ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Union Budget 2021 | ನರೇಗಾ: ₹73 ಸಾವಿರ ಕೋಟಿ

ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ‘ಸ್ವಾಮಿತ್ವ’ ವಿಸ್ತರಣೆ
Last Updated 1 ಫೆಬ್ರುವರಿ 2021, 20:41 IST
ಅಕ್ಷರ ಗಾತ್ರ

ನವದೆಹಲಿ: ಗ್ರಾಮೀಣ ಭಾಗದಲ್ಲಿ ಉದ್ಯೋಗವಕಾಶಗಳನ್ನು ಸೃಷ್ಟಿಸುವ ಉದ್ದೇಶದ ಕೇಂದ್ರ ಸರ್ಕಾರದ ಮಹತ್ವದ ‘ಮಹಾತ್ಮಗಾಂಧಿ ಉದ್ಯೋಗ ಖಾತರಿ ಯೋಜನೆ’ಗೆ (ನರೇಗಾ) ಬಜೆಟ್‌ನಲ್ಲಿ ₹ 73 ಸಾವಿರ ಕೋಟಿ ಕಾಯ್ದಿರಿಸಲಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ₹ 11,500 ಕೋಟಿ ಹೆಚ್ಚುವರಿ ನಿಗದಿಪಡಿಸಲಾಗಿದೆ.

ಆದರೆ, ಒಟ್ಟಾರೆಯಾಗಿ ಈ ಮೊತ್ತವು ಕಳೆದ ಹಣಕಾಸು ವರ್ಷದ ಪರಿಷ್ಕೃತ ಅಂದಾಜು ಮೊತ್ತಕ್ಕೆ ಹೋಲಿಸಿದರೆ ₹ 38,500 ಕೋಟಿ ಕಡಿಮೆಯಾಗಲಿದೆ. ಆಗಿದೆ. ಕಳೆದ ಹಣಕಾಸು ವರ್ಷದಲ್ಲಿ ಒಟ್ಟಾರೆಯಾಗಿ ನರೇಗಾ ಯೋಜನೆಗೆ ₹ 1,11,500 ಕೋಟಿ ನಿಗದಿಪಡಿಸಲಾಗಿತ್ತು.

ಮೋದಿ ಸರ್ಕಾರ ಕಳೆದ ಮೇ ತಿಂಗಳಲ್ಲಿ ಹೆಚ್ಚುವರಿಯಾಗಿ ₹ 40 ಸಾವಿರ ಕೋಟಿ ಅನ್ನು ಈ ಯೋಜನೆಗಾಗಿ ಅದೇ ತಿಂಗಳಲ್ಲಿ ಪ್ರಕಟಿಸಲಾಗಿದ್ದ ₹ 20 ಲಕ್ಷ ಕೋಟಿಯ ವಿಶೇಷ ಹಣಕಾಸು ಪ್ಯಾಕೇಜ್‌ನ ಭಾಗವಾಗಿ ಹಂಚಿಕೆ ಮಾಡಿತ್ತು.

ಸ್ವಾಮಿತ್ವ ವಿಸ್ತರಣೆ: ನಿರ್ಮಲಾ ಸೀತಾರಾಮನ್ ಅವರು ಇನ್ನೊಂದೆಡೆ ‘ಸ್ವಾಮಿತ್ವ’ ಯೋಜನೆಯನ್ನು ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ವಿಸ್ತರಿಸುವ ತೀರ್ಮಾನವನ್ನೂ ಬಜೆಟ್‌ನಲ್ಲಿ ಪ್ರಕಟಿಸಿದರು. ಈ ವರ್ಷದ ಆರಂಭದಲ್ಲಿ ಪ್ರಧಾನಮಂತ್ರಿ ನರೇಂದ್ರಮೋದಿ ಈ ಯೋಜನೆಯನ್ನು ಪ್ರಕಟಿಸಿದ್ದರು.

ಈ ಯೋಜನೆಯಡಿ ಗ್ರಾಮಗಳಲ್ಲಿ ಆಸ್ತಿಯ ಮಾಲೀಕರಿಗೆ ಹಕ್ಕುಗಳ ದಾಖಲೆಗಳ ವಿವರಗಳುಳ್ಳ ಕಾರ್ಡ್ ನೀಡಲಾಗುತ್ತದೆ. ಈವರೆಗೆ ದೇಶದಾದ್ಯಂತ 1,241 ಗ್ರಾಮಗಳಲ್ಲಿ 1.80 ಲಕ್ಷ ಆಸ್ತಿ ಮಾಲೀಕರಿಗೆ ‘ಸ್ವಾಮಿತ್ವ’ ಕಾರ್ಡ್‌ ವಿತರಿಸಲಾಗಿದೆ.

ಅಲ್ಲದೆ, ಉಳಿದಂತೆ ಗ್ರಾಮೀಣ ಮೂಲಸೌಲಭ್ಯ ಅಭಿವೃದ್ದಿಗೆ ಬಜೆಟ್‌ನಲ್ಲಿ ಕಳೆದ ಬಜೆಟ್‌ಗಿಂತಲೂ ₹ 10 ಸಾವಿರ ಕೋಟಿ ಹೆಚ್ಚುವರಿಯಾಗಿ ಕಾಯ್ದಿರಿಸಿದ್ದಾರೆ. ಕಳೆದ ಬಜೆಟ್‌ನಲ್ಲಿ ₹ 30 ಸಾವಿರ ಕೋಟಿ ನಿಗದಿಪಡಿಸಿದ್ದರೆ, ಈ ವರ್ಷ ₹ 40 ಸಾವಿರ ಕೋಟಿಗೆ ಏರಿಸಲಾಗಿದೆ.

‘ಸರ್ವರಿಗೂ ಮನೆ’ ಯೋಜನೆ: ರಿಯಾಯಿತಿ ಇನ್ನೂ 1 ವರ್ಷ
‘ಕೈಗೆಟುಕುವ ದರದಲ್ಲಿ ಸರ್ವರಿಗೂ ಮನೆ ಲಭ್ಯವಾಗಬೇಕು’ ಗುರಿ ಸಾಧಿಸಲು ಮನೆ ಖರೀದಿಸಲು ಪಡೆದಿದ್ದ ಸಾಲದಲ್ಲಿ ಹೆಚ್ಚುವರಿಯಾಗಿ ₹ 1.5 ಲಕ್ಷದವರೆಗಿನ ಮೊತ್ತಕ್ಕೆ ತೆರಿಗೆ ರಿಯಾಯಿತಿ ಸೌಲಭ್ಯವನ್ನು 2022ರ ಮಾರ್ಚ್‌ 31ರವರೆಗೆ ವಿಸ್ತರಿಸಲಾಗುವುದು’ ಎಂದು ಸಚಿವೆ ಪ್ರಕಟಿಸಿದರು.

ಈ ಸೌಲಭ್ಯವನ್ನು 2019ರ ಬಜೆಟ್‌ನಲ್ಲಿ ಘೋಷಿಸಲಾಗಿತ್ತು. ಅಲ್ಲದೆ, ‘ವಲಸೆ ಕಾರ್ಮಿಕರಿಗೆ ಕೈಗೆಟುಕುವ ದರದಲ್ಲಿ ಮನೆ ಒದಗಿಸಲು ಸರ್ಕಾರ ಬದ್ಧವಾಗಿದೆ. ಇದಕ್ಕಾಗಿ ಸೂಚಿತ ಬಾಡಿಗೆ ವಸತಿ ಯೋಜನೆಗಳಿಗೆ ತೆರಿಗೆ ವಿನಾಯಿತಿ ನೀಡಲಾಗುವುದು’ ಎಂದು ಹೇಳಿದರು.

ಇವುಗಳನ್ನೂ ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT