾರಣೆಯ ವಹಿವಾಟು ನಡೆದಿದ್ದು, 67,913 ಕ್ವಿಂಟಲ್‌ ಕಡಲೆ ಆವಕವಾಗಿದೆ ಎಂದು ಎಪಿಎಂಸಿ ಮೂಲಗಳು ತಿಳಿಸಿವೆ.

ಹಿಂದಿನ ವರ್ಷ 2 ಲಕ್ಷ ಕ್ವಿಂಟಲ್‌:‘ವಿಜಯಪುರ ಎಪಿಎಂಸಿ ಮಾರುಕಟ್ಟೆಗೆ 2017–18ನೇ ಸಾಲಿನಲ್ಲಿ 76,805 ಕ್ವಿಂಟಲ್ ಕಡಲೆ ಆವಕವಾಗಿತ್ತು. ಧಾರಣೆ ₹ 3000ದಿಂದ ₹ 6500ವರೆಗೂ ನಡೆದಿತ್ತು.

ಕಡಲೆಯ ಧಾರಣೆ, ಕೇಂದ್ರ ಸರ್ಕಾರದ ಕನಿಷ್ಠ ಬೆಂಬಲ ಬೆಲೆಗಿಂತ ಕುಸಿದಿದ್ದರಿಂದ, ಜಿಲ್ಲೆಯ ಎಂಟು ಕಡೆ ಖರೀದಿ ಕೇಂದ್ರ ಆರಂಭಿಸಲಾಗಿತ್ತು. 12,489 ರೈತರು ನೋಂದಣಿ ಮಾಡಿಸಿದ್ದರು. ಇದರಲ್ಲಿ 9245 ರೈತರಿಂದ ₹ 4400ರ ದರದಲ್ಲಿ ಒಟ್ಟು ₹ 54.91ಕೋಟಿ ಮೊತ್ತದ 1.25 ಲಕ್ಷ ಕ್ವಿಂಟಲ್ ಕಡಲೆ ಖರೀದಿ ಮಾಡಲಾಗಿತ್ತು’ ಎಂದು ಎಪಿಎಂಸಿಯ ಕೃಷಿ ಉತ್ಪನ್ನ ಮಾರಾಟ ಇಲಾಖೆಯ ಸಹಾಯಕ ನಿರ್ದೇಶಕ ಎಂ.ಡಿ.ಚಬನೂರ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

2017–18ನೇ ಸಾಲಿನಲ್ಲಿ ವಿಜಯಪುರ ಎಪಿಎಂಸಿ ವ್ಯಾಪ್ತಿಯಲ್ಲಿ ಕನಿಷ್ಠ 2 ಲಕ್ಷ ಕ್ವಿಂಟಲ್‌ಗೂ ಹೆಚ್ಚಿನ ಪ್ರಮಾಣದ ಕಡಲೆಯ ವಹಿವಾಟು ನಡೆದಿದೆ. 2018–19ನೇ ಸಾಲಿನಲ್ಲಿ ಹಿಂದಿನ ವರ್ಷದ ವಹಿವಾಟಿನ ಅರ್ಧದಷ್ಟು ವ್ಯಾಪಾರ ನಡೆದಿಲ್ಲ ಎಂಬುದನ್ನು ಎಪಿಎಂಸಿಯ ಅಂಕಿ–ಅಂಶಗಳು ದೃಢೀಕರಿಸುತ್ತವೆ.

ವಹಿವಾಟು ಅಷ್ಟಕ್ಕಷ್ಟೇ:‘ಹಿಂದಿನ ವರ್ಷಕ್ಕೂ, ಈ ವರ್ಷದ ವಹಿವಾಟಿಗೂ ಅಜಗಜಾಂತರ ವ್ಯತ್ಯಾಸವಿದೆ. ಧಾರಣೆ, ಬೆಲೆ, ಆವಕ, ವ್ಯಾಪಾರ ಸೇರಿದಂತೆ ಎಲ್ಲದರಲ್ಲೂ ಏರುಪೇರಿದೆ. ಒಟ್ಟಾರೆ ಈ ಬಾರಿಯ ಕಡಲೆ ಹಂಗಾಮಿನ ವಹಿವಾಟು ಅಷ್ಟಕ್ಕಷ್ಟೇ’ ಎಂದು ವಿಜಯಪುರ ಎಪಿಎಂಸಿಯ ವ್ಯಾಪಾರಿ ರಾಜು ಬಿರಾದಾರ ತಿಳಿಸಿದರು.

‘ಬರದಿಂದ ಕಡಲೆಯ ಉತ್ಪನ್ನ ನಿರೀಕ್ಷೆಯಷ್ಟು ರೈತರಿಗೆ ಸಿಗಲಿಲ್ಲ. ಇಳುವರಿ ಅರ್ಧಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಕುಸಿತಗೊಂಡಿದೆ. ಇದು ಧಾರಣೆ ಹೆಚ್ಚಬಹುದು ಎಂಬ ನಿರೀಕ್ಷೆ ಹುಸಿಗೊಳಿಸಿದೆ. ಹೊರಗಿನಿಂದ ಕಡಲೆ ವ್ಯಾಪಕ ಪ್ರಮಾಣದಲ್ಲಿ ಆವಕವಾಗಿದ್ದು, ನಮ್ಮ ಉತ್ಪನ್ನಕ್ಕೆ ನಿರೀಕ್ಷಿತ ಬೆಲೆ ಸಿಗದಾಗಿದೆ’ ಎಂದು ಮಾರುಕಟ್ಟೆಯಲ್ಲಿನ ಆಗುಹೋಗುಗಳ ವಿಶ್ಲೇಷಣೆ ನಡೆಸಿದರು.

‘ಫೆಬ್ರುವರಿಯಿಂದ ಕಡಲೆ ಮಾರಾಟದ ಹಂಗಾಮು ನಡೆದಿದೆ. ಇನ್ನೂ ಒಂದು ತಿಂಗಳು ಸಣ್ಣದಾಗಿ ವಹಿವಾಟು ನಡೆಯಲಿದೆ. ಹೆಚ್ಚಿನ ಪ್ರಮಾಣದ ಉತ್ಪನ್ನ ಮಾರುಕಟ್ಟೆಗೆ ಬರದಿದ್ದರಿಂದ ಸ್ಥಳೀಯ ಬೇಡಿಕೆಗೆ ಸರಿ ಹೋಗುತ್ತಿದೆ. ಉಳಿದ ಹೆಚ್ಚುವರಿ ಉತ್ಪನ್ನವನ್ನು ಸನಿಹದ ಸೊಲ್ಲಾಪುರ ಮಾರುಕಟ್ಟೆಗೆ ಕಳುಹಿಸಿಕೊಡುತ್ತಿದ್ದೇವೆ’ ಎಂದು ಮಾರುಕಟ್ಟೆಯ ಪ್ರಸ್ತುತ ಚಿತ್ರಣ ತಿಳಿಸಿದರು.

ಕಾಲು ಭಾಗವೂ ಇಳುವರಿ ಸಿಗಲಿಲ್ಲ..!:‘ಮುಂಗಾರಿ ಕೈಕೊಟ್ಟಿತ್ತು. ಹಿಂಗಾರಿಯಾದ್ರೂ ಆಶಾದಾಯಕವಾಗಬಹುದು ಎಂದು 16 ಎಕ್ರೆ ಭೂಮೀಲಿ ಕಡಲೆ ಬಿತ್ತಿದ್ದೆ. ಸಕಾಲಕ್ಕೆ ಮಳೆಯೂ ಬರಲಿಲ್ಲ. ಇಬ್ಬನಿಯೂ ಹಿಡಿಯಲಿಲ್ಲ. ಸಮೃದ್ಧ ಫಸಲು ಸಿಕ್ಕಿದ್ದರೆ ಕನಿಷ್ಠ 100 ಕ್ವಿಂಟಲ್‌ ಕಡಲೆ ರಾಶಿ ಮಾಡಬೇಕಿತ್ತು.

ನಮ್ಮ ದುರ್ದೈವ. ಬೆವರ ಹನಿಗೆ ತಕ್ಕ ಪ್ರತಿಫಲವೇ ಸಿಗಲಿಲ್ಲ. ಎಲ್ಲ ಕೂಡಿ 20 ಕ್ವಿಂಟಲ್ ಉತ್ಪನ್ನ ಸಿಕ್ತು. ರಾಶಿ ಮಾಡ್ಕೊಂಡು ಮಾರುಕಟ್ಟೆಗೆ ಬಂದ್ರೇ ಧಾರಣೆಯೂ ಅಷ್ಟಕ್ಕಷ್ಟೇ ಐತಿ. ಹಲ ದಿನ ಕಾದ್ರೂ ಸೂಕ್ತ ಬೆಲೆ ಸಿಗಲಿಲ್ಲ’ ಎಂದು ಬಸವನಬಾಗೇವಾಡಿ ತಾಲ್ಲೂಕಿನ ಡೋಣೂರ ಗ್ರಾಮದ ರೈತ ಬಸನಗೌಡ ಪಾಟೀಲ ಅಸಹಾಯಕತೆ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT