ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Karnataka Budget | ಅಭಿವೃದ್ಧಿಯ ಎಂಜಿನ್‌ಗಳಿಗೆ ಸಿಕ್ಕ ‘ಇಂಧನ’

Last Updated 4 ಮಾರ್ಚ್ 2022, 19:30 IST
ಅಕ್ಷರ ಗಾತ್ರ

ಕೋವಿಡ್‌ ಹೊಡೆತ, ಆರ್ಥಿಕತೆಯ ಕುಸಿತ, ಹೀಗೆ ಸಾಲು ಸಾಲು ಸವಾಲುಗಳ ನಡುವೆ ರಾಜ್ಯ ಸರ್ಕಾರ ಬಜೆಟ್‌ ಮಂಡಿಸಿದೆ. ನಮ್ಮ ಅಭಿವೃದ್ಧಿ ಕಾರ್ಯಸೂಚಿಯ ಎಲ್ಲಾ ಅಂಶಗಳಲ್ಲಿ ಶಿಕ್ಷಣ, ಲಿಂಗ ಸಮಾನತೆ ಮತ್ತು ಮಹಿಳಾ ಸಬಲೀಕರಣ ತುಂಬಾ ಮುಖ್ಯವಾಗಿದೆ. ದೇಶವು ಇಂದು ಮಹಿಳಾ ಅಭಿವೃದ್ಧಿಯ ಮಾದರಿಯಿಂದ ಮಹಿಳಾ ನೇತೃತ್ವದ ಅಭಿವೃದ್ಧಿಗೆ ವೇಗವಾಗಿ ಚಲಿಸುತ್ತಿದೆ. ಈ ನಿಟ್ಟಿನಲ್ಲಿ 2022-23 ರ ಈ ಬಜೆಟ್ ಶಿಕ್ಷಣ ಮತ್ತು ಮಹಿಳಾ ಸಬಲೀಕರಣ ಭವಿಷ್ಯದ ಆರ್ಥಿಕ ಬೆಳವಣಿಗೆಗೆ ಪ್ರಮುಖ ಎಂಜಿನ್ ಎಂದು ಒಪ್ಪಿಕೊಳ್ಳುವ ಮೂಲಕ ರಾಜ್ಯದ ಅಭಿವೃದ್ಧಿಗೆ ಶಿಕ್ಷಣ, ಉದ್ಯೋಗ, ಸಬಲೀಕರಣ ಎಂಬ ತ್ರಿವಳಿ ಸೂತ್ರ ಘೋಷಿಸಿದೆ.

ಪ್ರಸಕ್ತ ಬಜೆಟ್‌ನಲ್ಲಿ ಮಹಿಳಾ ಸಬಲೀಕರಣಕ್ಕಾಗಿ 43,188 ಕೋಟಿ ಘೋಷಿಸಲಾಗಿದೆ. ಇದು ಒಟ್ಟು ಬಜೆಟ್‌ನ 17 ಪ್ರತಿಶತ ಪಾಲನ್ನು ಹೊಂದಿದೆ. ರಾಜ್ಯದೆಲ್ಲೆಡೆ 300 ಮಹಿಳಾ ಸ್ವಾಸ್ಥ್ಯ ಕೇಂದ್ರ ಸ್ಥಾಪನೆಗೆ ಅವಕಾಶ, ಮಹಿಳಾ ಸ್ಟಾರ್ಟ್ಅಪ್‌ಗೆ ₹ 10 ಲಕ್ಷ ನೇರ ಸಾಲ, ಉದ್ಯೋಗಸ್ಥ ಮಹಿಳೆಯರಿಗೆ ಹೊಸ ವಸತಿನಿಲಯ ನಿರ್ಮಾಣ, ಬಾಲ್ಯ ವಿವಾಹ ತಡೆಗೆ ಸ್ಫೂರ್ತಿ ಯೋಜನೆ ವಿಸ್ತರಣೆಗೆ ನಿರ್ಧರಿಸಲಾಗಿದೆ. ಆಶಾ ಕಾರ್ಯಕರ್ತೆಯರು ಭಾರತದ ಗ್ರಾಮೀಣ ಆರೋಗ್ಯದ ಬೆನ್ನೆಲುಬು. ಈ ನಿಟ್ಟಿನಲ್ಲಿ ಆಶಾ ಕಾರ್ಯಕರ್ತೆಯರ ಗೌರವಧನ ಹೆಚ್ಚಿಸಿದ ಸರಕಾರದ ಕ್ರಮ ಸ್ವಾಗತಾರ್ಹ.

ಇನ್ನು ಶಿಕ್ಷಣ ಕ್ಷೇತ್ರವನ್ನು ನೋಡುವುದಾದರೆ, ಬಜೆಟ್‌ನ 12 ಪ್ರತಿಶತ ಪಾಲನ್ನು ಹೊಂದಿದೆ. ಹಿಂದಿನ ಬಜೆಟ್‌ಗೆ ಹೋಲಿಸಿದರೆ ಇದು ಶೇಕಡಾ 7.72ರಷ್ಟು ಹೆಚ್ಚಳವಾಗಿದೆ. ರಾಜ್ಯದಲ್ಲಿ ಮೊದಲ ಬಾರಿಗೆ ಸರ್ಕಾರಿ ಶಾಲೆಗಳ ಮೂಲಸೌಕರ್ಯ ಅಭಿವೃದ್ದಿಗೆ ₹ 500 ಕೋಟಿ ಅನುದಾನ ಮೀಸಲಿಡಲಾಗಿದೆ. ಆಶಾದಾಯಕವಾಗಿ, ಇದು ಸರ್ಕಾರಿ ವಲಯದ ಶಾಲೆಗಳಲ್ಲಿ ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸಬಹುದು ಮತ್ತು ಸರ್ಕಾರಿ ಶಾಲೆಗಳು ಎದುರಿಸುತ್ತಿರುವ ಸಮಸ್ಯೆಗಳನ್ನು ಸಹ ಪರಿಹರಿಸಬಹುದು. ರಾಷ್ಟ್ರೀಯ ಶಿಕ್ಷಣ ನೀತಿ 2022ರ ಪ್ರಕಾರ ಪೂರ್ವ ಪ್ರಾಥಮಿಕ, ಪ್ರಾಥಮಿಕ, ಮಾಧ್ಯಮಿಕ ಮತ್ತು ಪ್ರೌಢ ಶಿಕ್ಷಣ ಮತ್ತು ವಯಸ್ಕ ಶಿಕ್ಷಣ ಕ್ಷೇತ್ರಗಳಿಗೆ ನೂತನ ಪಠ್ಯಕ್ರಮ ರಚನೆ ಮಾಡಲು ಯೋಜನೆ ಹಾಕಿಕೊಳ್ಳಲಾಗಿದೆ. ಸರ್ಕಾರವು ಈ ನೀತಿಯನ್ನು ಹೆಚ್ಚು ವ್ಯವಸ್ಥಿತವಾಗಿ ಜಾರಿಗೊಳಿಸುವುದರ ಮೂಲಕ ಶಿಕ್ಷಣ ವ್ಯವಸ್ಥೆಯಲ್ಲಿ ಬದಲಾವಣೆಯನ್ನು ತರಲು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಬೇಕಾಗಿದೆ. ಇದಲ್ಲದೆ, ಹೋಬಳಿ ಮಟ್ಟದಲ್ಲಿ ಮಾದರಿ ಶಾಲೆಗಳಾಗಿ ಮೂಲಭೂತ ಸೌಕರ್ಯವಿರುವ ಶಾಲೆಗಳ ಉನ್ನತೀಕರಣ, ಸರಕಾರಿ ಪ್ರೌಢಶಾಲೆ ಮತ್ತು ಪದವಿಪೂರ್ವ ಕಾಲೇಜುಗಳಲ್ಲಿ ಪೀಠೋಪಕರಣ ಒದಗಿಸಲು ₹ 100 ಕೋಟಿ ಮೀಸಲಿಡಲಾಗಿದೆ.

ರಾಜ್ಯದ ಏಳು ಸರ್ಕಾರಿ ಎಂಜಿನಿಯರಿಂಗ್ ಕಾಲೇಜುಗಳನ್ನು ಕರ್ನಾಟಕ ತಂತ್ರಜ್ಞಾನ ಸಂಸ್ಥೆಗಳನ್ನಾಗಿ ಉನ್ನತೀಕರಣ ಮಾಡಲು ಹೊರಟಿರುವುದು ಸಕಾರಾತ್ಮಕ ಹೆಜ್ಜೆ. ಬಡವರಿಗೆ ಕೂಡ ವೈದ್ಯಕೀಯ ಶಿಕ್ಷಣ ಅವಕಾಶ ನೀಡುವ ನಿಟ್ಟಿನಲ್ಲಿ ಹಲವು ಕಾರ್ಯಕ್ರಮಗಳನ್ನು ಹಾಕಿಕೊಳ್ಳಲಾಗಿದ್ದು, ಎಲ್ಲಾ ತಾಲ್ಲೂಕಿನಲ್ಲಿ ನೀಟ್ ಪರೀಕ್ಷಾ ತರಬೇತಿ, ವೈದ್ಯಕೀಯ ಶಿಕ್ಷಣ ಪಡೆಯಲು ಇಚ್ಛಿಸುವ ಬಡ ವಿದ್ಯಾರ್ಥಿಗಳಿಗೆ ಬ್ಯಾಂಕ್‌ನಿಂದ ಶೈಕ್ಷಣಿಕ ಸಾಲ ಒದಗಿಸುವ ನೆರವು ನೀಡಲು ನಿರ್ಧರಿಸಿರುವುದು ಒಳ್ಳೆಯ ಬೆಳವಣಿಗೆ.

ಮಹಿಳೆಯರಿಗೆ ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮಗಳು, ಮಹಿಳೆಯರ ಸಬಲೀಕರಣಕ್ಕೆ ಬಹಳ ಮುಖ್ಯವಾದ ಲಿಂಗ ವೇತನದ ಅಂತರವನ್ನು ಮುಚ್ಚಲು ಸಮಾನ ವೇತನ ನೀತಿಗಳ ಬಗ್ಗೆ ಯಾವುದೇ ಉಲ್ಲೇಖವಿಲ್ಲ. ಕೋವಿಡ್ ನಂತರದ ವರ್ಷಗಳಲ್ಲಿ ಡಿಜಿಟಲೀಕರಣ ಮತ್ತು ಇ-ಕಲಿಕೆಯ ಕಡೆಗೆ ಸ್ಪಷ್ಟವಾದ ನಡೆಯನ್ನು ಪರಿಗಣಿಸಿ, ಅಗತ್ಯವಿರುವ ತಂತ್ರಜ್ಞಾನ ಮತ್ತು ಡಿಜಿಟಲ್ ಮೂಲಸೌಕರ್ಯವನ್ನು ಸ್ಥಾಪಿಸಲು ಹೆಚ್ಚಿನ ವೆಚ್ಚದ ಅಗತ್ಯವಿದೆ. ಇದಲ್ಲದೆ, ಕೋವಿಡ್‌ನಿಂದಾಗಿ, ಗ್ರಾಮೀಣ ಪ್ರದೇಶದ ಮಕ್ಕಳು ಮತ್ತು ದುರ್ಬಲ ವರ್ಗದ ಮಕ್ಕಳು ಸುಮಾರು ಎರಡು ವರ್ಷಗಳ ಔಪಚಾರಿಕ ಶಿಕ್ಷಣವನ್ನು ಕಳೆದುಕೊಂಡಿದ್ದಾರೆ. ರಾಜ್ಯದಲ್ಲಿ ಲಕ್ಷಗಟ್ಟಲೆ ಮಕ್ಕಳು ಶಾಲೆಗೆ ಮರಳದಿರಬಹುದು. ಅದರಲ್ಲೂ ಹೆಣ್ಣು ಮಕ್ಕಳು ಹೆಚ್ಚಿನ ತೊಂದರೆ ಅನುಭವಿಸಿದ್ದಾರೆ. ಮಕ್ಕಳು ಮತ್ತೆ ಶಾಲೆಯತ್ತ ಮುಖ ಮಾಡುವಂತೆ ವಿಶೇಷ ಯೋಜನೆ ರೂಪಿಸುವ ಅಗತ್ಯವಿತ್ತು.

ಭಾರತದಲ್ಲಿ ಮಹಿಳಾ ಸಬಲೀಕರಣವು ಅನೇಕ ಅಸ್ಥಿರಗಳ ಮೇಲೆ ಹೆಚ್ಚು ಅವಲಂಬಿತವಾಗಿದೆ. ಮಹಿಳಾ ಸಬಲೀಕರಣದ ನೀತಿಗಳು ರಾಷ್ಟ್ರೀಯ, ರಾಜ್ಯ ಮತ್ತು ಸ್ಥಳೀಯ (ಪಂಚಾಯತ್) ಮಟ್ಟದಲ್ಲಿ ಹಲವು ಕ್ಷೇತ್ರಗಳಲ್ಲಿ ಅಸ್ತಿತ್ವದಲ್ಲಿವೆ. ಸಮುದಾಯ ಮಟ್ಟದಲ್ಲಿ ನೀತಿ ಪ್ರಗತಿಗಳು ಮತ್ತು ವಾಸ್ತವಿಕ ಅಭ್ಯಾಸಗಳ ನಡುವೆ ಗಮನಾರ್ಹ ಅಂತರಗಳಿವೆ. ಆ ಅಂತರವನ್ನು ತುಂಬುವ ಕೆಲಸವನ್ನು ಇನ್ನಷ್ಟು ಆಸ್ಥೆಯಿಂದ ಸರ್ಕಾರ ಮಾಡಬೇಕಿತ್ತು.

ಲೇಖಕರು: ಸಹಾಯಕ ಪ್ರಾಧ್ಯಾಪಕರು, ಅರ್ಥಶಾಸ್ತ್ರ ವಿಭಾಗ, ಕ್ರೈಸ್ಟ್ ಸಂಸ್ಥೆ

ಇವನ್ನೂ ಓದಿ

Karnataka Budget: ಬೊಮ್ಮಾಯಿ ಬಜೆಟ್‌ನಲ್ಲಿ ಏನೇನಿದೆ? ಇಲ್ಲಿವೆ ಮುಖ್ಯಾಂಶಗಳು
ರಾಜ್ಯ ಬಜೆಟ್: ನವ ಭಾರತಕ್ಕಾಗಿ ನವಕರ್ನಾಟಕ: ರಾಜ್ಯ ಅಭಿವೃದ್ಧಿಗೆ ಪಂಚಸೂತ್ರಗಳು
ಕರ್ನಾಟಕ ಬಜೆಟ್–2022 | ನೀರಾವರಿಗೆ ಆದ್ಯತೆ; ಎತ್ತಿನಹೊಳೆ ಯೋಜನೆಗೆ 3 ಸಾವಿರ ಕೋಟಿ
Karnataka Budget: ಮೇಕೆದಾಟು ಯೋಜನೆಗೆ ₹1,000 ಕೋಟಿ ಮೀಸಲು–ಬೊಮ್ಮಾಯಿ
Karnataka Budget 2022: ಬೆಂಗಳೂರಿಗೆ ಏನೇನು?
ಬೊಮ್ಮಾಯಿ ಬಜೆಟ್‌: ಕೃಷಿ ಕ್ಷೇತ್ರಕ್ಕೇನು ಕೊಡುಗೆ? ಇಲ್ಲಿದೆ ವಿವರ
ಕರ್ನಾಟಕ ಬಜೆಟ್–2022: ಯಾವ ವಲಯಕ್ಕೆ ಎಷ್ಟು ಅನುದಾನ?
Karnataka Budget: ಯಕ್ಷಗಾನ ಸಮ್ಮೇಳನ, ಕಾಸರಗೋಡು, ಗೋವಾದಲ್ಲಿ ಕನ್ನಡ ಭವನ ಘೋಷಣೆ
Karnataka Budget: ಆರೋಗ್ಯ ಕ್ಷೇತ್ರಕ್ಕೆ ಸಿಕ್ಕಿದ್ದೇನು?
ಬಜೆಟ್ ಪ್ರತಿ ಹಿಡಿದು ಮಿಂಚಿದ ಸಿಎಂ ಬೊಮ್ಮಾಯಿ
ಕರ್ನಾಟಕ ಬಜೆಟ್–2022: ತೆರಿಗೆ ದರದಲ್ಲಿ ಯಥಾಸ್ಥಿತಿ –ಸಿಎಂ ಬೊಮ್ಮಾಯಿ





ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT