ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರ್ನಾಟಕ ಬಜೆಟ್ ವಿಶ್ಲೇಷಣೆ | ಕುಸಿದ ಬೆಳವಣಿಗೆ: ಕಿಸೆಗೆ ಹೊರೆ

Last Updated 18 ಫೆಬ್ರುವರಿ 2023, 4:08 IST
ಅಕ್ಷರ ಗಾತ್ರ

ವಿವಿಧ ವಲಯಗಳಲ್ಲಿನ ಮೌಲ್ಯವರ್ಧನೆ ಕುಸಿದಿರುವುದರಿಂದಾಗಿ ಶ್ರೀಸಾಮಾನ್ಯರ ಜೇಬಿಗೆ ಹೆಚ್ಚಿನ ಹೊರೆ ಬಿದ್ದಿರುವುದನ್ನು ಬಜೆಟ್‌ನ ಪೂರಕ ದಾಖಲೆಗಳು ಹೇಳಿವೆ.

ಡಬಲ್ ಎಂಜಿನ್‌ನಿಂದ ರಾಜ್ಯದ ಪ್ರಗತಿಗೆ ನಾಗಾಲೋಟ ಸಿಕ್ಕಿದೆ ಹಾಗೂ ರಾಜಸ್ವ ಸಂಗ್ರಹ ಭರ್ಜರಿ ದಾಖಲೆ ಸೃಷ್ಟಿಸಿದೆ ಎಂದು ಸರ್ಕಾರ ಹೇಳುತ್ತಿದೆ. ಶುಕ್ರವಾರ ವಿಧಾನಸಭೆಯಲ್ಲಿ ಮಂಡಿಸಿದ ಮಧ್ಯಮಾವಧಿ ವಿತ್ತೀಯ ಯೋಜನೆ– 2023–27ರ ಅಂಕಿ ಅಂಶಗಳನ್ನು ಮುಂದಿಟ್ಟು, ಜನರ ಆರ್ಥಿಕ ಹೊರೆಯನ್ನು ವಿಶ್ಲೇಷಿಸಿದರೆ, ಹೊರೆ ಹೆಚ್ಚಾಗಿರುವ ಲೆಕ್ಕ ಸಿಗುತ್ತದೆ.

ರಾಜ್ಯದ ಒಟ್ಟು ಆಂತರಿಕ ಉತ್ಪನ್ನಕ್ಕೆ(ಜಿಎಸ್‌ಡಿಪಿ) ಪ್ರಮುಖ ಕೊಡುಗೆ ನೀಡುವುದು ಕೃಷಿ, ಕೈಗಾರಿಕೆ, ಸೇವಾ ವಲಯದ ಉತ್ಪಾದನೆ ಮತ್ತು ವ್ಯವಹಾರ. ಈ ಕ್ಷೇತ್ರದಲ್ಲಿ ಬೆಳವಣಿಗೆಯಾದರಷ್ಟೇ ಜನರ ಆದಾಯವೂ ಹೆಚ್ಚುತ್ತದೆ. 2019ರ ಈಚೆಗೆ ಈ ಮೂರು ವಲಯಗಳ ಮೌಲ್ಯವರ್ಧನೆ ಕುಸಿತದ ಕಡೆಗೆ ಸಾಗಿದೆ. 2019ರಲ್ಲಿ ಕೃಷಿ ವಲಯದಲ್ಲಿ ಶೇ 18.1ರಷ್ಟು ಮೌಲ್ಯವರ್ಧನೆಯಾಗಿದ್ದರೆ, ನಂತರದ ವರ್ಷಗಳಲ್ಲಿ ಶೇ 15.2, ಶೇ 8.7 ಇಳಿಕೆಯಾಗಿತ್ತು. 2022ರಲ್ಲಿ ಇದು ಶೇ 5.5ಕ್ಕೆ ಕುಸಿಯಲಿದೆ ಎಂದು ಅಂದಾಜಿಸಲಾಗಿದೆ.

ಋಣಾತ್ಮಕ ಹಾದಿಯಲ್ಲಿದ್ದ ಕೈಗಾರಿಕೆ ಮತ್ತು ಸೇವಾವಲಯಗಳು 2021ರಲ್ಲಿ ಶೇ 10.3ಕ್ಕೆ ಏರಿಕೆಯಾಗಿದ್ದವು. 2022ರಲ್ಲಿ ಕೈಗಾರಿಕೆ ಮೌಲ್ಯವರ್ಧನೆ ಶೇ 5.1ಕ್ಕೆ ಸೇವಾವಲಯ ಶೇ 9.2ಕ್ಕೆ ಕುಸಿದಿದೆ.

ಇದೇ ಹೊತ್ತಿಗೆ ತೆರಿಗೆ ಸಂಗ್ರಹದ ಪ್ರಮಾಣ ಶೇ 17ರಷ್ಟು ಹೆಚ್ಚಳವಾಗಿದೆ ಎಂದು ಸರ್ಕಾರ ಸಂಭ್ರಮದಿಂದ ಹೇಳಿಕೊಂಡಿದೆ. ತೆರಿಗೆ ಸಂಗ್ರಹ ಹೆಚ್ಚಾಗುವುದೆಂದರೆ ಜನರ ಜೇಬಿಗೆ ಹೆಚ್ಚಿನ ಹೊರೆ, ತಿಂಗಳ ವೆಚ್ಚ ಹೆಚ್ಚಾಗುವುದು ಎಂಬುದನ್ನು ಹೇಳಲು ವಿಶೇಷ ಪರಿಣತಿ ಬೇಕಿಲ್ಲ. ಮೌಲ್ಯವರ್ಧನೆಯೂ ಹೆಚ್ಚಾಗಿ, ಅದಕ್ಕೆ ಅಲ್ಪ ಪ್ರಮಾಣದಲ್ಲಿ ತೆರಿಗೆ ಹೆಚ್ಚಾದರೆ ಜನರ ಖರ್ಚಿಗೆ ದುಡ್ಡು ಉಳಿಯತ್ತದೆ. ಮೌಲ್ಯವರ್ಧನೆ ಕುಸಿದರೆ, ತಿಂಗಳ ವೆಚ್ಚದ ಮೇಲೆ ಹೊರೆಯಾಗುತ್ತದೆ.

ಸಣ್ಣ ಉದಾಹರಣೆ ಮೂಲಕ ಇದನ್ನು ಹೇಳುವುದಾದರೆ, ಒಬ್ಬ ರೈತ ತಿಂಗಳಿಗೆ 2021ರಲ್ಲಿ ₹100 ಸಂಪಾದಿಸುತ್ತಿದ್ದ ಎಂದಿಟ್ಟುಕೊಂಡರೆ ಕೃಷಿ ವಲಯದ ಮೌಲ್ಯವರ್ಧನೆ ಶೇ 5.5ರಷ್ಟು ಹೆಚ್ಚಳವಾದಲ್ಲಿ ಆದಾಯ ₹105.50ಕ್ಕೆ ಏರುತ್ತದೆ. ಹಣದುಬ್ಬರದ ಪ್ರಮಾಣ ಶೇ 6ರಷ್ಟು ಎಂದು ಕೊಂಡರೂ ₹100ರ ಮೌಲ್ಯ ₹98.93ರಷ್ಟಾಗುತ್ತದೆ. ₹100ಕ್ಕೆ ಶೇ 17ರಷ್ಟು ಅಂದರೆ ₹17 ಪರೋಕ್ಷ ತೆರಿಗೆ ರೂಪದಲ್ಲಿ ಕಡಿತವಾದರೆ ಆತನಿಗೆ ಉಳಿಯುವುದು ಕೇವಲ ₹82 ಮಾತ್ರ. ಇದು ಸದ್ಯದ ಪರಿಸ್ಥಿತಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT