ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಡಿಯೂರಪ್ಪ ಬಜೆಟ್‌ಗೆ ಮಿಶ್ರ ಪ್ರತಿಕ್ರಿಯೆ

Last Updated 5 ಮಾರ್ಚ್ 2020, 19:30 IST
ಅಕ್ಷರ ಗಾತ್ರ

ಬೆಳಗಾವಿ: ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಮಂಡಿಸಿದ 2020–21ನೇ ಸಾಲಿನ ಬಜೆಟ್‌ಗೆ ಬೆಳಗಾವಿ ಜಿಲ್ಲೆಯಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಬಹು ನಿರೀಕ್ಷಿತ ಮಹದಾಯಿ ಯೋಜನೆ ಅನುಷ್ಠಾನಕ್ಕೆ ₹ 500 ಕೋಟಿ ಅನುದಾನ ನೀಡಿರುವುದು ಹಾಗೂ ಬೆಳಗಾವಿ– ಕಿತ್ತೂರು – ಧಾರವಾಡ ರೈಲು ಮಾರ್ಗ ನಿರ್ಮಾಣಕ್ಕೆ ಜಮೀನು ನೀಡಿರುವುದನ್ನು ಬಹುತೇಕರು ಮುಕ್ತ ಕಂಠದಿಂದ ಸ್ವಾಗತಿಸಿದ್ದರೆ, ಪ್ರವಾಹ ಪೀಡಿತರಿಗೆ ವಿಶೇಷ ಪ್ಯಾಕೇಜ್‌ ಹಾಗೂ ಜಿಲ್ಲಾ ವಿಭಜನೆ ಬಗ್ಗೆ ಪ್ರಸ್ತಾಪಿಸದಿರುವುದಕ್ಕೆ ಕೆಲವರು ಅಸಮಾಧಾನವನ್ನೂ ವ್ಯಕ್ತಪಡಿಸಿದ್ದಾರೆ.

ಮಹದಾಯಿ ಯೋಜನೆ ಚುರುಕು:

ಬೆಳಗಾವಿಯೂ ಸೇರಿದಂತೆ ಉತ್ತರ ಕರ್ನಾಟಕದ ನಾಲ್ಕು ಜಿಲ್ಲೆಗಳ ಜನರಿಗೆ ಕುಡಿಯುವ ನೀರು ಪೂರೈಸುವ ಮಹತ್ವದ ಯೋಜನೆಯಾದ ಮಹದಾಯಿ ಯೋಜನೆ ಅನುಷ್ಠಾನಗೊಳಿಸಲು ₹ 500 ಕೋಟಿ ಅನುದಾನ ನೀಡುವ ಮೂಲಕ ಮುಖ್ಯಮಂತ್ರಿಯವರು ಬದ್ಧತೆ ಪ್ರದರ್ಶಿಸಿದ್ದಾರೆ.

ಇದರಿಂದಾಗಿ ಮುಂಬರುವ ದಿನಗಳಲ್ಲಿ ಕಾಮಗಾರಿಯ ಕೆಲಸಗಳು ಚುರುಕು ಪಡೆಯಲಿವೆ. ಜಿಲ್ಲೆಯವರಾದ ರಮೇಶ ಜಾರಕಿಹೊಳಿ ಜಲಸಂಪನ್ಮೂಲ ಸಚಿವರಾಗಿದ್ದರಿಂದ ಇನ್ನಷ್ಟು ವೇಗ ಸಿಗಲಿದೆ. ಈ ಯೋಜನೆ ಅನುಷ್ಠಾನಗೊಂಡರೆ, ಖಾನಾಪುರ, ಬೈಲಹೊಂಗಲ, ಸವದತ್ತಿ ಹಾಗೂ ರಾಮದುರ್ಗ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನೀರಿನ ಸಮಸ್ಯೆ ಬಗೆಹರಿಯಲಿದೆ. ಮುಂಬರುವ ದಿನಗಳಲ್ಲಿ ಈ ಪ್ರದೇಶಗಳ ಚಿತ್ರಣವೇ ಬದಲಾಗಲಿದೆ ಎನ್ನುತ್ತಾರೆ ಸ್ಥಳೀಯರು.

ಸಾಕಾರಗೊಳ್ಳಲಿರುವ ಕಿತ್ತೂರು ರೈಲು:

ಕಿತ್ತೂರು ಮಾರ್ಗವಾಗಿ ಬೆಳಗಾವಿ– ಧಾರವಾಡ ರೈಲು ಮಾರ್ಗ ನಿರ್ಮಾಣ ಮಾಡಬೇಕೆನ್ನುವುದು ಬಹಳ ವರ್ಷಗಳ ಬೇಡಿಕೆಯಾಗಿತ್ತು. ಇದಕ್ಕೆ ಪೂರಕವಾಗಿ, ರೈಲ್ವೆ ಖಾತೆಯ ರಾಜ್ಯ ಸಚಿವರಾಗಿರುವ ಸುರೇಶ ಅಂಗಡಿಯವರ ಪ್ರಯತ್ನದಿಂದ ಇತ್ತೀಚೆಗೆ ಈ ಮಾರ್ಗಕ್ಕೆ ಕೇಂದ್ರ ಸರ್ಕಾರದ ಒಪ್ಪಿಗೆ ಕೂಡ ಸಿಕ್ಕಿತ್ತು. ಈ ಹಿನ್ನೆಲೆಯಲ್ಲಿ ಯೋಜನೆಗೆ ಅಗತ್ಯವಾದ ಜಮೀನನ್ನು ಉಚಿತವಾಗಿ ನೀಡಲು ಹಾಗೂ ಯೋಜನಾ ವೆಚ್ಚದ ಶೇ 50ರಷ್ಟು ಪಾಲು ಭರಿಸಲು ಯಡಿಯೂರಪ್ಪ ಪ್ರಕಟಿಸಿದ್ದನ್ನು ಜಿಲ್ಲೆಯ ಜನತೆ ಮುಕ್ತ ಕಂಠದಿಂದ ಸ್ವಾಗತಿಸಿದ್ದಾರೆ.

ಈ ಯೋಜನೆ ಸಾಕಾರಗೊಂಡರೆ ಬೆಳಗಾವಿ ಹಾಗೂ ಧಾರವಾಡ ನಡುವೆ ಸಂಚರಿಸುವ ರೈಲುಗಳಿಗೆ ಸಾಕಷ್ಟು ಅನುಕೂಲವಾಗಲಿದೆ. 121 ಕಿ.ಮೀ (ಲೋಂಡಾ ಮಾರ್ಗ) ಉದ್ದದ ಮಾರ್ಗವು 73 ಕಿ.ಮೀ.ಗೆ ಕಡಿಮೆಯಾಗಲಿದೆ. ಎರಡೂ ನಗರಗಳ ನಡುವಿನ ವ್ಯಾಪಾರ ಬಾಂಧವ್ಯ ವೃದ್ಧಿಯಾಗಲಿದೆ. ಜನರ ಆರ್ಥಿಕ ಸ್ಥಿತಿ ಸುಧಾರಿಸಲಿದೆ. ಬೆಳೆಗಳನ್ನು ದೊಡ್ಡ ದೊಡ್ಡ ಪಟ್ಟಣಗಳಿಗೆ ಸಾಗಿಸಲು ರೈತರಿಗೆ ಅನುಕೂಲವಾಗಲಿದೆ. ಬೆಳಗಾವಿ– ಧಾರವಾಡ– ಹುಬ್ಬಳ್ಳಿ ತ್ರಿವಳಿ ನಗರದ ಅಭಿವೃದ್ಧಿಗೆ ಇದು ಮಹತ್ತರ ಪಾತ್ರ ವಹಿಸಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಸುವರ್ಣ ಸೌಧಕ್ಕೆ ಸ್ಥಳಾಂತರ:

ಸುವರ್ಣ ಸೌಧವನ್ನು ಕೇವಲ ಅಧಿವೇಶನ ನಡೆಸಲು ಮಾತ್ರ ಬಳಸಬಾರದು, ವರ್ಷವಿಡೀ ಸದ್ಬಳಕೆ ಮಾಡಬೇಕು ಎಂದು ಹಲವು ವರ್ಷಗಳಿಂದ ಸ್ಥಳೀಯರು ನಡೆಸುತ್ತಿರುವ ಹೋರಾಟಕ್ಕೆ ಕಿವಿಕೊಟ್ಟಿರುವ ಮುಖ್ಯಮಂತ್ರಿ ಅವರು, ಕೆಲವು ಇಲಾಖೆಗಳ ಕಚೇರಿಗಳನ್ನು ಸ್ಥಳಾಂತರ ಮಾಡುವುದಾಗಿ ಬಜೆಟ್‌ನಲ್ಲಿ ಹೇಳುವ ಮೂಲಕ ತಮ್ಮ ಬದ್ಧತೆ ಪ್ರದರ್ಶಿಸಿದ್ದಾರೆ.

‘ಮುಖ್ಯಮಂತ್ರಿಗಳ ಹೇಳಿಕೆ ಕೇವಲ ಕಾಗದ ಮೇಲೆ ಉಳಿಯಬಾರದು. ಕಾಟಾಚಾರಕ್ಕಾಗಿ ಪ್ರಯೋಜನಕ್ಕೆ ಬಾರದ ಕಚೇರಿಗಳನ್ನು ಸ್ಥಳಾಂತರಿಸಬಾರದು. ಮಹತ್ವದ ಇಲಾಖೆಗಳ ಕಚೇರಿಗಳು ಹಾಗೂ ಈ ಭಾಗದ ಜನರಿಗೆ ಅನುಕೂಲವಾಗುವಂತಹ ಕಚೇರಿಗಳನ್ನು ಸ್ಥಳಾಂತರಿಸಬೇಕು’ ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ತೈಲ ಬೆಲೆ ಏರಿಕೆಗೆ ಆಕ್ರೋಶ:

ಪೆಟ್ರೋಲ್‌ ಹಾಗೂ ಡೀಸೆಲ್‌ ಮೇಲಿನ ತೆರಿಗೆಯನ್ನು ಶೇ 3ರಷ್ಟು ಹೆಚ್ಚಿಸಿರುವುದಕ್ಕೆ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈಗಾಗಲೇ ಬೆಲೆ ಏರಿಕೆ ಬಿಸಿಯಿಂದ ಜನರು ತತ್ತರಿಸಿ ಹೋಗಿದ್ದಾರೆ. ಇಂತಹ ಸಂದರ್ಭದಲ್ಲಿ ತೈಲ ಬೆಲೆ ಏರಿಸಿದರೆ, ಇನ್ನುಳಿದ ಎಲ್ಲ ಪದಾರ್ಥಗಳ ಬೆಲೆಗಳು ಏರಿಕೆಯಾಗಲಿವೆ. ಬಡವರ ಮೇಲೆ ಬರೆ ಎಳೆದಂತಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಈಡೇರದ ಚಿಕ್ಕೋಡಿ ಜಿಲ್ಲೆಯ ಬೇಡಿಕೆ:

18 ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿರುವ ಬೆಳಗಾವಿ ಜಿಲ್ಲೆಯ ಭೌಗೋಳಿಕವಾಗಿಯೂ ದೊಡ್ಡ ಜಿಲ್ಲೆಯಾಗಿದೆ. ಆಡಳಿತಾತ್ಮಕ ದೃಷ್ಟಿಯಿಂದ ಇದನ್ನು ವಿಭಜಿಸಿ, ಪ್ರತ್ಯೇಕ ಚಿಕ್ಕೋಡಿ ಜಿಲ್ಲೆ ರಚಿಸಬೇಕಾಗಿತ್ತು. ಹಲವು ವರ್ಷಗಳಿಂದ ನಡೆಸುತ್ತಿರುವ ನಮ್ಮ ಹೋರಾಟಕ್ಕೆ ಸರ್ಕಾರ ಕಿವಿಗೊಟ್ಟಿಲ್ಲ ಎಂದು ಹೋರಾಟಗಾರ ಬಿ.ಆರ್‌. ಸಂಗಪ್ಪಗೋಳ ಅಸಮಾಧಾನ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT