ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಜೆಟ್ ನಿರೀಕ್ಷೆ: ಮಹಿಳೆಗೆ ಬೇಕು ಸುರಕ್ಷೆ, ಸುಧಾರಿಸಲಿ ಶಿಕ್ಷಣ ವ್ಯವಸ್ಥೆ

Last Updated 29 ಜನವರಿ 2020, 11:44 IST
ಅಕ್ಷರ ಗಾತ್ರ

ಭಾರತೀಯ ಮಹಿಳೆಯರ ಅಭಿವೃದ್ಧಿಗೆ ವಿಶ್ವದಲ್ಲಿ ಮಹಿಳೆ ಏಳಿಗೆಯಾಗದೇ ವಿಶ್ವದ ಅಭಿವೃದ್ಧಿಯಾಗದು ಎಂಬ ವಿವೇಕಾನಂದರ ವಾಣಿಯನ್ನು ಉಲ್ಲೇಖಿಸಿ ಬಜೆಟ್ ಭಾಷಣ ಮಾಡಿದ್ದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಹಿಳೆಯರ ಶ್ರೇಯೋಭಿವೃದ್ಧಿಗೆ ‘ನಾರಿ ಟು ನಾರಾಯಣಿ’ ಯೋಜನೆಯನ್ನು ಘೋಷಣೆ ಮಾಡಿದ್ದರು.

ವಿತ್ತ ಸಚಿವೆ ಮಂಡಿಸಿದ 2019ರ ಕೇಂದ್ರ ಬಜೆಟ್‌ನಲ್ಲಿ ಶೇ. 4.91 ರಷ್ಟು ಅನುದಾನವನ್ನು ಮಹಿಳಾ ಯೋಜನೆಗಳಿಗೆ ಮೀಸಲಾಗಿರಿಸಲಾಗಿತ್ತು. ನಿರ್ಭಯಾ ಫಂಡ್, ಮುದ್ರಾ ಯೋಜನೆ, ಸೌಭಾಗ್ಯ ಮತ್ತು ಸ್ವಸಹಾಯ ಸಂಘಗಳಿಗೆ ಪ್ರೋತ್ಸಾಹ ನೀಡುವ ಕಾರ್ಯವನ್ನು ಕಳೆದಬಜೆಟ್‌ನಲ್ಲಿ ಪ್ರಸ್ತಾಪಿಸಲಾಗಿತ್ತು. ಇದೀಗ2020ರ ಬಜೆಟ್‌‌ಗೆ ಕ್ಷಣಗಣನೆ ನಡೆಯುತ್ತಿದ್ದು ಮಹಿಳೆ, ಶಿಕ್ಷಣ ಮತ್ತು ಆರೋಗ್ಯ ವಲಯದಲ್ಲಿನ ನಿರೀಕ್ಷೆಗಳು ಇಂತಿವೆ.

ಮಹಿಳಾ ಸುರಕ್ಷೆಗೆ ಆದ್ಯತೆ

2018ರ ರಾಷ್ಟ್ರೀಯ ಅಪರಾಧ ದಾಖಲೆ ಸಂಸ್ಥೆಯು (ಎನ್‌ಸಿಆರ್‌ಬಿ) ದಾಖಲೆ ಪ್ರಕಾರ ಮಹಿಳೆಯರ ಮೇಲಿನ ದೌರ್ಜನ್ಯಗಳು ಹೆಚ್ಚುತ್ತವೇ ಇದೆ. ಹಾಗಾಗಿ ಮಹಿಳೆಯರ ಸುರಕ್ಷೆ ಮತ್ತು ರಕ್ಷಣೆಗೆ ಈ ಸಾಲಿನ ಬಜೆಟ್ ಹೆಚ್ಚು ಪ್ರಾಧಾನ್ಯ ನೀಡಬೇಕು ಎಂಬ ನಿರೀಕ್ಷೆ ಮಹಿಳೆಯರದ್ದಾಗಿದೆ.
ಇದರ ಜತೆಗೆ ಶಿಕ್ಷಣ ಮತ್ತು ಉದ್ಯೋಗದ ಬಗ್ಗೆಯೂ ಗಮನ ಹರಿಸಬೇಕಿದೆ. ಮಹಿಳೆಯರಿಗೆ ಸುರಕ್ಷೆ ಕಲ್ಪಿಸಲು ಸಾರ್ವಜನಿಕ ಸ್ಥಳಗಳಲ್ಲಿ ಪೊಲೀಸರ ನಿಯೋಜನೆ, ರಸ್ತೆಗಳಲ್ಲಿ ದಾರಿದೀಪದ ವ್ಯವಸ್ಥೆ ಬೇಕು. ಮಹಿಳೆಯರನ್ನು ಸುರಕ್ಷಿತವಾಗಿಡುವ ಉದ್ದೇಶದಿಂದ ಆರಂಭಿಸಿದ ನಿರ್ಭಯಾ ಫಂಡ್‌ಗೆ ಈ ಬಾರಿ ಎಷ್ಟು ಅನುದಾನ ಸಿಗಲಿದೆ ಎಂಬ ಕುತೂಹಲವೂ ಇಲ್ಲಿದೆ.

ಸಾರ್ವಜನಿಕ ಸಂಪರ್ಕ ಸಾರಿಗೆಯಲ್ಲಿ ಹೆಚ್ಚಿನ ಸುರಕ್ಷೆ
ಮಹಿಳೆಯರು ಓಡಾಟಕ್ಕಾಗಿ ಸಾರ್ವಜನಿಕ ಸಂಪರ್ಕ ಸಾರಿಗೆಗಳನ್ನು ಬಳಸುವುದೇ ಹೆಚ್ಚು. ಹೀಗಿರುವಾಗ ಅವರಿಗೆ ಇಂಥಾ ಸಾರಿಗೆಗಳಲ್ಲಿ ಹೆಚ್ಚಿನ ಸುರಕ್ಷತೆ ನೀಡಬೇಕು. ಸಾರ್ವಜನಿಕ ವಾಹನಗಳಲ್ಲಿ ಪ್ರಯಾಣಿಸುವಾಗ ಮಹಿಳೆ ಸುರಕ್ಷಿತಳಾಗಿದ್ದರೆ ದೇಶದಲ್ಲಿ ಆಕೆಗಿರುವ ಸುರಕ್ಷತೆಯೂ ಅಧಿಕವಾಗಿರುತ್ತದೆ. ಮಹಾನಗರಗಳಲ್ಲಿ ಮೆಟ್ರೊ ಮತ್ತು ಇತರ ರೈಲು ನಿಲ್ದಾಣಗಳಲ್ಲಿ ಮಹಿಳೆಯ ಸುರಕ್ಷತೆಗೆ ಆದ್ಯತೆ ನೀಡಬೇಕಾಗಿದೆ.

ಪ್ರಯಾಣ ದರದಮೇಲೂ ಇರಲಿ ಹಿಡಿತ
ಮಹಿಳೆಯರು ಮನೆಯಿಂದ ಹೊರಗೆ ಬರಬೇಕಾದರೆ ಸುರಕ್ಷತೆ ಜತೆಗೆ ಪ್ರಯಾಣ ದರವೂ ಕಡಿಮೆ ಇರಬೇಕು. ಹಾಗಾಗಿ ಸಾರ್ವಜನಿಕ ಸಂಪರ್ಕ ವ್ಯವಸ್ಥೆಗಳು ಸುಲಭವಾಗಿ ದೊರೆಯುವಂತೆ ಮತ್ತು ಪ್ರಯಾಣ ದರವೂ ನಿಯಂತ್ರಣದಲ್ಲಿರಬೇಕು.

ಮಹಿಳಾ ಸಹಾಯವಾಣಿ
ಪ್ರತಿ ಬಜೆಟ್‌ನಲ್ಲಿಯೂ ಮಹಿಳಾ ಸಹಾಯವಾಣಿ ಬಗ್ಗೆ ಉಲ್ಲೇಖವಾಗಿರುತ್ತದೆ. ಆದರೆ ಮಹಿಳೆಯರು ಈ ಸಹಾಯವಾಣಿಗೆ ಕರೆ ಮಾಡಿ ಸಹಾಯ ಬೇಡಲು ಯತ್ನಿಸಿದಾಗಲೆಲ್ಲಾ ಬ್ಯುಸಿಯಾಗಿರುತ್ತದೆ. ಸಹಾಯವಾಣಿಯ ಸಮರ್ಪಕ ನಿರ್ವಹಣೆಯತ್ತ ಗಮನ ಹರಿಸಬೇಕು. ಇನ್ನುಳಿದಂತೆ ಮಹಿಳಾ ವಾಣಿಜ್ಯೋದ್ಯಮಿಗಳಿಗೆ ಸಹಾಯವಾಗುವ ಯೋಜನೆಗಳನ್ನು ಈ ಬಜೆಟ್‌ನಲ್ಲಿ ಘೋಷಿಸಲಾಗುವುದೇ ಎಂಬ ನಿರೀಕ್ಷೆ ವಾಣಿಜ್ಯೋದ್ಯಮಿಗಳದ್ದು.

ಶಿಕ್ಷಣ ವಲಯ
ಶಿಕ್ಷಣಕ್ಕೆ ನೀಡಲಿರುವ ಅನುದಾನವನ್ನು ಹೆಚ್ಚು ಮಾಡುವುದಾಗಿ ಕಳೆದ ವರ್ಷ ನಿರ್ಮಲಾ ಸೀತಾರಾಮನ್ ಹೇಳಿದ್ದರು. ಅದೇ ವೇಳೆ ಶಿಕ್ಷಣದ ಜತೆಗೆ ವಿದ್ಯಾರ್ಥಿಗಳ ಕೌಶಲವನ್ನು ಹೆಚ್ಚಿಸುವ ತರಬೇತಿಯನ್ನೂ ನೀಡಬೇಕು ಅಂತಾರೆ ತಜ್ಞರು.

ಶಾಲಾ ಕಲಿಕೆಯೊಂದಿಗೆ ಕೌಶಲ ತರಬೇತಿಯನ್ನು ಸೇರಿಸಬೇಕು. ಹತ್ತನೇ ತರಗತಿಯಿಂದ ಪ್ಲಸ್‌ ಟುವರೆಗೆ ಇದನ್ನು ಕಡ್ಡಾಯವಾಗಿಸಬೇಕು. ಕೌಶಲ ತರಬೇತಿ ನೀಡುವ ಸಂಸ್ಥೆಗಳಿಂದ ಎನ್‌ಎಸ್‌ಡಿಸಿ (ರಾಷ್ಟ್ರೀಯ ಕೌಶಲ ಅಭಿವೃದ್ಧಿ ಕಾರ್ಪೊರೇಷನ್) ಪಡೆಯುವ ಬಡ್ಡಿದರವನ್ನು ಶೇ.2ಕ್ಕೆ ಇಳಿಸಬೇಕು. ಪ್ರತಿಯೊಂದು ಜಿಲ್ಲೆಯಲ್ಲಿಯೂ ಕನಿಷ್ಟ 10,000- 15000 ಮಂದಿ ಕೌಶಲ ತರಬೇತಿ ನೀಡಲು ಸಾಧ್ಯವಾಗುವಂತೆ ಬಜೆಟ್ ಅನುದಾನ ನೀಡಬೇಕು. ಪ್ರಧಾನ್ ಮಂತ್ರಿ ಕೌಶಲ ಕೇಂದ್ರಗಳ ಸಂಖ್ಯೆ ಹೆಚ್ಚಿಸುವುದರ ಜತೆಗೆ ಅದಕ್ಕೆ ಹೆಚ್ಚಿನ ಅನುದಾನ ನೀಡಬೇಕು ಅಂತಾರೆ ಐಸಿಎ ಎಡ್ಯು ಸ್ಕಿಲ್ಸ್ ಸಂಸ್ಥಾಪಕ ಡಾ. ನರೇಂದ್ರ ಶ್ಯಾಮ್‌ಸುಖ.

ಇಂಟರ್ನ್‌ಶಿಪ್ ಕಡ್ಡಾಯ
ಪ್ರತಿ ಪದವಿ ಕಲಿಕೆ ಜತೆ ಒಂದು ವರ್ಷ ಇಂಟರ್ನ್‌ಶಿಪ್ ಕಡ್ಡಾಯಗೊಳಿಸಬೇಕು. ಅಂತರರಾಷ್ಟ್ರೀಯ ಮಟ್ಟದ ಅಂಗೀಕಾರವಿರುವ ಸರ್ಟಿಫಿಕೇಷನ್ ಮತ್ತು ತರಬೇತಿ ಕಾರ್ಯಕ್ರಮಗಳನ್ನು ಕೈಗೊಳ್ಳಬೇಕು ಎಂಬ ನಿರೀಕ್ಷೆಯೂ ಶಿಕ್ಷಣ ವಲಯದಲ್ಲಿದೆ.

ಶಾಲೆಯ ಗುಣಮಟ್ಟ ಸುಧಾರಣೆ
ಶಿಕ್ಷಣ ವ್ಯವಸ್ಥೆ ಸುಧಾರಿಸಬೇಕು ಎಂದಾದರೆ ಶಾಲೆಯ ಗುಣಮಟ್ಟವೂ ಸುಧಾರಿಸಬೇಕು ಶಾಲೆಗಳಲ್ಲಿ ಮೂಲ ಸೌಕರ್ಯಗಳನ್ನು ಕಲ್ಪಿಸುವುದರ ಜತೆಗೆ ಡಿಜಿಟಲ್ ಶಿಕ್ಷಣಕ್ಕೆ ಒತ್ತು ನೀಡಬೇಕು. ಕಾರಾ ಲರ್ನಿಂಗ್ ಪ್ರೈವೆಟ್ ಲಿಮಿಟೆಡ್ ಕಾರ್ಯನಿರ್ವಾಹಕ ನಿರ್ದೇಶಕಿ ಪ್ರಾಚಿ ಮೆಹರೋತ್ರಾ ಪ್ರಕಾರ ಶಿಕ್ಷಕರ ತರಬೇತಿ ಕಾರ್ಯಕ್ರಮಗಳಲ್ಲಿ ಸುಧಾರಣೆಯನ್ನು ತರಬೇಕು. ಈಗಿನ ಶಿಕ್ಷಣ ವ್ಯವಸ್ಥೆ ವಿದ್ಯಾರ್ಥಿಗಳಿಗೆ ಹೊರೆಯಾಗದಂತೆ ಅವರಲ್ಲಿ ಹೆಚ್ಚಿನ ಕೌಶಲ ಮತ್ತು ಸಾಮರ್ಥ್ಯವನ್ನು ಬೆಳೆಸಲು ಶಿಕ್ಷಕರಿಗೆ ಸಾಧ್ಯವಾಗಬೇಕು.

ಆರೋಗ್ಯ ವಲಯ
ಆರೋಗ್ಯ ವಲಯಕ್ಕೆ ಈ ಬಜೆಟ್ ಹೆಚ್ಚಿನ ಆದ್ಯತೆ ನೀಡಲೇಬೇಕಾಗಿದೆ. ದೇಶದಲ್ಲಿ ಒಂದಲ್ಲ ಒಂದು ರೀತಿಯ ರೋಗಗಳು ಹರಡುತ್ತಿದ್ದು, ಆಸ್ಪತ್ರೆ, ಆರೋಗ್ಯ ಕೇಂದ್ರಗಳ ಸಂಖ್ಯೆ ಜಾಸ್ತಿ ಮಾಡಬೇಕಿದೆ.
ಗುಣಮಟ್ಟದ ಚಿಕಿತ್ಸೆ ಪಡೆಯಲು ಎಲ್ಲರಿಗೂ ಸಾಧ್ಯವಾಗಬೇಕು. ಭಾರತದಲ್ಲಿನ ಬಡವರ್ಗಕ್ಕೆ ಈ ರೀತಿ ಚಿಕಿತ್ಸೆ ಪಡೆಯುವುದು ಕಷ್ವವಾಗುತ್ತಿದೆ. ಹಾಗಾಗಿ ಗ್ರಾಮೀಣ ಪ್ರದೇಶಗಳಲ್ಲಿ ಆಸ್ಪತ್ರೆಗಳ ಸೌಕರ್ಯ ಹೆಚ್ಚಿಸಲು ಕೇಂದ್ರ ಗಮನ ಹರಿಸಬೇಕಿದೆ.

ಉರಿಯೂತ, ಮಧುಮೇಹ, ಕ್ಯಾನ್ಸರ್ ಮತ್ತು ಅಧಿಕ ರಕ್ತದೊತ್ತಡ ಮೊದಲಾದ ರೋಗಗಳಿಗೆ ಬಯೊಸಿಮಿಲರ್ ಔಷಧಿಗಳನ್ನು ಬಳಸುವಂತ ಯೋಜನೆಗಳನ್ನು ರೂಪಿಸಲು ಸರ್ಕಾರ ಚಿಂತನೆ ನಡೆಸಬೇಕು. ಪ್ರಾಥಮಿಕ ಹಂತದಲ್ಲಿ ಇದಕ್ಕೆ 500 ಮಿಲಿಯನ್ ಅಮೆರಿಕನ್ ಡಾಲರ್ ಹೂಡಿಕೆ ಬೇಕಾಗುತ್ತದೆ. ಅಭಿವೃದ್ಧಿ ಹೊಂದಿದ ರಾಷ್ಟ್ರವಾದ ಆಸ್ಟ್ರೇಲಿಯಾ ಬಯೊಸಿಮಿಲರ್ ಔಷಧಿಗಳನ್ನು ಬಳಸುತ್ತಿದ್ದು ಅಲ್ಲಿನ ಆರೋಗ್ಯ ವಲಯಕ್ಕೆ ಖರ್ಚು ಮಾಡುವ ಹಣದ ಹೊರೆ ಶೇ.50-70 ಕಡಿಮೆಯಾಗಿದೆ ಎಂದು ಶಿಫಾ ಕೇರ್ ಸಂಸ್ಥಾಪಕ ಮತ್ತು ಸಿಇಒ ಮನೀಷ್ ಛಬ್ರಾ ಅಭಿಪ್ರಾಯ ಪಟ್ಟಿದ್ದಾರೆ.

ಅದೇ ರೀತಿ ವೆಂಟಿಲೇಟರ್, ವೀಲ್ ಚೇರ್, ಊರುಗೋಲು ಮತ್ತು ಇತರ ವೈದ್ಯಕೀಯ ಸಾಧನಗಳನ್ನು ಜಿಎಸ್‌ಟಿಯಿಂದ ಹೊರತು ಪಡಿಸಬೇಕು. ಹಾಗಾದರೆ ಆರೋಗ್ಯ ವಲಯದಲ್ಲಿ ಗುಣಮಟ್ಟದ ಸೇವೆ ನೀಡಲು ಸಾಧ್ಯ.

(ಆಧಾರ: ಡೆಕ್ಕನ್ ಹೆರಾಲ್ಡ್, ಇಕನಾಮಿಕ್ ಟೈಮ್ಸ್)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT