ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಜೆಟ್‌ ವಿಶ್ಲೇಷಣೆ: ಯೋಜನೆಗಳು ಆಕರ್ಷಕ: ಗುರಿ ತಲುಪುವತ್ತ ಇರಲಿ ಚಿತ್ತ

Last Updated 1 ಫೆಬ್ರುವರಿ 2023, 19:30 IST
ಅಕ್ಷರ ಗಾತ್ರ

ವಾರ್ಷಿಕ ಬಜೆಟ್ ಮಂಡಿಸಿದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು, ಕೇಂದ್ರ ಬಜೆಟ್ ಎಲ್ಲರಿಗೂ
ಪ್ರಯೋಜನಕಾರಿಯಾಗಲಿದೆ, ವಿಶೇಷವಾಗಿ ಮಹಿಳೆಯರು, ಯುವಕರು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ರೈತರ ಮೇಲೆ ಕೇಂದ್ರೀಕರಿಸುತ್ತದೆ ಎಂದು ಹೇಳಿದ್ದಾರೆ. ಅಂತರ್ಗತ ಬೆಳವಣಿಗೆಯು ಈ ಬಜೆಟ್‌ನ ಪ್ರಮುಖ ಅಂಶವಾಗಿದೆ. ಕೃಷಿ ವೇಗವರ್ಧಕಗಳು ಮತ್ತು ಮಹಿಳೆಯರಿಗೆ ಸ್ವಸಹಾಯ ಗುಂಪುಗಳ (ಎಸ್‌ಎಚ್‌ಜಿ) ಮೂಲಕ ಸಿಗುವ ಬೆಂಬಲವು ಗ್ರಾಮೀಣ ಯುನಿಕಾರ್ನ್‌
ಗಳನ್ನು ಹುಟ್ಟುಹಾಕಿ ಬೆಳೆಸಲು ಸಹಾಯ ಮಾಡುತ್ತದೆ ಹಾಗೂ ಉದ್ಯಮಶೀಲತೆಯನ್ನು ಉತ್ತೇಜಿಸುತ್ತದೆ. ಆರ್ಥಿಕ ಸ್ಥಿರತೆ, ತಂತ್ರಜ್ಞಾನ ಚಾಲಿತ ಬೆಳವಣಿಗೆ ಮತ್ತು ಉದ್ಯೋಗದ ಮೇಲೆ ಸರ್ಕಾರವು ಹೆಚ್ಚಿನ ಗಮನ ಹೊಂದಿದೆ ಎಂಬುದಕ್ಕೆ ಇದು ಸೂಚನೆಯಾಗಿದೆ.

ಮಹಿಳೆಯರನ್ನು ಆರ್ಥಿಕವಾಗಿ ಸಬಲೀಕರಣಗೊಳಿಸುವ ಆದ್ಯತೆಯ ಯೋಜನೆಗಳಲ್ಲಿ ರಾಷ್ಟ್ರೀಯ ಜೀವ ನೋಪಾಯ ಮಿಷನ್‌ಗೆ ಪ್ರಾಮುಖ್ಯತೆ ನೀಡಲಾಗಿದೆ. ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್‌ ಗ್ರಾಮೀಣ ಮಹಿಳೆಯರನ್ನು 81 ಲಕ್ಷ ಸ್ವಸಹಾಯ ಗುಂಪುಗಳಾಗಿ ಸಜ್ಜುಗೊಳಿಸುವ ಮೂಲಕ ಗಮನಾರ್ಹ ಯಶಸ್ಸು ಸಾಧಿಸಿದೆ. ಸಾವಿರಾರು ಸದಸ್ಯರನ್ನು ಹೊಂದಿರುವ ದೊಡ್ಡ ಉತ್ಪಾದಕ ಉದ್ಯಮಗಳನ್ನು ಸ್ಥಾಪಿಸುವ ಮೂಲಕ ಎಸ್‌ಎಚ್‌ಜಿಗಳು ಆರ್ಥಿಕ ಸಬಲೀಕರಣದ ಮುಂದಿನ ಹಂತವನ್ನು ತಲುಪುವ ಗುರಿಯನ್ನು ಈ ಬಜೆಟ್ ಹೊಂದಿದೆ. ಇದನ್ನು ವೃತ್ತಿಪರವಾಗಿ ನಿರ್ವಹಿಸಲಾಗುವುದು ಎಂದು ನಿರ್ಮಲಾ ಸೀತಾರಾಮನ್‌ ಅವರು ತಮ್ಮ ಬಜೆಟ್‌ನಲ್ಲಿ ಹೇಳಿದ್ದಾರೆ.

ಈ ಯೋಜನೆ ಕಚ್ಚಾ ವಸ್ತುಗಳ ನಿರ್ವಹಣೆ, ಉತ್ತಮ ವಿನ್ಯಾಸ, ಗುಣಮಟ್ಟ, ಬ್ರ್ಯಾಂಡಿಂಗ್ ಮತ್ತು ಉತ್ಪನ್ನಗಳ ಮಾರುಕಟ್ಟೆಗೆ ಸಹಾಯ ಮಾಡುತ್ತದೆ. ಇದರ ಮೂಲಕ ಅವರು ದೊಡ್ಡ ಗ್ರಾಹಕ ಮಾರುಕಟ್ಟೆಗೆ ಸೇವೆ ಸಲ್ಲಿಸಲು ಸಾಧ್ಯವಾಗುತ್ತದೆ. ಇದರ ಜತೆಗೆ ಮಹಿಳೆಯರಿಗಾಗಿ ಸಣ್ಣ ಉಳಿತಾಯ ಯೋಜನೆ ಘೋಷಿಸಿದ್ದಾರೆ. ಈ ಯೋಜನೆಯನ್ನು ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣಪತ್ರ ಎಂದು ಕರೆಯಲಾಗುವುದು ಮತ್ತು ಇದು ಮಾರ್ಚ್ 2025 ರವರೆಗೆ ಲಭ್ಯವಿರು ತ್ತದೆ. ಈ ಯೋಜನೆ 2 ವರ್ಷಗಳ ಅವಧಿ ಹೊಂದಿರುತ್ತದೆ. ಶೇ 7.5ರಷ್ಟು ಬಡ್ಡಿದರ ನೀಡುತ್ತದೆ. ಸುಮಾರು 66.2 ಕೋಟಿ ಮಹಿಳಾ ಜನಸಂಖ್ಯೆಯೊಂದಿಗೆ, ಭಾರತದ ಸಾಧನೆಯ ಮಟ್ಟವು ಪ್ರಾದೇಶಿಕ ಶ್ರೇಯಾಂಕಗಳ ಮೇಲೆ ಅವಲಂಬಿತವಾಗಿದೆ. ಡಿಜಿಟಲ್ ಸಾಕ್ಷರತೆ, ಕೌಶಲ ತರಬೇತಿ, ಕಾರ್ಮಿಕ ವರ್ಗದಲ್ಲಿ ಮಹಿಳೆಯರ ಭಾಗವಹಿಸುವಿಕೆಯನ್ನು ಉತ್ತೇಜಿಸುವುದರ ಜತೆಗೆ ಮಹಿಳೆಯರ ವಿರುದ್ಧದ ಕೌಟುಂಬಿಕ ಹಿಂಸಾಚಾರ, ವೇತನ ಅಂತರ ಕಡಿಮೆ ಮಾಡುವಂತೆ ಈ ಯೋಜನೆಗಳು ನೋಡಿಕೊಳ್ಳಬೇಕಾಗಿದೆ.

ಹೆಚ್ಚುತ್ತಿರುವ ನಿರುದ್ಯೋಗ, ಶೈಕ್ಷಣಿಕ ವೆಚ್ಚಗಳು, ಉತ್ತಮ ಆರೋಗ್ಯ ಸೌಲಭ್ಯಗಳ ಅಗತ್ಯತೆಯೊಂದಿಗೆ, ಈ ಬಜೆಟ್ ಯುವಜನರ ಸಮಸ್ಯೆಗಳಿಗೆ ಸ್ವಲ್ಪಮಟ್ಟಿಗೆ ಪರಿಹಾರ ನೀಡಲು ಪ್ರಯತ್ನಿಸಿದೆ. ದೇಶದ ಜನಸಂಖ್ಯೆಯ ಶೇ 65ರಷ್ಟು ಜನರು 35 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದು, ಸಂಪನ್ಮೂಲಗಳನ್ನು ಸಮರ್ಥವಾಗಿ ಬಳಸುವುದು ಬಹು ಮುಖ್ಯ. ಹೊಸ ಶಿಕ್ಷಣ ನೀತಿಯ ಅನುಷ್ಠಾನವು ಕೌಶಲ ಅಭಿವೃದ್ಧಿ ಮತ್ತು ಉದ್ಯೋಗಾವಕಾಶಗಳನ್ನು ಸೃಷ್ಟಿಸಲು ಅತ್ಯಂತ ಪ್ರಮುಖ ಹೆಜ್ಜೆಯಾಗಿದೆ.

ಯುವ ಸಬಲೀಕರಣ ಮತ್ತು ಉದ್ಯೋಗ ಸೃಷ್ಟಿಯತ್ತ ಗಮನ ಹರಿಸಿದಾಗ, ಮುಂದಿನ ಮೂರು ವರ್ಷಗಳಲ್ಲಿ ಲಕ್ಷಾಂತರ ಯುವಕರಿಗೆ ಕೌಶಲಗಳನ್ನು ಒದಗಿಸಲು ಪ್ರಧಾನ ಮಂತ್ರಿ ಕೌಶಲ್ ವಿಕಾಸ್ ಯೋಜನೆ 4.0 ಘೋಷಿಸಲಾಗಿದೆ. ಇದು ಉದ್ಯೋಗದ ತರಬೇತಿ, ಉದ್ಯಮ ಪಾಲುದಾರಿಕೆ ಮತ್ತು ಕೈಗಾರಿಕೆಗಳ ಅಗತ್ಯಗಳನ್ನು ಕೇಂದ್ರೀಕರಿಸುತ್ತದೆ. ಇದು ಉದ್ಯಮ 4.0ಗಾಗಿ ಕೋಡಿಂಗ್, ಕೃತಕ ಬುದ್ಧಿಮತ್ತೆ, ರೋಬೋಟಿಕ್ಸ್, ಮೆಕಾಟ್ರಾನಿಕ್ಸ್, ತ್ರೀಡಿ ಪ್ರಿಂಟಿಂಗ್, ಡ್ರೋನ್ ಮತ್ತು ಇತರ ಸಾಫ್ಟ್ ಸ್ಕಿಲ್‌ಗಳಂತಹ ಹೊಸ-ಯುಗದ ಕೋರ್ಸ್‌ಗಳನ್ನು ಸಹ ಒದಗಿಸುತ್ತದೆ.

ಅಂತರರಾಷ್ಟ್ರೀಯ ಅವಕಾಶಗಳಿಗಾಗಿ ದೇಶದ ಯುವಜನತೆಯನ್ನು ಸಜ್ಜುಗೊಳಿಸಲು, ವಿವಿಧ ರಾಜ್ಯಗಳಲ್ಲಿ 30 ಕೌಶಲ ಕೇಂದ್ರಗಳನ್ನು ಸ್ಥಾಪಿಸಲು ನಿರ್ಧರಿಸಲಾಗಿದೆ. ಮುಂದಿನ ಮೂರು ವರ್ಷಗಳಲ್ಲಿ 47 ಲಕ್ಷ ಯುವಕರಿಗೆ ಸ್ಟೈಫಂಡ್ ಬೆಂಬಲ ಒದಗಿಸುವ ಪ್ಯಾನ್-ಇಂಡಿಯಾ ರಾಷ್ಟ್ರೀಯ ಅಪ್ರೆಂಟಿಸ್‌ಶಿಪ್ ಪ್ರಚಾರ ಯೋಜನೆಯನ್ನು ಹೊರತರುವ ಕೇಂದ್ರದ ಯೋಜನೆಗಳನ್ನು ಸಚಿವರು ಹಂಚಿಕೊಂಡಿದ್ದಾರೆ.

ಇವೆಲ್ಲದರ ನಡುವೆಯೂ, ಭಾರತದಲ್ಲಿ ಮಹಿಳಾ ಮತ್ತು ಯುವ ಸಬಲೀಕರಣವು ಹಲವು ವಿಭಿನ್ನ ಅಂಶಗಳ ಮೇಲೆ ಅವ
ಲಂಬಿತವಾಗಿದೆ. ಸಬಲೀಕರಣದ ನೀತಿಗಳು ರಾಷ್ಟ್ರೀಯ, ರಾಜ್ಯ ಮತ್ತು ಸ್ಥಳೀಯ (ಪಂಚಾಯಿತಿ) ಹಂತಗಳಲ್ಲಿ ಹಲವು ವಲಯಗಳಲ್ಲಿ ಅಸ್ತಿತ್ವದಲ್ಲಿವೆ. ಆದರೆ, ಸಮುದಾಯಮಟ್ಟದಲ್ಲಿ ನೀತಿ ಅನುಷ್ಠಾನ ಮತ್ತು ವಾಸ್ತವದ ನಡುವೆ ಗಮನಾರ್ಹ ಅಂತರಗಳಿವೆ. ಬಜೆಟ್ ಹೊಸ ಯೋಜನೆ ಗಳನ್ನು ಪರಿಚಯಿಸುವುದರ ಮೇಲೆ ಮಾತ್ರ ಗಮನಹರಿಸದೆ, ಫಲಾನುಭವಿಗಳಿಗೆ ತಲುಪುವಂತೆ ಯೋ ಜನೆಗಳ ಅನುಷ್ಠಾನದತ್ತ ಗಮನ ಹರಿಸುವುದು ಅವಶ್ಯಕವಾಗಿದೆ.

(ಲೇಖಕರು ಸಹ ಪ್ರಾಧ್ಯಾಪಕಿ, ಅರ್ಥಶಾಸ್ತ್ರ ವಿಭಾಗ, ಕ್ರೈಸ್ಟ್ ಯೂನಿವರ್ಸಿಟಿ, ಬೆಂಗಳೂರು)

ಇವನ್ನೂ ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT