ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯ ಬಜೆಟ್‌ | ಸಕಲರಿಗೂ ಕೊಡುಗೆಯ ಗುರಿ; ಚುನಾವಣಾ ತಯಾರಿ

Last Updated 4 ಮಾರ್ಚ್ 2022, 19:30 IST
ಅಕ್ಷರ ಗಾತ್ರ

ಬೆಂಗಳೂರು: ಸಂಪನ್ಮೂಲ ಸಂಗ್ರಹದ ಪರಿಮಿತಿಯೊಳಗೆ ತಮ್ಮ ಮೊದಲ ಬಜೆಟ್‌ನಲ್ಲಿ ‘ನವ ಕರ್ನಾಟಕ’ ನಿರ್ಮಾಣದ ಕನಸು ಬಿತ್ತಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಪರಿಶಿಷ್ಟರು, ಹಿಂದುಳಿದವರು, ರೈತರು, ಮಹಿಳೆಯರೂ ಸೇರಿಕೊಂಡಂತೆ ಅಲಕ್ಷಿತ ಸಮುದಾಯದವರು ಸ್ವಾಭಿಮಾನದ ಬದುಕು ಕಟ್ಟಿಕೊಳ್ಳುವ ಕಾರ್ಯಕ್ರಮಗಳಿಗೆ ಮುನ್ನುಡಿ ಬರೆದಿದ್ದಾರೆ.

ಎಲ್ಲ ಸಮುದಾಯಗಳಿಗೆ ಭರಪೂರ ಕೊಡುಗೆಯ ಗರಿ–ಗುರಿಯನ್ನು ಘೋಷಿಸಿರುವ ಅವರು, ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ರಾಜಕೀಯ ನೆಲೆ ಭದ್ರಗೊಳಿಸುವ ಕಣವನ್ನು ಹದಗೊಳಿಸುವ ಪ್ರಯತ್ನಕ್ಕೂ ಕೈ ಹಾಕಿದ್ದಾರೆ.

ಕವಿ ಎಂ.ಗೋಪಾಲಕೃಷ್ಣ ಅಡಿಗರ ‘ಇರುವೆಲ್ಲವನು ಎಲ್ಲ ಜನಕ್ಕೆ ತೆರವಾಗಿಸುವ ಸಮಬಗೆಯ ಸಮಸುಖದ ಸಮದುಃಖದ ಸಾಮರಸ್ಯದ ಸಾಮಗಾನಲಹರಿಯ ಮೇಲೆ ತೇಲಿ ಬರಲಿದೆ ನೋಡು, ನಮ್ಮ ನಾಡು’ ಎಂಬ ಸಾಲನ್ನು ಭಾಷಣದ ಆರಂಭದಲ್ಲೇ ಉಲ್ಲೇಖಿಸಿದ ಬೊಮ್ಮಾಯಿ, ಜನಕೇಂದ್ರಿತ ಅಭಿವೃದ್ಧಿಯ ಆಶಯಗಳು ಬಜೆಟ್‌ನಲ್ಲಿ ಪ್ರತಿಬಿಂಬವಾಗುವಂತೆ ನೋಡಿಕೊಳ್ಳಲು ಸಾಕಷ್ಟು ಕಸರತ್ತು ನಡೆಸಿದ್ದಾರೆ. ‘ದುರ್ಬಲ ವರ್ಗದವರನ್ನು ಪರಾವಲಂಬಿಗಳಾಗಿ ಮಾಡದೇ ಅವರ ರಕ್ಷಣೆ–ಏಳಿಗೆಗೆ ಒತ್ತು ನೀಡುವ ಮುಖೇನ ಅವರು ಸ್ವಾಭಿಮಾನದ ಬದುಕು ನಡೆಸಲು ಶಿಕ್ಷಣ, ಉದ್ಯೋಗ ಹಾಗೂ ಸಬಲೀಕರಣದ ಕಾರ್ಯಕ್ರಮಗಳನ್ನು ರೂಪಿಸುವುದು’ ತಮ್ಮ ಸಂಕಲ್ಪ ಎಂದು ಹೇಳಿಕೊಂಡಿದ್ದಾರೆ. ಬಜೆಟ್‌ನ ಪುಟಗಳುದ್ದಕ್ಕೂ ಈ ಆಶಯಗಳು ಕಾಣಿಸುತ್ತಿವೆ.

ಪರಿಶಿಷ್ಟರು, ಮಹಿಳೆಯರು, ಹಿಂದುಳಿದವರ ಚೈತನ್ಯ ಹೆಚ್ಚಿಸುವ ಹತ್ತಾರು ಕಾರ್ಯಕ್ರಮಗಳನ್ನು ಹೆಣೆದಿರುವ ಅವರು, ಬಿಜೆಪಿಯು ಪ್ರಬಲ ಜಾತಿಗಳ ಪರವಾದ ಪಕ್ಷ ಎಂಬ ಅಪವಾದದ ಮುಸುಕು ಸರಿಸುವ ಪ್ರಯತ್ನವನ್ನೂ ನಡೆಸಿದ್ದಾರೆ.

ಅಬಕಾರಿ, ಇಂಧನ, ನೋಂದಣಿ ಮತ್ತು ಮುದ್ರಾಂಕ ಕ್ಷೇತ್ರದಲ್ಲಿ ತೆರಿಗೆಯ ಬರೆ ಎಳೆಯುವ ಕೆಲಸ ಮಾಡದೆ, ಕೊರೊನಾ ತಂದಿತ್ತ ಸಂಕಷ್ಟದಿಂದ ಬಸವಳಿದವರಲ್ಲಿ ಭರವಸೆ ತುಂಬಿಸುವ ಕಿರು ಪ್ರಯತ್ನದ ಝಲಕ್‌ ಬಜೆಟ್‌ನಲ್ಲಿದೆ. ಮಹಿಳಾ ಸ್ವಸಹಾಯ ಸಂಘಗಳ ಉತ್ಪನ್ನಗಳ ಬ್ರಾಂಡಿಂಗ್‌ಗೂ ಒತ್ತು ನೀಡಿದ್ದಾರೆ. ಅಂಗನವಾಡಿ, ಆಶಾ ಕಾರ್ಯಕರ್ತೆಯರು, ಪೌರಕಾರ್ಮಿಕರು, ಗ್ರಾಮ ಸಹಾಯಕರ ಗೌರವಧನ ಹೆಚ್ಚಳ, ನೇಕಾರರು, ಅವಿವಾಹಿತ ಮಹಿಳೆಯರು, ಲಿಂಗತ್ವ ಅಲ್ಪಸಂಖ್ಯಾತರಿಗೆ ನೆರವಿಗೂ ನಿಂತಿದ್ದಾರೆ.

ಆಡಳಿತಾತ್ಮಕ ವೆಚ್ಚ ಕಡಿಮೆ ಮಾಡಿ ಅಭಿವೃದ್ಧಿ ಹಾಗೂ ಕಲ್ಯಾಣ ಕಾರ್ಯಕ್ರಮಗಳಿಗೆ ಅನುದಾನ ಒದಗಿಸಿಕೊಳ್ಳಲು ಬೇಕಾಗಿದ್ದಆರ್ಥಿಕ ಕ್ರಮಗಳತ್ತ ದೃಷ್ಟಿ ಹರಿಸಿಲ್ಲ.

ತೆರಿಗೆ ಸಂಗ್ರಹ ಮಾಡುವ ಎಲ್ಲ ಇಲಾಖೆಗಳಲ್ಲಿ ಹೆಚ್ಚಿನ ದಕ್ಷತೆ ತರುವುದಾಗಿ ಹೇಳಿದ್ದಾರಾದರೂ ಅದು ಅನುಷ್ಠಾನವಾಗುವ ಬಗೆಯ ವಿವರವನ್ನೇ ನೀಡಿಲ್ಲ. ಬಜೆಟ್‌ನಲ್ಲಿ ಆಕರ್ಷಕ ಘೋಷಣೆಗಳಿದ್ದರೂ ಅದಕ್ಕೆ ಅಗತ್ಯವಾದ ಅನುದಾನದ ಹಂಚಿಕೆಯನ್ನೇ ಮಾಡಿಲ್ಲ. ಸಾಲದ ಮೇಲೆಯೇ ಕಣ್ಣಿಟ್ಟು ಭರವಸೆಯ ಬಣ್ಣದ ಗೋಪುರವನ್ನೇ ತೋರಿಸಿದ್ದಾರೆ. ಮುಂದಿನ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಸಾಲ ಮಾಡಿಯೇ ಎಲ್ಲರನ್ನೂ ಓಲೈಸುವ, ಪಕ್ಷದ ಕಡೆಗೆ ಸೆಳೆಯುವ ಕಸರತ್ತನ್ನೂ ಮಾಡಿದ್ದಾರೆ.

‘ನವ ಕರ್ನಾಟಕದ ಮೂಲಕ ನವಭಾರತ ನಿರ್ಮಾಣ’ ಎಂದು ಮುಖ್ಯಮಂತ್ರಿಯವರು ಹೇಳಿಕೊಂಡರೂ ಅದಕ್ಕೆ ಅಗತ್ಯವಾದ ಹೆದ್ದಾರಿ ಹೋಗಲಿ, ಕಿರುದಾರಿಯೂ ಕಾಣಿಸುವುದಿಲ್ಲ.

₹5.18 ಲಕ್ಷ ಕೋಟಿ ಸಾಲ: ಸಂಪನ್ಮೂಲದ ಕೊರತೆ ತುಂಬಲು ₹ 72,000 ಕೋಟಿ ಸಾಲ ಪಡೆಯುವುದಾಗಿ ಬೊಮ್ಮಾಯಿ ಹೇಳಿದ್ದಾರೆ. ರಾಜಸ್ವ ಕೊರತೆಯು ₹14,699 ಕೋಟಿಗಳೆಂದು ಅಂದಾಜು ಮಾಡಲಾಗಿದ್ದು, ವಿತ್ತೀಯ ಕೊರತೆ ₹61,564 ಕೋಟಿ ಆಗಲಿದೆ ಎಂದು ನಿರೀಕ್ಷಿಸಲಾಗಿದೆ. ಅದು ರಾಜ್ಯದ ಆಂತರಿಕ ಉತ್ಪನ್ನದ ಶೇ 3.26ರಷ್ಟು ಆಗಲಿದೆ. 2022–23ರ ಕೊನೆಯಲ್ಲಿ ₹5,18,366 ಕೋಟಿಗಳ ಒಟ್ಟು ಹೊಣೆಗಾರಿಕೆಗಳು (ರಾಜ್ಯದ ಒಟ್ಟು ಸಾಲ) ರಾಜ್ಯದ ಆಂತರಿಕ ಉತ್ಪನ್ನದ ಶೇ 27.49ರಷ್ಟು ಆಗಲಿದೆ ಎಂದು ಅಂದಾಜಿಸಲಾಗಿದೆ. ಇದಕ್ಕಾಗಿ ಕರ್ನಾಟಕ ವಿತ್ತೀಯ ಹೊಣೆಗಾರಿಕೆ ಕಾಯ್ದೆ–2002ಕ್ಕೆ ತಿದ್ದುಪಡಿ ತರುವುದಾಗಿಯೂ ಹೇಳಿಕೊಂಡಿದ್ದಾರೆ.

ದೇವಾಲಯಗಳನ್ನು ಸರ್ಕಾರದ ನಿಯಂತ್ರಣದಿಂದ ಮುಕ್ತಗೊಳಿಸಬೇಕು ಎಂಬ ಕೂಗಿಗೂ ಕಿವಿಗೊಟ್ಟಿರುವ ಅವರು, ಪುಣ್ಯಕೋಟಿ ಗೋದತ್ತು ಯೋಜನೆ, ಗೋಮಾತಾ ಸಹಕಾರ ಸಂಘದ ಸ್ಥಾಪಿಸುವುದಾಗಿ ಘೋಷಿಸುವ ಮೂಲಕ ‘ಸಂಘ’ ನಿಷ್ಠೆಯನ್ನೂ ಪ್ರದರ್ಶಿಸಿದ್ದಾರೆ. ದೆಹಲಿ ಸರ್ಕಾರದ ಮೊಹಲ್ಲಾ ಕ್ಲಿನಿಕ್‌ಗಳ ಮಾದರಿಯಲ್ಲೇ ರಾಜ್ಯದಲ್ಲಿ ‘ನಮ್ಮ ಕ್ಲಿನಿಕ್‌’ಗಳ ಸ್ಥಾಪನೆಗೆ ಹೆಜ್ಜೆ ಇಟ್ಟಿದ್ದಾರೆ.

ಅಭಿವೃದ್ಧಿ ಆಕಾಂಕ್ಷಿ ತಾಲ್ಲೂಕುಗಳಿಗೆ ₹3 ಸಾವಿರ ಕೋಟಿ, ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಗೆ ₹3 ಸಾವಿರ ಕೋಟಿ ಅನುದಾನ ಘೋಷಿಸಲಾಗಿದ್ದು, ಕಲ್ಯಾಣ ಕರ್ನಾಟಕ ಹಾಗೂ ಕಿತ್ತೂರು ಕರ್ನಾಟಕದ ಜಿಲ್ಲೆಗಳು ಹಿಂದುಳಿದಿವೆ ಎಂಬ ಕಳಂಕ ತೊಳೆಯುವ ಪ್ರಯತ್ನ ಬಜೆಟ್‌ನಲ್ಲಿ ಇದೆ.

ನಾರಾಯಣಗುರುಗಳ ಸ್ತಬ್ಧಚಿತ್ರ ವಿವಾದದಿಂದಾಗಿ ಮುನಿಸಿಕೊಂಡಿರುವ ಈಡಿಗ ಸಮುದಾಯವನ್ನು ಸಮಾಧಾನಪಡಿಸುವ ಪ್ರಯತ್ನವನ್ನೂ ಬೊಮ್ಮಾಯಿ ಮಾಡಿದ್ದಾರೆ. ನಾರಾಯಣಗುರುಗಳ ಸ್ಮರಣಾರ್ಥ ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ ಹಾಗೂ ಶಿವಮೊಗ್ಗ ಜಿಲ್ಲೆಗಳಲ್ಲಿ ತಲಾ ಒಂದು ನಾರಾಯಣಗುರು ವಸತಿ ಶಾಲೆ ಪ್ರಾರಂಭಿಸುವ ಘೋಷಣೆ ಮಾಡಿದ್ದಾರೆ.

ತೆರಿಗೆ ಬರೆ ಹಾಕದ ನಡೆ
ಕೋವಿಡ್‌ನಿಂದಾಗಿ ಸಂಕಷ್ಟಕ್ಕೆ ಸಿಲುಕಿರುವ ಜನಸಮುದಾಯಕ್ಕೆ ಬಜೆಟ್‌ನಲ್ಲಿ ಯಾವುದೇ ತೆರಿಗೆಯ ಹೊರೆ ಹಾಕಿಲ್ಲ.

ರಾಜ್ಯದ ಆರ್ಥಿಕತೆ ಚೇತರಿಕೆಯ ಹಾದಿಯಲ್ಲಿದ್ದು, ಇಂತಹ ಸನ್ನಿವೇಶದಲ್ಲಿ ಜನಸಾಮಾನ್ಯರ ಮೇಲೆ ಇನ್ನಷ್ಟು ತೆರಿಗೆ ಹಾಕುವುದಿಲ್ಲ ಎಂದು ಹೇಳಿರುವ ಮುಖ್ಯಮಂತ್ರಿ, ತೆರಿಗೆ ಸಂಗ್ರಹ ಮಾಡುವ ಎಲ್ಲ ಇಲಾಖೆಗಳಲ್ಲಿ ಹೆಚ್ಚಿನ ದಕ್ಷತೆ ತರುವ ಮೂಲಕ ಸಂಪನ್ಮೂಲ ಸಂಗ್ರಹಣಾ ಗುರಿ ಸಾಧಿಸಲಾಗುವುದು ಎಂದಿದ್ದಾರೆ.

ಮಠಗಳಿಗಿಲ್ಲ ಕಾಸು
ವಿವಿಧ ಜಾತಿಯ ಮಠಗಳಿಗೆ ಬಜೆಟ್‌ನಲ್ಲಿ ಅನುದಾನ ಹಂಚಿಕೆ ಮಾಡಿ, ಓಲೈಸುವ ಚಾಳಿಯನ್ನು ಬೊಮ್ಮಾಯಿ ಈ ಬಾರಿ ಕೈಬಿಟ್ಟಿದ್ದಾರೆ.

ಆದರೆ, ಸಾಮಾಜಿಕ ಮತ್ತು ಶೈಕ್ಷಣಿಕ ಕ್ಷೇತ್ರದಲ್ಲಿ ಕೊಡುಗೆ ನೀಡಿರುವ ಪರಿಶಿಷ್ಟ ಜಾತಿ ಮತ್ತು ಪಂಗಡದ ಸಮುದಾಯಗಳ ಮಠಗಳು ಹಾಗೂ ಸಂಸ್ಥೆಗಳ ಅಭಿವೃದ್ಧಿಗೆ ನೆರವು ನೀಡುವುದಾಗಿ ಪ್ರಕಟಿಸಿದ್ದಾರೆ. ದೇವಸ್ಥಾನಗಳಿಗೆ, ಕೆಲವು ಜಾತಿಗಳನ್ನು ಸಮಾಧಾನಪಡಿಸಲು ಮುಂದಾಗಿದ್ದಾರೆ.

ವೀರಶೈವ ಅಭಿವೃದ್ಧಿ ನಿಗಮ ಹಾಗೂ ಒಕ್ಕಲಿಗರ ಅಭಿವೃದ್ಧಿ ನಿಗಮಕ್ಕೆ ತಲಾ ₹100 ಕೋಟಿ, ಮರಾಠ ಅಭಿವೃದ್ಧಿ ನಿಗಮಕ್ಕೆ ₹50 ಕೋಟಿ, ಕೊಡವರ ಅಭಿವೃದ್ಧಿಗಾಗಿ ₹10 ಕೋಟಿ ಪ್ರಕಟಿಸಿದ್ದಾರೆ. ಹಿಂದುಳಿದ ಹಾಗೂ ಅತಿ ಹಿಂದುಳಿದ ಸಮುದಾಯಗಳಾದ ತಿಗಳ, ಮಾಳಿ, ಮಾಳಿ ಮಾಲಗಾರ, ಕುಂಬಾರ, ಯಾದವ, ದೇವಾಡಿಗ, ಸಿಂಪಿ, ಕ್ಷತ್ರಿಯ, ಮೇದಾರ, ಕುಂಚಿ, ಕುರ್ಮ, ಪಿಂಜಾರ/ನದಾಫ್‌, ಕುರುಬ, ಬಲಿಜ, ಈಡಿಗ, ಹಡಪದ ಹಾಗೂ ಇತರ ಸಮುದಾಯಗಳಿಗೆ ₹400 ಕೋಟಿ ಮೀಸಲಿಟ್ಟಿದ್ದಾರೆ. ಕ್ರೈಸ್ತರ ಅಭಿವೃದ್ಧಿಗೆ ₹50 ಕೋಟಿ, ಜೈನ್‌, ಸಿಖ್‌ ಹಾಗೂ ಬೌದ್ಧ ಸಮುದಾಯಗಳಿಗೆ ₹50 ಕೋಟಿ ಒದಗಿಸಿದ್ದಾರೆ. ಮುಸ್ಲಿಂ ಸಮುದಾಯದ ಹೆಸರು ಬಜೆಟ್‌ನಲ್ಲಿ ಇಲ್ಲವೇ ಇಲ್ಲ.

ಉದ್ದಿಮೆಗಳ ಖಾಸಗೀಕರಣ
ಸಾರ್ವಜನಿಕ ಉದ್ದಿಮೆಗಳನ್ನು ಖಾಸಗೀಕರಣ ಮಾಡುವ ಪ್ರಸ್ತಾಪವನ್ನು ಬೊಮ್ಮಾಯಿ ಬಜೆಟ್‌ನಲ್ಲಿ ಮಾಡಿದ್ದಾರೆ.

ಸರ್ಕಾರಿ ಉದ್ದಿಮೆಗಳಲ್ಲಿ ಖಾಸಗಿ ಬಂಡವಾಳ ಹೂಡಿಕೆಯನ್ನು ಉತ್ತೇಜಿಸಿ, ಲಾಭದಾಯಕತೆ ಹಾಗೂ ಕಾರ್ಯದಕ್ಷತೆ ಹೆಚ್ಚಿಸುವ ಭರವಸೆ ನೀಡಿರುವ ಅವರು, ‘ಎರಡು ಸರ್ಕಾರಿ ಉದ್ದಿಮೆಗಳಲ್ಲಿ ಬಂಡವಾಳ ಹಿಂತೆಗೆಯುವಿಕೆ ಪ್ರಕ್ರಿಯೆ ಪ್ರಾರಂಭಿಸುವ’ ಎಂದು ಘೋಷಣೆ ಮಾಡಿದ್ದಾರೆ.

ಪ್ರಮುಖ ಘೋಷಣೆಗಳು

* ಕರಾವಳಿ, ಮಲೆನಾಡಿನಲ್ಲಿ ನಾರಾಯಣಗುರುಗಳ ವಸತಿ ಶಾಲೆ

* ಕೃಷಿ ಯಂತ್ರೋಪಕರಣ ಉತ್ತೇಜನಕ್ಕೆ ‘ರೈತ ಶಕ್ತಿ’ ಯೋಜನೆ

* ಹಾಲು ಉತ್ಪಾದಕರಿಗಾಗಿ ‘ಕ್ಷೀರ ಸಮೃದ್ಧಿ ಸಹಕಾರಿ ಬ್ಯಾಂಕ್‌’

* ಮೇಕೆದಾಟು ಯೋಜನೆಗೆ ₹1 ಸಾವಿರ ಕೋಟಿ ಅನುದಾನ

* ರಾಜ್ಯದ ಪ್ರಮುಖ ನಗರಗಳಲ್ಲಿ 438 ‘ನಮ್ಮ ಕ್ಲಿನಿಕ್‌’

* ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಚಿತ ಕೋಚಿಂಗ್‌ಗಾಗಿ ‘ಮುಖ್ಯಮಂತ್ರಿ ವಿದ್ಯಾರ್ಥಿ ಮಾರ್ಗದರ್ಶಿನಿ’

* ಅಸ್ಪೃಶ್ಯತೆ ನಿವಾರಣೆಗೆ ‘ವಿನಯ ಸಾಮರಸ್ಯ ಯೋಜನೆ’ ಜಾರಿ

* ಹಿಂದುಳಿದ ವರ್ಗದವರ ಕೌಶಲ ತರಬೇತಿಗೆ ‘ಅಮೃತ ಮುನ್ನಡೆ’

* ಜೀವನೋಪಾಯ ವರ್ಷ’ ಅಭಿಯಾನಕ್ಕೆ ₹1100 ಕೋಟಿ

* ಎಸ್‌ಸಿಎಸ್ಟಿ ವಿದ್ಯಾರ್ಥಿಗಳಿಗಾಗಿ 100 ಅಂಬೇಡ್ಕರ್‌ ವಸತಿ ನಿಲಯ

* ಅಭಿವೃದ್ಧಿ ಆಕಾಂಕ್ಷಿ ತಾಲ್ಲೂಕುಗಳ ಸರ್ವಾಂಗೀಣ ಅಭಿವೃದ್ಧಿಗೆ ₹3,000 ಕೋಟಿ ಮೀಸಲು

**

ಬಜೆಟ್ ನಾಡಿನ ಜನರ ಭವಿಷ್ಯದ ಮುನ್ಸೂಚನೆ ಯಂತಿರಬೇಕು. ಬೊಮ್ಮಾಯಿ ಮಂಡಿಸಿರುವುದು ಅತ್ಯಂತ ನಿರಾಶಾದಾಯಕ, ದೂರದೃಷ್ಟಿ ಇಲ್ಲದ ಬಡಾಯಿ ಬಜೆಟ್. ಅಭಿವೃದ್ಧಿಯ ಮುನ್ನೋಟವೇ ಇಲ್ಲ. ಬಿಜೆಪಿಯವರ ಮಾತುಗಳಿಗೇ ಈ ಬಜೆಟ್ ವಿರುದ್ಧವಾಗಿದೆ.
-ಸಿದ್ದರಾಮಯ್ಯ, ವಿಧಾನಸಭೆ ವಿರೋಧ ಪಕ್ಷದ ನಾಯಕ

**

ಉಪ್ಪು ಉಳಿ ಖಾರ ಇಲ್ಲದ, ಯಾರದ್ದೋ ಒತ್ತಡದಿಂದ ಓದಿದ ಸತ್ವಹೀನ ಬಜೆಟ್. ಕೇವಲ ಅಂಕಿ ಅಂಶಗಳನ್ನು ಮುಂದಿಟ್ಟುಕೊಂಡ ಅಲಂಕಾರಿಕ ಬಜೆಟ್. ಎಲ್ಲಾ ವಲಯಗ ಳನ್ನೂ ಮಿಶ್ರಣ ಮಾಡಿ ಗ್ರೈಂಡರ್‌ನಲ್ಲಿ ಹಾಕಿ ರುಬ್ಬಿದ ಹಾಗಿದೆ.
-ಎಚ್‌.ಡಿ. ಕುಮಾರಸ್ವಾಮಿ, ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ

ಇವನ್ನೂ ಓದಿ

Karnataka Budget: ಬೊಮ್ಮಾಯಿ ಬಜೆಟ್‌ನಲ್ಲಿ ಏನೇನಿದೆ? ಇಲ್ಲಿವೆ ಮುಖ್ಯಾಂಶಗಳು
ರಾಜ್ಯ ಬಜೆಟ್: ನವ ಭಾರತಕ್ಕಾಗಿ ನವಕರ್ನಾಟಕ: ರಾಜ್ಯ ಅಭಿವೃದ್ಧಿಗೆ ಪಂಚಸೂತ್ರಗಳು
ಕರ್ನಾಟಕ ಬಜೆಟ್–2022 | ನೀರಾವರಿಗೆ ಆದ್ಯತೆ; ಎತ್ತಿನಹೊಳೆ ಯೋಜನೆಗೆ 3 ಸಾವಿರ ಕೋಟಿ
Karnataka Budget: ಮೇಕೆದಾಟು ಯೋಜನೆಗೆ ₹1,000 ಕೋಟಿ ಮೀಸಲು–ಬೊಮ್ಮಾಯಿ
Karnataka Budget 2022: ಬೆಂಗಳೂರಿಗೆ ಏನೇನು?
ಬೊಮ್ಮಾಯಿ ಬಜೆಟ್‌: ಕೃಷಿ ಕ್ಷೇತ್ರಕ್ಕೇನು ಕೊಡುಗೆ? ಇಲ್ಲಿದೆ ವಿವರ
ಕರ್ನಾಟಕ ಬಜೆಟ್–2022: ಯಾವ ವಲಯಕ್ಕೆ ಎಷ್ಟು ಅನುದಾನ?
Karnataka Budget: ಯಕ್ಷಗಾನ ಸಮ್ಮೇಳನ, ಕಾಸರಗೋಡು, ಗೋವಾದಲ್ಲಿ ಕನ್ನಡ ಭವನ ಘೋಷಣೆ
Karnataka Budget: ಆರೋಗ್ಯ ಕ್ಷೇತ್ರಕ್ಕೆ ಸಿಕ್ಕಿದ್ದೇನು?
ಬಜೆಟ್ ಪ್ರತಿ ಹಿಡಿದು ಮಿಂಚಿದ ಸಿಎಂ ಬೊಮ್ಮಾಯಿ
ಕರ್ನಾಟಕ ಬಜೆಟ್–2022: ತೆರಿಗೆ ದರದಲ್ಲಿ ಯಥಾಸ್ಥಿತಿ –ಸಿಎಂ ಬೊಮ್ಮಾಯಿ





ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT